ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಕಲಿಕೆಯತ್ತ ಕಾಲೇಜು ಶಿಕ್ಷಣ

Last Updated 23 ಜುಲೈ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ 1ರಿಂದಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸಲು ಯೋಜಿಸಿರುವ ಕಾಲೇಜು ಶಿಕ್ಷಣ ಇಲಾಖೆಯು ಡಿಜಿಟಲ್‌ ಕಲಿಕೆಗೆ ಪೂರಕವಾದ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಸ್ಮಾರ್ಟ್‌ಕ್ಲಾಸ್‌ಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ ಕಾಲೇಜುಗಳ ಆವರಣದಲ್ಲಿ ವೈಫೈ ಸೌಲಭ್ಯವನ್ನು ಕಲ್ಪಿಸಲು ಯೋಜಿಸಿದೆ.

ಇದರ ಭಾಗವಾಗಿ ‘ಡಿಜಿಟಲ್‌’ ರೂಪದಲ್ಲಿ ಪಾಠಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ. ರಾಜ್ಯದ 13 ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳ ಬೋಧಕರ ನೆರವು ಪಡೆದು, ಆಯಾ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ‘ಡಿಜಿಟಲ್‌ ಕಂಟೆಂಟ್‌’ ಸಿದ್ಧಪಡಿಸುವಂತೆ ಸೂಚನೆ ನೀಡಿದೆ.

ಅದಕ್ಕೆ ತಕ್ಕಂತೆ ಪ್ರತಿ ವಿಶ್ವವಿದ್ಯಾಲಯಗಳ ಹಂತದಲ್ಲೂ ವಿಷಯವಾರು ಬೋಧಕರ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯವರಿಗೆ, ತಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ಸೆಮಿಸ್ಟರ್‌ವಾರು ‘ಡಿಜಿಟಲ್‌ ಪಾಠ’ಗಳನ್ನು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ. ಮೊದಲ ಹಂತವಾಗಿ ಮೂರನೇ ಸೆಮಿಸ್ಟರ್‌ಗೆ ಪಾಠಗಳನ್ನು ಸಿದ್ಧಪಡಿಸಲು ತಿಳಿಸಲಾಗಿದೆ.

ಪಠ್ಯಕ್ರಮವನ್ನು ಆಧರಿಸಿ ಪಾಠವಾರು ಪಿಪಿಟಿ, ಅಧ್ಯಯನ ಸಾಮಗ್ರಿ (ಪಿಡಿಎಫ್‌), ವಿಡಿಯೊ, ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯೂ), ರಸಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ. ಅದರ ಜತೆಗೆ ವಿದ್ಯಾರ್ಥಿಗಳಿಗೆ ನೀಡಬಹುದಾದ ಅಸೈನ್‌ಮೆಂಟ್‌ಗಳು ಹಾಗೂ ಘಟಕ ಪರೀಕ್ಷೆ ವಿಧಾನವನ್ನು ಈ ಸಮಿತಿ ರೂಪಿಸಲಿದೆ.

ವಿದ್ಯಾರ್ಥಿಗಳಿಗೆ ಕಂಟೆಂಟ್‌ ಹೇಗೆ ಸಿಗುತ್ತದೆ?:ಡಿಜಿಟಲ್‌ ರೂಪದಲ್ಲಿ ಸಿದ್ಧಪಡಿಸಲಾಗುವ ‘ಕಂಟೆಂಟ್‌’ ರಾಜ್ಯದ ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಭ್ಯವಾಗುವಂತೆ, ‘ಕಲಿಕಾ ನಿರ್ವಹಣಾ ವ್ಯವಸ್ಥೆ’ಯನ್ನು ಇಲಾಖೆ ರೂಪಿಸುತ್ತಿದೆ. ಪಾಠಗಳನ್ನು ಇಲಾಖೆಯ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುತ್ತದೆ. ಈ ಪೋರ್ಟಲ್‌ ಮತ್ತು ಆ್ಯಪ್‌ನ ಪ್ರವೇಶಕ್ಕೆ ಪ್ರತಿ ವಿದ್ಯಾರ್ಥಿಗೂ ‘ಯೂಸರ್‌ ನೇಮ್‌’ ಮತ್ತು ‘ಪಾಸ್‌ವರ್ಡ್‌’ ನೀಡಲಾಗುತ್ತದೆ. ಅದರ ನೆರವಿನಿಂದ ವಿದ್ಯಾರ್ಥಿಗಳಿಗೆ ಅವರವರ ಕೋರ್ಸ್‌ನ ಪಾಠಗಳು ಲಭ್ಯವಾಗುತ್ತವೆ ಎಂದು ಮಾಹಿತಿ ನೀಡುತ್ತಾರೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌.

‘ಕಳೆದ ವರ್ಷ, ಪ್ರಥಮ ಪದವಿ ಕೋರ್ಸ್‌ನ 1.10 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಅವರೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ, ಡಿಜಿಟಲ್‌ ರೂಪದ ಕಲಿಕೆಗೆ ಈ ಲ್ಯಾಪ್‌ಟಾಪ್‌ಗಳು ನೆರವಾಗಲಿವೆ. ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಅವರು ಕಾಲೇಜು ಆವರಣದಲ್ಲಿ ಸುಲಭವಾಗಿ ಡಿಜಿಟಲ್‌ ಕಂಟೆಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಸಮಯವಿದ್ದಾಗ ಕಲಿಕೆಯಲ್ಲಿ ತೊಡಗಬಹುದು. ಲ್ಯಾಪ್‌ಟಾಪ್‌ ಇಲ್ಲದ ವಿದ್ಯಾರ್ಥಿಗಳು ಕಾಲೇಜುಗಳಲ್ಲಿನ ಕಂಪ್ಯೂಟರ್‌ ಲ್ಯಾಬ್‌ ಅಥವಾ ಸ್ಮಾರ್ಟ್‌ಪೋನ್‌ಗಳ ನೆರವು ಪಡೆದುಕೊಳ್ಳಬಹುದು’ ಎಂದು ಅವರು ವಿವರಿಸುತ್ತಾರೆ.

ಸ್ಮಾರ್ಟ್‌ ಆಗಲಿವೆ ತರಗತಿಗಳು:ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸದ್ಯ 1000ಕ್ಕೂ ಹೆಚ್ಚು ಸ್ಮಾರ್ಟ್‌ಕ್ಲಾಸ್‌ಗಳಿವೆ. ಇವುಗಳಲ್ಲಿ ಪ್ರೊಜೆಕ್ಟರ್ ಮತ್ತು ಸ್ಕ್ರೀನ್‌ಗಳು ಮಾತ್ರ ಇವೆ. ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಿ, ಯುಪಿಎಸ್‌ ಅಳವಡಿಸುವ ಮೂಲಕ ಈ ಕೊಠಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಜತೆಗೆ ಸುಮಾರು 1,500 ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್‌ ಆಗಿ ಪರಿವರ್ತಿಸಲಾಗುತ್ತದೆ ಎಂದು ಅವರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT