ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್ ಸ್ಕೂಲಿಂಗ್:‌ ನಲಿವಿನ ಜೊತೆ ಕಲಿಕೆ

Last Updated 6 ಜೂನ್ 2020, 2:15 IST
ಅಕ್ಷರ ಗಾತ್ರ

ಮೈಸೂರಿನ ಆಕಾಂಕ್ಷಾ ನಾಲ್ಕನೆಯ ತರಗತಿ ಓದುತ್ತಿರುವ ಚುರುಕು ಹುಡುಗಿ. ವಾರಕ್ಕೆರಡು ದಿನ ಬ್ಯಾಡ್ಮಿಂಟನ್ ಅಭ್ಯಾಸಕ್ಕೂ ಹೋಗುತ್ತಿದ್ದಳು. ಅವಳಿಗೆ ಪರೀಕ್ಷೆ ಇನ್ನೇನು ಪ್ರಾರಂಭವಾಗಬೇಕು ಆಗ ಶುರುವಾಯಿತು ಕೋವಿಡ್‌–19 ಅಬ್ಬರ. ಪರೀಕ್ಷೆಯಂತೂ ಇಲ್ಲ, ದೀರ್ಘಾವಧಿ ರಜೆ ಕಳೆದರೂ ತರಗತಿ ಪುನರಾರಂಭವಾಗಿಲ್ಲ. ರಾಜ್ಯ ಸರ್ಕಾರ ಘೋಷಿಸಿದಂತೆ ಜುಲೈ 3ನೇ ವಾರದಲ್ಲಿ ಶಾಲೆ ಪ್ರಾರಂಭವಾದರೂ ಕಳುಹಿಸಲು ಆಕೆಯ ತಾಯಿಗೆ ಧೈರ್ಯವಿಲ್ಲ.

ಕೆಲವು ಕಡೆ ಮಕ್ಕಳಿಗೂ ಕೊರೊನಾ ಸೋಂಕು ತಗುಲಿರುವುದರಿಂದ ಪೋಷಕರ ಈ ಭಯ ಸಹಜವೇ! ಶಾಲೆ ಪ್ರಾರಂಭವಾದರೂ ನಮ್ಮ ದೇಶದಲ್ಲಿ ಸಾಮಾಜಿಕ ಅಂತರ, ಮುಖಗವಸು ಮತ್ತು ಸ್ಯಾನಿಟೈಜೇಶನ್‌ ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಸಾಧ್ಯವೇ? ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚಿನ ಪೋಷಕರಿಗೆ ಧೈರ್ಯವಿರಲಾರದು.

ಬೆಂಗಳೂರು, ಮೈಸೂರು, ಹುಬ್ಬಳಿಯಂತಹ ಪ್ರಮುಖ ನಗರಗಳಲ್ಲದೇ, ತಾಲ್ಲೂಕುಗಳಲ್ಲೂ ಕೂಡ ಹಲವು ಶಾಲೆಗಳು ಆನ್‌ಲೈನ್‌ ಪಾಠ ಮಾಡುವ ಯೋಚನೆಯನ್ನು ಮಾಡಿವೆ. ಕೆಲವು ಶಾಲೆಗಳು ಈಗಾಗಲೇ ಇದನ್ನು ಶುರು ಮಾಡುವೆ. ಆದರೆ ಅಷ್ಟು ಚಿಕ್ಕ ಮಕ್ಕಳು ದಿನದಲ್ಲಿ ನಾಲ್ಕು ಅಥವಾ ಆರು ಗಂಟೆಗಳ ಕಾಲ ಗಣಕ ಯಂತ್ರದ ಮುಂದೆ ಕೂರುವುದು ಕ್ಷೇಮಕರವಲ್ಲ ಎಂದು ನಿಮ್ಹಾನ್ಸ್‌ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಎಲ್ಲವನ್ನೂ ಗಮನಿಸಿದಾಗ ಪ್ರಸಕ್ತ ಪರಿಸ್ಥಿತಿಯಲ್ಲಿ ಹೋಂ ಸ್ಕೂಲ್ ಇದಕ್ಕೆ ಪರಿಹಾರವಾಗಬಹುದೇ? ಹಾಗಾದರೆ ಹೋಂ ಸ್ಕೂಲಿಗೂ ನಾವು ಮಕ್ಕಳನ್ನು ಕಳುಹಿಸುವ ಶಾಲೆಗೂ ವ್ಯತ್ಯಾಸಗಳೇನು? ಅನುಕೂಲ ಅಥವಾ ಅನಾನುಕೂಲಗಳೇನು?

ಸಾಂಪ್ರದಾಯಿಕ ಶಾಲೆಯ ಚಿತ್ರಣ

ಒಂದು ಕೋಣೆಯ ತುಂಬಾ ಮಕ್ಕಳನ್ನು ತುಂಬಿ ಅವರಿಗೆ ಒಬ್ಬ ಶಿಕ್ಷಕಿ ಪಾಠ ಮಾಡಿದಾಗ ಮಕ್ಕಳಿಗೆ ನಿಜಕ್ಕೂ ಎಷ್ಟರ ಮಟ್ಟಿಗೆ ಪಾಠ ಅರ್ಥವಾಗುತ್ತದೆ. ಬಹಳ ದುಬಾರಿಯ ಖಾಸಗಿ ಶಾಲೆಗಳಲ್ಲೂ ಒಂದು ತರಗತಿಗೆ ಇಪ್ಪತು ಮಕ್ಕಳಾದರೂ ಇರುತ್ತಾರೆ. ಅನೇಕ ಶಾಲೆಗಳಲ್ಲಿ ಮಕ್ಕಳನ್ನು ಸುಮ್ಮನಿರಿಸಲು ಬೆತ್ತದ ಪ್ರಯೋಗವೂ ಆಗುತ್ತದೆ.

ಗುರುಕುಲದ ಪದ್ಧತಿ

ಪ್ರಾಚೀನ ಭಾರತದಲ್ಲಿ ಗುರುಕುಲ ಪದ್ಧತಿ ಇತ್ತು. ವಿದ್ಯಾರ್ಥಿಗಳು ಗುರುವಿನ ಜೊತೆಯಲ್ಲಿಯೇ ಇದ್ದು ಅಲ್ಲಿಯೇ ನೇರವಾಗಿ ಅವರಿಂದ ಪಾಠ ಕಲಿಯುತ್ತಿದ್ದರು. ಅವರು ದಿನ ನಿತ್ಯದ ಜೀವನದ ಜೊತೆ ಆಗಿನ ಕಾಲಕ್ಕನುಗುಣವಾಗಿ ಅಧ್ಯಾತ್ಮ ವಿದ್ಯೆಯನ್ನು ಕಲಿಯುತ್ತಿದ್ದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಾಂಪ್ರದಾಯಿಕ ಶಾಲೆಗಳು ಅಂದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಟ್ಟಡದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಹೇಳುವ, ಕೇಳುವ ಪದ್ಧತಿ ಆರಂಭವಾಯಿತು. ನಂತರ ಇದಕ್ಕೆ ಪರ್ಯಾಯವಾಗಿ ಹಲವು ಪ್ರಯೋಗಗಳು ನಡೆದಿವೆ. ಅವುಗಳಲ್ಲಿ ಹೋಂ ಸ್ಕೂಲಿಂಗ್‌ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಹೋಂ ಸ್ಕೂಲಿಂಗ್ ಎಂದರೇನು?

ಈಗ ಮಕ್ಕಳೆಲ್ಲಾ ಕಲಿಯುತ್ತಿರುವ ಸಾಂಪ್ರಾದಾಯಿಕ ಶಾಲೆಗೆ ಪರ್ಯಾಯವಾದ ಪದ್ಧತಿ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಮನೆಯಲ್ಲಿಯೇ ಶಿಕ್ಷಣ ನೀಡುವುದು, ಪಾಠ ಹೇಳಿ ಕೊಡುವುದು. ಶಾಲೆಯಲ್ಲಿ ಕಲಿತಂತೆಯೇ ಕಲಿಯುವುದು. ಆದರೆ ಇಲ್ಲಿ ಮಕ್ಕಳ ಆಸಕ್ತಿಗನುಗುಣವಾಗಿ ಮತ್ತು ವೈಯುಕ್ತಿಕವಾಗಿ ಅವರನ್ನು ಗಮನಿಸಲಾಗುತ್ತದೆ. ಪೋಷಕರೇ ಮಕ್ಕಳಿಗೆ ಹೇಳಿ ಕೊಡುವುದು ಅಥವಾ ಶಿಕ್ಷಕರನ್ನಿಡಬಹುದು

ಹೋಂ ಸ್ಕೂಲ್ ಏಕೆ ಉತ್ತಮ?

* ಪಠ್ಯ ಹಾಗೂ ತರಗತಿ ಸಮಯವನ್ನು ನೀವೇ ನಿರ್ಧರಿಸಬಹುದು.

* ಕಲಿಕೆಯ ಜೊತೆ ತಮಾಷೆ ಬೆರೆಸಬಹುದು.

* ಮಕ್ಕಳಿಗೆ ಯಾವುದು ಸೂಕ್ತವೋ ಅಂತಹ ಕಲಿಕಾ ಪದ್ಧತಿ ಅಳವಡಿಸಬಹುದು.

* ಮಕ್ಕಳಿಗೆ ಯಾವುದು ಕಠಿಣವೋ ಅಂತಹ ವಿಷಯದ ಮೇಲೆ ಹೆಚ್ಚು ವೈಯಕ್ತಿಕ ಗಮನ ನೀಡಲು ಸಾಧ್ಯ.

* ಮಕ್ಕಳಿಗೆ ಅಧ್ಯಾತ್ಮ ಮತ್ತು ನೀತಿಪಾಠಗಳನ್ನು ಹೇಳಬಹುದು.

* ಕೆಲವು ಶಾಲೆಗಳಲ್ಲಿ ನಡೆಯುವಂತಹ ರ‍್ಯಾಗಿಂಗ್‌, ಹಿಂಸೆಯಂತಹ ವಾತಾವರಣದಿಂದ ಕಾಪಾಡಬಹುದು.

* ಸಂಗೀತ, ನೃತ್ಯ, ಕ್ರೀಡೆ ಮೊದಲಾದವುಗಳ ಬಗ್ಗೆ ಮಗುವಿಗೆ ಆಸಕ್ತಿಯಿದ್ದರೆ ಅದರ ಕಲಿಕೆ ಬಗ್ಗೆ ಗಮನ ನೀಡಬಹುದು.

* ಮಗು ತಾನು ಕಲಿಯುವ ಗತಿಯಲ್ಲೇ ಸಾಗಲು ಅವಕಾಶವಿರುತ್ತದೆ., ಕಲಿಸುವ ರೀತಿ ಮತ್ತು ವಿಧಾನದ ಬಗ್ಗೆ ನಿಯಂತ್ರಣವಿರುತ್ತದೆ.

* ಹೋಂ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಮಕ್ಕಳು ಐಐಟಿ ಮತ್ತು ಎಂ.ಐ.ಟಿ.ಗಳಲ್ಲಿ ಸಹ ಪ್ರವೇಶ ಪಡೆದ ನಿದರ್ಶನಗಳಿವೆ.

ಆದರೆ ಹೋಂ ಸ್ಕೂಲ್‌ ಪದ್ಧತಿಯಲ್ಲಿ ಕೆಡುಕು ಅಥವಾ ಅನಾನುಕೂಲಗಳು ಇಲ್ಲವೇ?

ಖಂಡಿತ ಇದೆ. ಅಲ್ಲಿ ಕಲಿಯುವ ಮಕ್ಕಳಿಗೆ ಮಿಕ್ಕ ಮಕ್ಕಳ ಜೊತೆ ಬೆರೆಯುವ ಅವಕಾಶವಿರುವುದಿಲ್ಲ. ಯಾವುದೇ ನಿಯಮಿತ ವ್ಯವಸ್ಥೆ, ಪ್ರಮಾಣೀಕರಿಸುವ ಸಾಧ್ಯತೆ ಕಡಿಮೆ. ಪುಸ್ತಕ ಮತ್ತು ಇತರ ಕಲಿಕಾ ಸಾಮಗ್ರಿಗಳ ಮೇಲೆ ಹೆಚ್ಚು ವ್ಯಯಿಸಬೇಕಾಗುತ್ತದೆ. ಮನೆ ಮತ್ತು ಶಾಲೆಯ ಜೀವನದ ಮಧ್ಯೆ ವ್ಯತ್ಯಾಸವೇ ಇರುವುದಿಲ್ಲ.

ಹೇಳಿಕೊಡುವವರು ಅಥವಾ ಪೋಷಕರು ಎಲ್ಲಾ ವಿಷಯಗಳಲ್ಲಿ ಪರಿಣತರಾಗಿರುವ ಸಾಧ್ಯತೆ ಕಡಿಮೆ. ಪದೇ ಪದೇ ಮಕ್ಕಳಿಗೆ ಪ್ರೇರಣೆ ನೀಡುವುದು ಅಗತ್ಯ. ಅವರು ಹೇಳಿದ್ದನ್ನು ಕೇಳದಿದ್ದಾಗ ಕೋಪ ಬಂದರೂ ನಿಯಂತ್ರಿಸಿಕೊಳ್ಳುವುದನ್ನು ಕಲಿಯಬೇಕು. ಅನಿಯಮಿತ ವೇಳಾ ಪಟ್ಟಿ ಮತ್ತು ಕಲಿಯುವ ವೇಗದಲ್ಲಿ ಕೊರತೆ ಇರುವ ಸಾಧ್ಯತೆ ಇರುತ್ತದೆ.

***

ತನ್ನ ಮತ್ತು ತನ್ನ ಅಕ್ಕನ ಮಕ್ಕಳಿಗೆ ಮನೆಯಲ್ಲಿಯೇ ವಿದ್ಯಾಭ್ಯಾಸ ನೀಡುತ್ತಿರುವ ಬೆಂಗಳೂರಿನ ಹೇತಲ್ ‘ನಾವು ಸಂಪ್ರದಾಯ, ತತ್ವವನ್ನು ಅನುಸರಿಸಲು ಹೋಂ ಸ್ಕೂಲಿಂಗ್ ಮಾಡುತ್ತಿದ್ದೇವೆ’ ಎನ್ನುತ್ತಾರೆ. ‘ಖಂಡಿತ ಇದು ನಮ್ಮ ಸಾಮಾನ್ಯ ಶಾಲೆಗಳಿಗಿಂತಾ ಉತ್ತಮ. ಕೆಲವು ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿರುವುದಿಲ್ಲ, ಆದರೆ ಹೋಂ ಸ್ಕೂಲಿನಲ್ಲಿ ಹಾಗಾಗುವುದಿಲ್ಲ. ನಮ್ಮ ಮಕ್ಕಳ ಆಸಕ್ತಿ, ಅವರು ಕಲಿಯುವ ವೇಗಕ್ಕನುಗುಣವಾಗಿ ಹೇಳಿ ಕೊ ಬಹುದು, ಅವರ ಸಮಸ್ಯೆಗಳನ್ನು ತಿಳಿದುಕೊಂಡು ಅವರಿಗೆ ಪಾಠ ಮಾಡಬಹುದು. ಆದರೆ ಬೇರೆಯ ಮಕ್ಕಳ ಜೊತೆ ಸಾಂಗತ್ಯವಿರುವುದಿಲ್ಲ ಎನ್ನುವುದೊಂದು ಕೊರತೆ ಎನ್ನಬಹುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT