ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ದೌರ್ಜನ್ಯ ತಡೆಗೆ ‘ಯಶ್‌ರಾಮ್‌’

Last Updated 27 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರೇಖಾಚಿತ್ರ, ಕಾರ್ಟೂನ್‌ ವಿಡಿಯೊ, ಯೂಟ್ಯೂಬ್‌ ಚಾನೆಲ್‌ ಬಳಸಿಕೊಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ತಡೆಗೆ ಶ್ರಮಿಸುತ್ತಿದೆ ಸ್ವಯಂಸೇವಾ ಸಂಸ್ಥೆಯಾದ ಯಶ್‌ರಾಮ್‌ ಫೌಂಡೇಷನ್‌.

ಲೈಂಗಿಕ ದೌರ್ಜನ್ಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ, ಸಾಮಾಜಿಕ ನಡವಳಿಕೆ, ಮಕ್ಕಳ– ಹೆತ್ತವರ ಬಾಂಧವ್ಯ ಗಟ್ಟಿಗೊಳಿಸುವ... ಹೀಗೆ ಹಲವು ಜಾಗೃತಿ ಕಾರ್ಯಗಳನ್ನು ತನ್ನ ಪ್ರತಿಷ್ಠಾನದಡಿಯಲ್ಲಿ ಕೆಲ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ ಈ ಎನ್‌ಜಿಓ. ಪೋಷಕರಿಗೂ ಜಾಗೃತಿ, ಕೌನ್ಸೆಲಿಂಗ್‌ನಂತಹ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿದೆ.

‘ಮಕ್ಕಳು ದೌರ್ಜನ್ಯಕ್ಕೊಳಗಾಗುವ ಪ್ರಕರಣಗಳಲ್ಲಿ ಹೆತ್ತವರ, ಸಮಾಜದ ತಪ್ಪೇ ಜಾಸ್ತಿ. ಘಟನೆ ನಡೆದ ಬಳಿಕ ಅಯ್ಯೋ ಎನ್ನುವ ಬದಲು, ಮೊದಲೇ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು’ಎನ್ನುತ್ತಾ ಮಾತಿಗೆ ಶುರುವಿಟ್ಟುಕೊಂಡರು ಯಶ್‌ರಾಮ್‌ ಫೌಂಡೇಷನ್‌ನ ದೀಪಾ ಕುಮಾರ್‌. ‘ಸಣ್ಣಮಕ್ಕಳೇ ಹೆಚ್ಚು ದೌರ್ಜನ್ಯಕ್ಕೊಳಗಾಗುವುದು. ಆದರೂ ಲೈಂಗಿಕ ವಿಚಾರಗಳ ಬಗ್ಗೆ ಹೆತ್ತವರು, ಮಕ್ಕಳ ಬಳಿ ಮಾತನಾಡಿ, ಮಾಹಿತಿ ನೀಡುವುದಿಲ್ಲ. ನಗರದಲ್ಲಿ ನಡೆದ ಅನೇಕ ಸಂಗತಿಗಳಲ್ಲಿ ಈ ವಿಚಾರ ನಮ್ಮ ಗಮನಕ್ಕೆ ಬಂತು. ಹಾಗಾಗಿ ನಮ್ಮ ಫೌಂಡೇಷನ್‌ ಮೂಲಕ ಮಕ್ಕಳು, ಹೆತ್ತವರಿಗೂ ಜಾಗೃತಿ, ಕಾರ್ಯಾಗಾರಗಳನ್ನು ನಡೆಸಲು ಆರಂಭಿಸಿದೆವು’ ಎನ್ನುತ್ತಾರೆ ಅವರು.

‘ಫೈವ್‌ ಅಲರ್ಟ್‌’ ಜಾಗೃತಿ

ಈ ಫೌಂಡೇಷನ್‌ ಸದಸ್ಯರು ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಜಾಗೃತಿ ಮೂಡಿಸುತ್ತದೆ. ‘ಫೈ ಅಲರ್ಟ್‌’ ಎಂಬ ಕಾರ್ಯಕ್ರಮದಡಿ ವಿಶೇಷ ರೇಖಾಚಿತ್ರಗಳ, ವಿಡಿಯೊ ತೋರಿಸಿ ಲೈಂಗಿಕ ವಿಷಯಗಳ ಕುರಿತು ಮಾತನಾಡುತ್ತಾರೆ.

ರೇಖಾಚಿತ್ರಗಳ ಮೂಲಕ ಖಾಸಗಿ ಅಂಗಗಳ ಮಾಹಿತಿ, ನಮ್ಮನ್ನು ಯಾರು ಮುಟ್ಟಬಹುದು, ಗುಡ್‌ ಟಚ್‌, ಬ್ಯಾಡ್‌ ಟಚ್‌? ನಮ್ಮ ಕೇರ್‌ಟೇಕರ್‌ ಯಾರು? ಆ ರೀತಿ ಮಕ್ಕಳಲ್ಲಿ ಅರಿವು ಮೂಡಿಸುತ್ತದೆ. ಇಲ್ಲಿ ತಂದೆತಾಯಿಯರೇ ಮಕ್ಕಳ ಜೊತೆ ಕುಳಿತುಕೊಂಡು ಚಟುವಟಿಕೆಗಳ ಮೂಲಕ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ವಿಶೇಷ.

ರೆಸ್ಪೆಕ್ಟ್‌ ಎ ಚೈಲ್ಡ್‌

ಮಗುವನ್ನೂ ಗೌರವಿಸಬೇಕು ಎಂದು ಯಶ್‌ರಾಮ್‌ ಫೌಂಡೇಷನ್‌ ಧ್ಯೇಯವಾಕ್ಯ. ದಾರಿಯಲ್ಲೋ, ಬಸ್‌ನಲ್ಲೋ ಮುದ್ದಾದ ಮಗು ಕಂಡಾಗ ಒಂದು ಬಾರಿ ಗಲ್ಲ ಮುಟ್ಟುವುದು ಎಲ್ಲರ ಅಭ್ಯಾಸ. ಆದರೆ ಇಂತಹ ಅಭ್ಯಾಸಗಳು ಸಹ್ಯವಲ್ಲ, ಮಗು ತನ್ನವರುಯಾರು ಎಂದು ಗೊಂದಲಕ್ಕೀಡಾಗುತ್ತದೆ. ಜನರ ಇಂತಹ ಮನಸ್ಥಿತಿ ಬದಲಾಗಬೇಕು ಎಂದು ಹೋಟೆಲ್‌ಗಳಲ್ಲಿ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ನಾಟಕಗಳ ಮೂಲಕ ಫೌಂಡೇಷನ್‌ ಸ್ವಯಂ ಸೇವಕರು ಜನರಿಗೆ ಸಂದೇಶ ತಲುಪಿಸುತ್ತಾರೆ.

ಫೌಂಡೇಷನ್‌ ಆರಂಭ

ಯಶ್‌ರಾಮ್‌ ಫೌಂಡೇಷನ್‌ ಆರಂಭವಾಗಿರುವುದು 2017ರ ಡಿಸೆಂಬರ್‌ನಲ್ಲಿ. ಈ ಸ್ವಯಂಸೇವಾ ಸಂಸ್ಥೆಯಲ್ಲಿ ದೀಪಾ ಸೇರಿ ಮೂರು ಜನ ಖಾಯಂ ಸದಸ್ಯರಿದ್ದಾರೆ. ಆದರೆ ಈ ಫೌಂಡೇಷನ್‌ನಲ್ಲಿ ಸ್ವಯಂ ಸೇವಕರಾಗಿ ನೂರಾರು ಕಾಲೇಜು ಯುವಕ ಯುವತಿಯರು, ಸಮಾನ ಮನಸ್ಕರು ಕೈ ಜೋಡಿಸಿದ್ದಾರೆ. ಆಸಕ್ತರು ತರಬೇತಿ ಪಡೆದು ರಾಜ್ಯದ ನಾನಾ ಭಾಗದ ಸರ್ಕಾರಿ ಶಾಲೆ, ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ಕಾರ್ಯಾಗಾರ ನಡೆಸುತ್ತಾರೆ.

‘ನನಗಿಬ್ಬರು ಹೆಣ್ಣುಮಕ್ಕಳಿದ್ದಾರೆ. ದೌರ್ಜನ್ಯ ಸುದ್ದಿಯಾದಾಗ ಅವರ ಪ್ರಶ್ನೆಗಳಿಗೆ ಸುಳ್ಳು ಉತ್ತರ ನೀಡಲು ನನಗಿಷ್ಟವಿರಲಿಲ್ಲ. ಹಾಗೇ ಶಾಲೆಗೆ ಅವರನ್ನು ಕಳುಹಿಸಲು ಆರಂಭಿಸಿದಾಗ ಭಯವಾಗುತ್ತಿತ್ತು. ಪ್ರತಿದಿನ ಶಾಲೆಯಲ್ಲಿ ನಡೆಯುವ ವಿಚಾರಗಳನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಕಲ್ಪಿಸಿಕೊಟ್ಟೆ. ಅಪರಿಚಿತರ ಜೊತೆ ನಡೆದುಕೊಳ್ಳುವ ಬಗ್ಗೆ ಹೇಳಿಕೊಟ್ಟೆ. ಆಗ ನನಗೆ ಬೇರೆ ಮಕ್ಕಳಿಗೂ ಇಂತಹ ವಾತಾವರಣ ಮನೆಯಲ್ಲಿ ಸೃಷ್ಟಿಯಾಗಬೇಕು ಎಂದು ಯಶ್‌ರಾಮ್‌ ಫೌಂಡೆಷನ್‌ ಆರಂಭಿಸಿದೆ’ ಎಂದು ಹೇಳಿಕೊಂಡರು.

ಗಂಡುಮಕ್ಕಳಿಗೂ ಕಾರ್ಯಾಗಾರ

ಗಂಡುಮಕ್ಕಳಿಗೂ ಯಶ್‌ರಾಮ್‌ ಫೌಂಡೇಷನ್‌ ಕಾರ್ಯಾಗಾರಗಳನ್ನು ನಡೆಸುತ್ತದೆ. ದೈಹಿಕ ಬದಲಾವಣೆಗಳು, ವಯೋ ಸಹಜ ತುಂಟಾಟಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಆದರೆ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಕೆಟ್ಟದಾಗಿ ನಡೆಸಿಕೊಳ್ಳುವುದು ತಪ್ಪು ಎಂದು ವಿವಿಧ ಚಟುವಟಿಕೆಗಳು, ವಿಡಿಯೋ ದೃಶ್ಯಗಳ ಮೂಲಕ ಹೇಳಿಕೊಡಲಾಗುತ್ತದೆ.

ಯೂಟ್ಯೂಬ್‌ನಲ್ಲೂ ಜಾಗೃತಿ ಕೆಲಸ

ಮಕ್ಕಳಿಗಾಗಿಯೇ ದೀಪಾ ಕುಮಾರ್‌ ಯೂಟ್ಯೂಬ್‌ ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ. ಇದರಲ್ಲಿ ಕಾರ್ಟೂನ್‌ ಚಿತ್ರಗಳ ಮೂಲಕ ಲೈಂಗಿಕ ಜಾಗೃತಿ ಮೂಡಿಸುತ್ತಿದ್ದಾರೆ. ಗುಡ್‌ ಟಚ್‌, ಬ್ಯಾಡ್‌ ಟಚ್‌, ಕೇರ್‌ಟೇಕರ್‌ ಆಯ್ಕೆ, ಅಪಾಯದ ಸಂದರ್ಭ ಮೊದಲಾದ ಒಂದೊಂದು ಸಂಗತಿ ಬಗ್ಗೆತಯೂ 4ರಿಂದ 5 ನಿಮಿಷಗಳ ವಿಡಿಯೊಗಳು ಪರಿಣಾಮಕಾರಿಯಾಗಿ ಮಕ್ಕಳ ಮನಸ್ಸನ್ನು ತಟ್ಟುತ್ತದೆ.

ಪೋಷಕರಿಗೆ ಕೌನ್ಸೆಲಿಂಗ್‌

‘ದೌರ್ಜನ್ಯ ನಡೆದಾಗ ಮಗು ಭಯ, ಮುಜುಗರದಿಂದ ಕುಗ್ಗಿ ಹೋಗುತ್ತದೆ. ಆದರೆ ನಾಚಿಕೆಪಟ್ಟುಕೊಳ್ಳಬೇಕಾದುದು ಆರೋಪಿ’ ಎಂದು ಹೇಳುವ ದೀಪಾ ಕುಮಾರ್‌, ಪೋಷಕರ ಮನಪರಿವರ್ತನೆಗೆ ಕೌನ್ಸೆಲಿಂಗ್‌ನ್ನೂ ನಡೆಸುತ್ತಾರೆ. ಮಹಿಳಾ ವಸ್ತ್ರ, ಉಡುಗೆಗಳಿಗೆ ಜನಪ್ರಿಯವಾದ ‘ಯಶ್‌ರಾಮ್‌ ಕಂಪೆನಿ’ಯ ಮಾಲೀಕರಾಗಿರುವ ದೀಪಾ ಕುಮಾರ್‌, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಹೆಣ್ಣುಮಕ್ಕಳಿಗೆ ವಸ್ತ್ರಗಳ ಜೊತೆಗೆ ಋತುಚಕ್ರದ ಸಮಯದಲ್ಲಿ ಬಳಸುವ ಪ್ಯಾಂಟಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT