ಭಾನುವಾರ, ಸೆಪ್ಟೆಂಬರ್ 20, 2020
21 °C

ಕಸವೆಂದರೆ ಕಾಸು !

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿರುವಾಗ, ಉಡುಪಿಯಲ್ಲಿ ಮಾತ್ರ ಕಸ ಆದಾಯದ ಮೂಲ. ‘ಇಲ್ಲಿನ 50 ಗ್ರಾಮ ಪಂಚಾಯ್ತಿಗಳು ಕಸ ವಿಲೇವಾರಿಗೆ ಬಿಡಿಗಾಸು ಖರ್ಚು ಮಾಡುವುದಿಲ್ಲ. ಬದಲಾಗಿ; ಇದುವರೆಗೂ ಕಸದಿಂದಲೇ ₹45 ಲಕ್ಷದಿಂದ ₹50 ಲಕ್ಷ ಆದಾಯಗಳಿಸಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ ಶ್ರೀನಿವಾಸ್‌ ರಾವ್‌.

ತ್ಯಾಜ್ಯದ ರಾಶಿಯ ನಡುವೆ ಕುಳಿತಿದ್ದ ಮಹಿಳೆಯರ ಮೊಗದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಛಲ ಕಾಣುತ್ತಿತ್ತು. ಊರಿನ ಕಸವೆಲ್ಲ ಕಣ್ಮುಂದೆ ಬಿದ್ದಿದ್ದರೂ ಅವರಲ್ಲಿ ಸ್ವಲ್ಪವೂ ಬೇಸರವಿರಲಿಲ್ಲ. ಏಕೆಂದರೆ ಅದು ಬರಿಯ ಕಸವಲ್ಲ; ಸ್ವಾವಲಂಬನೆಯ ‘ಸಂಪನ್ಮೂಲ’. ಇದು ತ್ಯಾಜ್ಯದಿಂದ ಉದ್ಯೋಗ, ಆದಾಯ ಸೃಷ್ಟಿಸಿದ ಉಡುಪಿ ಜಿಲ್ಲೆಯ ವಾರಂಬಳ್ಳಿ ಗ್ರಾಮ ಪಂಚಾಯ್ತಿಯ ಘನ ಹಾಗೂ ದ್ರವ ಸಂಪನ್ಮೂಲ ನಿರ್ವಹಣಾ ಘಟಕದ( ಎಸ್‌ಎಲ್‌ಆರ್‌ಎಂ) ಯಶೋಗಾಥೆ.

‘ಸ್ವಚ್ಛ ಉಡುಪಿ’ ಪರಿಕಲ್ಪನೆಯಡಿ 2017ರ ಆಗಸ್ಟ್‌ 15 ರಂದು ಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಘನ ಹಾಗೂ ದ್ರವ ಸಂಪನ್ಮೂಲ ನಿರ್ವಹಣಾ (ಎಸ್‌ಎಲ್‌ಆರ್‌ಎಂ) ಘಟಕಗಳನ್ನು ತೆರೆಯಿತು. ಈ ಘಟಕಗಳು ಊರನ್ನು ಸ್ವಚ್ಛಗೊಳಿಸುವುದರ ಜತೆಗೆ, ಗ್ರಾಮ ಪಂಚಾಯ್ತಿಗಳಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತಿವೆ. ಜತೆಗೆ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿವೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿರುವಾಗ, ಉಡುಪಿಯಲ್ಲಿ ಮಾತ್ರ ಕಸ ಆದಾಯದ ಮೂಲ. ‘ಇಲ್ಲಿನ 50 ಗ್ರಾಮ ಪಂಚಾಯ್ತಿಗಳು ಕಸ ವಿಲೇವಾರಿಗೆ ಬಿಡಿಗಾಸು ಖರ್ಚು ಮಾಡುವುದಿಲ್ಲ. ಬದಲಾಗಿ; ಇದುವರೆಗೂ ಕಸದಿಂದಲೇ ₹45 ಲಕ್ಷದಿಂದ ₹50 ಲಕ್ಷ ಆದಾಯಗಳಿಸಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ ಶ್ರೀನಿವಾಸ್‌ ರಾವ್‌.

ಎರಡು ವರ್ಷಗಳ ಹಿಂದೆ ಬೇರೆ ಜಿಲ್ಲೆಗಳಂತೆ ಉಡುಪಿಯಲ್ಲೂ ಕಸದ ಸಮಸ್ಯೆ ಇತ್ತು. ನಿತ್ಯ ಸಂಗ್ರಹವಾಗುತ್ತಿದ್ದ ಕಸವನ್ನು ಎಲ್ಲಿ ಸುರಿಯುವುದು ಎಂಬ ಪ್ರಶ್ನೆ ಕಾಡುತ್ತಿತ್ತು. ಡಂಪಿಂಗ್ ಯಾರ್ಡ್‌ನಲ್ಲಿ ಕಸ ವಿಲೇವಾರಿಗೆ ಹೋದರೆ ಸಾರ್ವಜನಿಕರು ಪ್ರತಿಭಟನೆ ಎದುರಿಸಬೇಕಿತ್ತು. ಆದರೆ, ಈಗ ಕಸವನ್ನು ಬಯಲಿಗೆ ಸುರಿಯುವ ಪ್ರಶ್ನೆಯೇ ಇಲ್ಲ. ವ್ಯಾಪಾರಿಗಳೇ ದುಡ್ಡುಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ.

2017ರಲ್ಲಿ  ತಮಿಳುನಾಡಿನ ವೆಲ್ಲೂರು ಶ್ರೀನಿವಾಸನ್‌ ‘ಘನ ಹಾಗೂ ದ್ರವ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಬಗ್ಗೆ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬಳಿ ಚರ್ಚಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಅವರು ತಡ ಮಾಡದೆ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಕೊಟ್ಟರು. ಪ್ರಾಯೋಗಿಕವಾಗಿ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳು ತಲೆ ಎತ್ತಿದವು.

ಯೋಜನೆ ಆರಂಭವಾಗುತ್ತಿದ್ದಂತೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ತ್ಯಾಜ್ಯವಿಲೇವಾರಿ ಕುರಿತು ತರಬೇತಿ ಕೊಡಲಾಯಿತು. ನಂತರ ಎಸ್‌ಎಲ್‌ಆರ್‌ಎಂ ಘಟಕಗಳ ಉಸ್ತುವಾರಿ ಹೊಣೆ ನೀಡಲಾಯಿತು. ಅವರೆಲ್ಲ ಈಗ ಪ್ರತಿನಿತ್ಯ ನಗರದಲ್ಲಿ ಉತ್ಪತ್ತಿಯಾಗುವ ದ್ರವ ಹಾಗೂ ಘನ ತ್ಯಾಜ್ಯವನ್ನು ಸಂಗ್ರಹಿಸಿ ಸಂಪನ್ಮೂಲವನ್ನಾಗಿ ಬದಲಿಸುತ್ತಿದ್ದಾರೆ.

ಯೋಜನೆ ಸಾಕಾರಗೊಂಡ ಬಗೆಯನ್ನು ವೀಕ್ಷಿಸಲು ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯ್ತಿಯ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಹೋದಾಗ, ಅಲ್ಲಿದ್ದ ಮಹಿಳೆಯರು ಕೈಗೆ ಗ್ಲೌಸ್‌, ತಲೆಗೆ ಟೋಪಿ, ಟೀಶರ್ಟ್‌ ಧರಿಸಿ ಭೂಮಿಯಲ್ಲಿ ನಿಧಿ ಹುಡುಕುವಂತೆ ಕಸದ ಮಧ್ಯೆ ಏನನ್ನೋ ಹೆಕ್ಕುತ್ತಿದ್ದರು. 

ಈ ಬಗ್ಗೆ ಅಲ್ಲಿನ ಘಟಕದ ಉಸ್ತುವಾರಿ ಸುಮತಿ ಅವರನ್ನು ಪ್ರಶ್ನಿಸಿದಾಗ, ‘ಕಸ ಅಂದ್ರೆ ಎಲ್ಲರೂ ಮುಖ ಕಿವುಚುತ್ತಾರೆ. ಅಸಹ್ಯ ಪಡುತ್ತಾರೆ. ಇಲ್ಲಿ ಕಸವೇ ನಮಗೆಲ್ಲ ಬದುಕು’ ಎನ್ನುತ್ತಲೇ ಘಟಕದ ಕಾರ್ಯವೈಖರಿ ವಿವರಿಸುತ್ತಾ ಹೋದರು.

ಘಟಕದಲ್ಲಿರುವವರು ಪ್ರತಿದಿನ ಬೆಳಿಗ್ಗೆ ಬ್ರಹ್ಮಾವರ ಸುತ್ತಮುತ್ತಲಿನ ಹೋಟೆಲ್‌, ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆಗಳು, ಬಾರ್ ಅಂಡ್ ರೆಸ್ಟೋರೆಂಟ್‌, ಮನೆಗಳು ಹೀಗೆ 1,000 ಕಡೆಗಳಿಂದ ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸುತ್ತಾರೆ. ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಪ್ರತ್ಯೇಕಿಸುತ್ತಾರೆ.

ಉಳಿಕೆ ಆಹಾರ, ತರಕಾರಿ ತ್ಯಾಜ್ಯವನ್ನು ಕಾಂಪೋಸ್ಟ್‌ ಪಿಟ್‌ಗೆ ಸುರಿದು ಸಾವಯವ ಗೊಬ್ಬರವಾಗಿ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಾರೆ. ಘನತ್ಯಾಜ್ಯವನ್ನು 27 ವಿಧಗಳಾಗಿ ವಿಂಗಡಿಸಿ ಗುಜರಿಗಳಿಗೆ, ಸಿಮೆಂಟ್‌ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಇಲ್ಲಿ ಕಸ ವ್ಯರ್ಥವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ವಿಶೇಷ.

ಪ್ಲಾಸ್ಟಿಕ್ ಬಾಟಲ್‌, ಲೋಟ, ತಟ್ಟೆ, ಪ್ಲಾಸ್ಟಿಕ್ ಕವರ್‌, ಹಾಲಿನ ಪ್ಯಾಕೆಟ್‌, ಟೆಟ್ರಾ ಪ್ಯಾಕ್‌, ಬಲ್ಬ್‌, ಕಾರ್ಡ್‌ ಬೋರ್ಡ್‌, ಒಡೆದ ಗಾಜು, ಬಿಯರ್ ಬಾಟಲ್‌, ಅಲ್ಯುಮಿನಿಯಂ ಫೋಯ್ಲ್, ಕಬ್ಬಿಣ, ಸ್ಟೀಲ್ ಐಟಂಗಳು, ಹಳೆಯ ಬಟ್ಟೆ, ಬೆಲ್ಟ್‌, ಪರ್ಸ್‌, ಪೆನ್ನು, ರಬ್ಬರ್, ಚಪ್ಪಲಿ, ಸ್ಯಾನಿಟರಿ ಪ್ಯಾಡ್‌ ಹೀಗೆ ಎಲ್ಲ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಒಂದೊಂದು ವಸ್ತುವಿಗೂ ಒಂದೊಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ.

ಒಡೆದ ಪಿವಿಸಿ ಪೈಪ್‌ (ಕೆಜಿ ಲೆಕ್ಕದಲ್ಲಿ) ₹ 30, ಸಾಸ್‌ ಬಾಟಲ್‌ ₹ 20, ಆಹಾರ ಪಾರ್ಸೆಲ್‌ ತರುವ ಪ್ಲಾಸ್ಟಿಕ್‌ ಬೌಲ್‌ ₹ 20, ಬಿಸ್ಲೆರಿ ಬಾಟಲ್‌ ₹ 20, ಮದ್ಯದ ಬಾಟಲ್‌ಗಳನ್ನೂ ₹ 15 ಬೆಲೆ ಕೊಟ್ಟು ಖರೀದಿಸುವವರೂ ಇದ್ದಾರೆ.

‘ಗರಿಷ್ಠ ಆದಾಯ ಉತ್ಪತ್ತಿಯಾಗಬೇಕು’ ಎಂದು ಔಷಧ ಬಾಟಲ್‌ಗಳ ಅಲ್ಯೂಮಿನಿಯಂ ಮುಚ್ಚಳ ಹಾಗೂ ಬಲ್ಬ್‌ ಕೆಳ ಭಾಗದ ಅಲ್ಯೂಮಿನಿಯಂ ಭಾಗವನ್ನು ತೆಗೆದು ಮಾರಾಟ ಮಾಡುತ್ತೇವೆ. ಬಿಯರ್ ಟಿನ್‌, ತಂಪು ಪಾನೀಯ ಟಿನ್‌, ಸಿಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳು, ಹಳೆಯ ಮೊಬೈಲ್‌ಗೆ ಉತ್ತಮ ಬೆಲೆ ಇದೆ. ಒಟ್ಟಾರೆ, ಈಗ ಉಡುಪಿ ಜಿಲ್ಲೆಯಲ್ಲಿ ‘ಕಸವೆಂದರೆ ಕಾಸು’ ಎನ್ನುವಂತಾಗಿದೆ.

ಅಕ್ಷರ ದಾಸೋಹಕ್ಕೆ ನೆರವು

ಜಿಲ್ಲಾ ಪಂಚಾಯ್ತಿಯಿಂದ ಟೆಂಡರ್‌ ಪಡೆದಿರುವ ಗುತ್ತಿಗೆದಾರರು 15 ದಿನಗಳಿಗೊಮ್ಮೆ ಬಂದು ತ್ಯಾಜ್ಯವನ್ನೆಲ್ಲ ತುಂಬಿಕೊಂಡು ಹೋಗುತ್ತಾರೆ. ‘ತ್ಯಾಜ್ಯ ಕೊಂಡೊಯ್ಯಲು ಕಾಂಪಿಟೇಷನ್ ಇದೆ’ ಎನ್ನುವಾಗ ಕಾಡೂರು ಗ್ರಾಮ ಪಂಚಾಯ್ತಿ ಪಿಡಿಒ ಮಹೇಶ್ ಮುಖದಲ್ಲಿ ಯಶಸ್ಸಿನ ಭಾವ ತುಂಬಿಕೊಂಡಿತ್ತು. ಎಸ್‌ಎಲ್‌ಆರ್‌ಎಂ ಘಟಕಗಳ ಯಶಸ್ಸಿನಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಜನರ ಪಾತ್ರ ದೊಡ್ಡದಿದೆ. ನಾಗರಿಕರು, ಹೋಟೆಲ್‌ಗಳು, ಮದುವೆ ಮಂಟಪಗಳು ಶುಲ್ಕ ಪಾವತಿ ಮಾಡುತ್ತಿವೆ.

‘ಕಸ ಸಂಗ್ರಹಣೆ ಹಾಗೂ ಮಾರಾಟದಿಂದ ಬಂದ ಹಣವನ್ನು ಘಟಕದ ಸದಸ್ಯರ ಸಂಬಳ, ವಾಹನಗಳ ಡೀಸೆಲ್‌ ಖರ್ಚಿಗೆ ಬಳಸಲಾಗುತ್ತಿದೆ’ ಎನ್ನುತ್ತಾರೆ ಮಹೇಶ್‌.

ಹಸಿ ತ್ಯಾಜ್ಯವನ್ನು ಬಳಸಿಕೊಂಡು ಪ್ರಾಯೋಗಿಕವಾಗಿ ಬಯೋ ಗ್ಯಾಸ್‌ ತಯಾರಿಸಲಾಗುತ್ತಿದೆ. ಇಲ್ಲಿ ಉತ್ಪತ್ತಿಯಾ ಗುವ ಅನಿಲವನ್ನು ಅಕ್ಷರ ದಾಸೋಹದ ಅಡುಗೆಗೆ ಬಳಸಲಾಗುವುದು.

‘ವಾರಂಬಳ್ಳಿ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಸ್ಯಾನಿಟರಿ ಪ್ಯಾಡ್‌ ಇನ್ಸುನೇಟರ್‌ ಯಂತ್ರ ಕೊಡಲಾಗಿದೆ. ಒಮ್ಮೆ ಮೂರು ಪ್ಯಾಡ್‌ಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸುಡಬಹುದು’ ಎಂದು ಅವರು ವಿವರಿಸಿದರು.

ವಿದೇಶದಿಂದಲೂ ಪ್ರಶಂಸೆ

ಉಡುಪಿಯ ಎಸ್‌ಎಲ್‌ಆರ್‌ಎಂ ಘಟಕದ ಮಾದರಿ ವಿದೇಶಗಳಲ್ಲೂ ಪ್ರಶಂಸೆಗೆ ಪಾತ್ರವಾಗಿದೆ. ಜಪಾನ್‌ನಿಂದ ವಿದ್ಯಾರ್ಥಿಗಳ ತಂಡವೊಂದು ಇಲ್ಲಿನ ನಿಟ್ಟೆ ಗ್ರಾಮ ಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿದೆ. ದೆಹಲಿ ಹಾಗೂ ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ‘ವಿಶೇಷ ಅಂದರೆ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ದುಡಿಯುತ್ತಿರುವ ಮಹಿಳೆಯರೇ ಇಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಬಂದವರಿಗೆಲ್ಲ ಸ್ವಚ್ಛತೆಯ ಪಾಠ ಹೇಳುತ್ತಿದ್ದಾರೆ’ ಎಂದು ಹೆಮ್ಮೆಯಿಂದ ವಿವರಿಸುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್‌.

ಚಿತ್ರಗಳು: ಉಮೇಶ್ ಮಾರ್ಪಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು