ಸೋಮವಾರ, ಡಿಸೆಂಬರ್ 9, 2019
19 °C

ಕೃಷಿ ಒಳ್ಳೆಯದೇ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯೇ?

Published:
Updated:
Prajavani

* ನಾನು ಬಿ.ಇ. (ಇ ಆ್ಯಂಡ್‌ ಸಿಇ) ಮುಗಿಸಿದ್ದೇನೆ. ನನಗೆ ಐಟಿ ಕ್ಷೇತ್ರ ಇಷ್ಟವಿಲ್ಲ. ನಮ್ಮಲ್ಲಿ ನಾಲ್ಕು ಎಕರೆ ಜಮೀನು ಇರುವುದರಿಂದ ನನಗೆ ಕೃಷಿ ಮಾಡಬೇಕು ಎಂಬ ಬಯಕೆಯಿದೆ. ಹಾಗೆಯೇ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗೆ ಕೂಡ ಕೂರಲು ಯತ್ನಿಸುತ್ತಿದ್ದೇನೆ. ಈಗ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ಯತ್ನಿಸಲೇ ಅಥವಾ ಕೃಷಿ ಮಾಡಲೇ ಎನ್ನುವ ಗೊಂದಲದಲ್ಲಿದ್ದೇನೆ. ಭವಿಷ್ಯದಲ್ಲಿ ಕೃಷಿಗೆ ಬೆಲೆಯಿರಬಹುದೇ? ಯಾವುದನ್ನು ಆಯ್ಕೆ ಮಾಡಲಿ ಎಂದು ತಿಳಿಸಿ.

-ಸಂಗಂ, ಕೊಪ್ಪಳ

ಸಂಗಂ, ಹೀಗೆ ಗೊಂದಲ ಆಗುವುದು ಸಹಜ. ನಿಮ್ಮೊಂದಿಗೆ ನೀವು ಒಂದಿಷ್ಟು ಸಮಯ ಕಳೆದು ಗೊಂದಲ ಪರಿಹರಿಸಿಕೊಳ್ಳಿ. ನಿಮ್ಮ ನೈಜ ಆಸಕ್ತಿ ಯಾವುದು ಎಂದು ಆಲೋಚಿಸಿ. ಸೂಕ್ಷ್ಮವಾಗಿ ಅವಲೋಕಿಸಿ ಸಲಹೆ ಸೂಚನೆ ನೀಡಬಲ್ಲ ಸ್ನೇಹಿತರು ಅಥವಾ ಹಿರಿಯರೊಂದಿಗೆ ಚರ್ಚಿಸಿ. ಕೊನೆಗೆ ನಿಮಗೆ ಸರಿ ಕಾಣಿಸಿದ ನಿರ್ಧಾರದ ಸಾಧಕ– ಬಾಧಕಗಳನ್ನು ತಿಳಿಸಿ ನಿರ್ಧರಿಸಿ.

ನಾಲ್ಕು ಎಕರೆ ಜಮೀನು ಇದ್ದರೆ ಕೃಷಿ ಆಧಾರಿತ ಚಟುವಟಿಕೆಯಿಂದ ಆದಾಯ ತೆಗೆದು ನೆಮ್ಮದಿಯಿಂದ ಬದುಕಬಹುದು ಎಂದು ಕೃಷಿ ಮಾಡಿದವರು ಹೇಳುತ್ತಾರೆ. ಬೇರೆಯವರು ‘ವಿದ್ಯಾವಂತನಾಗಿ ಕೃಷಿ ಮಾಡುತ್ತಿಯಾ?’ ಎಂದೆಲ್ಲ ಹೇಳಿದರೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಶಿಕ್ಷಣ ಮತ್ತು ಪದವಿಯ ಜ್ಞಾನವನ್ನು ಉಪಯೋಗಿಸಿಕೊಂಡು ನಿಮ್ಮ ಕೃಷಿಯನ್ನು ಹೆಚ್ಚು ಸಹಜ ಮತ್ತು ಲಾಭದಾಯಕವಾಗಿಸಿಕೊಳ್ಳಿ. ಮಿಶ್ರಬೆಳೆ, ಹೈನುಗಾರಿಕೆ, ತೋಟಗಾರಿಕೆ, ಕೋಳಿ ಸಾಕಣೆ ಇತ್ಯಾದಿಗಳಿಂದ ನಿಮ್ಮ ಕೃಷಿ ಚಟುವಟಿಕೆಯನ್ನು ವೈಜ್ಞಾನಿಕವಾಗಿ ಬೆಳೆಸಿಕೊಳ್ಳಿ. ನಿಮ್ಮ ನೆಲ ಮತ್ತು ಹವಾಮಾನಕ್ಕೆ ಪೂರಕವಾಗಿರುವ, ಹೆಚ್ಚು ರಾಸಾಯನಿಕ ಬಳಸದ ಕೃಷಿ ಪದ್ಧತಿಯ ಕುರಿತು ಸಂಶೋಧನೆ ಮಾಡಿ. ಈಗಾಗಲೇ ಆ ಕುರಿತು ಕೆಲಸ ಮಾಡುವ ಪ್ರಗತಿಪರ ಕೃಷಿಕರನ್ನು ಭೇಟಿಯಾಗಿ, ಅವರು ಬರೆದಿರುವ ಪುಸ್ತಕ ಮತ್ತು ಮಾಹಿತಿಯನ್ನು ಓದಿ.

ನೀವು ವಿದ್ಯಾವಂತರಾಗಿರುವುದಕ್ಕೆ ಬೇರೆ ರೈತರಿಗಿಂತ ಭಿನ್ನವಾಗಿರುವ, ಈ ನೆಲ– ಜಲದ ಕುರಿತು ಕಾಳಜಿ ಇರುವ ಕೃಷಿಕನಾಗಲು ಪ್ರಯತ್ನಿಸಿ. ಕೆಲಸಕ್ಕಾಗಿ ನಗರಕ್ಕೆ ಬಂದು, ಕಲುಷಿತವಾದ ಆಹಾರ, ನೀರು, ಗಾಳಿ ಕುಡಿದು ಬದುಕುವುದಕ್ಕಿಂತ ನಿಮ್ಮದೇ ನೆಲದಲ್ಲಿ ನಿಮಗೆ ಬೇಕಾಗಿರುವುದನ್ನು ಬೆಳೆದು ತಿನ್ನುವ ಅವಕಾಶವಿದ್ದಲ್ಲಿ ಅದಕ್ಕಿಂತ ಬೇರೆ ಏನು ಬೇಕಿದೆ! ಇದು ನನ್ನ ಅಭಿಪ್ರಾಯ. ನಿಮ್ಮ ನಿರ್ಧಾರ ನೀವೇ ಆಲೋಚಿಸಿ ಕೈಗೊಳ್ಳಿ. ಶುಭವಾಗಲಿ.

* ನಾನು ಬಿ.ಎಸ್‌ಸಿ. ಕೊನೆಯ ವರ್ಷ ಓದುತ್ತಿದ್ದೇನೆ. ಮುಂದೆ ಬಿ.ಎಡ್. ಮಾಡಬೇಕು ಎಂದುಕೊಂಡಿದ್ದೇನೆ. ಬಿ.ಎಡ್. ಮಾಡಿದರೆ ಎಷ್ಟನೇ ತರಗತಿವರೆಗೂ ಶಿಕ್ಷಕರಾಗಿ ಪಾಠವನ್ನು ಮಾಡಬಹುದು ಎಂದು ದಯವಿಟ್ಟು ತಿಳಿಸಿ. ನಾನು 8– 10ನೇ ತರಗತಿವರೆಗೂ ಪಾಠವನ್ನು ಮಾಡುವ ಶಿಕ್ಷಕನಾಗಬೇಕು ಎಂದುಕೊಂಡಿದ್ದೇನೆ. ಹೀಗಾಗಿ ಯಾವ ಕೋರ್ಸ್ ಮಾಡಿದರೆ 8– 10ನೇ ತರಗತಿಯ ಶಿಕ್ಷಕನಾಗಬಹುದು ಎಂದು ತಿಳಿಸಿ.

-ಗಿರೀಶ್, ಬೀದರ್

ಗಿರೀಶ್, ನೀವು ಬಿ.ಎಸ್‌ಸಿ, ಮುಗಿಸಿದ ನಂತರ ಬಿ.ಎಡ್. ಮಾಡಿದರೆ 6ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಶಿಕ್ಷಕರಾಗಿ ಕೆಲಸ ನಿರ್ವಹಿಸಬಹುದು. ಎಂ.ಎಸ್‌ಸಿ. ಮಾಡಿ ಬಿ.ಎಡ್. ಓದಿದರೆ ಪಿ.ಯು.ಸಿ. ವಿದ್ಯಾರ್ಥಿಗಳಿಗೂ ಉಪನ್ಯಾಸಕರಾಗಿ ಕೆಲಸ ಮಾಡಬಹುದು. ಇತ್ತೀಚಿನ ಕೆಲವು ತಿದ್ದುಪಡಿಯ ಪ್ರಕಾರ ಮುಂದೆ 9ನೇ ತರಗತಿಯಿಂದ ಹನ್ನೆರಡನೆಯ ತರಗತಿಯವರೆಗೆ ಬೋಧಿಸಲು ಎಂ.ಎಸ್‌ಸಿ. ಮತ್ತು ಬಿ.ಎಡ್. ಶಿಕ್ಷಣ ಆಗಬೇಕು ಎಂಬ ನಿಯಮ ಬರುವ ಸಾಧ್ಯತೆ ಇರುವುದರಿಂದ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್. ಮಾಡುವುದು ಉತ್ತಮ. ಒಂದು ವೇಳೆ ನಿಮಗೆ ರೆಗ್ಯುಲರ್ ಆಗಿ ಸ್ನಾತಕೋತ್ತರ ಪದವಿ ಮಾಡಲು ತೊಂದರೆ ಇದ್ದರೆ, ನಿಮ್ಮ ಬಿ.ಎಡ್. ಶಿಕ್ಷಣದ ನಂತರ ಶಿಕ್ಷಕರಾಗಿ ಕೆಲಸ ಮಾಡುತ್ತ ದೂರ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಓದಬಹುದು. ವಿಜ್ಞಾನದ ಯಾವ ವಿಷಯವನ್ನು ಬೋಧಿಸಲು ನಿಮಗೆ ಆಸಕ್ತಿ ಇದೆಯೋ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿ. ಶುಭಾಶಯ.

* ಎಸ್‌.ಎಸ್‌.ಎಲ್‌.ಸಿ. ಕನ್ನಡ ಮಾಧ್ಯಮದಲ್ಲಿ ಮಾಡಿದ್ದೇನೆ. ಪಿಯುಸಿ ವಿಜ್ಞಾನವನ್ನು ಕರಸ್ಪಾಂಡೆನ್ಸ್‌ನಲ್ಲಿ ಓದಿದ್ದೇನೆ. ಈಗ ಕರಸ್ಪಾಂಡೆನ್ಸ್‌ನಲ್ಲಿ ಬಿ.ಕಾಂ. ಕಂಪ್ಯೂಟರ್‌ ಅಪ್ಲಿಕೇಶನ್‌ ಅನ್ನು ಗೀತಂ ವಿಶ್ವವಿದ್ಯಾಲಯದಿಂದ ಮಾಡುತ್ತಿದ್ದೇನೆ. ಆರೋಗ್ಯ ತೊಂದರೆಯಿಂದ ಕರಸ್ಪಾಂಡೆನ್ಸ್‌ನಲ್ಲಿ ಮಾಡಬೇಕು. ಮನೆಯಲ್ಲಿ ತುಂಬಾ ಬಯ್ಯುತ್ತಿದ್ದಾರೆ. ಧೈರ್ಯ ತುಂಬ್ತೀರಾ? ಮುಂದೆ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದೇ?

-ನಿತ್ಯಾ, ಊರು ಬೇಡ

ನಿತ್ಯಾ, ಅನೇಕ ಸಂದರ್ಭಗಳಲ್ಲಿ ಬದುಕಿನ ಒತ್ತಡಗಳು, ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಗಳು ಕೆಲವು ನಿರ್ಧಾರಗಳನ್ನು ತೆಗದುಕೊಳ್ಳಲು ಕಾರಣವಾಗುತ್ತವೆ. ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯ ಅನುಕೂಲತೆ, ಸಮಸ್ಯೆಗಳು ಇರುತ್ತವೆ. ಆದರೆ ಆ ಬಗ್ಗೆ ಹೆಚ್ಚು ಯೋಚಿಸದೆ ವಾಸ್ತವ ಪರಿಸ್ಥಿತಿಯನ್ನು ತಿಳಿದು‌ ಮುಂದುವರಿಯುವುದರ ಬಗ್ಗೆ ಆಲೋಚಿಸಬೇಕು. ಏನು ಮಾಡಬೇಕು ಮತ್ತು ಯಾಕಾಗಿ ಮಾಡಬೇಕು ಎಂದು ನೀವು ಸ್ಪಷ್ಟಪಡಿಸಿಕೊಂಡು‌ ಮುಂದುವರಿದರೆ ಧೈರ್ಯ ಬರುತ್ತದೆ.

ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ., ದೂರಶಿಕ್ಷಣದಲ್ಲಿ ಪಿಯುಸಿ ಮತ್ತು ಡಿಗ್ರಿ ಓದಿರುವುದು ನಿಮ್ಮ ಮುಂದಿನ ವೃತ್ತಿ ಜೀವನಕ್ಕೆ ಯಾವ ತೊಂದರೆಯೂ ಆಗದು. ನೀವು ದೂರ ಶಿಕ್ಷಣದಲ್ಲಿ ಓದಿದರೂ ಕೂಡ ರೆಗ್ಯುಲರ್ ಆಗಿ ಓದಿದವರ ಹಾಗೆ. ಅವರಿಗಿಂತ ಹೆಚ್ಚು ಜ್ಞಾನ ಮತ್ತು ಕೌಶಲ ಸಂಪಾದಿಸಿಕೊಳ್ಳಿ. ಕೆಲಸ ಮಾಡಲು ಬೇಕಿರುವುದು ಜ್ಞಾನ ಮತ್ತು ಕೌಶಲ. ನಿಮ್ಮ ಆರೋಗ್ಯ ಸಹಕರಿಸಿದಲ್ಲಿ ಯಾವುದಾದರೂ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಳ್ಳಿ. ಅದು ನಿಮಗೆ ಹೆಚ್ಚಿನ ಜ್ಞಾನವನ್ನು ಮತ್ತು ಮುಂದೆ ಕೆಲಸ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕೆಲವೊಂದು ನಿರ್ದಿಷ್ಟ ನೇಮಕಾತಿ ಹೊರತುಪಡಿಸಿ ಉಳಿದೆಲ್ಲಾ ನೇಮಕಾತಿಗಳಿಗೆ ದೂರ ಶಿಕ್ಷಣದಲ್ಲಿ ಮಾಡಿದ ಪದವಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಪದವಿ ಶಿಕ್ಷಣದ ಆಧಾರದ ಮೇಲೆ ನೀವು ಬ್ಯಾಂಕಿಂಗ್ ಪರೀಕ್ಷೆ ಬರೆಯಬಹುದು. ಹಾಗೆ ಎಸ್.ಎಸ್.ಸಿ., ಯು.ಪಿ.ಎಸ್.ಸಿ. ಮತ್ತು ಕೆ.ಪಿ.ಎಸ್.ಸಿ., ಪದವಿ ಆಧಾರದ ಮೇಲೆ ಕರೆಯುವ ಎಲ್ಲಾ ಪರೀಕ್ಷೆಗಳನ್ನು ಎದುರಿಸಬಹುದು. ಕರ್ನಾಟಕ ಸರ್ಕಾರದ ಎಸ್.ಡಿ.ಎ., ಎಫ್.ಡಿ.ಎ. ಹುದ್ದೆಗಳಿಗೂ ಪ್ರಯತ್ನಿಸಬಹುದು. ಪದವಿ ಮತ್ತು ದ್ವಿತೀಯ ಪಿಯುಸಿ ಶಿಕ್ಷಣದ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದಾದ ಎಲ್ಲಾ ಹುದ್ದೆಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿ ಪಡೆದುಕೊಳ್ಳಿ.‌ ಆಯಾ ಪರೀಕ್ಷೆಯ ಸಿಲೆಬಸ್ ನೋಡಿಕೊಂಡು ಸೂಕ್ತ ತಯಾರಿ ಮಾಡಿಕೊಳ್ಳಿ.‌ ಅನಿವಾರ್ಯ ಎನಿಸಿದರೆ ಆ ಪರೀಕ್ಷೆಗಳ ತಯಾರಿಗೆ ಕೋಚಿಂಗ್ ಸಹಾಯ ಪಡೆಯಿರಿ.‌

ಕೆಲಸದ ವಿಷಯದಲ್ಲಿ ಸರ್ಕಾರಿ ಅಥವಾ ಖಾಸಗಿ ಎಂದು ನೋಡಬೇಡಿ. ನಿಮ್ಮ ಆಸಕ್ತಿ ಮತ್ತು ಜೀವನಕ್ಕೆ ಪೂರಕವಾಗಿರುವ ಉದ್ಯೋಗವನ್ನು ಮಾಡಿ.

ಆರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆದು, ಮತ್ತೆ ಅದು ಮರುಕಳಿಸಿದಂತೆ ಜೀವನ ಕ್ರಮ ಮತ್ತು ಆಹಾರದಲ್ಲಿ ಸುಧಾರಣೆ ತಂದುಕೊಂಡು ಧೈರ್ಯವಾಗಿ ಮುಂದುವರಿಯಿರಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು