ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸ್ಕೂಲು ‘ಹೋಮ್‌’ನಲ್ಲೇ...

Last Updated 4 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು’ ಎಂಬುದನ್ನು ನಾವೆಲ್ಲರೂ ಕೇಳಿರುತ್ತೇವೆ ಮತ್ತು ಅನುಭವಿಸಿರುತ್ತೇವೆ, ನಿಜ; ಮಗುವು ಭ್ರೂಣಾವಸ್ಥೆಯಲ್ಲಿದ್ದಾಗಲಿನಿಂದಲೇ ತಾಯಿಯಿಂದ ಕಲಿಯಲು ಪ್ರಾರಂಭಿಸುತ್ತದೆ ಎನ್ನುತ್ತದೆ ವಿಜ್ಞಾನ; ಮನೆಯ ವಾತಾವರಣದಿಂದ, ಮನೆಯಲ್ಲಿನ ಜನರಿಂದ, ಅದರಲ್ಲೂ ಮುಖ್ಯವಾಗಿ ತನ್ನನ್ನು ಸದಾ ಪೊರೆಯುವ ತಾಯಿಯಿಂದಲೇ ಮಗುವಿಗೆ ತನ್ನ ಮೊದಲ ಕಲಿಕೆ ಆರಂಭವಾಗುವುದು ಸಹಜವೇ. ನಂತರ ಕೇಳಿದ್ದನ್ನು ನೋಡಿದ್ದನ್ನು ಕಲೀತಾ ಬೆಳೆಯುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪೋಷಕರು, ಶಾಲೆಯ ಮೆಟ್ಟಿಲು ಹತ್ತಲು ತಯಾರಿ ನೀಡುತ್ತಾರೆ.

ಕೆಲವು ದಶಕಗಳ ಹಿಂದೆ ಕೂಡ, ಮಕ್ಕಳಿಗೆ 5 ವರ್ಷವಾಗುವ ಮುನ್ನ ಶಾಲೆ ಎಂದರೇನು ಎಂದೂ ತಿಳಿದಿರುತ್ತಿರಲಿಲ್ಲ; ಮಗು ಸಣ್ಣದು, ಮನೆಯಲ್ಲೇ ಆಡಿಕೊಂಡಿರಲಿ ಎಂದು ಮನೆಯಲ್ಲೆಲ್ಲರೂ ನಿರ್ಧಾರ ಮಾಡಿ, ಮಕ್ಕಳು ಬೆಳೆದ್ಹಂಗೆ ಬೆಳೆದುಕೊಳ್ಳಲಿ ಎಂದು ತಣ್ಣಗಿರುತ್ತಿದ್ದರು; ಮನೆಯ ತುಂಬಾ ಜನರಿದ್ದ ಕಾರಣ, ಮಕ್ಕಳಿಗೆ ಆಡಲು ಜೊತೆಯೂ ಇರುತ್ತಿತ್ತು, ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಲೂ ಯಾವುದೇ ಡೇ-ಕೇರ್‌ನ ಅವಶ್ಯಕತೆಯಿಲ್ಲದೇ, ಮನೆಯವರೆಲ್ಲರ ಒಟ್ಟಾರೆ ಜವಾಬ್ದಾರಿ ಎಂಬಂತೆ ಮಕ್ಕಳು ಬೆಳೆಯುತ್ತಿದ್ದರು.

ಸುಮಾರು 5-6ನೆಯ ವಯಸ್ಸಿನಲ್ಲಿ ಅಕ್ಕ–ಅಣ್ಣಂದಿರೊಡನೆ ಹತ್ತಿರದ ಸರ್ಕಾರಿ ಶಾಲೆಗೆ ಸೇರಿದರೆ ನಂತರದ ವರ್ಷಗಳು ಹಾಗೇ ಶಾಲೆಯಿಂದ ಕಾಲೇಜಿಗೆ ಉರುಳಿರುಳಿ ಹೋಗುತ್ತಿದ್ದವು; ಮನೆಯಲ್ಲಿ ಓದಿಸುವ ಮನಸ್ಸಿಲ್ಲದಿದ್ದರೆ, ದುಡಿಮೆ ಅಥವಾ ಮದುವೆಯಷ್ಟೇ ಇದ್ದ ಎರಡು ಆಯ್ಕೆಗಳು. ಆದರೆ ಕೆಲವೇ ದಶಕಗಳಲ್ಲಿ ಜಗತ್ತು ಊಹಿಸಲಾಗದ ಹಾಗೆ ಬದಲಾಗಿಹೋಯ್ತು; ಅವನ್ನು ಶಿಕ್ಷಣಕ್ಷೇತ್ರದಲ್ಲೂ ಕಾಣಬಹುದು.

ವಿದ್ಯಾದಾನವು ಸೇವೆ, ಪರಮಾರ್ಥ ಎಂಬ ಉದ್ದೇಶವುಳ್ಳ ಸಂಸ್ಥೆಗಳೇ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು, ಶಿಕ್ಷಣದ ಹೆಸರಿನಲ್ಲಿ ಹಣ ಮಾಡುವ ದಂಧೆಗಾರ ಸಂಸ್ಥೆಗಳು ಮುನ್ನಡೆಸುವಂತೆ ಬದಲಾಗಿದ್ದು ಅತ್ಯಂತ ಖೇದಕರ. ಇದಕ್ಕೆ, ಹಣದ ಮೌಲ್ಯದ ಮುಂದೆ ಮಿಕ್ಕೆಲ್ಲಾ ಮಾನವೀಯ ಮೌಲ್ಯಗಳನ್ನು ಮರೆತ ಆಡಳಿತಾತ್ಮಕರು ಎಷ್ಟು ಕಾರಣವೋ, ಹುಚ್ಚುಚ್ಚು ಬೇಡಿಕೆಗಳನ್ನು ಮುಂದಿಡುವ ಪೋಷಕರೂ ಅಷ್ಟೇ ಕಾರಣ ಎನ್ನಬಹುದು.

ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಕಡಿಮೆ ಫೀಸಿನ ಕಡಿಮೆ ಸವಲತ್ತಿನ ಶಾಲೆಯಾಗಲೀ ರಾಜವೈಭೋಗದ ಶಾಲೆಯಾಗಲೀ ಮಗು ಕಲಿಯಲು ಭಿನ್ನವಾದ ವಾತಾವರಣವನ್ನು ನೀಡುತ್ತವೆ. ಆದರೆ, ಮಗುವು ಬೆಳೆದು ಏನನ್ನಾದರೂ ಸಾಧಿಸಬೇಕೆಂದರೆ ಆಂತರಿಕ ಉತ್ಸಾಹ, ಮಹತ್ವಾಕಾಂಕ್ಷೆ, ಆಂತರಿಕ ಶಿಸ್ತು ಮತ್ತು ಛಲ ಬಿಡದೆ ಹಿಡಿದ ಕೆಲಸ ಮಾಡುವ ಗುಣ ಒಳಗಿನಿಂದಲೇ ಬರಬೇಕು; ಇಂತಹ ಆಂತರಿಕ ಸತ್ವವಿದ್ದವರು ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ; ನಿಜ, ಯಾವ ಬಗೆಯ ಶಾಲೆ/ಕಾಲೇಜಿನಲ್ಲಿ ಓದುತ್ತಾರೆ ಎಂಬುದು ಅವರಿಗೆ ಸಿಗುವ ವಾತಾವರಣವನ್ನು, ಅನುಭವಗಳನ್ನು ನಿರ್ಧರಿಸುತ್ತವೆ ಮತ್ತು ಈ ಅನುಭವಗಳೇ ಅವರ ಗುಣಾವಗುಣಗಳನ್ನು ರೂಪಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತವೆ ಎಂಬುದು ಸತ್ಯ; ಆದರೆ; ಇವೆಲ್ಲಕ್ಕೂ ಮೀರಿ, ಆಂತರಿಕವಾಗಿ ತನ್ನನ್ನು ತಾನೇ ಮುನ್ನಡೆಸಿಕೊಂಡು ಹೋಗುವ ಗುಣವಿದ್ದರೆ ಮಾತ್ರ ಮಕ್ಕಳು ಬದುಕನ್ನು ಚೆಂದಗಾಣಿಸಿಕೊಳ್ಳಲು ಸಾಧ್ಯ; ಅದು ಅಂದಿನ ಕ್ಲಾಸಿನಲ್ಲಿ ತಪ್ಪಿಲ್ಲದೇ ಡಿಕ್ಟೇಶನ್‌ ಬರೆಯುವುದರಲ್ಲೇ ಇರಬಹುದು, ತನಗೆ ಬೇಕಾದ ವಿಶ್ವವಿದ್ಯಾಲಯದಲ್ಲಿ ಸೀಟು ಗಿಟ್ಟಿಸಲು ಬೇಕಾದ ಅರ್ಹತೆಯನ್ನು ಪಡೆದುಕೊಳ್ಳುವುದೇ ಇರಬಹುದು ಅಥವಾ ಕಾರಣಾಂತರಗಳಿಂದ ತನಗಿಷ್ಟವಿಲ್ಲದ ಕೋರ್ಸೋ ಕಾಲೇಜೋ ಕೆಲಸವೋ ಸಿಕ್ಕಾಗ ಆ ಪರಿಸ್ಥಿತಿಯಲ್ಲಿ ಎದೆಗುಂದದೇ ಬದುಕಿನ ಸವಾಲುಗಳಿಗೆ ಸಮರ್ಪಕವಾಗಿ ಉತ್ತರಿಸುವುದೇ ಇರಬಹುದು; ಬದುಕಿನ ಬಗ್ಗಡವನ್ನು ಕದಡದೇ ತಿಳಿನೀರಿನ ಜೀವನವನ್ನು ನಡೆಸಲು ಸ್ವಯಂಪೂರ್ಣರಾಗಬೇಕಾದರೆ ಮಕ್ಕಳಿಗೆ ವಿವೇಕದೊಂದಿಗೆ ವಿದ್ಯೆ ಕಲಿಸಬೇಕಾಗುತ್ತದೆ. ಇಂತಹ ಆಲ್ ರೌಂಡ್ ಡೆವಲಪ್‌ಮೆಂಟ್‌ ಕೊಡಮಾಡುತ್ತೇವೆ ಎಂದು ಸಾರುವ ಶಾಲೆಗಳೇ ಹೆಚ್ಚಿದ್ದರೂ, ಆ ಶಾಲೆಗಳಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚು.

ಇದೇ ಕಾರಣಕ್ಕೆ ಹಿಸ್ಟರಿ ರಿಪೀಟ್ಸ್ ಅನ್ನೊ ಹಾಗೆ, ಮತ್ತೆ ಗುರುಕುಲ ಪದ್ಧತಿಯ ಶಾಲೆಗಳು ಹುಟ್ಟಿಕೊಂಡವು; ಆದರೆ, ಅವುಗಳನ್ನು ನಡೆಸುವವರು ಎಲ್ಲರೂ ಋಷಿಗಳೋ ಇಹಕ್ಕೆ ಹೊರತಾದವರೋ ಅಲ್ಲವಲ್ಲ? ಅವರು ಸಂಪೂರ್ಣ ಗುರುಕುಲ ಪದ್ಧತಿಯನ್ನೇ ಪಾಲಿಸುತ್ತೇವೆಂದರೂ, ಪೋಷಕರ ಬೇಡಿಕೆಗಳಿಗೆ ತಲೆಬಾಗಿ ಇಂದಿನ ದಿನಮಾನದ ಕಮರ್ಷಿಯಲ್ ಶಿಕ್ಷಣವ್ಯವಸ್ಥೆಯ ಅಂಶಗಳನ್ನು ಸೇರಿಸಿಕೊಳ್ಳಬೇಕಾಗಿದ್ದು ವಿಪರ್ಯಾಸ.

ಯಾವ ಬಗೆಯ ಶಾಲೆಯಾದರೂ ಆದೀತು, ಕಲಿಕೆ ಸಾಗುತ್ತದೆ; ಆದರೆ ಯಾವ ಬಗೆಯ ಕಲಿಕೆ ಎಂದು ಉತ್ತರ ಹುಡುಕುತ್ತಾ ಸಾಗಿದ ಹಲವರಿಗೆ ಎದುರಾದದ್ದು ನಿರಾಶಾದಾಯಕ ಉತ್ತರಗಳೇ; ಉರುಹೊಡೆದು ಕಲಿಯುವ ವಿಜ್ಞಾನ, ಮಕ್ಕಿ ಕಾ ಮಕ್ಕಿ ಮ್ಯಾಥ್ಸ್, ನಮ್ಮ ಆಸುಪಾಸಿನ ಇತಿಹಾಸದ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದೇ ಯಾವುದೋ ದೇಶದ ಯಾವುದೋ ರಾಜನ ಬಗ್ಗೆ ಬೇಡದ ಮಾಹಿತಿ, ಕಾಟಾಚಾರಕ್ಕೆ ಆಟ, ಓಟ - ಇವೆಲ್ಲಾ ಎಲ್ಲಾ ಕಡೆಯೂ ಹೀಗೇ ಅಲ್ಲದಿದ್ದರೂ ಬಹುಪಾಲು ಇದೇ ಕಥೆ - ವ್ಯಥೆ ಎಂಬುದು ನಿಜಕ್ಕೂ ಆತಂಕಕಾರಿ.

ಹಾಗಾಗಿ ಇತ್ತೀಚೆಗೆ ಹಲವಾರು ಜನ ಹೋಮ್‌ಸ್ಕೂಲಿಂಗ್‌ನ ಮೊರೆ ಹೋಗುತ್ತಿದ್ದಾರೆ. ಮನೆಯೇ ಶಾಲೆಯೇ? ಹಾಗಾದರೇ, ಮಕ್ಕಳು ಮನೆಯಲ್ಲೇ ಇದ್ದು ಇದ್ದು ಬೋರ್ ಆಗುವುದಿಲ್ಲವೇ? ಮಕ್ಕಳ ಜೊತೆ ಬೆರೆಯಲು ಬರದೇ ಗುಮ್ಮನ ಹಾಗೆ ಇದ್ದುಬಿಡುತ್ತಾರಾ? ಆಟಕ್ಕೇನು ಮಾಡುವುದು? ಅವರಿಗೆ ಮನೆಯಲ್ಲೇ ಎಲ್ಲಾ ಕಲಿಸಲು ಮನೆಯಲ್ಲಿರುವ ಅಮ್ಮ–ಅಪ್ಪನಿಗೆ ಎಲ್ಲಾ ವಿಷಯಗಳೂ ಬರಬೇಕಲ್ಲವೇ? ಅವರದೇ ವಯಸ್ಸಿನ ಮಕ್ಕಳ ಗೆಳೆತನ ಇವರಿಗೆ ಹೇಗೆ ಸಾಧ್ಯ? ಅದೆಲ್ಲಾ ಸರಿ, ತಿಂಗಳ ಕೊನೆಗೆ, ವರ್ಷದ ಕೊನೆಗೆ ಪರೀಕ್ಷೆಯ ಕಥೆಯೇನು? ಹಂಗೂ ಹಿಂಗೂ ಮನೆಯಲ್ಲೇ ಓದಿದರೆ, ಇವರ ಕಾಲೇಜು, ಉದ್ಯೋಗದ್ದೇನು ಕಥೆ? ಅಬ್ಬಬ್ಬಾ! ಹೋಮ್‌ಸ್ಕೂಲಿಂಗ್ ಎಂಬ ಪದ ಕಿವಿಗೆ ಬೀಳುತ್ತಲೇ ಇಂತಹ ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಬರುತ್ತವೆ; ಆದರೆ, ಈಗಾಗಲೇ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಸಾವಿರಾರು ಪೋಷಕರು ಮನೆಶಾಲೆಯನ್ನು ಒಪ್ಪಿ, ಪಾಲಿಸಿ, ಗೆದ್ದು ಬೀಗಿದ್ದಾರೆ. ಹೋಮ್‌ಸ್ಕೂಲಿಂಗ್‌ನ ಅಡಿಯಲ್ಲಿ ಕಲಿತ ಮಕ್ಕಳು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಸಂಪೂರ್ಣ ಜೀವನ ನಡೆಸುತ್ತಿದ್ದಾರೆ. ಇಂಟರ್ನೆಟ್‌ನಲ್ಲಿ ಇಂತಹ ಹಲವಾರು ಮಕ್ಕಳ ಉದಾಹರಣೆ ಸಾಕ್ಷಿ ಸಮೇತ ಹರಿದಾಡುತ್ತಿದೆ ಮತ್ತು ದಿನೇ ದಿನೇ ಜನರನ್ನು ಹೋಮ್‌–ಸ್ಕೂಲಿಂಗ್‌ನತ್ತ ವಾಲುವಂತೆ ಮಾಡುತ್ತಿದೆ.

‘ಹೋಮ್‌–ಸ್ಕೂಲಿಂಗ್‌’ ಎಂದರೇನು? ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT