ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಸೈನ್ಸ್‌ನಲ್ಲಿಅಲ್ಪಾವಧಿ ಕೋರ್ಸ್‌ಗಳು

Last Updated 10 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನಾನು ಬಿ.ಎಸ್‌ಸಿ. ಕಂಪ್ಯೂಟರ್ ಸೈನ್ಸ್‌ 2ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನಗೆ ಎಂ.ಎಸ್‌ಸಿ. ಮಾಡಲು ಆಸಕ್ತಿ ಇಲ್ಲ. ಯಾವುದಾದರೂ ಕೋರ್ಸ್ ಮಾಡುವ ಬಯಕೆ ಇದೆ. ನನ್ನ ಭವಿಷ್ಯದಲ್ಲಿ ಕೆಲಸಕ್ಕೆ ನೆರವಾಗುವ ಯಾವುದಾದರೂ ಕೋರ್ಸ್‌ಗಳ ಬಗ್ಗೆ ತಿಳಿಸಿ.

ಗಂಗಾ ಇಂಚರ, ಊರು ಬೇಡ

ಗಂಗಾ ಇಂಚರ, ಕಂಪ್ಯೂಟರ್ ಸೈನ್ಸ್‌ನಲ್ಲಿ ನೀವು ಪದವಿ ಶಿಕ್ಷಣ ಮಾಡುತ್ತಿರುವುದರಿಂದ ಅದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಲ್ಪಾವಧಿ ಅಥವಾ ದೀರ್ಘಾವಧಿ ಕೋರ್ಸ್‌ಗಳನ್ನು ಮಾಡಬಹುದು. ದೀರ್ಘಾವಧಿ ಎಂದರೆ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂ.ಸಿ.ಎ.) ಮಾಡಬಹುದು. ಅಲ್ಪಾವಧಿ ಉದ್ಯೋಗಾಧಾರಿತ ಕೋರ್ಸ್‌ಗಳಾದ ಜಾವಾ, ಗ್ರಾಫಿಕ್ ಡಿಸೈನ್, ವೆಬ್ ಡಿಸೈನಿಂಗ್, ಇ-ಕಾಮರ್ಸ್, ಸಿ ಪ್ಲಸ್ ಪ್ಲಸ್, ಪಿ.ಎಚ್.ಪಿ. ಎಸ್.ಕ್ಯೂ.ಎಲ್., ಡಾಟ್ ನೆಟ್ ಇತರೆ ಕೋರ್ಸ್‌ಗಳನ್ನು ಮಾಡಬಹುದು. ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಕುರಿತ ಕೋರ್ಸ್‌ಗಳನ್ನು ಮಾಡಬಹುದು.

ಈ ಕೋರ್ಸ್‌ಗಳು ಸಾಮಾನ್ಯವಾಗಿ ಮೂರರಿಂದ ಆರು ತಿಂಗಳ ಅವಧಿಯದ್ದು. ಈ ಕೋರ್ಸ್‌ ಅನ್ನು ಕಲಿಸುವುದರ ಜೊತೆಗೆ ಉದ್ಯೋಗಾವಕಾಶವನ್ನು ದೊರಕಿಸಿ ಕೊಡುವ ಸಂಸ್ಥೆಯಲ್ಲಿ ಮಾಡಿದರೆ ಉತ್ತಮ. ಶುಭಾಶಯ.

ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಆಸಕ್ತಿ. ನನಗೆ ಐ.ಎ.ಎಸ್.ಅಧಿಕಾರಿ ಆಗುವ ಕನಸು. ನಾನು ಮುಂದೆ ಏನು ಓದಬೇಕು?

ಸೌಭಾಗ್ಯ ಬಿ.ಎಲ್‌., ಊರು ಬೇಡ

ಸೌಭಾಗ್ಯ, ನೀವು ನಿಮ್ಮ ಆಸಕ್ತಿ ಮತ್ತು ಮುಂದಿನ ಕನಸುಗಳನ್ನು ಈಗಾಗಲೇ ಕಂಡುಕೊಂಡಿರುವುದು ಉತ್ತಮವಾದ ಬೆಳವಣಿಗೆ. ಈಗಿಂದಲೇ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಯೋಜನೆ ರೂಪಿಸಿಕೊಂಡು ತಯಾರಿ ಮಾಡಿಕೊಂಡರೆ ಹೆಚ್ಚು ಪ್ರಯೋಜನವಾಗುತ್ತದೆ. ಐ.ಎ.ಎಸ್. ಪರೀಕ್ಷೆ ಬರೆಯಲು ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗಾಗಿ ನೀವು ನಿಮ್ಮ ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಪಡೆಯಬಹುದು. ಗಣಿತ ಅಥವಾ ವಿಜ್ಞಾನದ ಯಾವುದೇ ವಿಷಯದಲ್ಲಿ ಪದವಿ, ಸಂಖ್ಯಾಶಾಸ್ತ್ರದಲ್ಲಿ ಪದವಿ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ವಿಜ್ಞಾನ ಓದಬಹುದು. ಅದಾದ ನಂತರ ಕೋಚಿಂಗ್ ಪಡೆದು/ಪಡೆಯದೇ ಐ.ಎ.ಎಸ್. ಪರೀಕ್ಷೆಗೆ ತಯಾರಿ ನಡೆಸಬಹುದು.

ಆದರೆ ಒಂದು ವಿಷಯವನ್ನು ನೀವಿಲ್ಲಿ ಪರಿಗಣಿಸಬೇಕು. ಐ.ಎ.ಎಸ್. ಹುದ್ದೆಗಿರುವ ಹೆಸರು ಮತ್ತು ಪ್ರತಿಷ್ಠೆಗೆ ಹೆಚ್ಚು ಒತ್ತು ಕೊಡುವ ಬದಲು, ಆ ಹುದ್ದೆಯಲ್ಲಿನ ಕೆಲಸಗಳೇನು, ಅದರ ಲಕ್ಷಣಗಳೇನು ಎಂದು ತಿಳಿಯುವ ಪ್ರಯತ್ನ ಮಾಡಿ. ಅವು ನಿಮ್ಮ ವ್ಯಕ್ತಿತ್ವ ಮತ್ತು ಆಸಕ್ತಿಗೆ ಸರಿ ಹೊಂದುತ್ತವೆಯೇ ಎಂದು ಪರಿಶೀಲಿಸಿ ನೋಡಿ. ಯಾಕೆಂದರೆ ನೀವು ಹೇಳಿರುವ ಪ್ರಕಾರ ನಿಮ್ಮ ಆಸಕ್ತಿ ವಿಜ್ಞಾನ ಮತ್ತು ಗಣಿತ. ಆದರೆ ಐ.ಎ.ಎಸ್. ಹುದ್ದೆಯ ಪ್ರಮುಖವಾದ ಕೆಲಸ ಆಡಳಿತ ಮತ್ತು ನಿರ್ವಹಣೆ. ಹಾಗಾಗಿ ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಹೊಂದುತ್ತದೆಯೇ ಎಂದು ನೋಡಿಕೊಳ್ಳಿ. ಆ ಪ್ರಕಾರ ನಿರ್ಧರಿಸಿ ನಿಮ್ಮ ತಯಾರಿ ಶುರುಮಾಡಿಕೊಳ್ಳಿ. ಶುಭಾಶಯ.

ನಾನು 2017ರಲ್ಲಿ ಬಿ.ಇ. ಮುಗಿಸಿದ್ದೇನೆ. ಆದರೆ ನನಗೆ ಐಟಿ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ಪಬ್ಲಿಕ್ ಅಡ್ಮಿನ್‌ಸ್ಟ್ರೇಷನ್‌ನಲ್ಲಿ ಕೆಲಸ ಮಾಡಲು ಇಷ್ಟ. ಹಾಗಾಗಿ ನಾನು ಸರ್ಕಾರಿ ಕೆಲಸದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನಾನು ಓದಲು ಆರಂಭಿಸಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ಪರೀಕ್ಷೆಯನ್ನು ಪಾಸ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. (ನಾನು ಚೆನ್ನಾಗಿಯೇ ಓದಿದ್ದೇನೆ). ಆದರೆ ಈಗೀಗ ನನಗೆ ನಂಬಿಕೆ ಕಳೆದು ಹೋಗುತ್ತಿದೆ. ಹಾಗಾಗಿ ನಾನು ಮುಂದಿನ ವರ್ಷ ಯಾವುದಾದರೂ ಸ್ನಾತಕೋತ್ತರ ಪದವಿ ಮಾಡುವ ಯೋಚನೆಯಲ್ಲಿದ್ದೇನೆ. ಸ್ನಾತಕೋತ್ತರ ಪದವಿಯಲ್ಲೂ ನನಗೆ ಎಂಜಿನಿಯರಿಂಗ್ ಮೇಲೆ ಮುಂದುವರಿಯುವ ಬಯಕೆ ಇಲ್ಲ. ಹಾಗಾಗಿ ಎಂ.ಎ. ಅಥವಾ ಎಂ.ಬಿ.ಎ. ಮಾಡಬೇಕು ಎಂದು ಯೋಚಿಸುತ್ತಿದ್ದೇನೆ.

ವೆಂಕಟಗಿರಿ ಗೌಡ, ಊರು ಬೇಡ

ವೆಂಕಟಗಿರಿಗೌಡ, ಸಾಮಾನ್ಯವಾಗಿ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಲು ಸ್ವಲ್ಪ ಸಮಯ ಹಿಡಿಯುತ್ತದೆ. ಯಶಸ್ಸು ಕೇವಲ ನಿಮ್ಮ ಓದಿನ ಮೇಲೆ ನಿರ್ಧರಿತವಾಗದೆ ಇತರ ಬೇರೆಬೇರೆ ಅಂಶಗಳ ಮೇಲೆ ನಿರ್ಧರಿತವಾಗಿರುತ್ತದೆ. ಹಾಗಾಗಿ ನಿರಾಶರಾಗಬೇಡಿ. ನೀವು ಬರೆದ ಪರೀಕ್ಷೆಗಳಲ್ಲಿ ಸೂಕ್ತ ಅಂಕ ಬರದಿರಲು ಕಾರಣವೇನು ಎಂದು ಆಲೋಚಿಸಿ ಕಂಡುಕೊಳ್ಳಿ. ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕೆಂದು ಯೋಚಿಸಿ. ಕೋಚಿಂಗ್‌ನ ಅವಶ್ಯಕತೆ ಇದ್ದರೆ ಪಡೆದುಕೊಳ್ಳಿ. ಅಥವಾ ನಿಮಗೆ ಲಭ್ಯವಿರುವ ವಿಷಯತಜ್ಞರ ಬಳಿ ಸೂಕ್ತ ಮಾರ್ಗದರ್ಶನ ಪಡೆದು ಆ ಪ್ರಕಾರ ನಿಮ್ಮ ತಯಾರಿಯನ್ನು ಮಾಡಿಕೊಳ್ಳಿ.

ನಿಮ್ಮ ಸಮಯ ಹೀಗೆ ಹೋಗುತ್ತಿರುವುದರ ಬಗ್ಗೆ ಮತ್ತು ಯಾವ ಕೆಲಸವೂ ಆಗದಿರುವುದರ ಬಗ್ಗೆ ನಿಮ್ಮ ಆತಂಕ ಸಹಜವೇ ಆಗಿದೆ. ಹಾಗಾಗಿ ಈ ಸಮಯದಲ್ಲಿ ಶಿಕ್ಷಣ ಪಡೆಯುವುದು ಅಥವಾ ಬೇರೆ ಕೆಲಸ ಮಾಡುವುದು ಉತ್ತಮವಾದ ನಿರ್ಧಾರ. ಉಪನ್ಯಾಸ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛೆ ಇದ್ದಲ್ಲಿ ಎಂ.ಎ. ಅಥವಾ ಎಂ.ಎಸ್.ಡಬ್ಲ್ಯೂ. ಮಾಡಬಹುದು. ಆಡಳಿತ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛೆ ಇದ್ದಲ್ಲಿ ಎಂ.ಬಿ.ಎ. ಮಾಡಬಹುದು. ನಿಮ್ಮ ಆಸಕ್ತಿ ತಿಳಿದು ನಿರ್ಧರಿಸಿ. ಹಾಗೆ ಸಮಯ ಹೊಂದಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮುಂದುವರೆಸಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT