ಶನಿವಾರ, ಜುಲೈ 24, 2021
22 °C
ಜೂನ್ 14ರಿಂದ ಪ್ರತಿ ಭಾನುವಾರ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರ

ಮಕ್ಕಳು, ಹದಿಹರೆಯದವರಿಗಾಗಿ 8 ಕಿರುಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ‘ದಿ ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್‌' ಸಂಸ್ಥೆ (ಸಿಡಬ್ಲ್ಯೂಸಿ), ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಹದಿಹರೆಯದ ವಯಸ್ಸಿನವರಿಗಾಗಿ ಎಂಟು ಕಿರುಚಿತ್ರಗಳನ್ನು ನಿರ್ಮಾಣ ಮಾಡಿದೆ.

ಈ ಕಿರುಚಿತ್ರಗಳಲ್ಲಿ ಪ್ರೌಢಾವಸ್ಥೆ, ಲಿಂಗ, ದೇಹದ ಪರಿಕಲ್ಪನೆ ಹಾಗೂ ಲೈಂಗಿಕತೆ ಕುರಿತು ಹದಿಹರೆಯದ ಮಕ್ಕಳಲ್ಲಿ ಅರಿವು ಮೂಡಿಸುವ ಜತೆಗೆ,  ಅಂತರ್ಜಾಲ ಸುರಕ್ಷತೆ, ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಶೋಷಣೆಗೆ ಸಂಬಂಧಿಸಿದ ಮಾಹಿತಿಯೂ ಇದೆ.  

ಜೂನ್ 14ರಿಂದ ಪ್ರತಿ ಭಾನುವಾರ ಸಂಜೆ 5 ಗಂಟೆಯಿಂದ ದೂರದರ್ಶನದ 'ಚಂದನ ವಾಹಿನಿ'ಯಲ್ಲಿ ಈ ಎಂಟು ಕಿರುಚಿತ್ರಗಳು ಸರಣಿಯಲ್ಲಿ ಪ್ರಸಾರವಾಗಲಿವೆ. ನಂತರ, ಸಿಡಬ್ಲ್ಯೂಸಿ ಸಂಸ್ಥೆಯ ‘ಮಕ್ಕಳ ತೂಫಾನ್'– ಯೂಟ್ಯೂಬ್ ಚಾನೆಲ್‌ನಲ್ಲಿ ಈ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. 

ಸಿಡಬ್ಲ್ಯೂಸಿ ಸಂಸ್ಥೆ, ಏನ್ಫೋಲ್ಡ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣ ಮಾಡಿರುವ ಈ ಕಿರುಚಿತ್ರಗಳಿಗೆ, ಯುನಿಸೆಫ್ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಧನಸಹಾಯ ನೀಡಿದೆ. 

ಮಕ್ಕಳು, ತಮ್ಮ ಮೇಲೆ ನಡೆಯುವ ಶೋಷಣೆ (ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ) ಗುರುತಿಸುವುದು ಮತ್ತು ಅದನ್ನು ತಡೆಗಟ್ಟುವುದು, ಮಕ್ಕಳನ್ನು ಸಶಕ್ತಗೊಳಿಸುವುದು ಹೇಗೆ ಎಂಬುದನ್ನು ಕಿರುಚಿತ್ರಗಳಲ್ಲಿ ತೋರಿಸಲಾಗಿದೆ. ಮಕ್ಕಳ ಸ್ನೇಹಿ ವಾತಾ ವರಣವಿರುವ ಸಮುದಾಯ ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನವಾಗಿದೆ ಎಂದು ಸಿಡಬ್ಲ್ಯೂಸಿ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಮಕ್ಕಳು ಮತ್ತು ಅವರ ಪೋಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಕೆಲವು ಪ್ರಕಟಣೆಗಳನ್ನೂ ಈ ಕಿರುಚಿತ್ರಗಳಲ್ಲಿ ಸೇರಿಸಲಾಗಿದೆ. ಇವು ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜತೆಗೆ, ಮಕ್ಕಳು ಯಾವ ವಿಷಯವನ್ನು ಮುಕ್ತವಾಗಿ ಚರ್ಚೆ ಮಾಡುವುದಿಲ್ಲವೋ, ಅಂಥ ವಿಷಯಗಳನ್ನು ಮುಕ್ತವಾಗಿ, ಸ್ಪಷ್ಟವಾಗಿ ಹೇಗೆ ಹಂಚಿಕೊಳ್ಳಬಹುದು ಎಂಬುದನ್ನು ಈ ಕಿರುಚಿತ್ರ ತೋರಿಸುತ್ತದೆ. ಮಾತ್ರವಲ್ಲ, ಮಕ್ಕಳು ಹಂಚಿಕೊಳ್ಳುವ ಅಂತ ಮಾಹಿತಿಯನ್ನು ಹಿರಿಯರು ಹೇಗೆ ಸಹಾನುಭೂತಿಯಿಂದ ಕೇಳಿಸಿಕೊಳ್ಳಬಹುದೆಂಬ ವಿಷಯವನ್ನೂ ಈ ಕಿರುಚಿತ್ರಗಳಲ್ಲಿ ಅಳವಡಿಸಲಾಗಿದೆ. 

ಪ್ರತಿ ಕಿರುಚಿತ್ರದಲ್ಲಿ ಮಕ್ಕಳು ಹಾಗೂ ಹಿರಿಯರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆಗಳನ್ನು ಕೊಡಲಾಗಿದೆ. ಜತೆಗೆ ಮಕ್ಕಳ ರಕ್ಷಣೆಯ ಹಕ್ಕನ್ನು ಎತ್ತಿ ಹಿಡಿಯುವ ಕಾನೂನುಗಳ ಕುರಿತ ಮುಖ್ಯ ಅಂಶಗಳನ್ನು ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು