ಬುಧವಾರ, ಏಪ್ರಿಲ್ 21, 2021
25 °C

ಸಿಎಫ್‌ಟಿಆರ್‌ಐ: ಸಂಶೋಧನೆಗೆ ಅವಕಾಶ

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

ನಾನು ಬಿ.ಎಸ್‌ಸಿ. ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಸಿಬಿಝೆಡ್‌ ತೆಗೆದುಕೊಂಡಿದ್ದು, ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಕೆಲಸ ಮಾಡುವ ಆಸೆಯಿದೆ. ಅದಕ್ಕೆ ಹೇಗೆ ತಯಾರಿ ಮಾಡಬೇಕು? ಹಾಗೆಯೇ ಮುಂದೆ ಐಎಫ್‌ಎಸ್‌ ಅಧಿಕಾರಿ ಆಗಬೇಕು ಎನ್ನುವ ಬಯಕೆಯೂ ಇದೆ. ಕನ್ನಡದಲ್ಲಿ ಬರೆಯುವಾಗ ಕೈ ನಡುಗಿ ನಿಧಾನವಾಗಿ ಬರೆಯುತ್ತೇನೆ. ವೇಗವಾಗಿ ಬರೆಯಲು ಅಭ್ಯಾಸ ಮಾಡುವುದು ಹೇಗೆ? ಮತ್ತೆ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ?
–ಪ್ರಿಯಾಂಕ ಶ್ರೀಕಂಠ, ಊರು ಇಲ್ಲ

ಪ್ರಿಯಾಂಕ, ನೀವು ಸಿಎಫ್‌ಟಿಆರ್‌ಐಗೆ ಸೇರಲು ಅಲ್ಲಿ ಪ್ರಕಟವಾಗಿರುವ ಹಿಂದಿನ ಉದ್ಯೋಗ ನೇಮಕಾತಿಯ ಅಧಿಸೂಚನೆಯನ್ನು ಓದಿಕೊಂಡರೆ ನಿಮಗೆ ಯಾವ ಯಾವ ವಿಷಯಗಳ ಬಗ್ಗೆ ಹೇಗೆ ತಯಾರಿ ನಡೆಸಬಹುದು ಎಂದು ತಿಳಿಯುತ್ತದೆ. ಸಿಎಫ್‌ಟಿಆರ್‌ಐನಲ್ಲಿ ಬೇರೆ ಬೇರೆ ತರಹದ ಹುದ್ದೆಗಳಿದ್ದು ಹೆಚ್ಚಿನ ಹುದ್ದೆಗಳು ಸಂಶೋಧನಾ ಕ್ಷೇತ್ರದಲ್ಲಿ ಇವೆ. ನಿಮ್ಮ ಪಿಎಚ್.ಡಿ. ವಿಷಯ ಅದೇ ಕ್ಷೇತ್ರದಲ್ಲಿ ಇದ್ದರೆ ಅರ್ಜಿ ಸಲ್ಲಿಸಬಹುದು. ಟೆಕ್ನಿಕಲ್ ಸಹಾಯಕರ ಹುದ್ದೆಯನ್ನು ಕೂಡ ಸ್ನಾತಕೋತ್ತರ ಪದವಿಯ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ನೀವು ಒಮ್ಮೆ ಆ ಸಂಸ್ಥೆಗೆ ಭೇಟಿ ನೀಡಿ ವಿವರಗಳನ್ನು ಪಡೆಯುವುದು ಉತ್ತಮ. ಈ ಹಿಂದಿನ ಅಧಿಸೂಚನೆಗಳಲ್ಲಿ ತಿಳಿಸಿದಂತೆ ಮೆಂಟಲ್ ಎಬಿಲಿಟಿ, ಇಂಗ್ಲಿಷ್‌ ಮತ್ತು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಿಗೆ ತಯಾರಿ ಮಾಡಿಕೊಳ್ಳಬೇಕು. ಅದರ ಜೊತೆಗೆ ಅನೇಕ ಹುದ್ದೆಗಳಿಗೆ ಸಂದರ್ಶನ ಕೂಡ ಇರುವುದರಿಂದ ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಸಂದರ್ಶನಗಳಲ್ಲಿ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು, ನಿಮ್ಮ ಆಸಕ್ತಿ, ಜ್ಞಾನ, ಆ ಕೆಲಸಕ್ಕೆ ಬೇಕಾಗಿರುವ ಕೌಶಲ ಇತ್ಯಾದಿಗಳನ್ನು ಹಿನ್ನೆಲೆ ಆಗಿಟ್ಟುಕೊಂಡು ಕೇಳುತ್ತಾರೆ.

ಭಾರತದಲ್ಲಿ ಇಂಡಿಯನ್ ಫಾರಿನ್ ಸರ್ವೀಸ್ ಮತ್ತು ಇಂಡಿಯನ್ ಫಾರೆಸ್ಟ್ ಸರ್ವೀಸ್ ಎರಡನ್ನೂ ಕೂಡ ಐ.ಎಫ್.ಎಸ್. ಎಂದು ಕರೆಯುತ್ತಾರೆ. ನೀವು ಯಾವ ಐ.ಎಫ್.ಎಸ್. ಬಗ್ಗೆ ಕೇಳುತ್ತಿದ್ದೀರಿ ಎಂದು ಸ್ಪಷ್ಟಪಡಿಸಿಲ್ಲ. ಈ ಎರಡೂ ಹುದ್ದೆಗಳಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕು. ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಗೆ ಅರ್ಜಿ ಹಾಕಲು ಕೃಷಿ, ಅರಣ್ಯ ವಿಜ್ಞಾನ, ಜೀವ ವಿಜ್ಞಾನ, ಭೂಗರ್ಭ ವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರಬೇಕು. ನಂತರ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಬೇಕು. ಈ ಎರಡು ಪರೀಕ್ಷೆಗಳ ಪರೀಕ್ಷಾ ವಿಧಾನ, ಪಠ್ಯಕ್ರಮ ಮತ್ತು ಎಲ್ಲಾ ಮಾಹಿತಿಗಳಿಗೆ ಯು.ಪಿ.ಎಸ್.ಸಿ ವೆಬ್‌ಸೈಟ್‌ ಅನ್ನು ಪರಿಶೀಲಿಸಿ.

ಓದಿದ್ದನ್ನು ನೆನಪಿಟ್ಟುಕೊಳ್ಳಲು, ನಿಮಗೆ ಯಾವ ತರಹದ ಓದು ಮೊದಲು ರುಚಿಸುತ್ತದೆ ಎಂದು ಕಂಡುಕೊಳ್ಳಬೇಕು. ವಿಷಯವನ್ನು ಬಾಯಿಪಾಠ ಮಾಡುವ ಬದಲು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವಿಷಯವನ್ನು ಮತ್ತೆ ಮತ್ತೆ ಪುನರಾವರ್ತನೆ ಮಾಡಿಕೊಂಡರೆ ನೆನಪಿರುತ್ತದೆ. ಓದುವ ವಿಚಾರಗಳನ್ನು ಒಂದಕ್ಕೊಂದು ಹೊಂದಿಸಿಕೊಂಡು, ಗ್ರಾಫ್ ಅಥವಾ ಮೆಂಟಲ್ ಮ್ಯಾಪಿಂಗ್ ಮುಖಾಂತರ ಬರೆದಿಡಬೇಕು.

ಗಣಿತ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚು ಅಭ್ಯಾಸ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡದಿಂದ ಓದದೆ, ಸರಿಯಾದ ವೇಳಾಪಟ್ಟಿ ಮಾಡಿಕೊಂಡು ಮಧ್ಯೆ ವಿಶ್ರಾಂತಿ ಪಡೆದುಕೊಳ್ಳುತ್ತ ಅಭ್ಯಸಿಸಬೇಕು. ಇದು ಪರೀಕ್ಷೆಯ ತಯಾರಿಯಾದ್ದರಿಂದ ಹಿಂದಿನ ಪತ್ರಿಕೆಗಳನ್ನು ಬಿಡಿಸಬೇಕು ಮತ್ತು ಅಣಕು ಪರೀಕ್ಷೆಗಳನ್ನು ಹೆಚ್ಚು ಬರೆಯಬೇಕು.

ಇನ್ನು ಕೈ ನಡುಗುವ ವಿಚಾರಕ್ಕೆ, ಅದು ಯಾವ ಕಾರಣದಿಂದ ಆಗುತ್ತಿದೆ ಎಂದು ನೋಡಬೇಕಾಗುತ್ತದೆ. ಕೇವಲ ಕನ್ನಡ ಬರೆಯುವಾಗ ಮಾತ್ರ ಹಾಗೇ ಆಗುತ್ತಿದ್ದರೆ, ಹೆಚ್ಚು ಹೆಚ್ಚು ಅಭ್ಯಾಸ ಮಾಡುತ್ತ ಸರಿ ಹೋಗುತ್ತದೆ. ಸಾಮಾನ್ಯವಾಗಿ ಬರೆಯುವಾಗ ಕೈ ನಡುಗುತ್ತಿದ್ದರೆ ಅದಕ್ಕೆ ಆತ್ಮವಿಶ್ವಾಸದ ಕೊರತೆಯೇ ಅಥವಾ ಬೇರೆ ಏನು ಕಾರಣ ಎಂದು ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ ತಿಳಿಯಬೇಕಾಗುತ್ತದೆ.

ಆತ್ಮವಿಶ್ವಾಸದಿಂದ ತಯಾರಿ ಮಾಡಿ ಪರೀಕ್ಷೆಗಳನ್ನು ಎದುರಿಸಿ, ಶುಭವಾಗಲಿ.

**

ನಾನು ಪ್ರಥಮ ಪಿಯುಸಿ, ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಐಎಎಸ್‌ ಅಧಿಕಾರಿ ಆಗಬೇಕೆಂಬ ಆಸೆ. ಐಎಎಸ್‌ ಆಗಲು ಪಿಯುಸಿ ನಂತರ ಏನು ಓದಬೇಕು. ಇದಕ್ಕೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆ?
–ವರ್ಷಿತಾ, ಊರು ಇಲ್ಲ

ವರ್ಷಿತಾ, ಐ.ಎ.ಎಸ್. ಅಧಿಕಾರಿ ಆಗಲು ಕೇಂದ್ರ ನಾಗರಿಕ ಸೇವಾ ಆಯೋಗ ಅಥವಾ ಯು.ಪಿ.ಎಸ್.ಸಿ. ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆಗೆ ಕೂರಬೇಕು. ಈ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು ಮೊದಲು ಪೂರ್ವಭಾವಿ ಪರೀಕ್ಷೆ, ಅದರಲ್ಲಿ ತೇರ್ಗಡೆ ಹೊಂದಿದವರಿಗೆ ಮುಖ್ಯ ಪರೀಕ್ಷೆ, ಅದರಲ್ಲಿ ತೇರ್ಗಡೆ ಹೊಂದಿದ ನಂತರ ಸಂದರ್ಶನದ ಮುಖಾಂತರ ಅಂತಿಮ ನೇಮಕಾತಿಯನ್ನು ಮಾಡಲಾಗುತ್ತದೆ. ಪ್ರತಿವರ್ಷ ಸುಮಾರು ಹತ್ತರಿಂದ ಹನ್ನೊಂದು ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ, ಏಳು ನೂರರಿಂದ ಒಂದು ಸಾವಿರದಷ್ಟು ಹುದ್ದೆಗಳು ಭರ್ತಿ ಆಗುತ್ತವೆ.

ಯು.ಪಿ.ಎಸ್.ಸಿ ಸಿವಿಲ್ ಸರ್ವೀಸ್ ಪರೀಕ್ಷೆ ಎದುರಿಸಲು ನೀವು ನಿಮ್ಮ ಪಿ.ಯು.ಸಿ. ನಂತರ ಯಾವುದಾದರೂ ಪದವಿ ಶಿಕ್ಷಣವನ್ನು ಮುಗಿಸಬೇಕು. ಇಂತಹ ವಿಷಯದಲ್ಲೆ ಪದವಿ ಆಗಬೇಕೆಂಬುದು ಕಡ್ಡಾಯವಿಲ್ಲದೆ ಇರುವುದರಿಂದ ನೀವು ಕಲಾ ವಿಭಾಗ ಓದಬೇಕೆಂದಿಲ್ಲ. ಆದರೆ ಸಿವಿಲ್ ಸರ್ವೀಸ್ ಪರೀಕ್ಷೆ ಎದುರಿಸಲು ಕಲಾ ಪದವಿಗೆ ಸಂಬಂಧಿಸಿದ ಇತಿಹಾಸ, ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ರಾಜಕೀಯ ಶಾಸ್ತ್ರ, ಭಾರತೀಯ ಸಂವಿಧಾನ, ಕಾನೂನು ಇತ್ಯಾದಿ ವಿಷಯಗಳ ಕುರಿತ ಜ್ಞಾನ ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿ ಕಲಾ ವಿಷಯ, ಕಾನೂನು ಇತ್ಯಾದಿ ವಿಷಯಗಳಲ್ಲಿ ಪದವಿ ಮಾಡಬಹುದು. ವಿಜ್ಞಾನ ವಿಷಯದ ಬಗ್ಗೆಯೇ ನಿಮಗೆ ಆಸಕ್ತಿ ಇದ್ದಲ್ಲಿ ವಿಜ್ಞಾನದ ವಿಷಯದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಪದವಿ ಓದುತ್ತ ಈ ಎಲ್ಲ ವಿಷಯ ಹಾಗೂ ದಿನ ನಿತ್ಯದ ಸಾಮಾನ್ಯ ಜ್ಞಾನದ ಕುರಿತು ಅಭ್ಯಸಿಸುತ್ತ ತಯಾರಿ ನಡೆಸಿಕೊಳ್ಳಬಹುದು. ಶುಭಾಶಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು