ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವಿ ಮಾತು: ಕಾಲೇಜು ವಿದ್ಯಾರ್ಥಿಗಳೇ ಭಾಷಾ ವಿಷಯ ಕಡೆಗಣಿಸದಿರಿ...

Last Updated 30 ಅಕ್ಟೋಬರ್ 2019, 5:59 IST
ಅಕ್ಷರ ಗಾತ್ರ

ಶಾಲಾ– ಕಾಲೇಜಿನ ವಿದ್ಯಾರ್ಥಿಗಳು ಬೇರೆ ವಿಷಯಗಳಂತೆ ಭಾಷಾ ವಿಷಯಕ್ಕೂ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಉದಾಹರಣೆಗೆ ಪಿಯುಸಿಯಲ್ಲಿ ಭಾಷಾ ವಿಷಯವಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದಿಟ್ಟುಕೊಳ್ಳಿ. ವಿದ್ಯಾರ್ಥಿಗಳು ಕನ್ನಡ ಪಠ್ಯವನ್ನು ಮೊದಲಿನಿಂದಲೂ ಚೆನ್ನಾಗಿ ಓದಿಕೊಂಡರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಬಹುದು. ಆ ಮೂಲಕ ಒಟ್ಟು ಅಂಕ ಗಳಿಕೆ ಹೆಚ್ಚಿಸಿಕೊಂಡು ಮುಂದಿನ ಯೋಜನೆಯನ್ನು ರೂಪಿಸಿಕೊಳ್ಳಬಹುದು. ಆದರೆ ಆತಂಕದ ಸಂಗತಿಯೆಂದರೆ ಸದ್ಯ ಭಾಷಾ ವಿಷಯವನ್ನು ಕಡೆಗಣಿಸುವ ಪ್ರವೃತ್ತಿ ಜಾಸ್ತಿಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನಗರ ಪ್ರದೇಶದ ವಿದ್ಯಾರ್ಥಿಗಳು ಭಾಷೆಯಲ್ಲಿ ಗಳಿಸುವ ಅಂಕ ಕಡಿಮೆ ಎನ್ನಬಹುದು.

ವಿಜ್ಞಾನ ಅಥವಾ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮುಖ್ಯ ವಿಷಯಗಳ ಕಡೆಗೆ ಅಧಿಕ ಗಮನ ಕೊಟ್ಟು ಅದರಲ್ಲಿಯೇ ಜಾಸ್ತಿ ಸಮಯ ಕಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ತಾವು ಓದದೇ ಇರುವ ಭಾಷಾ ವಿಷಯಗಳ ಕಡೆಗೆ ಗಮನಹರಿಸುವುದು ಸಾಮಾನ್ಯ. ಆ ಸಂದರ್ಭದಲ್ಲಿ ಪುಸ್ತಕವನ್ನು ಓದಲು ಹೋದರೆ ಒಂದೇ ಸಲ ಅದರಲ್ಲಿರುವ ಪಾಠ, ಪದ್ಯ, ನಾಟಕ ಅರ್ಥವಾಗುವುದೇ ಇಲ್ಲ. ಕೆಲವರು ಭಾಷೆಯ ಗೈಡ್‌ ಅನ್ನು ತೆಗೆದುಕೊಂಡು ಬಂದು ಓದಲು ಆರಂಭಿಸುತ್ತಾರೆ. ಆಗ ಸಂಪೂರ್ಣ ಪಾಠ ಅರ್ಥವಾಗುವುದು ಬಹಳ ಕಷ್ಟ.

ಭಾಷಾ ವಿಷಯ ಹೇಗೆ ಓದಬೇಕು?

ಭಾಷೆಯಲ್ಲಿ ಪದ್ಯ, ಗದ್ಯ, ನಾಟಕ ವಿಭಾಗಗಳಿದ್ದರೆ ಶೈಕ್ಷಣಿಕ ವರ್ಷದ ಆರಂಭದಿಂದ ಅಧ್ಯಾಪಕರು ಅದನ್ನು ಹಂತ ಹಂತವಾಗಿ ವಿಂಗಡಿಸಿ, ಓದಿ ವಿವರಿಸುವಾಗ ಗಮನವಿಟ್ಟು ಆಲಿಸಬೇಕು. ಅದರಲ್ಲಿ ಬರುವ ಕಠಿಣ ಪದಗಳ ಅರ್ಥ, ನಾನಾರ್ಥ, ತತ್ಸಮ-ತದ್ಭವ, ಗುಣವಾಚಕ, ಅನುಕರಣಾ ವ್ಯಯ, ದ್ವಿರುಕ್ತಿಗಳು.. ಹೀಗೆ ಇವೆಲ್ಲವನ್ನು ಒಂದು ಕಡೆಗೆ ಗುರುತು ಹಾಕಿಕೊಂಡು ಓದಿದರೆ ಪಾಠ ಅಥವಾ ಪದ್ಯದ ಸರಳಾನುವಾದವನ್ನು ಗ್ರಹಿಸಬಹುದು.

ಓದಲು ಸಮಯವನ್ನು ವಿಂಗಡಿಸಿಕೊಳ್ಳಿ. ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೂ ನಿಗದಿತ ಸಮಯದ ವೇಳಾಪಟ್ಟಿ ಹಾಕಿಕೊಳ್ಳುವಂತೆ ಭಾಷಾ ವಿಷಯವನ್ನು ಬಿಡುವಂತಿಲ್ಲ. ಆ ದಿನ ಮಾಡಿದ ಪಾಠದಲ್ಲಿರುವ ಮುಖ್ಯವಾದುದನ್ನು ಟಿಪ್ಪಣಿ ಮಾಡಿಕೊಂಡು ನಂತರ ಮನೆಗೆ ಬಂದು ಒಮ್ಮೆ ಮನನ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಪೂರ್ಣ ಪಾಠದ ಬಗ್ಗೆ ತಿಳಿದುಕೊಳ್ಳಬಹುದು.

ಭಾಷಾ ವಿಷಯದಲ್ಲಿ ಹೀಗೆ ಹೆಚ್ಚಿನ ಅಂಕಗಳನ್ನು ಗಳಿಸಬಹುದು.

*ತರಗತಿಯಲ್ಲಿ ಏಕಾಗ್ರತೆಯಿಂದ ಪಾಠವನ್ನು ಗಮನಿಸಬೇಕು.
*ಟಿಪ್ಪಣಿಯನ್ನು ಒಂದು ಕಡೆಗೆ ಬರೆದಿಟ್ಟುಕೊಳ್ಳಬೇಕು.
*ಕಠಿಣ ಪದಗಳ ಅರ್ಥ, ಇನ್ನಿತರ ವಿಷಯಗಳನ್ನು ಬರೆದುಕೊಳ್ಳಬೇಕು.
*ಪಾಠದಲ್ಲಿ ಬರುವ ಮುಖ್ಯ ವಿಷಯಗಳನ್ನು ಅಂಡರ್‌ಲೈನ್ ಮಾಡಿ ಇಟ್ಟುಕೊಳ್ಳಬೇಕು.
*ಪಾಠ, ಪದ್ಯ, ನಾಟಕದಲ್ಲಿ ಬರುವ ಕ್ರಿಯಾಪದ, ಧಾತು, ವಿರುದ್ಧ ಪದ, ನಾಮಪದ, ನಾಮವಾಚಕ ಇನ್ನಿತರ ವಿಷಯವನ್ನು ಗುರುತು ಹಾಕಿಕೊಂಡು ಓದಬೇಕು.
*ಆ ದಿನ ಮಾಡಿದ ಪಾಠವನ್ನು ಅಂದೇ ಮನೆಗೆ ಬಂದು ಒಮ್ಮೆ ಮನನ ಮಾಡಿಕೊಳ್ಳಬೇಕು.
*ಅಧ್ಯಾಪಕರು ಕೊಟ್ಟಿರುವ ವಿವರಣೆಯನ್ನು ಸರಿಯಾದ ರೀತಿಯಲ್ಲಿ ಬರೆದಿಟ್ಟುಕೊಂಡು ಓದಬೇಕು.
*ಘಟಕ ಪರೀಕ್ಷೆಯ ಸಮಯದಲ್ಲಿ ಒಂದೊಂದೇ ವಿಷಯವನ್ನು ಓದಿದರೆ ಅನುಕೂಲವಾಗುತ್ತದೆ.
*ಕಥೆ, ನಾಟಕದ ಪದ್ಯಭಾಗವನ್ನು ಪದ್ಯ ರೂಪದಲ್ಲಿಯೇ ಹಾಡಿದಾಗ ಕಥಾವಸ್ತು ಸರಿಯಾಗಿ ಮನದಟ್ಟಾಗುತ್ತದೆ.
*ಭಾಷಾ ವಿಷಯದಲ್ಲಿ ಬರುವ ಗ್ರಾಮರ್ ವಿಷಯದಲ್ಲಿ ಅದರಲ್ಲೂ ಪತ್ರ ಲೇಖನ, ಪ್ರಬಂಧ ಲೇಖನ, ಗಾದೆ ಮಾತುಗಳನ್ನು ಸರಿಯಾದ ರೀತಿಯಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು.
*ಹಳೆಯ ಪ್ರಶ್ನೆಪತ್ರಿಕೆಗಳನ್ನು ತಂದು ಅದನ್ನು ಉತ್ತರಿಸಿ ಟಿಪ್ಪಣಿ ಮಾಡಿಕೊಳ್ಳಿ.
*ಪರಿಣಿತ ಶಿಕ್ಷಕರು ಸಿದ್ಧಪಡಿಸಿದ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಓದಿ.
*ತರಗತಿಯಲ್ಲಿ ಉತ್ತಮ ಅಂಕ ಗಳಿಸುತ್ತಿರುವ ವಿದ್ಯಾರ್ಥಿಗಳ ಜೊತೆಗೆ ಸಂವಾದ ಮಾಡಿ.
*ಪ್ರತಿ ಪಾಠದ ಒಂದೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಂದಲೂ, ಅಧ್ಯಾಪಕರಿಂದಲೂ ಕೇಳಿ ತಿಳಿದುಕೊಳ್ಳಿ.
*ಒಂದು ಅಂಕ, ಎರಡು ಅಂಕ, ಮೂರು ಅಂಕ, ನಾಲ್ಕು ಅಂಕ ಮತ್ತು ವಿವರವಾದ ಉತ್ತರ ನೀಡುವ ಪ್ರಶ್ನೆಯನ್ನು ವಿಭಾಗ ಮಾಡಿ ಓದಿಕೊಳ್ಳಿ.
*ಅಧ್ಯಾಪಕರನ್ನು ಆಗಾಗ ಭೇಟಿ ಮಾಡಿ ಚರ್ಚಿಸಿ.
*ನೀವು ಹಾಕಿಕೊಂಡ ವೇಳಾಪಟ್ಟಿಯನ್ನು ಸರಿದೂಗಿಸಿ ಅಧ್ಯಯನ ಮಾಡಿ. ಮನಸ್ಸು, ಗ್ರಹಿಕೆ, ಅಭಿವ್ಯಕ್ತಿ ಇದರ ಜೊತೆಗೆ ನಾವು ಕ್ರಿಯಾಶೀಲರಾದರೆ ಸಾಧನೆ ಬಹು ಸುಲಭ ಎನ್ನಬಹುದು.

ಕನ್ನಡ ಭಾಷೆ ಎಷ್ಟು ಮುಖ್ಯ?
*ಕರ್ನಾಟಕದಲ್ಲಿ ಕನ್ನಡ ಭಾಷೆ ಎಲ್ಲಾ ಹಂತದಲ್ಲಿಯೂ ಕೂಡ ತುಂಬಾ ಪ್ರಭಾವ ಬೀರಬಲ್ಲದು.
*ಕನ್ನಡ ಭಾಷೆ ತೆಗೆದುಕೊಂಡವರಿಗೆ ಇರುವ ಅವಕಾಶಗಳು..
*ಕನ್ನಡ ಭಾಷೆ ಅಧ್ಯಯನ ಮಾಡಿದವರು ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಸಂಶೋಧನಾ ಗ್ರಂಥವನ್ನು ಮಂಡಿಸಬಹುದು.
*ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಬಹುದು.
*ವಾರ್ತಾ ವಾಚಕರಾಗಬಹುದು.
*ಕನ್ನಡ ವಿಷಯದಲ್ಲಿ ಸಂಶೋಧನೆ ಮಾಡಬಹುದು.
*ಸಿನಿಮಾ, ರಂಗಭೂಮಿ ಬರಹಗಾರರಾಗಬಹುದು.
*ಪ್ರವಾಸಿತಾಣದ ಪರಿಚಯ ಮಾಡುವ ಮಾರ್ಗದರ್ಶಕನ ಹುದ್ದೆ ಅಲಂಕರಿಸಬಹುದು.
*ಪುಸ್ತಕ ಬರಹಗಾರರಾಗಬಹುದು.
*ಭಾಷಾಂತರ ಇಲಾಖೆಯಲ್ಲಿ ಅನುವಾದಕರಾಗಬಹುದು.
*ವಿಮರ್ಶಾ ಗ್ರಂಥಗಳನ್ನು ಬರೆಯಬಹುದು.
*ಸಿನಿಮಾ ಚಿತ್ರಗಳಿಗೆ ಕಥೆ ಬರೆಯುವವರಾಗಬಹುದು.
*ಕನ್ನಡದಲ್ಲಿ ಐ.ಎ.ಎಸ್. ಮತ್ತು ಕೆ.ಎ.ಎಸ್. ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಅಲಂಕರಿಸಬಹುದು.
*ಕಾಲೇಜು/ ವಿಶ್ವವಿದ್ಯಾಲಯ ಹೊರತು ಪಡಿಸಿದ ಕೋರ್ಸ್‌
*ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸುವ ಪ್ರವೇಶ, ಕಾವ, ಜಾಣ ರತ್ನ ಪರೀಕ್ಷೆಯನ್ನು ಕಟ್ಟಿ ಅದರಲ್ಲಿ ಉತ್ತೀರ್ಣರಾದರೆ ಪದವಿಗೆ ನೇರವಾಗಿ ಪ್ರವೇಶ ಪಡೆಯಬಹುದು.
*ಕನ್ನಡ ಬಾರದವರಿಗೆ ರತ್ನ ಪಾಸ್‌ ಮಾಡಿದರೆ ನೇರವಾಗಿ ಪದವಿಗೆ ಪ್ರವೇಶ ಪಡೆಯಬಹುದು.
*ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಿಪ್ಲೋಮಾ ಇನ್ ಶಾಸನ ಕೋರ್ಸ್ ಇದ್ದು ಇದರಲ್ಲಿ ಹಲವಾರು ವಿಷಯಗಳನ್ನು ತಿಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT