ಸೋಮವಾರ, ಜನವರಿ 17, 2022
27 °C
ವಿದ್ಯಾರ್ಥಿಗಳಿರುವಲ್ಲಿಗೇ ಉಚಿತ ಶಿಕ್ಷಣದ ಸಾಧ್ಯತೆ * ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ?

PV Web Exclusive | ಪಾಠ ಬೋಧನೆ: ಮೌನವಾಯಿತೇಕೆ ಆಕಾಶವಾಣಿ?

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಆನ್‌ಲೈನ್‌ ಶಿಕ್ಷಣ, ದೂರದರ್ಶನದ ಪಾಠ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಪ್ರಬಲ ಮಾಧ್ಯಮವಾದ ಆಕಾಶವಾಣಿಯನ್ನು ಬಳಸಬಹುದಿತ್ತಲ್ಲವೇ ಎಂಬ ಮಾತು ಶಿಕ್ಷಣ ತಜ್ಞರ ವಲಯದಲ್ಲಿ ಕೇಳಿಬಂದಿದೆ. 

ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷಣ/ ತಂತ್ರಜ್ಞಾನ ಮೂಲಕ ಶಿಕ್ಷಣ ನೀಡುವ ಬಗ್ಗೆ ರೂಪಿಸಲಾದ ತಜ್ಞರ ಸಮಿತಿಯ ಸದಸ್ಯರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದು ಕಾರ್ಯಗತವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಕೋವಿಡ್‌ ಹರಡುತ್ತಿರುವ ಕಾರಣವೊಡ್ಡಿ ವಿದ್ಯಾಗಮವನ್ನೂ ಸ್ಥಗಿತಗೊಳಿಸಲಾಯಿತು. ಇದರ ಹಿಂದೆ ದೊಡ್ಡ ಲಾಬಿಯೇ ಇದೆ. ಆದರೆ, ಕೊನೇ ಪಕ್ಷ ಲಭ್ಯ ತಂತ್ರಜ್ಞಾನವನ್ನು ಬಳಸಿಕೊಂಡು ವೆಚ್ಚರಹಿತವಾಗಿ ಮಕ್ಕಳಿಗೆ ಶಿಕ್ಷಣದ ಸ್ಪರ್ಶ ಮುಂದುವರಿಸಬಹುದಿತ್ತು’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದ ಶಿಕ್ಷಣ ಕಾರ್ಯಕ್ರಮದ ಮುಖ್ಯಸ್ಥ ನಿರಂಜನಾರಾಧ್ಯ ವಿ.ಪಿ. ಅಭಿಪ್ರಾಯ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 16 ಆಕಾಶವಾಣಿ ಕೇಂದ್ರಗಳಿವೆ. ಆಯಾ ಡಯೆಟ್‌ ವ್ಯಾಪ್ತಿಯ ಪರಿಣತರನ್ನು ಬಳಸಿಕೊಂಡು ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಬಹುದಿತ್ತು. ಬಾನುಲಿಯ ಶಿಕ್ಷಣ ಬೋಧನೆ ವಿಕೇಂದ್ರೀಕರಣಗೊಳ್ಳಬೇಕು. ಕೋವಿಡ್‌‌ ಕಾಲದಲ್ಲಿಯೇ ರೂಪಿಸಲಾದ ‘ಹಾಡು ಮಾತಾಡು’ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕಾಶವಾಣಿಯ ಶೈಕ್ಷಣಿಕ ಕಾರ್ಯಕ್ರಮಗಳ ಯಶೋಗಾಥೆ ಕಣ್ಣ ಮುಂದಿರುವುದರಿಂದ ಅದನ್ನು ಮತ್ತೆ ಜಾರಿಗೊಳಿಸಲು ಇದು ಸರಿಯಾದ ಕಾಲ’ ಎಂದು ಅವರು ಹೇಳಿದರು. 

‘ಕೋವಿಡ್‌ ಒಂದೇ ಅಲ್ಲ. ಜಗತ್ತಿನ ಎಲ್ಲ ಭಾಗಗಳಲ್ಲಿ ಬೇರೆ ಬೇರೆ ಅನಾಹುತಗಳಾದಾಗ ಸಮೂಹ ಮಾಧ್ಯಮಗಳನ್ನೇ ಅಲ್ಲಿನ ಇಲಾಖೆಗಳು ಸರಿಯಾಗಿ ಬಳಸಿದ್ದವು. ಇಂಟರ್‌ನೆಟ್‌ ಗ್ರಾಮೀಣ ಪ್ರದೇಶದಲ್ಲಿ ಶೇ 8ರಿಂದ 12ರಷ್ಟು ಪ್ರದೇಶಗಳಿಗೆ ಮಾತ್ರ ಸಿಗುತ್ತದೆ. ನಗರ ಪ್ರದೇಶದಲ್ಲಿ ಇಂಟರ್‌ನೆಟ್‌ ವ್ಯಾಪ್ತಿ ಶೇ 27ರಷ್ಟು ಮಾತ್ರ ಇದೆ. ರೇಡಿಯೋ ಹಾಗಲ್ಲ. ಶೇ 98 ಪ್ರದೇಶವನ್ನು ತಲುಪುತ್ತದೆ. ಮೊಬೈಲ್‌ನಷ್ಟು ದುಬಾರಿ ಅಲ್ಲ. ಟಿವಿ ಮುಂದೆ ಕೂರಬೇಕಾಗಿಲ್ಲ. ಎಲ್ಲಿದ್ದರೂ ಪಾಠಗಳನ್ನು ಆಲಿಸಬಹುದು. ಇಷ್ಟು ಮೂಲಸೌಲಭ್ಯ, ಪಠ್ಯ ಕಾರ್ಯಕ್ರಮ ನಿರ್ಮಾಣ ವ್ಯವಸ್ಥೆ ಇರುವ ಆಕಾಶವಾಣಿಯ ಪ್ರಯೋಜನ ಪಡೆಯಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಅವರು ಹೇಳಿದರು. 

ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿ, ‘ನಾವು ಬೀದಿಬದಿಯಲ್ಲಿ ರಸ್ತೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಬದಲು ಶಾಲಾ ಆವರಣದಲ್ಲಿ ಸುರಕ್ಷಿತ ವಾತಾವರಣದಲ್ಲಿ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಕೋವಿಡ್‌ನಂಥ ಈ ಅನಾಹುತವಾಗುತ್ತಿರಲಿಲ್ಲ’ ಎಂದರು.

‘ಶಿಕ್ಷಣ ಇಲಾಖೆ ಆನ್‌ಲೈನ್‌ ಕಲಿಕೆಗೆ ಒತ್ತು ಕೊಡುತ್ತಿದೆ. ಇದು ಒಂದು ಅರ್ಥದಲ್ಲಿ ಉಳ್ಳವರಿಗೆ, ಸೌಲಭ್ಯ ಇರುವವರಿಗೆ ಮಾತ್ರ ನೀಡುವ ಶಿಕ್ಷಣ. ಸರ್ಕಾರಿ ಶಾಲೆಯ ಬಡಮಕ್ಕಳನ್ನು ಇಂತಹ ಶಿಕ್ಷಣದಿಂದ ದೂರವಿಡುವ ಪ್ರಕ್ರಿಯೆಯೂ ಹೌದು. ದೂರದರ್ಶನ 8ರಿಂದ 10ನೇ ತರಗತಿ ಮಕ್ಕಳ ಕಲಿಕೆಗೆ ಚಂದನ ವಾಹಿನಿಯಲ್ಲಿ ಪಾಠ‌ ಪ್ರಸಾರ ಮಾಡುತ್ತಿದೆ. ಇದು ಎಲ್ಲ ಮಕ್ಕಳನ್ನು ತಲುಪುತ್ತಿದೆ ಎಂದು ಹೇಳಲು ಹೇಗೆ ಸಾದ್ಯ? ಬಹಳ ಮಕ್ಕಳ ಮನೆಯಲ್ಲಿ ಟಿ.ವಿ. ವಿದ್ಯುತ್‌ ಸೌಲಭ್ಯ ಇಲ್ಲದಿರುವುದು, ಸ್ಮಾರ್ಟ್‌ ಫೋನ್‌ ಇಲ್ಲದಿರುವ ಸಮಸ್ಯೆಯೂ ಇದೆ. ಇಂಥ ಸಂದರ್ಭ ರೇಡಿಯೋ ಪರಿಣಾಮಕಾರಿʼ ಎಂದರು.

‘ಆಕಾಶವಾಣಿಯನ್ನು ಗರಿಷ್ಠ ಮಟ್ಟಕ್ಕೆ ಬಳಸಲು ಡಿಎಸ್‌ಇಆರ್‌ಟಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಒಂದು ಕೋವಿಡ್‌ಗೆ ಮಾತ್ರ ಅಲ್ಲ. ನಿರಂತರವಾಗಿ ಬಳಸುವಂತಾಗಬೇಕು. 1ರಿಂದ 10ನೇ ತರಗತಿವರೆಗೆ ಯಾವ ಪಾಠಗಳನ್ನು ರೇಡಿಯೋ ಮೂಲಕ ತಲುಪಿಸಲು ಸಾಧ್ಯವೋ ಅದನ್ನೆಲ್ಲ ಮಾಡಬೇಕು’ ಎಂದು ನಿರಂಜನಾರಾಧ್ಯ ಹೇಳಿದರು. 

‘ಕಾರ್ಯಕ್ರಮವನ್ನೇನೋ ಪ್ರಸಾರ ಮಾಡಬಹುದು. ಅದು ವಿದ್ಯಾರ್ಥಿಗಳನ್ನು ತಲುಪುವಂತೆ ಮಾಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ’ ಎಂದು ಇದೇ ಸಮಿತಿಯ ತಜ್ಞರೊಬ್ಬರು ಹೇಳಿದರು. 

ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರೂ ಮೇಲಿನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ, ‘ಆಕಾಶವಾಣಿ ಸಹಿತ ಲಭ್ಯ ತಂತ್ರಜ್ಞಾನ, ಮಾಧ್ಯಮಗಳ ಮೂಲಕ ಶಿಕ್ಷಣ ತಲುಪಿಸಬೇಕಿತ್ತು. ಗಣಿತ, ವಿಜ್ಞಾನದಂಥ ಪ್ರಾಯೋಗಿಕ ತರಗತಿಗಳು ಸ್ವಲ್ಪ ಕಷ್ಟವಾಗಬಹುದು. ಆದರೆ ಸಮಾಜ ವಿಜ್ಞಾನ, ಭಾಷಾ ವಿಷಯಗಳನ್ನು ಶ್ರವ್ಯ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ತಲುಪಿಸಬಹುದಿತ್ತು. ಒಟ್ಟಿನಲ್ಲಿ ಸರ್ಕಾರದ ಶಿಕ್ಷಣ ತಲುಪಿಸುವ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.   

ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರನ್ನು ನಿರಂತರ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

ಆಕಾಶವಾಣಿಯ ಯಶೋಗಾಥೆ:

* 1ರಿಂದ 3ನೇ ತರಗತಿವರೆಗೆ ಬೋಧಿಸಿದ ಚುಕ್ಕಿ ಚಿನ್ನ, 4 ಮತ್ತು 5ನೇ ತರಗತಿಗೆ ಚಿಣ್ಣರ ಚುಕ್ಕಿ, 6, 7 ಮತ್ತು 8ನೇ ತರಗತಿಗಾಗಿ ಕೇಳಿ ಕಲಿ ಮೂಲಕ ಬಾನುಲಿ ಪಾಠಗಳ ಬೋಧನೆ

* ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗೆ ಸರಣಿ ಕಾರ್ಯಕ್ರಮ ಪ್ರಸಾರ

* ಯುಟ್ಯೂಬ್‌, ಆಪ್‌ (App)  ಸಹಿತ ಬಹುಮಾಧ್ಯಮಗಳಲ್ಲಿ ಪ್ರಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು