ಬುಧವಾರ, ಆಗಸ್ಟ್ 4, 2021
23 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ| ಇಂಗ್ಲಿಷ್ ಭಾಷೆ: ಕೈಬರಹದ ಕಡೆಗೂ ಗಮನವಿರಲಿ!

ಅರುಣ ಬ. ಚೂರಿ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಹುತೇಕ ವಿದ್ಯಾರ್ಥಿಗಳು, ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೆ ಸಾಕು ಎಂಬ ಮನಸ್ಥಿತಿ ಹೊಂದಿರುತ್ತಾರೆ. ಆದರೆ ವಾಸ್ತವಾಂಶ ಇದಕ್ಕೆ ತದ್ವಿರುದ್ಧವಾಗಿದೆ. ಸೂಕ್ತವಾದ ಯೋಜನೆಗಳನ್ನು ರೂಪಿಸಿಕೊಂಡು ಅಧ್ಯಯನ ನಡೆಸಿದಲ್ಲಿ ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದಷ್ಟೇ ಅಲ್ಲ, ಗರಿಷ್ಠ ಅಂಕಗಳನ್ನು ಪಡೆದುಕೊಂಡು ಒಟ್ಟಾರೆ ಪ್ರತಿಶತ ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು.

ಭಾಷೆಗಳ ಪರೀಕ್ಷೆಗಳಲ್ಲಿ ಉತ್ತರಗಳ ಪ್ರಸ್ತುತಿ ಹಾಗೂ ಕೈಬರಹ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಸ್ಥಿರವಾದ ವೇಗ ಹಾಗೂ ಉತ್ತಮ ಕೈಬರಹದ ಕಡೆಗೆ ಗಮನ ಹರಿಸುವುದು ಬಹುಮುಖ್ಯ.

ಇಂಗ್ಲಿಷ್ ಶಾಲೆಯಲ್ಲಿ ಕೇವಲ ಒಂದು ವಿಷಯವಲ್ಲ, ಬದಲಾಗಿ ಬಹಳಷ್ಟು ದೇಶಗಳ ಆಡುಭಾಷೆ. ಇದಲ್ಲದೆ ನಮ್ಮಲ್ಲೂ ಕೂಡ ಬಹುತೇಕರು ಬಳಸುವ ಭಾಷೆ. ಹಾಗಾಗಿ ಇದನ್ನು ಕೇವಲ ಒಂದು ಪರೀಕ್ಷೆಯ ವಿಷಯವಾಗಲ್ಲದೆ ಭಾಷೆಯಾಗಿ ಅಭ್ಯಾಸ ಮಾಡಿದರೆ ಪ್ರಶ್ನೆಪತ್ರಿಕೆಗೆ ಉತ್ತರಿಸುವುದು ಸುಲಭ.

‘ನಾಲ್ಡೆಜ್‌ ಆಫ್‌ ಲ್ಯಾಂಗ್ವೇಜ್‌ ಈಸ್‌ ದಿ ಡೋರ್‌ವೇ ಟು ವಿಸ್‌ಡಮ್‌’

– ರೋಜರ್‌ ಬೇಕಮ್‌

* ಮೊಟ್ಟ ಮೊದಲನೆಯದಾಗಿ ಎಲ್ಲರಿಗೂ ತಿಳಿದಿರುವ ಹಾಗೆ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಹಾಗೂ ಮಾದರಿ ಪ್ರಶ್ನೆಗಳ ಕಡೆಗೆ ಗಮನಹರಿಸಬೇಕು.

ಈ ರೀತಿಯಾಗಿ ಹೆಚ್ಚುಹೆಚ್ಚು ಪ್ರಶ್ನೆಪತ್ರಿಕೆಗಳನ್ನು ಪರಿಹರಿಸಿದರೆ ಪಠ್ಯಕ್ರಮದಿಂದ ಸಾಮಾನ್ಯವಾಗಿ ಪ್ರಶ್ನೆಗಳನ್ನು ಯಾವ ರೀತಿ ಕೇಳಲಾಗುತ್ತದೆ ಎಂಬ ಪರಿಕಲ್ಪನೆ ಮೂಡುತ್ತದೆ. ಅಲ್ಲದೆ ಪಠ್ಯಕ್ರಮದಿಂದ ಆಚೆಗಿನ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾರರು ಎಂಬುದು ಮನದಟ್ಟಾಗುವುದು. ಹಾಗೆಯೇ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವಾಗ ಪಠ್ಯಪುಸ್ತಕದಲ್ಲಿನ ವಿವರಣೆಗೆ ಪ್ರಾಮುಖ್ಯ ನೀಡಬೇಕೇ ಹೊರತು ಕ್ವೆಶ್ಚನ್ ಬ್ಯಾಂಕ್, ಗೈಡ್ಸ್‌ ಇತ್ಯಾದಿಗಳಿಂದಲ್ಲ. ಏಕೆಂದರೆ ಉತ್ತರ ಪತ್ರಿಕೆಗಳ ಮೌಲ್ಯಮಾಪಕರು ಪಠ್ಯ ಪುಸ್ತಕ ಆಧಾರಿತ ವಿವರಣೆಗಳಿಗೆ ಮಹತ್ವ ನೀಡುವರೆ ಹೊರತು ಇನ್ಯಾವುದೇ ಉತ್ತರಗಳಿಗಲ್ಲ.

* ನಿರ್ದಿಷ್ಟವಾಗಿ ಇಂಗ್ಲಿಷ್ ವಿಷಯದಲ್ಲಿ ಹೇಗೆ ಗರಿಷ್ಠ ಅಂಕಗಳನ್ನು ಗಳಿಸಬಹುದು ಎಂಬ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಪ್ರಶ್ನೆಪತ್ರಿಕೆಯನ್ನು ನೋಡಿದ ತಕ್ಷಣ ಉತ್ತರಿಸಲು ಪ್ರಾರಂಭಿಸದೆ ಪೂರ್ತಿ ಪ್ರಶ್ನೆಪತ್ರಿಕೆಯನ್ನು ಕಡಿಮೆ ಸಮಯದಲ್ಲಿ  ಓದಿದ ನಂತರ ಯಾವ ಪ್ರಶ್ನೆಗಳನ್ನು ಮೊದಲು ಹಾಗೂ ಯಾವ ಪ್ರಶ್ನೆಗಳನ್ನು ನಂತರ ಉತ್ತರಿಸಬೇಕು ಎಂಬುದನ್ನು ನಿರ್ಧರಿಸಿರಿ. ಪರೀಕ್ಷೆಗೂ ಪೂರ್ವದಲ್ಲಿ ಹೆಚ್ಚು ಹೆಚ್ಚು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದಲ್ಲಿ ಸ್ವಾಭಾವಿಕವಾಗಿ ನಾವು ಇದಕ್ಕಾಗಿ ಅತಿ ಕಡಿಮೆ ಸಮಯ ವ್ಯಯಿಸಬಹುದು.

ಸ್ಪಷ್ಟ ಉತ್ತರಕ್ಕೆ ಆದ್ಯತೆ
ಮೊದಲು 1, 2 ಹಾಗೂ 3 ಅಂಕಗಳ ಸ್ಪಷ್ಟವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಸಣ್ಣಪುಟ್ಟ ಗೊಂದಲಗಳಿರುವ ಮತ್ತು ನೆನಪಿಸಿಕೊಳ್ಳಬೇಕಾದಂತಹ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಕಾಲಹರಣ ಮಾಡದೆ ಅದಕ್ಕಾಗಿ ಸೂಕ್ತ ಎನಿಸುವಷ್ಟು ಸ್ಥಳವನ್ನು ಬಿಟ್ಟು ನಾಲ್ಕು ಅಂಕಗಳ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿ. ಅಲ್ಲದೆ ಈ ವೇಳೆ ನಿಮ್ಮ ಸಹಪಾಠಿಗಳು ಸಪ್ಲಿಮೆಂಟ್‌ಗಳನ್ನು ಪಡೆಯುತ್ತಿದ್ದಲ್ಲಿ ನೀವು ಗಾಬರಿಯಾಗದಿರಿ. ಅವರೂ ಸಹ ಇದೇ ರೀತಿಯ ಕ್ರಮಗಳನ್ನು ಅನುಸರಿಸುತ್ತಿರಬಹುದು ಅಥವಾ ಕೈಬರಹ ಚೆನ್ನಾಗಿ ಇಲ್ಲದಿರಬಹುದು ಅಥವಾ ಕೆಲವರ ಅಕ್ಷರಗಳು ದೊಡ್ಡದಾಗಿರಬಹುದು ಅಥವಾ ಪದಗಳ ನಡುವೆ ಸಾಕಷ್ಟು ಸ್ಥಳ ಬಿಟ್ಟು ಬರೆಯುತ್ತಿರಬಹುದು. ಏನೇ ಇರಲಿ ನಿಮ್ಮ ಆತ್ಮವಿಶ್ವಾಸದೊಂದಿಗೆ ನಿಮ್ಮ ಪರೀಕ್ಷೆಯನ್ನು ಬರೆಯುತ್ತಾ ಹೋಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು