ಭಾನುವಾರ, ಆಗಸ್ಟ್ 25, 2019
24 °C

ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ?

Published:
Updated:
Prajavani

ಶಿಕ್ಷಣ ವ್ಯಾಪಾರೀಕರಣವಾದ ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಬುದ್ಧಿವಂತಿಕೆಯಷ್ಟೇ ಅಲ್ಲದೆ ಪೋಷಕರ ಆರ್ಥಿಕ ಕ್ಷಮತೆಯೂ ನಿರ್ಣಾಯಕ ಪಾತ್ರವಹಿಸುತ್ತದೆ. ಒಂದೆರಡು ದಶಕಗಳ ಹಿಂದಿನವರೆಗೂ, ಪೋಷಕರ ಮನಸ್ಸಿನಲ್ಲಿ ಶಿಕ್ಷಣ ಬಹುದೊಡ್ಡ ಯೋಚನೆ-ಯೋಜನೆಯ ವಿಷಯವಾಗಿರಲಿಲ್ಲ. ಯಾವುದೋ ಸರ್ಕಾರಿ ಶಾಲೆ -ಕಾಲೇಜಿನಲ್ಲಿ ಶಿಕ್ಷಣ ಪಡೆದು ಉತ್ತಮ ಅಂಕಗಳಿಸಿದರೆ ಉದ್ಯೋಗ ಖಾತರಿ ಎಂದು ಯೋಚಿಸಿ ಸುಮ್ಮನಾಗಬಹುದಾಗಿದ್ದ ಆ ಪರಿಸ್ಥಿತಿ ಇಂದು ಇಲ್ಲ. ಎಲ್ಲದಕ್ಕೂ ಸರಿಯಾದ ಪೂರ್ವಾವಲೋಕನ ಇದ್ದರಷ್ಟೇ ನಮ್ಮ ಮಕ್ಕಳ ಶೈಕ್ಷಣಿಕ ಜೀವನ ಉತ್ತಮವಾಗಿ ಸಾಗಿಸಬಹುದು.

ಇಂದಿನ ಮಕ್ಕಳು ಮುಂದೆ ಏನಾದಾರು, ಎಲ್ಲಿ ಅಧ್ಯಯನ ಪಡೆದಾರು ಎಂಬಿತ್ಯಾದಿ ಪ್ರಶ್ನೆಗೆ ಇಂದೇ ಉತ್ತರಿಸುವುದು ತುಸು ಕಷ್ಟವಾದರೂ ಆ ಬಗ್ಗೆ ಆಶಾದಾಯಕ ಯೋಚನೆ-ಯೋಜನೆ ಇದ್ದಾಗಲಷ್ಟೇ ದೈನಂದಿನ ಬದುಕಿನಲ್ಲಿ ಆರ್ಥಿಕ ಸಂವಹನ ಸುಲಭ ಸಾಧ್ಯ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಯುವ ದಂಪತಿಗಳು ಮೊದಲೇ ಉಳಿತಾಯವನ್ನು ಪ್ರಾರಂಭಿಸುವುದು ಮುಖ್ಯವಾಗಿದೆ.

ಹೂಡಿಕೆ ಏಕೆ?

ಶಿಕ್ಷಣ ನಿಧಿಯ ಯೋಜನೆಯಲ್ಲಿ ಕೇವಲ ಕಾಲೇಜಿನ ಬೋಧನಾ ಶುಲ್ಕದ ಬಗ್ಗೆಯಷ್ಟೇ ಅಲ್ಲ, ಊಟ-ವಸತಿ, ಪ್ರಯಾಣಕ್ಕಾಗಿಯೂ ಒಂದಿಷ್ಟು ಮೊತ್ತವನ್ನು ಹೊಂದಿಸಿಡಬೇಕು. ಅನೇಕ ಬಾರಿ ನೀವು ಸಣ್ಣ ಪ್ರಮಾಣದಲ್ಲಿ ಶಿಕ್ಷಣಕ್ಕಾಗಿ ಹೂಡಿಕೆ ಪ್ರಾರಂಭಿಸಬಹುದು. ಆದರೆ ನಿಮ್ಮ ಆದಾಯ ಹೆಚ್ಚಾದಂತೆ, ಉಳಿತಾಯದ ಭಾಗವನ್ನು ಹೆಚ್ಚಿಸುತ್ತಾ ನೀವು ಹಿಂದಿನ ಕೊರತೆಯನ್ನು ನಿಧಾನವಾಗಿ ನೀಗಿಸಬಹುದು. ಒಂದು ವೇಳೆ ಹಾಗೊಂದು ಸಾಧ್ಯತೆಯನ್ನು ಸಫಲಗೊಳಿಸಬೇಕಾದರೂ ನಮ್ಮಲ್ಲಿ ಮೊದಲೇ ಸರಿಯಾದ ಪೂರ್ವ ತಯಾರಿ ಬೇಕು.

ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿವೆ, ಪ್ರವೇಶಕ್ಕಾಗಿಯೂ ಹೆಚ್ಚುತ್ತಿರುವ ಸ್ಪರ್ಧೆಯು ವಿದ್ಯಾರ್ಥಿಗಳನ್ನು ಅಧಿಕ ದುಬಾರಿ ಖಾಸಗಿ ಸಂಸ್ಥೆಗಳತ್ತ ಮುಖ ಮಾಡುವಂತೆ ಒತ್ತಾಯಿಸುತ್ತಿದೆ. ಭವಿಷ್ಯದಲ್ಲಿ ನಿಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಅಗತ್ಯ ಬರಬಹುದು ಅಥವಾ ಜಾಗತಿಕ ಶಿಕ್ಷಣ ಸಂಸ್ಥೆಗಳು ಭಾರತಕ್ಕೆ ಬರಬಹುದು ಮತ್ತು ಆಗ ಶುಲ್ಕಗಳು ತುಂಬಾ ಹೆಚ್ಚಾಗಬಹುದು. ಎಲ್ಲರಿಗೂ ಜೀವನಶೈಲಿಯಲ್ಲಿ ಯಾವುದೇ ರಾಜಿ ಮಾಡದೆ ಏರುತ್ತಿರುವ ಹಣದುಬ್ಬರದೊಡನೆ ತಮ್ಮ ಮಕ್ಕಳ ಶಿಕ್ಷಣ ನಿಭಾಯಿಸಬೇಕಾದ ಅನಿವಾರ್ಯತೆ ಮುಂದೆ ಎದುರಾಗಲಿದೆ. ಇಂತಹ ಪರಿಸ್ಥಿತಿಗಳ ಸಮರ್ಥ ನಿರ್ವಹಣೆಗೆ ಯೋಜಿತ ಹೂಡಿಕೆ ಅಗತ್ಯ.

ಹೂಡಿಕೆ ಯಾವುದರಲ್ಲಿ?

ಹೂಡಿಕೆಗೆ ಅನೇಕ ಅವಕಾಶಗಳಿವೆ. ಒಟ್ಟಿನಲ್ಲಿ ಮುಂದೆ ನಿಮ್ಮ ಹಣದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಉಳಿತಾಯದ ಮೊತ್ತವನ್ನು ಆರ್ಥಿಕ ಕ್ಷೇತ್ರದಲ್ಲಿರುವ ಅವಕಾಶಗಳಿಗೆ ಸರಿಯಾಗಿ ಹೊಂದಿಸಿಕೊಂಡು ಹೂಡಿದರೆ ಬಹುದೊಡ್ಡ ಮೊತ್ತವಾಗಿ ನಿಮಗೆ ಲಭಿಸಲಿದೆ. ಆದರೆ ಈ ನಿಟ್ಟಿನಲ್ಲಿ ಯಾರು ತಮ್ಮ ಆರಂಭಿಕ ಬದುಕಿನಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೋ ಅವರಿಗೆ ತಮ್ಮದೇ ಹೂಡಿಕೆಯ ಬಹು ದೊಡ್ಡ ಮೊತ್ತ ಅಚ್ಚರಿಯ ರೂಪದಲ್ಲಿ ಕಾದಿರುತ್ತದೆ ಎಂಬುದರಲ್ಲಿ ಸಂದೇಹ ಬೇಡ.

ಮ್ಯೂಚುವಲ್ ಫಂಡ್: ನೀವು ನಿಮ್ಮ ಮಕ್ಕಳ ಶಿಕ್ಷಣಕ್ಕೆ ದೀರ್ಘಾವಧಿ ಹೂಡಿಕೆಯನ್ನು ಮಾಡಬಯಸುವುದಾದಲ್ಲಿ ಈಕ್ವಿಟಿ ಫಂಡ್‌ಗಳ ಬಗ್ಗೆ ನೀವು ಆದ್ಯತೆ ಕೊಡಬಹುದು. ಕಾರಣ ದೀರ್ಘಾವಧಿ ಹಂತದಲ್ಲಿ ಮಾರುಕಟ್ಟೆ ಏರುಪೇರು ನಿಮ್ಮನ್ನು ಅಷ್ಟೇನೂ ಬಾಧಿಸದು. ಮಾತ್ರವಲ್ಲ ನಿಮ್ಮ ಹೂಡಿಕೆ ನಿರಂತರ ಏಕಪ್ರಕಾರವಾಗಿರುವುದರಿಂದ ನಿಮಗೆ ಭಾರೀ ಪ್ರಮಾಣದ ಯಾವುದೇ ಹೊಡೆತ ಬೀಳಲಾರದು. ನಿಮ್ಮ ಹಣದ ಅಗತ್ಯ ಸನಿಹಕ್ಕೆ ಬಂದಂತೆ ನೀವು ಡೆಟ್ ಫಂಡ್ ಯೋಜನೆಗೆ ವರ್ಗಾಯಿಸಿ ನಿಶ್ಚಿಂತರಾಗಬಹುದು. ಅಗತ್ಯ ಬಂದಂತೆ ಅದರಿಂದ ಶಿಕ್ಷಣಕ್ಕಾಗಿ ಉಪಯೋಗಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆ : ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒದಗಿಬರುವ ಅತ್ಯುತ್ತಮ ಹೂಡಿಕೆ ಆಯ್ಕೆಗಳಲ್ಲಿ ಬಹು ಮುಖ್ಯವಾದುದು. ಇದು ಅಸಲು ಮೊತ್ತಕ್ಕೆ ಸರ್ಕಾರ ಒದಗಿಸುವ ಭದ್ರತೆಯೊಂದಿಗೆ ತೆರಿಗೆ-ಮುಕ್ತ ಬಡ್ಡಿದರವನ್ನೂ ಪಾವತಿಸುತ್ತದೆ. ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‍ನಲ್ಲಿ ಈ ಖಾತೆಯನ್ನು ತೆರೆಯಬಹುದು. ಹತ್ತು ವರ್ಷದೊಳಗಿನ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಇದನ್ನು ತೆರೆಯಬಹುದು. ಹೆಣ್ಣು ಮಗುವಿಗೆ 18 ತುಂಬಿದಾಗ
ಶೇ 50 ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕಾಗಿ ನಗದೀಕರಿಸುವ ಅವಕಾಶವಿರುತ್ತದೆ ಹಾಗೂ 21 ನೇ ವಯಸ್ಸಿನಲ್ಲಿ ಸಂಪೂರ್ಣ ಮೊತ್ತ ಲಭಿಸುತ್ತದೆ. ವಾರ್ಷಿಕವಾಗಿ ಒಂದು ಸಾವಿರ ರೂಪಾಯಿಗಳಿಂದ ತೊಡಗಿ 1.5 ಲಕ್ಷದ ತನಕ ಈ ಖಾತೆಗೆ ಹಣ ಜಮಾ ಮಾಡುವ ಅವಕಾಶ ಇರುತ್ತದೆ. ಮೊದಲ 14 ವರ್ಷ ಈ ಖಾತೆಗೆ ನಿರಂತರ ಹಣ ಹೂಡಬೇಕು. ಅಸಲು ಹಾಗೂ ಶೇ 8.5 ರ ಬಡ್ಡಿ ದರದಲ್ಲಿ 21ನೇ ವರ್ಷದಲ್ಲಿ ಸಂಪೂರ್ಣ ಮೊತ್ತ ಸಿಗುತ್ತದೆ. ವಾರ್ಷಿಕವಾಗಿ 1.5 ಲಕ್ಷಗಳಂತೆ ಹೂಡಿಕೆ ಮಾಡಿದ ಮೊತ್ತ 14 ವರ್ಷಗಳ ತರುವಾಯ ಸುಮಾರು 41 ಲಕ್ಷವಾಗಿರುತ್ತದೆ, 21 ವರ್ಷಗಳ ತರುವಾಯ 72 ಲಕ್ಷಗಳಾಗುತ್ತದೆ ಎಂಬುದನ್ನು ನೆನಪಿಡಿ.

ಮಕ್ಕಳ ಶೈಕ್ಷಣಿಕ ವಿಮಾ ಯೋಜನೆ: ಮಕ್ಕಳ ಶೈಕ್ಷಣಿಕ ವಿಮಾ ಯೋಜನೆಯ ಮೂಲ ಉದ್ದೇಶವೆಂದರೆ, ಯಾವುದೇ ಸಂದರ್ಭದಲ್ಲಿ ಪಾಲಿಸಿ ತೆಗೆದುಕೊಂಡ ಪೋಷಕರು ಮೃತರಾದರೆ ಉಳಿದ ಪಾಲಿಸಿ ಕಂತುಗಳನ್ನು ವಿಮಾ ಕಂಪನಿಯೇ ಭರಿಸುತ್ತದೆ. ಇದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸದ ನಿರಂತರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ನಿಗದಿಪಡಿಸಿದ ವರ್ಷ ಕಳೆದ ಬಳಿಕ ಈ ಮೊತ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಲಭ್ಯವಾಗುತ್ತದೆ. ಮಾತ್ರವಲ್ಲ ಇದರ ಭದ್ರತೆಯ ಮೇಲೆ ಅಗತ್ಯ ಬಿದ್ದರೆ ಸಾಲವನ್ನೂ ಪಡೆಯಬಹುದು. ಪೋಷಕರಿಗೆ ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ತೆರಿಗೆ ವಿನಾಯಿತಿಯೂ ಸಿಗುತ್ತದೆ. ಸಾಮಾನ್ಯವಾಗಿ ಪಾಲಿಸಿ ಕಂತಿನ ಹತ್ತು ಪಟ್ಟು ವಿಮಾ ಭದ್ರತೆ ದೊರೆಯುತ್ತದೆ. ಹೀಗಿದ್ದರೂ ಯಾವುದೇ ವಿಮಾ ಯೋಜನೆಗಳನ್ನು ನಿಧಿ ಸಂಗ್ರಹಿಸುವ ಹೂಡಿಕೆಗೆ ಪರ್ಯಾಯ ಮಾರ್ಗವೆಂದು ತಿಳಿಯಬಾರದು. ಹೀಗಾಗಿ ಇದೂ ನಿಮ್ಮ ಒಟ್ಟು ಹೂಡಿಕೆಯ ಭಾಗವಾಗಿರಲಿ.

ಇತರ ಹೂಡಿಕೆಗಳು: ಮೇಲೆ ಹೇಳಿದ ಹೂಡಿಕೆ ಮಾಡಿದ ನಂತರ ಉಳಿದ ಒಂದಿಷ್ಟು ಮೊತ್ತವನ್ನು ಪಿಪಿಎಫ್, ಬ್ಯಾಂಕ್ ಠೇವಣಿ ಮತ್ತು ತೆರಿಗೆ ಮುಕ್ತ ಬಾಂಡ್‌ಗಳಂತಹ ಸುರಕ್ಷಿತ ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ಠೇವಣಿಗಳ ಬಡ್ಡಿಯ ಮೇಲೆ ಸಾಮಾನ್ಯವಾಗಿ ತೆರಿಗೆ ಇರುತ್ತದೆ, ಆದರೆ ಐದು ವರ್ಷಗಳ ತೆರಿಗೆ ಠೇವಣಿ ಇಡುವುದರಿಂದ ಉಳಿತಾಯದ ಜೊತೆಗೆ ಒಂದಿಷ್ಟು ತೆರಿಗೆ ವಿನಾಯ್ತಿಯೂ ಸಿಗುತ್ತದೆ.

ಪೂರ್ವ ಯೋಜನೆ ಹೇಗಿರಬೇಕು ?

ಯಾವುದೇ ಹೂಡಿಕೆಯನ್ನು ಪ್ರಾರಂಭಿಸುವ ಮೊದಲು ಮೂರು ವಿಚಾರಗಳನ್ನು ನಿಗದಿಪಡಿಸಬೇಕು. ಭವಿಷ್ಯದಲ್ಲಿ ಅಗತ್ಯವಿರುವ ಮೊತ್ತ, ನಮ್ಮ ಕೈಯಲ್ಲಿರುವ ಸಮಯ ಹಾಗೂ ಮಾಸಿಕ ಹೂಡಿಕೆಯ ನಮ್ಮ ಸಾಮರ್ಥ್ಯ. ಹೂಡಿಕೆಗೆ ಉಳಿತಾಯವಾಗುವ ಮೊತ್ತ ಎಷ್ಟಿರಬೇಕೆಂದು ನಿಗದಿಪಡಿಸುವ ಮೊದಲು ನಿಮ್ಮ ಆದಾಯ ಹಾಗೂ ಖರ್ಚಿನ ಸರಿಯಾದ ಮಾಹಿತಿ ಇತರರಿಗಿಂತ ನಿಮಗೆ ಸ್ಪಷ್ಟವಾಗಿ ತಿಳಿದಿರುವ ಕಾರಣ ನೀವೇ ಅದನ್ನು ಇತರರಿಗಿಂತ ಸಮರ್ಥವಾಗಿ ಯೋಜಿಸಬಹುದು.

ಶಿಕ್ಷಣಕ್ಕಾಗಿ ಕಾರ್ಪಸ್ ರಚಿಸುವ ಅವಶ್ಯಕತೆಯ ಬಗ್ಗೆ ಅನೇಕ ಪೋಷಕರು ತಿಳಿದಿದ್ದರೂ ಸಹ, ಹೆಚ್ಚಿನ ಪೋಷಕರು ತಮ್ಮ ಮಗುವಿನ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಅಂದಾಜು ಮಾಡುವಲ್ಲಿ ಗೊಂದಲಕ್ಕೀಡಾಗುತ್ತಾರೆ. ಅಂದಾಜು ಕಷ್ಟಕರವಾಗಿಸುವ ಎರಡು ಅಂಶಗಳಿವೆ - ಮೊದಲನೆಯದು, ಇದು ದೀರ್ಘಾವಧಿಯ ಗುರಿ ಮತ್ತು ಎರಡನೆಯದು, ಮಗು ಯಾವ ಕೋರ್ಸ್ ಅನ್ನು ಆರಿಸಿಕೊಳ್ಳುತ್ತದೆ ಎಂಬುದು ಇಂದೇ ಅವರು ಊಹಿಸುವುದು ಬಹಳ ಕಷ್ಟ. ಅದೇನೇ ಇದ್ದರೂ ಸಾಮಾನ್ಯ ಅಂದಾಜಿನ ಪ್ರಕಾರ ಇಂದಿನ ವೆಚ್ಚ ಪ್ರತಿ ಐದಾರು ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತದೆ ಎನ್ನುವ ವಾಸ್ತವವನ್ನು ಅರಿತು ಅದಕ್ಕೆ ತಕ್ಕಂತೆ ಹೂಡಿಕೆ ಮಾಡುವುದು ಸಮಯೋಚಿತ.

Post Comments (+)