ಗುರುವಾರ , ಆಗಸ್ಟ್ 5, 2021
21 °C

ಪರೀಕ್ಷೆ ದಿಕ್ಸೂಚಿ | ಸಮಾಜ ವಿಜ್ಞಾನ: ವಿಭಾಗವಾರು ಅಭ್ಯಾಸ ಮುಖ್ಯ

ಅರುಣ ಬ ಚೂರಿ Updated:

ಅಕ್ಷರ ಗಾತ್ರ : | |

ಸಮಾಜ ವಿಜ್ಞಾನ ವಿಷಯ ಎಂದಾಕ್ಷಣ ಇತಿಹಾಸದಲ್ಲಿ ನೆನಪಿಡಬೇಕಾದ ವಿವಿಧ ವರ್ಷಗಳು, ವಿವಿಧ ಪದ್ಧತಿಗಳು, ವಿವಿಧ ದಿನಾಚರಣೆಗಳು, ಅನೇಕ ಚಳವಳಿಗಳು, ಭಾರತದ ನಕ್ಷೆ ಬರೆದು ವಿವಿಧ ಸ್ಥಳಗಳನ್ನು ಗುರುತಿಸುವುದು.. ಹೀಗೆ ಇದನ್ನೆಲ್ಲಾ ಅಭ್ಯಸಿಸಿ ಜ್ಞಾಪಕದಲ್ಲಿ ಇಟ್ಟುಕೊಂಡು ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸುವುದು ಬಹುತೇಕ ವಿದ್ಯಾರ್ಥಿಗಳಿಗೆ ಸವಾಲಿನ ಕೆಲಸ.

ಹಾಗಾಗಿ ವಿದ್ಯಾರ್ಥಿಗಳು ಮೊದಲು ಎಲ್ಲ ವಿಷಯಗಳಂತೆ ಈ ವಿಷಯದಲ್ಲೂ ಸಹ ಕಳೆದ ವರ್ಷಗಳ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಆಗ ಯಾವ ರೀತಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರಬಹುದು ಹಾಗೂ ಅವುಗಳ ಉತ್ತರಕ್ಕೆ ಮೀಸಲಿಡಬೇಕಾದ ಸಮಯವೆಷ್ಟು, ಯಾವ ಪ್ರಶ್ನೆಗಳಿಗೆ ಮೊದಲ ಆದ್ಯತೆ ಕೊಡಬೇಕು.. ಇವೆಲ್ಲದರ ಬಗ್ಗೆ ಪರಿಕಲ್ಪನೆ ದೊರಕುತ್ತದೆ.

ಉದಾಹರಣೆಗೆ ವಿಭಾಗವಾರು ಅಂಕಗಳ ಬಗ್ಗೆ ಗಮನ ಹರಿಸಿದಲ್ಲಿ ಯಾವ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ನೀಡಲಾಗುತ್ತದೆ. ಆ ವಿಭಾಗಕ್ಕೆ ಹೆಚ್ಚು ಮಹತ್ವ ನೀಡಿ ಓದಬಹುದು ಹಾಗೂ ಅತಿ ಕಡಿಮೆ ಅಂಕಗಳನ್ನು ನೀಡುವ ವಿಭಾಗದಲ್ಲಿ ಕೇವಲ ಮುಖ್ಯಾಂಶಗಳು ಹಾಗೂ ನೋಟ್ಸ್ ಮಾತ್ರ ಓದಬಹುದು.

ಪ್ರಶ್ನೆಗಳ ಆಯ್ಕೆ

ಸಮಾಜ ವಿಜ್ಞಾನದ ವಿಭಾಗವಾರು ಅಂಕಗಳನ್ನು ಗಮನಿಸುವುದಾದರೆ  ಸ್ಮರಣೆ, ತಿಳಿವಳಿಕೆ, ಅನ್ವಯ, ಕೌಶಲ ಇವುಗಳ ಆಧಾರದಲ್ಲಿ ಒಟ್ಟು ಅಂಕಗಳನ್ನು ವಿಂಗಡಿಸಲಾಗಿರುತ್ತದೆ. ಪರೀಕ್ಷೆ ಎಲ್ಲ ರೀತಿಯ ಕಠಿಣ ಮಟ್ಟಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಸುಲಭ. ಸಾಮಾನ್ಯ, ಕಠಿಣ. ಆದರೆ ಒಂದೇ ರೀತಿಯ ಮಟ್ಟಗಳನ್ನು ಹೊಂದಿರಲಾರದು. ಇದು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಆಯ್ಕೆ ಮಾಡುವ ರೀತಿಯನ್ನು ಅವಲಂಬಿಸಿರುತ್ತದೆ.

ಇನ್ನು ವಿದ್ಯಾರ್ಥಿಗಳು ಉತ್ತರಗಳನ್ನು ಪ್ರಸ್ತುತಪಡಿಸುವ ವಿಧಾನವನ್ನು ಗಮನಿಸುವುದಾದರೆ,

* ಮೊದಲು ಒಂದು ಅಂಕದ 8 ಎಂಸಿಕ್ಯು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿ.  

ಪ್ರಶ್ನೆಯ ಸಂಖ್ಯೆ- ಉತ್ತರದ ಆಯ್ಕೆಯ ಸಂಖ್ಯೆ- ಉತ್ತರ

* ಇಲ್ಲಿ ಒಂದು ಅಂಕದ ಎಂಟು ಪ್ರಶ್ನೆಗಳಿದ್ದು ಉತ್ತರ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಇಲ್ಲಿ ಪ್ರಶ್ನೆಯ ಸಂಖ್ಯೆ ಹಾಗೂ ಉತ್ತರದ ಪೂರ್ತಿ ವಾಕ್ಯ ಬರೆಯಿರಿ. ಇಲ್ಲಿ ಕೆಲವೊಮ್ಮೆ ಏಕೆ, ಎಂದರೇನು.. ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದರೂ ಸಹ ಉತ್ತರಗಳು ಚಿಕ್ಕದಾಗಿರುತ್ತವೆ. ಅಂತಹ ಪ್ರಶ್ನೆಗಳನ್ನು ಇಲ್ಲಿ ಕೇಳಲು ಕ್ಲಿಷ್ಟತೆಯು ಕಾರಣವಾಗಿರುತ್ತದೆ. ಹಾಗಾಗಿ ಅಂಕಗಳಿಗೆ ತಕ್ಕಂತೆ ವಿವರಿಸುವ ಅಭ್ಯಾಸ ರೂಢಿಸಿಕೊಂಡಿರಬೇಕು.

* ಎರಡು ಅಂಕಗಳ ಪ್ರಶ್ನೆಗಳನ್ನು ಕೇಳುವಾಗ ಪ್ರಾಮುಖ್ಯತೆಯನ್ನು ವಿವರಿಸಿ. ನೀತಿಗಳ ಬಗ್ಗೆ ವಿವರಿಸಿ. ಯುದ್ಧದ ಫಲಿತಾಂಶಗಳು ಏನು, ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸ್ಪಷ್ಟೀಕರಿಸಿ. ಈ ರೀತಿ ಸಣ್ಣ ವಿವರಣೆ ಅಗತ್ಯವಿರುವ ಪ್ರಶ್ನೆಗಳನ್ನು ಕೇಳುತ್ತಾರೆ.

* ಮೂರು ಅಂಕಗಳ ಪ್ರಶ್ನೆಗಳಲ್ಲಿ ಪರಿಣಾಮಗಳೇನು, ಕಾರಣವಾದ ಸನ್ನಿವೇಶಗಳೇನು, ದಂಗೆಯ ವಿಫಲತೆಗೆ ಕಾರಣಗಳೇನು, ಭೂ ಕುಸಿತಕ್ಕೆ ಕಾರಣ ಹಾಗೂ ಪರಿಣಾಮಗಳೇನು ವಿವರಿಸಿ, ಆರ್‌ಬಿಐ ಕಾರ್ಯಗಳೇನು ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲಿ ಉತ್ತರಗಳನ್ನು ಮುಖ್ಯಾಂಶಗಳಲ್ಲಿ ಬರೆದರೆ ಉತ್ತಮ.

*  4 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಭಾಷಾಜ್ಞಾನ, ಬರವಣಿಗೆ ಜ್ಞಾನ ಅಳವಡಿಸಿಕೊಂಡು ಉತ್ತರಿಸಿ. ಅಲ್ಲದೆ ಕೈಬರಹವೂ ಉತ್ತಮವಾಗಿದ್ದರೆ ಹೆಚ್ಚು ಅಂಕಗಳಿಸಲು ಸಹಾಯವಾಗಬಲ್ಲದು. ನಾಲ್ಕು ಅಂಕಗಳ 4 ಪ್ರಶ್ನೆಗಳಿದ್ದು ಅದರಲ್ಲಿ 3 ನಿಶ್ಚಿತವಾಗಿ ಉತ್ತರಿಸಬೇಕಾದ ಪ್ರಶ್ನೆಗಳು ಹಾಗೂ ಕೇವಲ ಒಂದು ಪ್ರಶ್ನೆಗೆ ಮಾತ್ರ ಆಯ್ಕೆಯನ್ನು ನೀಡಿರುತ್ತಾರೆ ಹಾಗೂ ಆ ಆಯ್ಕೆಯ ಪ್ರಶ್ನೆ ಇತಿಹಾಸ ವಿಭಾಗದ್ದೆ ಆಗಿರುತ್ತದೆ.

* ನಕ್ಷೆಯನ್ನು ಬರೆದು ಸ್ಥಳಗಳನ್ನು ಗುರುತಿಸುವ ಪ್ರಶ್ನೆಗಳನ್ನು ಭೂಗೋಳದಿಂದ ಮಾತ್ರ ಕೇಳುತ್ತಾರೆ. ಒಂದು ಅಂಕ ನಕ್ಷೆ ಬಿಡಿಸಲು ಮೀಸಲಾಗಿದ್ದರೆ ನಾಲ್ಕು ಅಂಕಗಳು ಗುರುತಿಸಲು ಕೇಳುವ ಸ್ಥಳಗಳಿಗೆ ಮೀಸಲಾಗಿರುತ್ತವೆ ಹಾಗೂ ಗುರುತಿಸಲು ಕೇಳುವ ಸ್ಥಳಗಳೆಂದರೆ ನದಿಗಳು, ಯೋಜನೆಗಳು, ಸ್ವಾಭಾವಿಕ ವಿಭಾಗಗಳು ಇತ್ಯಾದಿ.

* ಕೊನೆಗೆ ಸಮಯ ದೊರಕಿದಲ್ಲಿ ಅತಿಮುಖ್ಯ ಎನ್ನಿಸಿದ ಅಂಶಗಳ ಕೆಳಗೆ ಗೆರೆ ಎಳೆಯಿರಿ. ಉದಾಹರಣೆಗೆ ವರ್ಷಗಳು, ಸ್ಥಳಗಳು, ರಾಜರು ಇತ್ಯಾದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು