ಗುರುವಾರ , ಏಪ್ರಿಲ್ 2, 2020
19 °C

ಉತ್ತರ ಬರೆಯುವ ಬಗೆ ಹೇಗೆ?

ಎಲ್ಲಪ್ಪ ಜಿ. ವೆಂಕಟಾಪುರ್ Updated:

ಅಕ್ಷರ ಗಾತ್ರ : | |

Prajavani

ಎಷ್ಟೇ ಚೆನ್ನಾಗಿ ಓದಿದರೂ ಪರೀಕ್ಷೆ ಸಮೀಪಿಸಿದಂತೆ ಹಲವು ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಆವರಿಸುವುದು ಸಹಜ. ಆದರೆ ಪರೀಕ್ಷೆಯೆಂಬುದು ಹೆದರಿಕೆ ಉಂಟು ಮಾಡುವುದಲ್ಲ, ಬದಲಾಗಿ ‘ಕಲಿಕೆಯನ್ನು ಸಂಭ್ರಮಿಸುವ ಹೊತ್ತಿದು’ ಎಂದು ಭಾವಿಸಿದರೆ ಮನಸ್ಸು ಆದಷ್ಟು ನಿರಾಳವಾಗಿರುತ್ತದೆ. ವರ್ಷ ಪೂರ್ತಿಯಾಗಿ ಅನುಭವಿಸಿದ ಕಲಿಕೆಯನ್ನು ಬರಹದ ಮೂಲಕ ವ್ಯಕ್ತಪಡಿಸುವ ಸುಸಂದರ್ಭವಿದು. ಇದು ಒಂದು ವೇದಿಕೆ ಅಷ್ಟೇ. ಒಂದು ಹಂತವನ್ನು ದಾಟುವ ಮಾರ್ಗವೆಂದು ತಿಳಿದುಕೊಂಡರೆ ಪರೀಕ್ಷೆಯನ್ನು ಒತ್ತಡವಿಲ್ಲದೆ ಎದುರಿಸಬಹುದು. ಇಲ್ಲಿ ಒತ್ತಡದ ಜೊತೆ, ಗೊಂದಲ, ಗಾಬರಿ ಮುಂತಾದ ಮಾನಸಿಕ ತಳಮಳಗಳನ್ನು ದೂರವಿಡುವುದು ಒಳಿತು.

ಉತ್ತರ ಬರೆಯುವುದು ಹೇಗೆ?

ಪರೀಕ್ಷೆಯ ಅಂತಿಮ ದಿನಗಳಿಗೆ ಬಂದು ತಲುಪಿದ್ದೇವೆ ಎಂದಿಟ್ಟುಕೊಳ್ಳೋಣ. ಈ ಸಮಯದಲ್ಲಿ ಓದಿಕೊಂಡಿರುವ ವಿಷಯವನ್ನು ಉತ್ತರ ಪತ್ರಿಕೆಗೆ ತರುವುದು ಹೇಗೆ? ಒಂದು ವರ್ಷದಲ್ಲಿ ಸುಮಾರು 240 ದಿನಗಳ ಕಾಲ ತರಗತಿ ಒಳಗೆ ಕುಳಿತು ಪಾಠವನ್ನು ಅಥವಾ ವಿಷಯವನ್ನು ಕಲಿತುಕೊಂಡಿರುತ್ತೇವೆ. ಹಾಗೆ ಕಲಿತು ದಕ್ಕಿಸಿಕೊಂಡ ವಿಷಯವನ್ನು ಕೆಲವೇ ಗಂಟೆಗಳೊಳಗೆ ಉತ್ತರ ಪತ್ರಿಕೆಯ ಮೇಲೆ ತರುವ ಕಲೆಯನ್ನು ಅರಗಿಸಿಕೊಳ್ಳಲು ಈ ಕೆಳಗಿನಂತೆ ಮುಖ್ಯಾಂಶಗಳನ್ನು ಪಟ್ಟಿ ಮಾಡಲಾಗಿದೆ. ಉದಾಹರಣೆಗೆ ಪ್ರಥಮ ಭಾಷೆ ಕನ್ನಡ ಒಟ್ಟು 100 ಅಂಕದ ಪ್ರಶ್ನೆ ಪತ್ರಿಕೆ. ಇಲ್ಲಿ ಒಂದು ಅಂಕದಿಂದ 5 ಅಂಕಗಳವರೆಗಿನ ಪ್ರಶ್ನೆಗಳು ಮತ್ತು ಪ್ರಶ್ನಾನುಸಾರವಾಗಿ ಟಿಪ್ಸ್ ನೀಡಲಾಗಿದೆ.

ಒಂದು ಅಂಕ

*ಬಹು ಆಯ್ಕೆ ಮಾದರಿ: ಸೂಕ್ತ ಮತ್ತು ನಿರ್ದಿಷ್ಟವಾದ ಉತ್ತರವನ್ನು ಕ್ರಮಾಕ್ಷರ ಸಹಿತ ಉತ್ತರಿಸುವುದು.

*ಸಂಬಂಧೀಕರಿಸುವುದು: ಮೊದಲೆರಡು ಪದಗಳಿಗೆ ಸಂಬಂಧವಿದೆ. ಅಂತೆಯೇ ಮೂರನೇ ಪದಕ್ಕೆ ಉತ್ತರ ಬರೆಯುವುದು.

*ಒಂದು ವಾಕ್ಯ: ಉತ್ತರವೂ ಒಂದು ಪದ ಇಲ್ಲವೇ ವಾಕ್ಯವಾಗಿರುತ್ತದೆ.

ಎರಡು ಅಂಕ

ಎರಡು- ಮೂರು ವಾಕ್ಯಗಳಲ್ಲಿ ಪ್ರಶ್ನೆಗೆ ನೇರವಾಗಿ, ನಿಖರವಾಗಿ ಉತ್ತರಿಸುವುದು.

ಮೂರು ಅಂಕ

*ಸಂದರ್ಭ: ಆಯ್ಕೆ ಬರೆಯುವುದು, ಹೇಳಿಕೆಯ ಸಂದರ್ಭ, ಹೇಳಿಕೆಯ ಸ್ವಾರಸ್ಯವನ್ನು ಅರ್ಥಪೂರ್ಣವಾಗಿ ಅರ್ಥೈಸುವುದು.

*ಕೃತಿಕಾರರ ಪರಿಚಯ: ವಾಕ್ಯ ರೂಪದಲ್ಲಿ ಕಾಲ, ಸ್ಥಳ, ಕೃತಿ ಮತ್ತು ಪ್ರಶಸ್ತಿಗಳನ್ನು ಬರೆಯುವುದು.

*ಅಲಂಕಾರ: ಲಕ್ಷಣ, ಅಲಂಕಾರದ ಹೆಸರು, ಉಪಮೇಯ, ಉಪಮಾನ, ಸಮನ್ವಯಗೊಳಿಸುವ ಕ್ರಮ.

*ಗಾದೆ: ಗಾದೆಯ ಹಿನ್ನೆಲೆ, ಅರ್ಥ ಮತ್ತು ಗಾದೆ ವಿಸ್ತರಣೆ ಉದಾಹರಣೆಯೊಂದಿಗೆ ಇಲ್ಲವೇ ದೃಷ್ಟಾಂತದೊಂದಿಗೆ ಉತ್ತರಿಸುವುದು.

*ಛಂದಸ್ಸು: ಛಂದಸ್ಸಿನ ನಿಯಮಾನುಸಾರವಾಗಿ ಪ್ರಸ್ತಾರ ಹಾಕುವುದು, ಗಣ ವಿಂಗಡಿಸುವುದು, ಛಂದಸ್ಸಿನ ಹೆಸರು ಬರೆಯುವುದು.

ನಾಲ್ಕು ಅಂಕ

*8– 10 ವಾಕ್ಯ: ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು. ಸಮಗ್ರವಾದ ಉತ್ತರ ಬಯಸುವಂತೆ ಇದ್ದರೆ ಎಲ್ಲಾ ವಿಷಯಗಳನ್ನು ಒಳಗೊಳ್ಳುವಂತೆ ಇಡಿಯಾಗಿ ಉತ್ತರಿಸುವುದು.

*ಕಂಠ ಪಾಠ ಪದ್ಯ: ನಾಲ್ಕು ಸಾಲಿನ ಪದ್ಯ ಭಾಗವನ್ನು ತಪ್ಪಿಲ್ಲದಂತೆ ಬರೆಯುವುದು. ಸೂಕ್ತವಾದ ಪದ್ಯವನ್ನು ಆರಿಸಿಕೊಳ್ಳುವುದು.

*ಸಾರಾಂಶ ಮೌಲ್ಯ ಗುರುತಿಸುವುದು: ಮೊದಲಿಗೆ ಕವಿ ಮತ್ತು ಆ ಪದ್ಯದ ಶೀರ್ಷಿಕೆಯನ್ನು ಬರೆಯುವುದು. ಪದ್ಯದಲ್ಲಿ ಅಡಕವಾಗಿರುವ ಅರ್ಥವನ್ನು ನಿರೂಪಿಸುವುದು. ಕೊನೆಗೆ ಅದರ ಮೌಲ್ಯವನ್ನು ಗುರುತಿಸಿ ಬರೆಯುವುದು.

*ಅಪಠಿತ ಗದ್ಯ: ಇಡೀ ಪಠ್ಯವನ್ನು ಇಡಿಯಾಗಿ ಗ್ರಹಿಸುವುದು. ಸೂಚಿಸಿದ ಪ್ರಶ್ನೆಗಳಿಗೆ ಉತ್ತರದ ಭಾಗವನ್ನು ಆರಿಸಿ ಬರೆಯುವುದು.

ಐದು ಅಂಕ

*ಪತ್ರಲೇಖನ: ಪತ್ರಲೇಖನದ ಹಂತಗಳನ್ನು ನಿಯಮಿತ ಸ್ಥಳಗಳಲ್ಲಿ ಬರೆಯುವುದು. ಇವರಿಂದ, ಇವರಿಗೆ, ಸ್ಥಳ ಮತ್ತು ದಿನಾಂಕ ಸಂಬೋಧನೆ, ವಿಷಯ, ಪತ್ರದ ಒಡಲು, ಸಹಿಯೊಂದಿಗೆ ಮುಕ್ತಾಯ. ಇದರ ಜೊತೆಗೆ ಬರವಣಿಗೆ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು.

ಇದೊಂದು ಮಾದರಿ ಅಷ್ಟೆ. ವಿದ್ಯಾರ್ಥಿಗಳು ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ಅಭ್ಯಾಸ ಮಾಡಿದರೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ.

ಪ್ರಬಂಧ

ಮೂರು ಹಂತಗಳ ಮೆಟ್ಟಿಲಿದು. ಸೂಕ್ತವಾದ ವಿಷಯವನ್ನು ಆರಿಸಿಕೊಳ್ಳುವುದು ಒಂದು ಜಾಣ್ಮೆ. ಈ ಬರವಣಿಗೆಯನ್ನು ಹಕ್ಕಿ ಗೂಡು ಕಟ್ಟುವುದಕ್ಕೆ ಹೋಲಿಸಬಹುದು. ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುವಾಗ ಸೂಕ್ತ ಸ್ಥಳವನ್ನು ಗುರುತಿಸಿಕೊಳ್ಳುತ್ತದೆ. ಗೂಡು ಹೆಣೆಯಲು ಬೇಕಾಗುವ ಗರಿ, ನಾರು, ಕಟ್ಟಿಗೆ ಪರಿಕರಗಳು ಸಿಗುವ ಪರಿಸರದಲ್ಲಿ ಬಂದು ಕಟ್ಟುವ ಕೌಶಲದಂತೆ ಈ ಪ್ರಬಂಧ ಬರೆಯುವುದು.

ಪೀಠಿಕೆ- ಹಕ್ಕಿ ಸ್ಥಳವನ್ನು ಆಯ್ಕೆ ಮಾಡುವಂತೆ ಆರಿಸಿಕೊಂಡ ವಿಷಯವೊಂದರ ಪ್ರವೇಶ /ಪರಿಚಯ ಮಾಡಿಕೊಡುವುದು; ನಿರೂಪಣೆ- ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತಂದಂತೆ ವಿಷಯವನ್ನು ಸೂಕ್ತ ಲೇಖನ, ಚಿಹ್ನೆಗಳನ್ನು ಬಳಸಿ ಚರ್ಚೆ ಇಲ್ಲವೇ ತಾರ್ಕಿಕವಾಗಿ ನಿರೂಪಿಸುವುದು. ಉಪಸಂಹಾರ- ಗೂಡಿನ ವಿನ್ಯಾಸ ಪೂರ್ಣಗೊಂಡ ಮೇಲೆ ಸೂಕ್ಷ್ಮವಾಗಿ ಮತ್ತೊಂದು ಹೆಣಿಗೆಯನ್ನು ಹಾಕುತ್ತದೆ. ಹಾಗೆ ಇಲ್ಲಿ ಅಂತಿಮವಾಗಿ ಸಾರ್ವತ್ರಿಕವಾಗಿ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು