ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ನಿರೀಕ್ಷೆ | ಶಿಕ್ಷಣದತ್ತ ಇನ್ನಾದರೂ ಹರಿಯುವುದೇ ಚಿತ್ತ?

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧ–ಬಜೆಟ್‌ ನಿರೀಕ್ಷೆಗಳ ಭಾರ
Last Updated 4 ಜುಲೈ 2019, 9:07 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ದೇಶದ ಜನತೆಯ ಮುಂದಿದ್ದು, ಅದಕ್ಕೆ ಪ್ರತಿಕ್ರಿಯೆಗಳು ಬರುತ್ತಿರುವ ಹಂತದಲ್ಲೇ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರದ ಬಹು ನಿರೀಕ್ಷೆಯ ಬಜೆಟ್‌ ಹತ್ತಿರವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬಹುತೇಕ ಮರೆತೇ ಹೋಗಿದ್ದ ಕ್ಷೇತ್ರದತ್ತ ಈಗಲಾದರೂ ಗಮನ ಹರಿಸುತ್ತಾರೆಯೇ ಎಂಬ ಪ್ರಶ್ನೆ ದೊಡ್ಡದಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ರೀತಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿಧಿ ಹಂಚಿಕೆ ಮಾಡುತ್ತಾರೆ ಎಂಬ ಆಶಯಕ್ಕೆ ಒಂದಿಷ್ಟು ಗರಿ ಮೂಡಿದೆ. ಅದಕ್ಕೆ ಕಾರಣ ಕಳೆದ ಐದು ವರ್ಷಗಳ ಹಿನ್ನೋಟ ಅಲ್ಲ, ಬದಲಿಗೆ ಸರ್ಕಾರ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ಮಾಯಾಕುದುರೆ. ನೀತಿಯಲ್ಲಿನ ಆಶಯಗಳು ಕಾರ್ಯರೂಪಕ್ಕ ಬರಬೇಕಾದರೆ ಈ ಬಜೆಟ್‌ನಲ್ಲೇ ಅದಕ್ಕೊಂದು ನಾಂದಿ ಹಾಡಬೇಕು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಲಾಗಿದೆ. ದೇಶೀಯ ಜಿಡಿಪಿಯಲ್ಲಿ ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ಬಳಕೆಯಾಗುತ್ತಿದ್ದ ಪಾಲು ಶೇ 4ರಷ್ಟು ಮಾತ್ರ. ರಾಷ್ಟ್ರೀಯ ಶಿಕ್ಷಣ ನೀತಿ ಹೇಳುವುದೇನೆಂದರೆ, ದೇಶೀಯ ಒಟ್ಟು ವೆಚ್ಚದ ಶೇ 20ರಷ್ಟು ಶಿಕ್ಷಣ ಕ್ಷೇತ್ರಕ್ಕೇ ವಿನಿಯೋಗಬೇಕು. ಸದ್ಯ ಅದರ ಪ್ರಮಾಣ ಶೇ 10ರಷ್ಟು ಮಾತ್ರ ಇದೆ. ಈ ಬಾರಿಯ ಬಜೆಟ್‌ನಲ್ಲೇ ವೆಚ್ಚವನ್ನು ಹೆಚ್ಚಿಸುವ ಪ್ರಯತ್ನ ಆರಂಭವಾದರೆ ಮುಂದಿನ ವರ್ಷಗಳಲ್ಲಿ ಅದು ಸರಾಗವಾಗಿ ಹೆಚ್ಚುತ್ತ ಹೋಗುವುದು ಸಾಧ್ಯವಿದೆ. ಬಜೆಟ್‌ ಅನ್ನು ಈ ದೃಷ್ಟಿಯಿಂದ ನೋಡಿದಾಗ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಮೀಸಲಿಡುವ ಮೊತ್ತ ಹೆಚ್ಚಲೇಬೇಕು.

ಈ ಬಾರಿಯ ಕೇಂದ್ರ ಬಜೆಟ್‌ನ ಅವಧಿ ಎಂಟು ತಿಂಗಳು ಸಹ ಇಲ್ಲ. ಹೀಗಾಗಿ ಇದನ್ನು ಪೂರ್ಣ ಪ್ರಮಾಣದ ಬಜೆಟ್‌ ಎಂದು ಹೇಳುವುದು ಕಷ್ಟ. ಆದರೆ ಅನುದಾನ ಹಂಚಿಕೆ ಮಾಡುವುದಕ್ಕೂ, ಬಜೆಟ್‌ ಅವಧಿಗೂ ಸಂಬಂಧ ಇಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಬಜೆಟ್‌ ಎಂಬಂತೆಯೇ ಪರಿಗಣಿಸಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ ವಿನಿಯೋಗ ಆಗಬೇಕಾಗಿದೆ.

ಬಿಡಿಗಾಸು:ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಯುಜಿಸಿ ಹಾಗೂ ಸಂಶೋಧನಾ ಕ್ಷೇತ್ರಗಳೆಂದು ವಿಭಾಗಿಸಿ ಹೇಳುವುದಾದರೆ, ಮೊದಲ ವಿಭಾಗಕ್ಕೆ ನರೇಂದ್ರ ಮೋದಿ ಸರ್ಕಾರ ಕಳೆದ 5 ವರ್ಷಗಳಲ್ಲಿ ನೀಡಿದ ಪ್ರಾಮುಖ್ಯತೆ ಬಹಳ ಕಡಿಮೆ. ಒಂದು ನಿದರ್ಶನ ಹೇಳಬೇಕೆಂದರೆ ಸರ್ವ ಶಿಕ್ಷಣ ಅಭಿಯಾನಕ್ಕೆ ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ₹ 26 ಸಾವಿರ ಕೋಟಿ ಮಾತ್ರ. ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಇಟ್ಟ ಹಣ ₹ 23 ಸಾವಿರ ಕೋಟಿ. ಅಂದರೆ ದೇಶದಾದ್ಯಂತ ಶಿಕ್ಷಣ ಕ್ಷೇತ್ರಕ್ಕೆ ಒದಗಿಸಿದ ಕೇಂದ್ರದ ಪಾಲು ನಗಣ್ಯ ಎಂದೇ ಹೇಳಬೇಕು. ಮುಖ್ಯವಾಗಿ ಶಾಲೆಗಳ ಮೂಲಸೌಲಭ್ಯ ಸುಧಾರಣೆಗೆ ನೀಡುವ ಅನುದಾನ ಇದರಿಂದ ಬಹಳ ಕಡಿಮೆಯಾಗುತ್ತದೆ. ದೇಶದೆಲ್ಲೆಡೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 10 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಇದೆ. ಇವುಗಳನ್ನು ಭರ್ತಿ ಮಾಡಬೇಕು ಎಂದಾದರೆ ಕೇಂದ್ರ ನೀಡುವ ಅನುದಾನ ಏನೇನೂ ಸಾಲದು. ರಾಜ್ಯದ ಬಜೆಟ್‌ನ ಅನುದಾನ ನೋಡಿದ್ದೇ ಆದರೆ ಅನುದಾನದ ಶೇ 80ರಷ್ಟು ಶಿಕ್ಷಕರ ವೇತನಕ್ಕೇ ವಿನಿಯೋಗವಾಗಿಬಿಡುತ್ತದೆ. ಹಾಗಿದ್ದರೆ ಶಿಕ್ಷಣ ಕ್ಷೇತ್ರದ ಮೂಲಸೌಕರ್ಯಗಳ ಸುಧಾರಣೆ ಹೇಗೆ? ಕೇಂದ್ರ ನೀಡುವ ಅನುದಾನ ಹೆಚ್ಚಳವೇ ಇದಕ್ಕೆಲ್ಲ ಪರಿಹಾರ. ಆದರೆ ಅದನ್ನು ಕೇಂದ್ರ ಬೇಗ ಅರ್ಥ ಮಾಡಿಕೊಳ್ಳುತ್ತದೆಯೇ? ಇದೊಂದು ದೊಡ್ಡ ಪ್ರಶ್ನೆ.

ಸಂವಿಧಾನದ ಆಶಯ ಸಮಾನತೆ. ಅದು ಎಲ್ಲ ಕ್ಷೇತ್ರಗಳಲ್ಲೂ ಇರಬೇಕು. ಶಿಕ್ಷಣ ಕ್ಷೇತ್ರದಲ್ಲೂ ಅದು ಬೇಕೇ ಬೇಕು. ಆದರೆ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಕಾಣಿಸುತ್ತಲೇ ಇಲ್ಲ. ಇಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆಗಳಿವೆ, ಚಪ್ಪಲಿ ಹಾಕಲೂ ಯೋಗ್ಯತೆ ಇಲ್ಲದ ಮಕ್ಕಳು, ಕುಸಿದು ಬೀಳುವ ಚಾವಣಿ ಹೊಂದಿರುವ ಶಾಲೆಗಳೂ ಇವೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ವ್ಯವಸ್ಥೆ. ಶ್ರೀಮಂತರ ಮಕ್ಕಳು ಓದುವ ಶಾಲೆಯಲ್ಲಿ ಈಜುಕೊಳವೂ ಇರುತ್ತದೆ, ಬಡವರ ಮಕ್ಕಳ ಶಾಲೆಯಲ್ಲಿ ಕುಡಿಯಲು ನೀರೂ ಇರುವುದಿಲ್ಲ. ಇಂತಹ ಮಹಾನ್‌ ತಾರತಮ್ಯವನ್ನು ನಿವಾರಿಸುವ ಕೆಲಸ ಸರ್ಕಾರದ್ದು. ಅಂದರೆ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಿದರೆ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ.

‘ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ 24ರಷ್ಟು ಪಾಲನ್ನು ತೆಗೆದಿರಿಸಿದೆ. ಹೀಗಾಗಿ ದೆಹಲಿಯ ಸರ್ಕಾರಿ ಶಾಲೆಗಳೂ ಇಂದು ಖಾಸಗಿ ಶಾಲೆಗಳನ್ನೂ ಮೀರಿ ಗಮನ ಸೆಳೆಯುತ್ತಿವೆ. ಇದೇ ವ್ಯವಸ್ಥೆ ದೇಶದ ಎಲ್ಲೆಡೆ ಜಾರಿಗೆ ಬರಬೇಕು. ಇದಕ್ಕೆ ರಾಜ್ಯ ಸರ್ಕಾರಗಳಲ್ಲಿ ಸಾಕಷ್ಟು ಹಣ ಇರಲಾರದು, ಕೇಂದ್ರ ಅನುದಾನ ನೀಡಿದರಷ್ಟೇ ಈ ಉದ್ದೇಶ ಈಡೇರಲು ಸಾಧ್ಯ. ಒಮ್ಮೆಲೇ ಅಲ್ಲವಾದರೂ, ಸರ್ವ ಶಿಕ್ಷಣ ಅಭಿಯಾನಕ್ಕೆ ನೀಡುವ ಅನುದಾನವನ್ನು ಹಂತ ಹಂತವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಯೋಚಿಸಲೇಬೇಕು’ ಎಂದು ಹೇಳುತ್ತಾರೆ ಹಿರಿಯ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ.

ಉನ್ನತ ಶಿಕ್ಷಣ:ಭಾರತದ ಗಾತ್ರ, ಜನಸಂಖ್ಯೆಗೆ ಹೋಲಿಸಿದರೆ ಜರ್ಮನಿ ಬಹಳ ಸಣ್ಣ ರಾಷ್ಟ್ರ. ಆದರೆ ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಗಳಿಸಿದ ಹೆಸರು ಮಾತ್ರ ಅಗಾಧ. ವಿಶ್ವಮಟ್ಟದ 100ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಅಲ್ಲಿವೆ. ಅಮೆರಿಕ, ಬ್ರಿಟನ್‌ಗಳಲ್ಲೂ ಇದೇ ರೀತಿಯಲ್ಲಿ ಸಾಕಷ್ಟು ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಆದರೆ ಭಾರತದಲ್ಲಿ? ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಇ) ಸಹಿತ ಎಂಟು–ಹತ್ತು ಶಿಕ್ಷಣ ಸಂಸ್ಥೆಗಳ ಹೆಸರು ಹೇಳಿಬಿಡುವಷ್ಟರಲ್ಲೇ ನಮ್ಮ ನೆನಪು ಮರೆತು ಹೋಗಿರುತ್ತದೆ. ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಳ್ಳಲು ನಾವು ಇನ್ನೂ ಬಹಳ ದೂರ ಸಾಗಬೇಕು.

‘ಸಂಶೋಧನಾ ಪ್ರಬಂಧಗಳು ಸಾವಿರಗಟ್ಟಲೆ ದೂಳು ಹಿಡಿಯುತ್ತ ಬಿದ್ದಿವೆ. ಅವುಗಳನ್ನು ತೆರೆದು ನೋಡುವ ಪ್ರಯತ್ನವನ್ನು ಯಾರಾದರೂ ಮಾಡಿದ್ದು ಇದೆಯೇ? ಎಲ್ಲ ಪ್ರಬಂಧಗಳೂ ಜೊಳ್ಳು ಎಂಬ ಮನೋಭಾವ ನಮ್ಮಲ್ಲಿಏಕೆ ಬಂದಿದೆ? ಪ್ರಬಂಧಗಳು ಬೇಡ ಎಂದಾದರೆ ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನವಾದರೂ ಸಾಕಷ್ಟು ಇದೆಯೇ? ಅದೂ ಇಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟಕ್ಕೆ ಏರಬೇಕಾದರೆ ಸಾಕಷ್ಟು ಸಂಶೋಧನೆಗಳು, ಅದಕ್ಕೆ ತಕ್ಕಂತೆ ಪೂರಕ ಮೂಲಸೌಲಭ್ಯಗಳು ಇರಬೇಕು. ಆ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಒದಗಿಸುವ ಪ್ರಯತ್ನ ಆಗಲೇಬೇಕು‘ ಎಂದು ಹೇಳುತ್ತಾರೆ ಶಿಕ್ಷಣ ಮತ್ತು ಆರ್ಥಿಕ ತಜ್ಞ ಪ್ರೊ.ಜಿ.ವಿ.ಜೋಷಿ.

ರಾಜ್ಯ–ಕೇಂದ್ರ ಸಂಘರ್ಷ:ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಣ ಹಂಚಿಕೆ ವಿಷಯದಲ್ಲಿ ಒಂದು ರೀತಿಯ ರಾಜ್ಯ–ಕೇಂದ್ರ ಸಂಘರ್ಷ ನೆಲೆಸಿದೆ ಎಂದೇ ಹೇಳಬೇಕು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ರಾಜ್ಯಗಳಿಗೆ ಸಂಬಂಧಿಸಿದ್ದು, ಸುಧಾರಣೆಗೂ ಅವುಗಳೇ ಹೊಣೆಗಾರರು ಎಂದು ಕೇಂದ್ರ ಹೇಳಿ ಕೈತೊಳೆದುಕೊಳ್ಳುವಂತಿಲ್ಲ. ಏಕೆಂದರೆ ಶಿಕ್ಷಣದಂತೆ ಇನ್ನೂ ಹಲವು ಕ್ಷೇತ್ರಗಳಲ್ಲಿ ರಾಜ್ಯ ತನ್ನ ಜನರಿಗೆ ಉತ್ತರದಾಯಿತ್ವ ಹೊಂದಿದೆ. ಕೇಂದ್ರದ ಸಹಕಾರ ಇದ್ದರಷ್ಟೇ ಪ್ರತಿಯೊಂದು ಕ್ಷೇತ್ರದಲ್ಲೂ ಯೋಜಿತ ಫಲ ಪಡೆಯಲು ಸಾಧ್ಯ.

ಶಾಲಾ ಕಟ್ಟಡಗಳು, ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳಲ್ಲಿ ಕೇಂದ್ರದ ಸಹಕಾರ ಈಗಿನಕ್ಕಿಂತ ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಬೇಕು. ಶಿಕ್ಷಕರ ನೇಮಕದಲ್ಲೂ ರಾಜ್ಯಗಳಿಗೆ ಆಸರೆಯಾಗಿ ಕೇಂದ್ರ ನಿಲ್ಲಬೇಕು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸದೊಂದಿಗೆ ನಿಜವಾದ ಸಂಶೋಧನೆಗಳು, ಅವುಗಳು ಮೂರ್ತರೂಪ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಇದಕ್ಕೆ ಯುಜಿಸಿಯನ್ನು ಬಲಪಡಿಸುವುದರ ಜತೆಗೆ ಪ್ರತಿಯಂದು ವಿಶ್ವವಿದ್ಯಾಲಯವನ್ನೂ ಉತ್ತರದಾಯಿತ್ವವನ್ನಾಗಿ ಮಾಡುವ ಅಗತ್ಯ ಇದೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ಕಡಿವಾಣ ಹಾಕಬೇಕಿದೆ.

ಕೇಂದ್ರ ಬಜೆಟ್‌ ಎಂದಾಗ ತಕ್ಷಣ ಕಣ್ಣು ಓಡುವುದು ರಕ್ಷಣೆಗೆ ಎಷ್ಟು ಹಣ ತೆಗೆದಿಟ್ಟಿದ್ದಾರೆ ಎಂದು. ಆದಾಯ ತೆರಿಗೆ ಪಾವತಿ ಪ್ರಮಾಣ ಇಳಿಯುತ್ತದೆಯೇ ಎಂದು ಮಧ್ಯಮ ವರ್ಗ ಲೆಕ್ಕ ಹಾಕುತ್ತದೆ. ಅದಕ್ಕಿಂತ ಮಿಗಿಲಾಗಿ ಶಿಕ್ಷಣದಂತಹ ಕ್ಷೇತ್ರಗಳಿಗೆ ಹಣ ಎಷ್ಟು ತೆಗೆದಿಟ್ಟಿದ್ದಾರೆ ಎಂದು ಯೋಚಿಸುವವರು ಬಹಳ ಕಡಿಮೆಯೇ. ಆದರೆ ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ನಮ್ಮ ಮುಂದಿದೆ. ಸರ್ಕಾರಕ್ಕೆ ನಿಜವಾಗಿಯೂ ಶಿಕ್ಷಣ ಕ್ಷೇತ್ರದ ಸುಧಾರಣೆಯಾಗಬೇಕು ಎಂಬ ಗಂಭೀರ ಚಿಂತನೆ ಇದ್ದರೆ ಅದಕ್ಕೆ ಅನುದಾನ ವಿನಿಯೋಗಿಸಲು ಇದೇ ಸಕಾಲ. ಶಾಲೆಗಳ ಮೂಲಸೌಲಭ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇ ಆದರೆ ಉಳಿದೆಲ್ಲವೂ ನಿಧಾನವಾಗಿ ಅದೇ ದಾರಿಗೆ ಬರುವುದು ಸಾಧ್ಯವಿದೆ.

ತಜ್ಞರು ಹೀಗೆನ್ನುತ್ತಾರೆ

ಆರ್‌ಟಿಇ ಸಂಪೂರ್ಣ ಕಡೆಗಣನೆ:ಶಿಕ್ಷಣ ಕ್ಷೇತ್ರಕ್ಕೆ ನರೇಂದ್ರ ಮೊದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಅಂತಹ ಮಹತ್ವ ಕೊಟ್ಟಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಬಗ್ಗೆ ಗಾಢ ಮೌನ ವಹಿಸಿದೆ. ಇದನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಶಿಕ್ಷಣ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆಯೇ. ಕೇಂದ್ರ ಸರ್ಕಾರ ಇನ್ನಾದರೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಲೇಬೇಕು ಎನ್ನುವುದು ಶಿಕ್ಷಣ ತಜ್ಞಡಾ.ವಿ.ಪಿ.ನಿರಂಜನಾರಾಧ್ಯ ಅವರ ಒತ್ತಾಯ.

ಜ್ಞಾನವನ್ನು ಬಳಸುವ ಪದ್ಧತಿಯೇ ಇಲ್ಲ:ವಿಶ್ವವಿದ್ಯಾಲಯಗಳಲ್ಲಿ ಸಿದ್ಧವಾಗುವ ಡಾಕ್ಟರೇಟ್ ಪ್ರಬಂಧಗಳೆಂದರೆ ಭಾರಿ ಅನಾದರ ಇದೆ. ಎಲ್ಲ ಪ್ರಬಂಧಗಳೂ ವ್ಯರ್ಥ ಎಂದು ಹೇಳಲಾಗದು. ಮೌಲಿಕ ಪ್ರಬಂಧಗಳಲ್ಲಿನ ಆಶಯಗಳನ್ನು ಬಳಸಿಕೊಳ್ಳುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಖಾಸಗಿ ಸಂಶೋಧನೆಯ ಲಾಭ ಆಡಳಿತಕ್ಕೆ ತಲುಪಿಸುವ ಪ್ರಯತ್ನ ನಡೆದದ್ದೇ ಆದರೆ ಉನ್ನತ ಶಿಕ್ಷಣ ಕ್ಷೇತ್ರದ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡಂತಾದೀತು. ಈ ಬಜೆಟ್‌ನಲ್ಲಿ ಅದು ಆಗುತ್ತದೋ ಇಲ್ಲವೋ, ಆದರೆ ಮುಂದೆ ಅನುಷ್ಠಾನಕ್ಕೆ ತರಬಹುದಾದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಾದರೂ ಅದನ್ನು ಅಳವಡಿಸಿ ಜಾರಿಗೆ ತರಬೇಕು ಎನ್ನುವುದು ಆರ್ಥಿಕ ತಜ್ಞ ಪ್ರೊ.ಜಿ.ವಿ.ಜೋಷಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT