ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋವಿಕಾಸ ಹಿಗ್ಗಿಸುವ ವಸ್ತುಸಂಗ್ರಹಾಲಯ

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""
""

ಕುತೂಹಲದ ಮೂಟೆಯಾದ ಮಕ್ಕಳ ಮನಸ್ಸಿನಲ್ಲಿ ಸದಾ ಪ್ರಶ್ನೆಗಳದ್ದೇ ಕಲರವ. ಕುತೂಹಲದಿಂದ ಪ್ರಶ್ನೆಯೂ, ಪ್ರಶ್ನೆಯಿಂದ ಕುತೂಹಲವೂ ಪರಸ್ಪರ ಸಂತೈಸಿಕೊಳ್ಳಲು ಇರುವ ದಾರಿಯೇ ಕ್ರಿಯಾಶೀಲತೆ. ಮಕ್ಕಳ ಮನೋವಿಕಾಸವನ್ನು ಮತ್ತಷ್ಟು ಹಿಗ್ಗಿಸಲೆಂದೇ ಜಗತ್ತಿನಾದ್ಯಂತ ಕೆಲವು ವಿಶಿಷ್ಟ ಎನಿಸುವ ವಸ್ತುಸಂಗ್ರಹಾಲಯಗಳು ರೂಪುಗೊಂಡಿವೆ. ಅವು ಕೇವಲ ಮೋಜಿಗಾಗಿ ಅಷ್ಟೇ ಅಲ್ಲ; ಜ್ಞಾನದ ಸಿಹಿಯನ್ನು ಆಡುತ್ತಲೂ ಅರಗಿಸಿಕೊಳ್ಳಬಹುದು ಎಂಬ ಮಾತಿಗೆ ನಿದರ್ಶನವಾಗಿ ಉಳಿದುಕೊಂಡಿವೆ. ಅವುಗಳಲ್ಲಿ ಕೆಲವು ಹೀಗಿವೆ.

ನ್ಯೂಯಾರ್ಕ್‌ನ ರಾಚೆಸ್ಟರ್‌

ಎಲ್ಲ ವಯೋಮಾನದಲ್ಲಿರುವ ಮಕ್ಕಳಿಗೆ ಈ ವಸ್ತುಸಂಗ್ರಹಾಲಯವು ಬಹಳ ಖುಷಿ ಕೊಡುತ್ತದೆ. ದೈಹಿಕ ಕಸರತ್ತಿಗೆ ಮಕ್ಕಳನ್ನು ಅಣಿಗೊಳಿಸಲು ಪ್ರೇರೇಪಿಸುತ್ತದೆ. ಇಲ್ಲಿ ಏರುವ ಇಳಿಯುವ ಆಟವಾಡಬಹುದು. ದಶಕಗಳಿಂದಲೂ ನಡೆಯುತ್ತಿರುವ ವಿವಿಧ ಆಟಗಳಲ್ಲಿ ಪರಸ್ಪರ ತೊಡಗಿಕೊಳ್ಳಬಹುದು. ಇಲ್ಲಿಯೇ ಪುಟ್ಟದಾದ ‘ವೆಗ್ಮ್ಯಾನ್ಸ್‌’ ಸೂಪರ್‌ ಮಾರ್ಕೆಟ್‌ ಇದ್ದು, ಬಗೆ ಬಗೆಯ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ಪಡೆಯಬಹುದು.

ಇಂಡಿಯಾನ ಪೊಲಿಸ್‌ನ ಕ್ರೀಡಾ ಸಂಗ್ರಹಾಲಯ

ಮಕ್ಕಳ ವಸ್ತಸಂಗ್ರಹಾಲಯಗಳಲ್ಲಿಯೇ ಅತಿ ದೊಡ್ಡ ಸಂಗ್ರಹಾಲಯ ಎಂಬ ಖ್ಯಾತಿ ಇದಕ್ಕಿದೆ. 4,80,000 ಚದರ ಅಡಿಯಷ್ಟು ವಿಶಾಲವಾಗಿದ್ದು, ಏಳುವರೆ ಎಕರೆ ಹೊರಾಂಗಣ ಕ್ರೀಡಾಂಗಣವಿದೆ. ಚಿಕ್ಕವಯಸ್ಸಿನಲ್ಲಿಯೇ ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗಾಗಿಯೇ ಹಲವು ಆಟಗಳನ್ನು ರೂಪಿಸಲಾಗಿದ್ದು, ಕ್ರೀಡಾಪಟುವಿನ ಅನುಭವ ಪಡೆಯಬಹುದು. ಮಾರ್ಚ್‌ನಿಂದ ನವೆಂಬರ್‌ನಲ್ಲಿ ಅವಧಿಯಲ್ಲಿ ಇದು ತೆರೆದಿರುತ್ತದೆ. ಗುಂಪು ಗುಂಪಾಗಿ ಆಟ ಆಡಲು, ಬೆರೆಯಲು ಅವಕಾಶ ನೀಡಲಾಗುತ್ತದೆ.ಬೇಸ್‌ಬಾಲ್‌, ಫುಟ್ಬಾಲ್‌ ಆಡಲೆಂದು ದೊಡ್ಡ ಕ್ರೀಡಾಂಗಣವಿದೆ. ಮರದಿಂದ ತಯಾರಿಸಿದ ಮನೆಗಳು ಇದರ ವಿಶೇಷ. ಜತೆಗೆ ಡೈನೋಸಾರ್‌ಗಳ ಇತಿಹಾಸ, ಅದರ ದೈಹಿಕ ರಚನೆಗಳ ಬಗ್ಗೆ ಮಾಹಿತಿ ನೀಡುವನ್ನು ಕೆಲಸವನ್ನು ಮಾಡುತ್ತಿದೆ.

ಪ್ರಾಗ್‌ನ ಕೃಷಿ ಸಂಗ್ರಹಾಲಯ

ಇಲ್ಲಿ ಕೇವಲ ಹಳೆಯ ತಲೆಮಾರಿನ ಟ್ರ್ಯಾಕ್ಟರ್‌ಗಳಷ್ಟೇ ಇಲ್ಲ. ಎಲ್ಲ ವಯಸ್ಸಿನ ಮಕ್ಕಳು ಕೃಷಿಕೇತ್ರದೆಡೆಗೆ ಇಟ್ಟುಕೊಂಡಿರುವ ಸಹಜ ಕುತೂಹಲವನ್ನು ತಣಿಸಲು ಶಕ್ತವಾಗಿದೆ. ಭೂಮಿಯಿಂದ ಉಣ್ಣುವ ಟೇಬಲ್‌ನವರೆಗೂ ಬಗೆ ಬಗೆಯ ಬೆಳೆಯು ಹೇಗೆಲ್ಲ ರೂಪುಗೊಂಡು, ಸಂಸ್ಕರಗೊಳ್ಳುತ್ತವೆ ಎಂಬುದರ ಬಗ್ಗೆ ವಿಸ್ತೃತವಾದ ಮಾಹಿತಿ ನೀಡುತ್ತದೆ ಈ ಸಂಗ್ರಹಾಲಯ. ಇದರ ಜತೆಗೆ ಮೀನುಗಾರಿಕೆ ಟ್ರ್ಯಾಕ್ಟರ್‌ ಸಂಶೋಧನೆ, ಕೃಷಿ ಕ್ಷೇತ್ರದ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ತಾರಸಿ ಉದ್ಯಾನ, ಹಣ್ಣುಗಳ ಬೆಳೆಯುವ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ.

ಐಯೋವ

ಆಟಗಳ ಮೂಲಕವೇ ಕಲಿಸುವ ಸಂಗ್ರಹಾಲಯ ಐಯೋವ ಮಕ್ಕಳ ವಸ್ತುಸಂಗ್ರಹಾಲಯ. ಕಲಿಕೆಗೆ ಇಂಬು ನೀಡುವುದಲ್ಲದೇ ಆಟದ ಮೂಲಕ ಉತ್ಸಾಹ ತುಂಬುತ್ತದೆ. ಅಡುಗೆಯಲ್ಲಿ ಆಸಕ್ತಿ ಇರುವ ಮಕ್ಕಳು ಬಾಣಸಿಗನ ವೇಷ ತೊಟ್ಟು, ಅಡುಗೆಯನ್ನು ಆಟದ ಮೂಲಕವೇ ಕಲಿಯಬಹುದು. ಭೌತವಿಜ್ಞಾನದ ಆರಂಭಿಕ ಪಟ್ಟುಗಳನ್ನು ಹೇಳಿಕೊಡಲಾಗುತ್ತದೆ. ಇನ್ನೂ ತಂತ್ರಜ್ಞಾನದಲ್ಲಿ ವಿಪರೀತ ಆಸಕ್ತಿ ಇರುವ ಮಗುವು ರೇಸ್‌ ಕಾರು, ಟ್ರ್ಯಾಕ್ಟರ್‌, ರೈಲು ಸೇರಿ ಬಗೆಯ ಬಗೆಯ ವಾಹನಗಳ ಬಿಡಿಭಾಗಗಳನ್ನು ಇಟ್ಟುಕೊಂಡು ಹೊಸ ಸಂಶೋಧನೆಗೆ ತೊಡಗಬಹುದು. ಕಸದಲ್ಲಿ ರಸ ಮಾಡುವ ಬಗೆಯನ್ನು ಹೇಳಿಕೊಡಲಾಗುತ್ತದೆ.

ಸೇಂಟ್‌ ಪಾಲ್ ಸಂಗ್ರಹಾಲಯ

ಮಕ್ಕಳು ಫ್ಯಾಂಟಸಿ ಹಾಗೂ ಸಾಹಸ ಕತೆಗಳನ್ನು ಹಚ್ಚಿಕೊಳ್ಳುವುದೆಲ್ಲ ಸಾಮಾನ್ಯ. ಫ್ಯಾಂಟಸಿ ಲೋಕದಲ್ಲಿ ತಾವೇ ಪಾತ್ರವಾದರೆ ಇನ್ನಷ್ಟು ಖುಷಿ ಪಡುತ್ತಾರೆ ಎನ್ನುವುದರಲ್ಲಿ ಎರಡೂ ಮಾತಿಲ್ಲ. ಈ ಆಶಯವನ್ನು ಇಟ್ಟುಕೊಂಡೇ ಮಿನ್ನೆಸೊಟದ ಸೇಂಟ್‌ ಪಾಲ್‌ ಸಂಗ್ರಹಾಲಯವನ್ನು ರೂಪಿಸಲಾಗಿದೆ. ತಾವು ಎಂದೋ ಕೇಳಿದ ಕತೆಗಳಲ್ಲಿ ಬರುವ ನಾಯಕ ಪಾತ್ರದ ವೇಷ ಭೂಷಣ ಇಲ್ಲಿ ಲಭ್ಯವಿದ್ದು, ಮಗುವು ಇದನ್ನೆಲ್ಲ ಆ ಕ್ಷಣಕ್ಕೆ ತನ್ನದಾಗಿಸಿಕೊಂಡು ತನ್ನ ಕಲ್ಪನೆಯ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬಹುದು.

ಮಿಸ್ಸೋರಿ: ಸೇಂಟ್‌ ಲೂಯಿ ಸಂಗ್ರಹಾಲಯ

ಅಂಬೆಗಾಲಿಡುತ್ತಿರುವ ಮಕ್ಕಳೂ ಆಟದಲ್ಲಿ ತೊಡಗಿಕೊಳ್ಳಲು ಇಷ್ಟಪಡುವಂತೆ ಈ ಸಂಗ್ರಹಾಲಯವನ್ನು ರೂಪಿಸಲಾಗಿದೆ. ಕ್ರಮಬದ್ಧವಾದ ಆಟೋಟಗಳಿದ್ದು, ದೈಹಿಕ ಕಸರತ್ತಿಗೆ ಅವಕಾಶ ಇದೆ. ಹೊಗೆ ಕೊಳವೆಗಳು, ಸೇತುವೆ ಮಾದರಿಯ ಆಟಗಳನ್ನು ರೂಪಿಸಲಾಗಿದ್ದು, ಇದರೊಳಗೆ ಮಕ್ಕಳಿಗೆ ಆಟ ಲೋಕವೊಂದರ ಹೊಸ ಸಾಧ್ಯತೆ ಅನಾವರಣಗೊಳ್ಳುತ್ತದೆ.ಗುಹೆಗಳು, ಕ್ಷಣ ಕ್ಷಣಕ್ಕೂ ಎದುರಾಗುವ ಕಾಡಿನ ತಿರುವಿನ ಅನುಭವಗಳು ಮಕ್ಕಳ ಮನಸ್ಸಿನಲ್ಲಿ ಫ್ಯಾಂಟಸಿಲೋಕದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT