ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಪಡೆದರೆ ಸರ್ಕಾರಿ ಉದ್ಯೋಗ ಪಡೆಯಬಹುದೇ? ಮಾಹಿತಿ ಇಲ್ಲಿದೆ...

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Last Updated 8 ಜನವರಿ 2020, 5:24 IST
ಅಕ್ಷರ ಗಾತ್ರ

ನಾನು ಬಳ್ಳಾರಿಯ ಕಂಪ್ಲಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದೇನೆ. ಸದ್ಯ ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಇ. ಓದುತ್ತಿದ್ದೇನೆ. ಆದರೆ ಈಗ ಎಂಜಿನಿಯರಿಂಗ್‌ ಓದಲು ಕಷ್ಟವೆನಿಸುತ್ತಿದೆ. ಹೀಗಾಗಿ ಓದನ್ನು ನಿಲ್ಲಿಸಿ ಸರ್ಕಾರಿ ಉದ್ಯೋಗ ಸೇರಲು ನಿರ್ಧರಿಸಿದ್ದೇನೆ. ಸರ್ಕಾರಿ ಕೆಲಸ ‍ಪಡೆಯುವುದರ ಬಗ್ಗೆ ವಿವರ ನೀಡಿ.
-ಪ್ರವೀಣ್‌, ಗಂಗಾವತಿ

ಉತ್ತರ:ಪ್ರವೀಣ್, ನಿಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ನಿಲ್ಲಿಸುವ ಮುಂಚೆ ಆ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಧರಿಸಿ. ಡಿಪ್ಲೊಮಾ ಶಿಕ್ಷಣವನ್ನು ಪದವಿ ಎಂದು ಪರಿಗಣಿಸುವುದಿಲ್ಲ. ಡಿಪ್ಲೊಮಾದ ಮೇಲೆ ಬಹಳಷ್ಟು ಸರ್ಕಾರಿ ಕೆಲಸಗಳು ಲಭ್ಯವಿರುವುದಿಲ್ಲ ಮತ್ತು ಒಂದು ವೇಳೆ ದೊರಕಿದರೂ ಅಲ್ಲಿಂದ ಮುಂದೆ ಪ್ರಗತಿ ಸಾಧಿಸಲು ಪದವಿ ಇದ್ದರೆ ಉತ್ತಮ. ನೀವು ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದರೆ ನಿಮಗೆ ಪದವಿ ದೊರಕುವುದರಿಂದ ಪದವಿ ಆಧಾರದ ಮೇಲೆ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಪ್ರಯತ್ನಿಸುವ ಅವಕಾಶ ನಿಮಗೆ ದೊರಕುತ್ತದೆ. ಆಗ ಡಿಪ್ಲೊಮಾದ ಆಧಾರದ ಮೇಲಿನ ಕೆಲಸದ ಜೊತೆಗೆ ಸರ್ಕಾರಿ ಎಂಜಿನಿಯರ್, ಬ್ಯಾಂಕಿಂಗ್ ಉದ್ಯೋಗ, ಕೆ.ಎ.ಎಸ್. ಮತ್ತು ಐ.ಎ.ಎಸ್. ಅಂತಹ ನಾಗರಿಕ ಸೇವೆಗಳು ಹಾಗೂ ಪದವಿ ಮೇಲೆ ಕರೆಯುವ ಎಲ್ಲಾ ಹುದ್ದೆಗಳಿಗೂ ಪ್ರಯತ್ನಿಸಬಹುದು. ಪರೀಕ್ಷೆಗಳಿಗೂ ತಯಾರಿ ನಡೆಸಬಹುದು. ಪದವಿ ಶಿಕ್ಷಣವು ನೀವು ಹೆಚ್ಚು ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸಬಹುದಾದ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಆ ಬಗ್ಗೆ ದುಡುಕದೆ, ಸರಿಯಾಗಿ ಯೋಚಿಸಿ ನಿರ್ಧರಿಸಿ. ಯಾಕಾಗಿ ನಿಮಗೆ ಎಂಜಿನಿಯರಿಂಗ್ ಕಷ್ಟ ಆಗ್ತಾ ಇದೆ, ಅದನ್ನು ನಿರ್ವಹಿಸಲು ನೀವು ಏನು ಮಾಡಬಹುದು, ಯಾರ ಸಹಾಯ ಪಡೆಯಬಹುದು ಎಂದು ಆಲೋಚಿಸಿ. ಓದುವ ವಯಸ್ಸಿನಲ್ಲಿ ನಾವು ಸಾಧ್ಯವಾದಷ್ಟು ಉನ್ನತ ಶಿಕ್ಷಣವನ್ನು ಮುಗಿಸಲು ಪ್ರಯತ್ನಿಸಬೇಕು. ಮುಂದೆ ಮತ್ತೆ ಓದುವ ಅವಕಾಶಗಳನ್ನು ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಾಗಿರುವುದಿಲ್ಲ.

ಇಷ್ಟರ ಮೇಲೂ, ನೀವು ಡಿಪ್ಲೊಮಾದ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಇಚ್ಛಿಸುವಿರಾದರೆ, ಕೆಲವು ಆಯ್ಕೆಗಳನ್ನು ಮಾಡಬಹುದು. 1. ಎಂಜಿನಿಯರಿಂಗ್ ಮುಂದುವರಿಸುತ್ತಲೇ ಸರ್ಕಾರಿ ಕೆಲಸಗಳ ಪರೀಕ್ಷೆಗಳನ್ನು ಎದುರಿಸುತ್ತ ಕೆಲಸ ಪಡೆಯಲು ಯತ್ನಿಸುವುದು. ಎಂಜಿನಿಯರಿಂಗ್ ಶಿಕ್ಷಣವನ್ನು ಬಿಟ್ಟು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ, ಸರ್ಕಾರಿ ಕೆಲಸಗಳ ಪರೀಕ್ಷೆಗಳನ್ನು ಎದುರಿಸುತ್ತ ಕೆಲಸ ಪಡೆಯಲು ಯತ್ನಿಸುವುದು. 3. ಎಂಜಿನಿಯರಿಂಗ್ ಶಿಕ್ಷಣವನ್ನು ಬಿಟ್ಟು ಮನೆಯಲ್ಲಿ ಇದ್ದು ಓದಿಕೊಳ್ಳುತ್ತ ಅಥವಾ ಕೋಚಿಂಗ್ ಪಡೆಯುತ್ತ ಸರ್ಕಾರಿ ಕೆಲಸಗಳ ಪರೀಕ್ಷೆಗಳನ್ನು ಎದುರಿಸಿ ಕೆಲಸ ಪಡೆಯಲು ಯತ್ನಿಸುವುದು – ಇವುಗಳಲ್ಲಿ ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಿಮಗೆ ಯಾವುದು ಸೂಕ್ತ ಎಂದು ತಿಳಿದು ನಿರ್ಧರಿಸಿ.

ಡಿಪ್ಲೊಮಾ ಶಿಕ್ಷಣದ ಮೇಲೆ ನೀವು ವಿವಿಧ ಸಂಸ್ಥೆಗಳಲ್ಲಿ ಜ್ಯೂನಿಯರ್ ಎಂಜಿನಿಯರ್, ಆಪರೇಟರ್, ಟೆಕ್ನೀಶಿಯನ್ ಆಗಿ ಕೆಲಸ ಪಡೆಯಬಹುದು. ಐ.ಒ.ಸಿ.ಎಲ್, ಎಚ್‌.ಪಿ.ಸಿ.ಎಲ್, ಒ.ಎನ್‌.ಜಿ.ಸಿ, ಎಸ್.ಎ.ಐ.ಎಲ್, ಬಿ.ಎಚ್.ಇ.ಎಲ್, ಬಿ.ಇ.ಎಲ್, ಜಿ.ಎ.ಐ.ಎಲ್. ಇತ್ಯಾದಿ ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇದಲ್ಲದೆ ರಾಜ್ಯ ಸರ್ಕಾರಗಳ ಮೆಟ್ರೊ ಕಾರ್ಪೊರೇಷನ್‌, ಪವರ್ ಕಾರ್ಪೊರೇಷನ್‌ಗಳಲ್ಲಿ ಉದ್ಯೋಗ ಪಡೆಯಬಹುದು. ಅದಕ್ಕಾಗಿ ಆ ಸಂಸ್ಥೆಗಳು ಕರೆಯವ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಉದ್ಯೋಗ ನೇಮಕಾತಿಗಳು ನಿಯಮಿತವಾಗಿ ನಡೆಯದೆ ಇರುವುದರಿಂದ ನೀವು ಆಗಾಗ ಆಯಾ ಸಂಸ್ಥೆಗಳ ವೆಬ್‌ಸೈಟ್ ಅಥವಾ ಸರ್ಕಾರಿ ನೇಮಕಾತಿಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು. ಶುಭಾಶಯ.

**
ನಾನು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಪ್ರಸ್ತುತ ಖಾಸಗಿ ಸ೦ಸ್ಥೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಪಿಯುಸಿ– ಪಿ.ಸಿ.ಎಮ್.ಸಿ, ಬಿ.ಇ– ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಶನ್ ಮುಗಿಸಿದ್ದೇನೆ. ನನ್ನ ವಿದ್ಯಾರ್ಹತೆಯ ಪ್ರಕಾರ ನನಗೆ ಕೃಷಿ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್ ಮಾಡುವ ಅರ್ಹತೆ ಇದೆಯೇ ತಿಳಿಸಿ ಹಾಗೂ ಈ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಿ, ದೂರಶಿಕ್ಷಣದಲ್ಲಿ ಈ ಕೋರ್ಸ್ ಮಾಡಬಹುದೇ? ಡಿಪ್ಲೊಮಾ ಕೋರ್ಸ್‌ಗೆ ಅರ್ಹತೆ ಇಲ್ಲದಿದ್ದಲ್ಲಿ ಕೃಷಿ ಕ್ಷೇತ್ರದಲ್ಲಿ ಬೇರೆ ಯಾವ ಕೋರ್ಸ್ ಮಾಡಬಹುದು ತಿಳಿಸಿ.
–ಹೆಸರು, ಊರು ಬೇಡ.

ಉತ್ತರ: ಮೊದಲಿಗೆ ನೀವು ಯಾವ ಕಾರಣಕ್ಕಾಗಿ ಈ ಕೋರ್ಸ್‌ಗಳನ್ನು ಮಾಡುತ್ತಿದ್ದೀರಿ ಎಂದು ಸ್ಪಷ್ಟಪಡಿಸಿಕೊಂಡರೆ ಯಾವ ಮಾದರಿಯಲ್ಲಿ ಶಿಕ್ಷಣ ಪಡೆಯಬಹುದು ಎಂದು ನಿರ್ಧರಿಸಬಹುದು. ನಿಮ್ಮ ವೈಯಕ್ತಿಕ ಜ್ಞಾನ ಮತ್ತು ಅನುಭವಕ್ಕಾಗಿ ಎಂದರೆ ದೂರ ಶಿಕ್ಷಣದಿಂದ ಸಹಾಯ ಆಗಬಹುದು. ಆದರೆ ಈ ಕ್ಷೇತ್ರದಲ್ಲಿ ವೃತ್ತಿ ನೋಡಬೇಕೆಂದು ಇದ್ದರೆ ರೆಗ್ಯುಲರ್ ಆಗಿ ಓದುವುದು ಮುಖ್ಯವಾಗುತ್ತದೆ.

ಸದ್ಯ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಕೃಷಿ ವಿಷಯದಲ್ಲಿ ಕೇವಲ ಪದವಿ ಮತ್ತು ಸ್ನಾತಕೋತ್ತರ ಪದವಿ ಲಭ್ಯವಿದ್ದು, ಕೆಲವು ಸರ್ಟಿಫಿಕೇಶನ್ ಕೋರ್ಸ್‌ಗಳ ಬಗ್ಗೆ ಉಲ್ಲೇಖಿಸಲಾಗಿದೆ, ಆದರೆ ಡಿಪ್ಲೊಮಾದ ಬಗ್ಗೆ ಹೇಳಲಾಗಿಲ್ಲ. ಗಾಂಧಿಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್, ತಮಿಳುನಾಡು, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಆನಂದ್ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಇನ್ನೂ ಅನೇಕ ಕಡೆ ಡಿಪ್ಲೊಮಾ ಕಲಿಯಲು ಅವಕಾಶ ಇದ್ದು, ಅದನ್ನು ಹತ್ತನೆ ತರಗತಿಯ ಅರ್ಹತೆಯ ಮೇಲೆ ನಡೆಸಲಾಗುತ್ತದೆ.

ಡಿಪ್ಲೊಮಾ ಕೋರ್ಸ್‌ಗಳಲ್ಲದೆ ಸೀಡ್ ಟೆಕ್ನಾಲಜಿ, ಅಗ್ರಿಕಲ್ಚರ್ ಮ್ಯಾನೇಜ್‌ಮೆಂಟ್, ಫುಡ್ ಸೈನ್ಸ್, ಆರ್ಗಾನಿಕ್ ಫಾರ್ಮಿಂಗ್, ಮೀಟ್ ಟೆಕ್ನಾಲಜಿ, ಸಿರಿಕಲ್ಚರ್ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಇಂದಿರಾ ಗಾಂಧಿ ನ್ಯಾಷನಲ್ ಓಪನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಗ್ರಿಕಲ್ಚರ್ ವಿಭಾಗದಲ್ಲಿ ದೂರ ಶಿಕ್ಷಣದ ಮುಖಾಂತರ ಮಾಡಬಹುದಾದ ಅನೇಕ ಕೋರ್ಸ್‌ಗಳ ಬಗ್ಗೆ ಮಾಹಿತಿ ಇದೆ. ನಿಮಗೆ ಆಸಕ್ತಿ ಇರುವ ಕೋರ್ಸ್‌ ಅನ್ನು ಆಯ್ದುಕೊಂಡು ಮಾಡಬಹುದು. ಹಾಗೇ ಕರ್ನಾಟಕ ಮುಕ್ತ ವಿವಿ, ಹೈದರಾಬಾದ್ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲೂ ಕೂಡ ನೋಡಬಹುದು. ಡಿಪ್ಲೊಮಾ, ಸರ್ಟಿಫಿಕೇಶನ್ ಹಾಗೂ ಸ್ನಾತಕೋತ್ತರ ಪದವಿಯ ಕೋರ್ಸ್‌ಗಳನ್ನು ಮಾಡಬಹುದಾಗಿದ್ದು ಆಯಾ ಕೋರ್ಸ್‌ಗಳಿಗೆ ಆಯಾ ವಿಶ್ವವಿದ್ಯಾಲಯಗಳು ತಮ್ಮದೆ ಆದ ಅರ್ಹತೆಯನ್ನು ಇಟ್ಟಿರುತ್ತಾರೆ. ಈ ಬಗ್ಗೆ ಆಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಅನ್ನು ಪರಿಶೀಲಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT