ಡಿಸೈನಿಂಗ್ ಕೋರ್ಸ್ಉದ್ಯೋಗ ಪರ್ವ ನಿರಾತಂಕ

ಶುಕ್ರವಾರ, ಏಪ್ರಿಲ್ 26, 2019
33 °C

ಡಿಸೈನಿಂಗ್ ಕೋರ್ಸ್ಉದ್ಯೋಗ ಪರ್ವ ನಿರಾತಂಕ

Published:
Updated:
Prajavani

ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ ಮುಗಿಸಿದವರಿಗೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಪಿಯುಸಿಯಲ್ಲಿ ಓದಿದ ಭಾಷಾಶಾಸ್ತ್ರ, ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ ಮೊದಲಾದ ವಿಷಯಗಳಲ್ಲಿ ಕಾಂಬಿನೇಶನ್‌ ತೆಗೆದುಕೊಂಡು ಪದವಿ ಮಾಡುವುದು, ಅದರಲ್ಲೇ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದು ಒಂದು ಕಡೆ. ಕಲೆ, ಸೃಜನಶೀಲತೆ, ಕಲ್ಪನೆಗಳಿದ್ದರೆ, ಆಕರ್ಷಕವಾಗಿ ಮಾತನಾಡುವ, ವೃತ್ತಿಪರರೊಂದಿಗೆ ಸಂವಹನ ನಡೆಸುವ ಕಲೆ ನಿಮಗೆ ಸಿದ್ಧಿಸಿದ್ದರೆ ವಿನ್ಯಾಸದಲ್ಲಿ ಪದವಿ (ಬಿಡಿಇಎಸ್‌) ಪಡೆದು ಇಷ್ಟವಾಗುವ ಉದ್ಯೋಗ ಅಥವಾ ಸ್ವಂತ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಬಹುದು.

ಹಿಂದೆ ವಿನ್ಯಾಸದಲ್ಲಿ ಶಿಕ್ಷಣ ಎಂದರೆ ಅದು ಫ್ಯಾಷನ್‌ ಡಿಸೈನಿಂಗ್ (ಉಡುಪು ವಿನ್ಯಾಸ) ಅಥವಾ ಒಳಾಂಗಣ ವಿನ್ಯಾಸ ಎಂಬ ಭಾವನೆಯಿತ್ತು. ಅದು ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರದ ಸರ್ಟಿಫಿಕೇಟ್‌ ಕೋರ್ಸ್‌ ಆಗಿತ್ತು. ಕೆಲವು ಕಡೆ ಇದನ್ನು ಫೈನ್ ಆರ್ಟ್ಸ್‌ನಲ್ಲಿ ಸೇರಿಸಲಾಗಿದೆ. ಆದರೆ ಈಗ ವಿನ್ಯಾಸ ಕ್ಷೇತ್ರದ ಹರವು ಬಹಳ ವಿಸ್ತಾರವಾಗಿದೆ. ಹಾಗೆಯೇ ಉನ್ನತ ಶಿಕ್ಷಣ, ವಿದೇಶಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಿವೆ. ಡಿಸೈನಿಂಗ್‌ ಕೋರ್ಸ್‌ಗಳಿಗೆ ಪಿಯುಸಿಯಲ್ಲಿ ಕಲಾ ವಿಭಾಗ ತೆಗೆದುಕೊಂಡರೆ ಸಾಕು. ಹಾಗಂತ ವಿಜ್ಞಾನ ಅಥವಾ ವಾಣಿಜ್ಯ ಓದಿದವರು ನಿರಾಶರಾಗಬೇಕಾಗಿಲ್ಲ. ಅವರೂ ತಮ್ಮ ಮುಂದಿನ ಗುರಿಯನ್ನು ಸ್ವಲ್ಪ ಬದಲಿಸಿ ಡಿಸೈನಿಂಗ್‌ನತ್ತ ಮುಖ ಮಾಡಬಹುದು.

ಕೈ ಬೀಸಿ ಕರೆಯುವ ಡಿಜಿಟಲ್‌ ಮಾಧ್ಯಮ

ಡಿಜಿಟಲ್‌ ಮಾಧ್ಯಮ ಹಾಗೂ ಜಾಹೀರಾತು ಉದ್ಯಮಗಳು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಾಗಿದ್ದು, ವಿನ್ಯಾಸದಲ್ಲಿ ಪದವಿ ಹೊಂದಿದವರು ಸ್ವಯಂ ಉದ್ಯೋಗ ಮಾಡುವ ಅವಕಾಶಗಳೂ ಇವೆ. ಈ ಪದವಿ ಕಲೆ ಕೇಂದ್ರಿತ ಕೋರ್ಸ್‌ ಆಗಿದ್ದು, ಲಲಿತ ಕಲೆಯಲ್ಲಿ ಪದವಿ ಪಡೆಯುವುದಕ್ಕೆ ಪರ್ಯಾಯ ಎಂಬಂತೇ ಬಿಂಬಿಸಲಾಗಿದೆ. ಈ ಕೋರ್ಸ್‌ನಲ್ಲಿ ಸೃಜನಶೀಲತೆಗೆ ಹಾಗೂ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ. ಕಲ್ಪನೆ ಹಾಗೂ ಕಲೆಯಲ್ಲಿ ಒಳ್ಳೆಯ ಅಭಿರುಚಿ ಇರುವಂಥ ವಿದ್ಯಾರ್ಥಿಗಳು ಈ ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಪದವಿ ಒಟ್ಟು ಮೂರು ವರ್ಷಗಳು, ಅಂದರೆ ಆರು ಸೆಮಿಸ್ಟರ್‌ಗಳ ಕೋರ್ಸ್‌. ಕೆಲವು ಕಾಲೇಜುಗಳು ನಾಲ್ಕು ವರ್ಷಗಳು, ಅಂದರೆ 8 ಸೆಮಿಸ್ಟರ್‌ಗಳನ್ನು ಇಟ್ಟಿವೆ.

ಕೋರ್ಸ್‌ ವಿನ್ಯಾಸದ ಕುರಿತ ಇತಿಹಾಸ, ಕಾನ್ಸೆಪ್ಟ್‌ ಹಾಗೂ ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಂದು ಮಹತ್ವದ ವಿಷಯವನ್ನು ಗಮನಿಸಬೇಕು. ವಿದ್ಯಾರ್ಥಿಗಳು ತಮ್ಮ ಕಲ್ಪನೆಯನ್ನು ಕಲೆಯ ಮೂಲಕ ಪ್ರಸ್ತುತಪಡಿಸುವ ಸಾಮರ್ಥ್ಯ ಹೊಂದಿರಬೇಕು. ಒಳ್ಳೆಯ ಸಂವಹನೆ ಹಾಗೂ ನಿರ್ವಹಣೆ ಕೌಶಲವನ್ನು ಹೊಂದಿರಬೇಕು. ಸೃಜನಶೀಲತೆ, ಕಲ್ಪನಾ ದೃಷ್ಟಿ, ಚಿಂತನೆಗಳನ್ನು ಚಿತ್ರಗಳಿಗೆ ಭಟ್ಟಿ ಇಳಿಸುವ ಕೌಶಲ, ವರ್ಣ ವಿನ್ಯಾಸದ ಬಗ್ಗೆ ಅರಿವು ಇದ್ದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ಹಿಂದಿನ ಹಾಗೂ ಈಗಿನ ಟ್ರೆಂಡ್‌ ಬಗ್ಗೆ ಒಳ್ಳೆಯ ಮಾಹಿತಿ ಇರಬೇಕು.

ವಿನ್ಯಾಸದಲ್ಲಿ ಯಾವ ವಿಷಯದಲ್ಲಿ ಓದಿದರೂ ಅವಕಾಶಗಳು ಬಹಳಷ್ಟಿವೆ. ಸದ್ಯ ಗ್ರಾಫಿಕ್‌ ಡಿಸೈನರ್‌ಗೆ ಅಪಾರ ಬೇಡಿಕೆಯಿದೆ. ಕಲೆಗೆ ಸಂಬಂಧಿಸಿದಂತೆ ಚಿತ್ರಗಳು, ಅಕ್ಷರ ವಿನ್ಯಾಸ, ಬಣ್ಣ ಮೊದಲಾದ ವಿಭಾಗಗಳಲ್ಲಿ ಶ್ರಮ ವಹಿಸಿ ಉತ್ಪನ್ನ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಮಾಡಬೇಕಾಗುತ್ತದೆ. ಉತ್ಪನ್ನದ ಪ್ಯಾಕೇಜ್‌, ಲೋಗೊ, ಇನ್ಫೋಗ್ರಾಫಿಕ್ಸ್‌, ಅದರ ಮೇಲಿನ ಅಕ್ಷರಗಳು.. ಈ ವಿಷಯದಲ್ಲೂ ಕೆಲಸ ಮಾಡಬೇಕಾಗುತ್ತದೆ. ಜಾಹೀರಾತು, ಮಾಧ್ಯಮ ಕಂಪನಿಗಳಲ್ಲಿ ಕೆಲಸ ಮಾಡಬಹುದು. ಅವಕಾಶ ಮುದ್ರಣ ಅಥವಾ ಡಿಜಿಟಲ್‌ ಮಾಧ್ಯಮಗಳಲ್ಲೂ ಇರುತ್ತದೆ. ಲೇಔಟ್‌ ಕಲಾವಿದರಾಗಿ ಕೆಲಸ ಮಾಡಿ ತಮ್ಮ ಕಲ್ಪನೆಗಳ ಮೂಸೆಗೆ ಒಂದಿಷ್ಟು ಬಣ್ಣವನ್ನು ಸೇರಿಸಿ ಪುಟಗಳನ್ನು ಆಕರ್ಷಕವಾಗಿ ವಿನ್ಯಾಸ ಮಾಡಬಹುದು. ದೊಡ್ಡ ದೊಡ್ಡ ಕಂಪನಿಗಳ ವೆಬ್‌ಸೈಟ್‌ ಅನ್ನು ಆಕರ್ಷಕವಾಗಿ ವಿನ್ಯಾಸ ಮಾಡುವ ಕೆಲಸವೂ ನಿಮ್ಮದಾಗಬಹುದು.

ಉತ್ಪನ್ನ ವಿನ್ಯಾಸದಲ್ಲಿ ವಿಪುಲ ಅವಕಾಶ

ಉತ್ಪನ್ನ ವಿನ್ಯಾಸದಲ್ಲಿ ಗ್ರಾಹಕರ ಮನ ಸೆಳೆಯುವಂತಹ ಉತ್ಪನ್ನಗಳು, ಅವುಗಳ ಮೇಲಿನ ಕವರ್‌, ಪ್ಯಾಕಿಂಗ್‌ ಮೊದಲಾದವುಗಳ ವಿನ್ಯಾಸದ ಬಗ್ಗೆ ಕಲಿಸಲಾಗುತ್ತದೆ. ಈ ಉತ್ಪನ್ನ ವಿನ್ಯಾಸವೂ ಅಷ್ಟೆ. ಸದ್ಯ ಕಾರಿನಿಂದ ಹಿಡಿದು ಮೊಬೈಲ್‌ವರೆಗೆ ವಿವಿಧ ಬಗೆಯ ಗ್ರಾಹಕ ಉತ್ಪನ್ನಗಳು, ಗೃಹೋಪಯೋಗಿ ಉಪಕರಣಗಳು ಮಾರುಕಟ್ಟೆಗೆ ದಾಂಗುಡಿಯಿಡುತ್ತಿವೆ. ವಿವಿಧ ಕಂಪನಿಗಳ ಮಧ್ಯೆ ತೀವ್ರ ಪೈಪೋಟಿಯಿದೆ. ಈ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ, ಗ್ರಾಹಕರ ಕಣ್ಣಿಗೆ ಆಕರ್ಷಕವಾಗಿ ಕಾಣುವಂತಹ ಉತ್ಪನ್ನ ವಿನ್ಯಾಸ ಮಾಡುವ ಸಾಮರ್ಥ್ಯ ಹೊಂದಿರಬೇಕು. ಕೈಗಾರಿಕಾ ವಿನ್ಯಾಸದಲ್ಲಿ ಕೂಡ ಉತ್ಪನ್ನಗಳನ್ನು ವಿನ್ಯಾಸ ಮಾಡುವ ಕಲೆಯನ್ನು ಕಲಿಸಲಾಗುತ್ತದೆ. ಒಳಾಂಗಣ ವಿನ್ಯಾಸದಲ್ಲಿ ಕಟ್ಟಡದ ಒಳಗಿನ ಹಾಗೂ ಹೊರಗಿನ ವಿನ್ಯಾಸದ ಬಗ್ಗೆ ಕಲಿಸಲಾಗುತ್ತದೆ. ಹಾಗೆಯೇ ಆಭರಣ ವಿನ್ಯಾಸದಲ್ಲೂ ಈಗಿನ ಟ್ರೆಂಡ್‌ ಮೇಲೆ ಗಮನ ಹರಿಸಿ ವಿನ್ಯಾಸ ಮಾಡುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕಾಗುತ್ತದೆ.

ವಿದ್ಯಾರ್ಥಿಗಳು ಯಾವುದೇ ವಿಭಾಗದಲ್ಲಿ ವಿಶೇಷ ಪರಿಣತಿಯನ್ನು ಸಾಧಿಸಬಹುದು. ಈ ಕೋರ್ಸ್‌ನಲ್ಲಿ ಮೂಲಭೂತ ತಿಳಿವಳಿಕೆಯೆಂದರೆ ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಅದನ್ನು ಸ್ಕೆಚ್‌ ಹಾಗೂ ತಂತ್ರಜ್ಞಾನದ ಮೂಲಕ ಸಾಕಾರಗೊಳಿಸುವುದು. ವಿದ್ಯಾರ್ಥಿಗಳು ವಿನ್ಯಾಸ ಕ್ಷೇತ್ರದಲ್ಲಿರುವ ಹೊಸ ಹೊಸ ತಂತ್ರಜ್ಞಾನದ ಬಗ್ಗೆಯೂ ಮಾಹಿತಿ ಪಡೆಯಬಹುದು.

ಭಾರತದಲ್ಲಿ ವಿನ್ಯಾಸದಲ್ಲಿ ಪದವಿ ಕೋರ್ಸ್‌ ಹೊಂದಿರುವ ಹಲವು ಪ್ರಸಿದ್ಧ ಕಾಲೇಜುಗಳಿವೆ. ಎನ್‌ಐಡಿ– ಅಹ್ಮದಾಬಾದ್‌, ಎನ್‌ಐಎಫ್‌ಟಿ– ಮುಂಬಯಿ, ಐಐಟಿ– ಮುಂಬಯಿ, ಸಿಂಬಯೋಸಿಸ್‌– ಪುಣೆ, ಐಐಎಫ್‌ಟಿ– ಚಂಡೀಗಢ ಮೊದಲಾದವುಗಳನ್ನು ಹೆಸರಿಸಬಹುದು. ವಿನ್ಯಾಸದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ಪದವಿಗಾಗಿ ಓದಬಹುದು. ಯಾವುದೇ ವಿನ್ಯಾಸದಲ್ಲಿ ವಿಶೇಷ ಪರಿಣತಿ ಸಾಧಿಸಬಹುದು.

ಉದ್ಯೋಗಗಳು ಹಲವಾರು

ಬಿಡಿಇಎಸ್‌ ಓದಿದವರಿಗೆ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಳ್ಲಿ ಉದ್ಯೋಗಾವಕಾಶಗಳು ವಿಪುಲವಾಗಿವೆ. ವಿದೇಶಗಳಲ್ಲೂ ಅವಕಾಶಗಳಿವೆ. ಒಂದಲ್ಲ ಒಂದು ಕಡೆ ನಡೆಯುವ ಪ್ರದರ್ಶನಗಳಲ್ಲಿ ನಿಮ್ಮ ಉತ್ಪನ್ನಗಳನ್ನಿಟ್ಟು ಮನ್ನಣೆ ಗಳಿಸಬಹುದು. ಡಿಸೈನ್‌ ಮ್ಯಾನೇಜರ್‌, ಟೆಕ್ಸ್ಟ್‌ಟೈಲ್‌ ಡಿಸೈನರ್‌, ಶಿಕ್ಷಕ, ಮಾರಾಟ ಪ್ರತಿನಿಧಿ, ವಸ್ತ್ರ ವಿನ್ಯಾಸಕ, ಫ್ಯಾಷನ್‌ ಸ್ಟೈಲಿಸ್ಟ್‌, ಫ್ಯಾಷನ್‌ ಫೋರ್‌ಕಾಸ್ಟ್‌, ವೀವಿಂಗ್‌ ಕನ್ಸಲ್ಟಂಟ್‌, ಕಟಿಂಗ್‌ ಅಸಿಸ್ಟಂಟ್‌, ಒಳಾಂಗಣ ವಿನ್ಯಾಸಕ.. ಹೀಗೆ ಹಲವಾರು ಉದ್ಯೋಗಗಳಿವೆ.

*** 

ವಿನ್ಯಾಸದಲ್ಲಿ ವಿವಿಧ ವಿಭಾಗಗಳು

 ಒಳಾಂಗಣ ವಿನ್ಯಾಸ (ಇಂಟೀರಿಯರ್‌ ಸ್ಪೇಸ್‌ ಡಿಸೈನ್‌),

ಉಡುಪು ವಿನ್ಯಾಸ (ಫ್ಯಾಷನ್‌ ಡಿಸೈನಿಂಗ್‌),

ಆಭರಣ ವಿನ್ಯಾಸ l ಉತ್ಪನ್ನ ವಿನ್ಯಾಸ (ಪ್ರಾಡಕ್ಟ್‌ ಡಿಸೈನಿಂಗ್‌), l ಜವಳಿ ವಿನ್ಯಾಸ (ಟೆಕ್ಸ್ಟ್‌ಟೈಲ್‌ ಡಿಸೈನಿಂಗ್‌)

ಸಿರಾಮಿಕ್‌ ಡಿಸೈನ್‌ l ಆ್ಯಕ್ಸೆಸರಿ ಡಿಸೈನ್‌ l ಗೇಮ್‌ ಡಿಸೈನ್‌ l ಮಲ್ಟಿಮೀಡಿಯ ಡಿಸೈನ್‌ l ಲೆದರ್‌ ಪ್ರಾಡಕ್ಟ್‌ ವಿನ್ಯಾಸ.. ಹೀಗೆ ನೀವು ಯಾವ ಕ್ಷೇತ್ರವನ್ನು ಬಯಸುತ್ತೀರೋ ಆಯಾ ಕ್ಷೇತ್ರಗಳಲ್ಲಿ ನೀವು ಪದವಿ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !