ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಭವನಕ್ಕೆ 75ರ ಸಂಭ್ರಮ

Last Updated 25 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಪ್ರತಾಪ್, ರಮೇಶ್, ರಾಜು, ಲಕ್ಷ್ಮೀ, ಗೋಪಾಲ್, ಜಯಶಂಕರ್, ಪೂನಂ, ಗೌತಮ್, ಮಹೇಶ, ಶ್ರೀನಿವಾಸ್, ಮಾರುತಿ...’ ಹೊರಗಿನ ಆವರಣದಲ್ಲಿ ರಾಘವೇಂದ್ರ ಅವರು ಹೆಸರು ಕರೆಯುತ್ತಲೇ ಪ್ರತಿಯೊಬ್ಬರೂ ಲಗುಬಗೆಯಿಂದ ಒಳಗೆ ಹೋಗುತ್ತಿದ್ದರು.ಹೆಚ್ಚಿನವರು ಆರ್ಡರ್‌ ಮಾಡಿದ್ದು ಮಸಾಲೆ ದೋಸೆ.

ಇದು ಎಲ್ಲಿನ ಚಿತ್ರಣ ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರಬೇಕು. ಹೌದು, ಗಾಂಧಿ ಬಜಾರ್‌ನ ಇತಿಹಾಸದ ಮೈಲಿಗಲ್ಲು ‘ವಿದ್ಯಾರ್ಥಿ ಭವನ’ದಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಾಣುವ ನೋಟವಿದು.

‘ಪೂರಿ ತಿನ್ನಲು ಬೇರೆ ಹೋಟೆಲ್‌ಗಳಿವೆ ಕಣಪ್ಪಾ ವಿದ್ಯಾರ್ಥಿ ಭವನಕ್ಕೆ ಬರೋದು ಮಸಾಲೆ ದೋಸೆ ತಿನ್ನಲು’ ಎಂದು ವೇಟರ್‌ಗೆ ಪ್ರೀತಿಯಿಂದ ಗದರುವ ಹಿರಿತಲೆಗಳು; ‘ವಿದ್ಯಾರ್ಥಿ ಭವನ ಹೋಟೆಲ್‌ ಅಂತ ನಾನು ಭಾವಿಸೋದೇ ಇಲ್ಲ ಅದೊಂದು ಸಾಂಸ್ಕೃತಿಕ ತಾಣ’ ಎಂದು ಎರಡು ದಿನಗಳ ಹಿಂದೆ ಅಭಿಮಾನದಿಂದ ಹೇಳಿದ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ; ಪತ್ರಿಕಾರಂಗದ ದಿಗ್ಗಜ ವೈ.ಎನ್ಕೆ ಎಲ್ಲಿ ಸಿಗದಿದ್ದರೂ ಬೆಳಿಗ್ಗೆ ವಿದ್ಯಾರ್ಥಿ ಭವನದಲ್ಲಿ ಸಿಗ್ತಾರೆ ಎಂಬ ಅವರ ಆಪ್ತರ ನಂಬಿಕೆ, ‘ಅಡಿಗರೇ ಬರ್ಬೋದಾ’ ಎಂದು ಫೋನ್‌ ಕರೆ ಮಾಡಿ ಒಳಮನೆಯ ಆಸನವನ್ನು ಕಾಯ್ದಿರಿಸಿ ಬರುವ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರದ ದಿಗ್ಗಜರು, ಸಚಿವರು, ಹಾಲಿ ಮಾಜಿ ಮುಖ್ಯಮಂತ್ರಿಗಳು; ‘ದೋಸೆ ತಿನ್ಬೇಕಂತ ಅನ್ನಿಸ್ತು ಅದ್ಕೆ ಬಂದ್ಬಿಟ್ಟೆ ಅಡಿಗ್ರೇ’ ಎಂದು ಗ್ರಾಹಕರ ನಡುವೆಯೇ ಕೂರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು; ನಿಯಮಿತವಾಗಿ ಬರುತ್ತಿದ್ದ ಡಾ.ರಾಜ್‌ಕುಮಾರ್‌–ಪಾರ್ವತಮ್ಮ ದಂಪತಿ... ಮಾಲೀಕ ರಾಮಕೃಷ್ಣ ಅಡಿಗರು ವಿದ್ಯಾರ್ಥಿ ಭವನದ ‌ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ಅವರ ಕಣ್ಣಾಲಿಗಳು ಒದ್ದೆಯಾಗುತ್ತವೆ.

‘ವಿದ್ಯಾರ್ಥಿ ಭವನ ಹಳೆಯ ಗಿರಾಕಿಗಳಿಗೆ ನೆಚ್ಚಿನ ಅಡ್ಡಾ, ಹೊಸ ತಲೆಮಾರಿನವರಿಗೆ ಬೆಂಗಳೂರಿನ ಆ್ಯಂಟಿಕ್‌ ಪೀಸ್‌ನಂತಹ ತಾಣದೊಂದಿಗೆ ನಂಟು ಬೆಸೆದ ಅಭಿಮಾನ. ಇದನ್ನು ಹೋಟೆಲ್‌ ಎಂದು ಯಾರೂ ಕರೆಯೋದಿಲ್ಲ. ಎಲ್ಲರಿಗೂ ಇದು ವಿದ್ಯಾರ್ಥಿ ಭವನ. ಈ ಹೆಸರನ್ನು ತುಂಡು ಮಾಡಿ ಕರೆಯೋರೂ ಇಲ್ಲ. ಸೋಷಿಯಲ್‌ ಮೀಡಿಯಾದ ಪಂಟರು ‘ಮಸಾಲೆ ದೋಸೆ ತಿನ್ತಿದ್ದೀನಿ ಎಲ್ಲಿ ಅಂತ ಹೇಳಿ ನೋಡೋಣ’ ಎಂದು ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿಕೊಳ್ಳುತ್ತಾರೆ. ಅಂದರೆ, ಎರಡರಿಂದ ಮೂರು ತಲೆಮಾರಿನೊಂದಿಗೆ ಅವಿನಾಭಾವ ನಂಟು ವಿದ್ಯಾರ್ಥಿ ಭವನದ್ದು’ ಎಂದು ಹೆಮ್ಮೆಪಡುತ್ತಾರೆ ಅಡಿಗರು.

‘ವಿದ್ಯಾರ್ಥಿ ಭವನಕ್ಕೆ 75 ವರ್ಷಗಳಾಗಿವೆ ಎಂಬುದು ಒಂದು ಅಂದಾಜಿನ ಲೆಕ್ಕಾಚಾರ. ಯಾಕೆಂದರೆ, 1943ರಲ್ಲಿ ಬಾಡಿಗೆ ಕೊಟ್ಟ ರಶೀದಿ ನಮಗೆ ಸಿಕ್ಕಿತ್ತು.ದಕ್ಷಿಣ ಕನ್ನಡ ಜಿಲ್ಲೆ ಸಾಲಿಗ್ರಾಮದ ವೆಂಕಟರಮಣ ಉರಾಳರು ಈ ಹೋಟೆಲನ್ನು ಯಡಿಯೂರು ಮಧ್ಯಸ್ಥ ಎಂಬವರಿಂದ ಪಡೆದು ನಡೆಸುತ್ತಿದ್ದರಂತೆ. ಆ ಕಡೆ ಆಚಾರ್ಯ ಪಾಠ ಶಾಲೆ, ಈ ಕಡೆ ನ್ಯಾಷನಲ್‌ ಹೈಸ್ಕೂಲ್‌. ಮಧ್ಯದಲ್ಲಿ ಈ ಹೋಟೆಲ್‌. ಉರಾಳರ ಸ್ನೇಹಿತ ರಾಮ ಅಲ್ಸೆ ಎಂಬವರ ಸಲಹೆಯಂತೆ ‘ವಿದ್ಯಾರ್ಥಿ ಭವನ’ ಎಂದು ಹೆಸರಿಟ್ಟರಂತೆ.1970ರಲ್ಲಿ ನಾನು ಉರಾಳರಿಂದ ಇದನ್ನು ಖರೀದಿಸಿದೆ. ಆದರೆ ಇಲ್ಲಿನ ಸಂಪ್ರದಾಯಗಳನ್ನು ನಾನು ಬದಲಿಸಲಿಲ್ಲ. 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಸಿಕ್ಕಿತಲ್ಲ. ಆ ಖುಷಿಗೆ ಅಂದು ರಜೆ ಕೊಟ್ಟರಂತೆ. ಅವತ್ತು ಶುಕ್ರವಾರ. ಮುಂದೆ ವಾರದ ರಜಾ ದಿನ ಶುಕ್ರವಾರವೇ ಆಯಿತು. ಹಾಗಾಗಿ ನಾನೂ ಅದೇ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದೆ. ಶುಕ್ರವಾರ ಲಕ್ಷ್ಮೀಪೂಜೆ ಮಾಡುವ ದಿನ ಅಂತಲೂ, ಶುಕ್ರವಾರವೆಂದರೆ ವೀಕೆಂಡ್‌ ಮೂಡ್‌ ಇರುತ್ತದೆ ಹಾಗಾಗಿ ಬೇರೆ ದಿನ ಬಂದ್‌ ಮಾಡಿ ಅಂತಲೂ ಎಷ್ಟೋ ಜನ ಸಲಹೆ ನೀಡಿದರು. ವಿದ್ಯಾರ್ಥಿ ಭವನದ ಸ್ವಂತಿಕೆಗಳಲ್ಲಿ ಈ ವಾರದ ರಜೆಯೂ ಒಂದು. ಅದನ್ನು ಬದಲಾಯಿಸಲು ನನಗೆ ಮನಸ್ಸಿಲ್ಲ’ ಎಂದು ಅಡಿಗರು ಹೇಳುತ್ತಾರೆ.‌

ಅಡಿಗರ ಮಗ ಅರುಣ್‌ ಅಡಿಗ ಅವರು ಈಗ ವಿದ್ಯಾರ್ಥಿ ಭವನದ ಬೆನ್ನೆಲುಬಾಗಿ ನಿಂತಿದ್ದಾರೆ. ಗಾಂಧಿ ಬಜಾರ್‌ನ ಲ್ಯಾಂಡ್‌ ಮಾರ್ಕ್‌ನ್ನು ಉಳಿಸಬೇಕು ಎಂಬ ತಂದೆಯ ಆಸೆಯನ್ನು ಮನ್ನಿಸಿ ಅವರು ಟೆಲಿಕಾಂ ಎಂಜಿನಿಯರ್‌ ವೃತ್ತಿಗೆ ಗುಡ್‌ಬೈ ಹೇಳಿದ್ದಾರೆ ಅರುಣ್‌. ಅವರ ಸಹೋದರ ರವಿ ಅಡಿಗರು ಅಮೃತ ಮಹೋತ್ಸವದ ಖುಷಿಗಾಗಿ ಅಮೆರಿಕದಿಂದ ಬಂದಿದ್ದಾರೆ.

ಹೋಟೆಲ್‌ನ ಗ್ರಾಹಕರನ್ನು ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದ ಮೂಲಕ ಸಂಪರ್ಕಿಸುವ ಪ್ರಯತ್ನ ಅರುಣ್‌ ಮಾಡಿದ್ದಾರೆ. ‘www.vidyarthibhavan.in’ ಎಂಬ ವೆಬ್‌ಸೈಟ್‌ನಲ್ಲಿ ಗ್ರಾಹಕರು ನೀಡುವ ಪ್ರತಿಕ್ರಿಯೆಗಳಿಗೆ ಅವರು ಸ್ಪಂದಿಸುತ್ತಾರೆ. ಫೇಸ್‌ಬುಕ್‌ ಪುಟವನ್ನು 13ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಾರೆ. ‘ತಂದೆಯ ಕಾಲದಲ್ಲಿ ಆಯಾ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳಷ್ಟೇ ವಿಐಪಿಗಳಾಗಿರುತ್ತಿದ್ದರು. ಈಗ ಸೋಷಿಯಲ್‌ ಮೀಡಿಯಾ ಜಮಾನ. ಹಾಗಾಗಿ ಪ್ರತಿ ಗ್ರಾಹಕರೂ ವಿಐಪಿಗಳು’ ಎಂದು ವಿದ್ಯಾರ್ಥಿ ಭವನ ಸಮಕಾಲೀನ ಜಗತ್ತಿಗೆ ಅಪ್‌ಡೇಟ್‌ ಆಗುತ್ತಿರುವ ಬಗ್ಗೆ ವಿವರಿಸುತ್ತಾರೆ.

ಮೆನು ಯಾಕ್ರೀ ಬೇಕು ಇಲ್ಲಿ ಏನು ಸಿಗುತ್ತೆ ಅಂತ ನಮ್ಗೆ ಗೊತ್ತಿರಲ್ವಾ ಎಂದು, ಮೆನು ಕೇಳಿದ ಯುವ ಗ್ರಾಹಕರನ್ನು ಗದರುವ ಹಳೆಯ ಗಿರಾಕಿಗಳು... ವರಸೆ ಬದಲಾದರೆ ಅದು ವಿದ್ಯಾರ್ಥಿ ಭವನ ಅನಿಸೋದೇ ಇಲ್ಲ ಎನ್ನುವವರು... ಹೋಟೆಲೊಂದು ಜನರ ಮನಸ್ಸಿನಲ್ಲಿ, ಜೀವನದಲ್ಲಿ ಹಾಸುಹೊಕ್ಕಾಗುವ ಬಗೆ ಹೀಗೇ ಅಲ್ವೇ? ಅಮೃತ ಮಹೋತ್ಸವಸಮಾರಂಭವೂ ನಿಜ ಅರ್ಥದಲ್ಲಿ ವಿದ್ಯಾರ್ಥಿ ಭವನದ ಗ್ರಾಹಕರ ಸಮ್ಮಿಲನವೇ.

ಅಮೃತ ಮಹೋತ್ಸವ

ಅಕ್ಟೋಬರ್‌ 26ರ ಶುಕ್ರವಾರ ವಿದ್ಯಾರ್ಥಿ ಭವನದ ಅಮೃತವರ್ಷಕ್ಕೆ ಚಾಲನೆ: ಉಪಪಸ್ಥಿತಿ– ಸುಪ್ರೀಂ ಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್‌, ಹಿರಿಯ ಕವಿ ಪ್ರೊ.ಕೆ.ಎಸ್. ನಿಸಾರ್‌ ಅಹಮದ್‌, ಉದ್ಯಮಿ ಪಿ.ಸದಾನಂದ ಮಯ್ಯ, ಅಂಚೆ ಮಹಾಪ್ರಬಂಧಕ (ಕರ್ನಾಟಕ ವೃತ್ತ) ಚಾರ್ಲ್ಸ್‌ ಲೋಬೊ.

ವಿದ್ಯಾರ್ಥಿ ಭವನದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ, ಮೃತ ಸಿಬ್ಬಂದಿಯ ಕುಟುಂಬದ ಸದಸ್ಯರಿಗೆ ಗೌರವಾರ್ಪಣೆ, ‘ಕಾ‌ಫಿಟೇಬಲ್‌’ ನೆನಪಿನಂಗಳ ಬಿಡುಗಡೆ, 75ನೇ ವರ್ಷದ ನೆನಪಿನಲ್ಲಿ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಬಿಡುಗಡೆ, ವಿದ್ಯಾರ್ಥಿ ಭವನದ ಗ್ರಾಹಕರೂ ಆಗಿರುವ ಸಾಹಿತಿಗಳು ಮತ್ತು ಕವಿಗಳು ರಚಿಸಿದ ಕವಿತೆಗಳ ಗಾಯನ; ಹಾಡುವವರೂ ಇಲ್ಲಿನ ಗ್ರಾಹಕ ಕಲಾವಿದರೇ! ಮಧ್ಯೆ ಮಧ್ಯೆ ಮಸಾಲೆದೋಸೆ ಮತ್ತು ಕಾಫಿ ನೆನಪುಗಳ ಮೆಲುಕು.

ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT