ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಗೆ ಸೇರುವ ಆಸೆ...

Last Updated 18 ಡಿಸೆಂಬರ್ 2019, 6:37 IST
ಅಕ್ಷರ ಗಾತ್ರ

ನನಗೆ ನೌಕಾಪಡೆ (ನೇವಿ) ಸೇರಬೇಕೆಂಬ ಆಸೆಯಿದೆ. ಹೀಗಾಗಿ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡು ನಂತರ ಸಿಇಟಿ ಬರೆಯುವೆ. ಆದರೆ ನೇವಿ ಸೇರಲು ಸಾಧ್ಯವಾಗದಿದ್ದರೆ ಮುಂದೇನು ಮಾಡಲಿ?

ವಾಣಿ ಕೆ.ಬಿ., ಊರು ಇಲ್ಲ

ವಾಣಿ, ಮುಂದಿನ ಶಿಕ್ಷಣ ಮತ್ತು ವೃತ್ತಿಯ ಕುರಿತು ಯೋಚಿಸುವಾಗ ಯಾವಾಗಲೂ ಒಂದಕ್ಕಿಂತ ಹೆಚ್ಚು ವಿಕಲ್ಪಗಳ ಬಗ್ಗೆಯೂ ಯೋಚಿಸುವುದು ಮುಖ್ಯ. ಪಿಯುಸಿ ವಿಜ್ಞಾನದ ನಂತರ ನಿಮಗೆ ಹೇರಳವಾದ ಅವಕಾಶಗಳಿವೆ. ಆದರೆ ಅದಕ್ಕಿಂತ ಮುಂಚೆ, ಭಾರತೀಯ ನೌಕಾಸೇನೆಯನ್ನು ನೀವು ಸೇರಲು ಬಯಸುತ್ತಿರುವುದಕ್ಕೆ ಕಾರಣ ಏನು ಎಂದು ಆಲೋಚಿಸಿ. ನೌಕಾಪಡೆ ವಿಷಯದ ಮೇಲಿನ ಆಸಕ್ತಿಯೇ? ದೇಶ ಸೇವೆ ಮಾಡುವ ಹಂಬಲವೇ? ಅಥವಾ ಬೇರೆ ಯಾವುದು ಸ್ಫೂರ್ತಿ ಎಂದು ಸ್ಪಷ್ಟಪಡಿಸಿಕೊಳ್ಳಿ. ಅದರ ಹಿನ್ನೆಲೆಯಲ್ಲಿ ನೀವು ನೌಕಾಪಡೆಗೆ ಸೇರಲು ಆಗದಿದ್ದಲ್ಲಿ ಬೇರೆ ಯಾವ ಕ್ಷೇತ್ರ ನಿಮಗೆ ಆಸಕ್ತಿದಾಯಕ ಎಂದು ಹುಡುಕಾಟ ನಡೆಸಿ. ಆ ಕ್ಷೇತ್ರಕ್ಕೆ ಸೇರಲು ಏನು ವಿದ್ಯಾರ್ಹತೆ ಬೇಕು, ಅದು ನಿಮ್ಮ ಪಿಯುಸಿ ವಿಜ್ಞಾನ ವಿಷಯಕ್ಕೆ ಪೂರಕವಾಗಿದೆಯೇ, ಆ ಕ್ಷೇತ್ರದಲ್ಲಿನ ಉದ್ಯೋಗಾವಕಾಶ, ಬೆಳವಣಿಗೆ, ಸಂಬಳ ಇತ್ಯಾದಿ ಎಲ್ಲವನ್ನೂ ತಿಳಿದುಕೊಳ್ಳಿ. ಅದರಂತೆ ನಿಮ್ಮ ಓದಿನ ಗುರಿಯನ್ನು ನಿರ್ಧರಿಸಿಕೊಳ್ಳಿ.

ನಾನು ಮೂಲತಃ ಶ್ರೀಲಂಕಾದವನು. ನಾನು ಎ/ಐ ಕಾಮರ್ಸ್‌ ಮಾಡಿದ್ದೇನೆ. ಅಂದರೆ ಇದು ಭಾರತದಲ್ಲಿನ ಕಾಮರ್ಸ್‌ನಲ್ಲಿ ಪಿಯುಸಿಗೆ ಸಮ. ಆದರೆ ನನಗೆ ಎಂ.ಬಿ.ಬಿ.ಎಸ್‌. ಮಾಡಿ ಉತ್ತಮ ಸೇವೆ ಮಾಡಬೇಕೆಂಬ ಆಸೆ ಇದೆ. ಆದರೆ ಈಗ ನನಗೆ ಯಾವ ಅವಕಾಶಗಳೂ ಸಿಗುತ್ತಿಲ್ಲ. ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು? ಯಾವುದಾದರೂ ಮಾರ್ಗ ಇದೆಯೇ? ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದರೆ ಎಂ.ಬಿ.ಬಿ.ಎಸ್‌. ಮಾಡಲು ಅವಕಾಶ ಇದೆಯೇ ಎಂದು ತಿಳಿಸಿ.

ಆಲ್ಹಾಮ್‌, ಊರು ಇಲ್ಲ.

ಆಲ್ಹಾಮ್, ಮೊದಲು ನೀವು ತಿಳಿದುಕೊಳ್ಳಬೇಕಾಗಿರುವ ವಿಷಯವೇನೆಂದರೆ ಎಂ.ಬಿ.ಬಿ.ಎಸ್. ಶಿಕ್ಷಣ ಮಾಡಲು ಪದವಿಪೂರ್ವ ಹಂತದಲ್ಲಿ ಕಡ್ಡಾಯವಾಗಿ ವಿಜ್ಞಾನ ವಿಷಯವನ್ನು, ಅದರಲ್ಲೂ ಜೀವಶಾಸ್ತ್ರವನ್ನು ಕಡ್ಡಾಯವಾಗಿ ಓದಿರಬೇಕು. ಹಾಗಾಗಿ ನಿಮ್ಮ ಎ/ಐ ಕಾಮರ್ಸ್‌ನ ಆಧಾರದ ಮೇಲೆ ಎಂ.ಬಿ.ಬಿ.ಎಸ್.ಗೆ ಪ್ರವೇಶಾತಿ ಪಡೆಯಲು ಆಗುವುದಿಲ್ಲ. ನಿಮಗೆ ವೈದ್ಯಕೀಯ ವಿಷಯ ಓದುವ ಆಸಕ್ತಿ ಬಹಳವಿದ್ದರೆ ಮತ್ತೆ ನೀವು ನಿಮ್ಮ ಪದವಿಪೂರ್ವ ಶಿಕ್ಷಣವನ್ನು ವಿಜ್ಞಾನದಲ್ಲಿ ಓದಬೇಕಾಗುತ್ತದೆ. ಅದಾದ ಮೇಲೆ, ನೀವು ಶ್ರೀಲಂಕಾದ ಪ್ರಜೆ ಆಗಿದ್ದಲ್ಲಿ ಆ ಆಧಾರದ ಮೇಲೆ ಪ್ರವೇಶಾತಿಯನ್ನು ಕೋರಬೇಕಾಗುತ್ತದೆ.

ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಕೆಲವು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆಯುಷ್ ಸ್ಕಾಲರ್‌ಶಿಪ್ ಯೋಜನೆಯ ಅಡಿಯಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ವಿಷಯದಲ್ಲಿ ವೈದ್ಯಕೀಯ ಪದವಿ ಓದಲು ಸ್ಕಾಲರ್‌ಶಿಪ್ ಕೊಡಲಾಗುತ್ತದೆ. ನೀವು ಮೂಲತಃ ಶ್ರೀಲಂಕಾದವರೆಂದು ಹೇಳಿದ್ದರೂ ಸದ್ಯ ನಿಮ್ಮ ಪೌರತ್ವದ ಸ್ಥಿತಿ ಏನು ಎಂಬುದನ್ನು ನೀವು ಹೇಳದೆ ಇರುವುದರಿಂದ ನಿಮಗೆ ನಿಖರವಾದ ಮಾಹಿತಿ ನೀಡುವುದು ಕಷ್ಟ. ಅದಕ್ಕಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ರಾಯಭಾರ ಕಚೇರಿಯ ಈ ವೆಬ್‌ಸೈಟ್‌ನ ಲಿಂಕ್‌ ಅನ್ನು ಪರಿಶೀಲಿಸಿ. https://www.cgijaffna.gov.in ಹಾಗೆ ರಾಯಭಾರ ಕಚೇರಿಗೆ (cul.jaffna@mea.gov.in) ಇಮೇಲ್ ಸಂದೇಶ ಕಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆಯಿರಿ. ಶುಭಾಶಯ.

ಬಿ.ಇ. ನಂತರ ಸ್ನಾತಕೋತ್ತರ ಕೋರ್ಸ್‌ ಬಗ್ಗೆ ನನ್ನ ಪ್ರಶ್ನೆ. ಮೆಕ್ಯಾನಿಕಲ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದೇನೆ. ಈಗ ಇಂಡಸ್ಟ್ರಿಯಲ್‌ ರಿಲೇಷನ್ಸ್‌, ಲೇಬರ್‌ ಮ್ಯಾನೇಜ್‌ಮೆಂಟ್‌, ಲೇಬರ್‌ ವೆಲ್‌ಫೇರ್‌ ಅಥವಾ ಪರ್ಸನಲ್‌ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದಲು ಸಾಧ್ಯವೇ? ಬೆಂಗಳೂರಿನಲ್ಲಿರುವ ಕಾಲೇಜು, ಕೋರ್ಸ್‌ ಅವಧಿ ತಿಳಿಸಿ. ಇದಲ್ಲದೇ ಈ ಕೋರ್ಸ್‌ಗಳನ್ನು ದೂರ ಶಿಕ್ಷಣದ ಮೂಲಕ ಪಡೆಯಲು ಸಾಧ್ಯವೇ?

ಸಂಜು, ಊರು ಇಲ್ಲ

ಸಂಜು, ನೀವು ಓದಿದ್ದು ಎಂಜಿನಿಯರಿಂಗ್ ಪದವಿ ಆಗಿರುವುದರಿಂದ ನಿಮ್ಮ ಪದವಿ ಶಿಕ್ಷಣದ ವಿಷಯಗಳ ಆಧಾರದ ಮೇಲೆ ಓದಬಹುದಾದ ಸ್ನಾತಕೋತ್ತರ ಪದವಿಗಳನ್ನು ಮಾಡಬಹುದು. ಮಾತ್ರವಲ್ಲದೆ ಯಾವುದೇ ಪದವಿಯನ್ನು ಅರ್ಹತೆಯಾಗಿ ಪರಿಗಣಿಸುವ ಸ್ನಾತಕೋತ್ತರ ಪದವಿಗಳನ್ನು ಕೂಡ ಮಾಡಬಹುದು.

ಇನ್ನು ನೀವು ಆಸಕ್ತಿ ತೋರಿಸಿರುವ ವಿಷಯಗಳನ್ನು ನಿಮ್ಮ ಬಿ.ಇ. ಪದವಿಯ ಆಧಾರದ ಮೇಲೆ ಮಾಡಬಹುದು. ಈ ವಿಷಯಗಳಲ್ಲಿ ಪಿ.ಜಿ. ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಮಾಡಬಹುದು. ಪಿ.ಜಿ. ಡಿಪ್ಲೋಮಾ ಒಂದು ವರ್ಷದ ಅವಧಿಯದ್ದಾಗಿರುತ್ತದೆ ಮತ್ತು ಸ್ನಾತಕೋತ್ತರ ಪದವಿ ಎರಡು ವರ್ಷದ ಅವಧಿಯದ್ದಾಗಿರುತ್ತದೆ. ಈ ಕ್ಷೇತ್ರ ನಿಮ್ಮ ಪದವಿ ಕ್ಷೇತ್ರಕ್ಕೆ ಸಂಬಂಧಿಸದ ಕ್ಷೇತ್ರವಾದ್ದರಿಂದ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಮಾಡುವುದೇ ಉತ್ತಮ. ನೀವು ಈ ವಿಷಯಗಳನ್ನು ದೂರ ಶಿಕ್ಷಣದಲ್ಲಿ ಓದಬಹುದು.

ನೀವು ಪ್ರಶ್ನೆಯಲ್ಲಿ ತಿಳಿಸಿರುವ ವಿಷಯಗಳನ್ನು ದೂರ ಶಿಕ್ಷಣದಲ್ಲಿ ಓದಲು ಇಚ್ಛಿಸುವಿರಾದರೆ, ಇಂದಿರಾಗಾಂಧಿ ನ್ಯಾಷನಲ್ ಓಪನ್ ವಿಶ್ವವಿದ್ಯಾಲಯದಲ್ಲಿ (IGNOU) ಎಂ.ಬಿ.ಎ. ಅಥವಾ ಎಂ.ಎಸ್.ಡಬ್ಲ್ಯೂ. ಸ್ನಾತಕೋತ್ತರ ಪದವಿ ಆಯ್ದುಕೊಂಡು ಅದರಲ್ಲಿ ಮಾನವ ಸಂಪನ್ಮೂಲ ಮ್ಯಾನೇಜ್‌ಮೆಂಟ್ ವಿಷಯವನ್ನು ವಿಶೇಷ ವಿಷಯವನ್ನಾಗಿ ಆಯ್ದುಕೊಳ್ಳಬೇಕು. ಒಸ್ಮಾನಿಯಾ ವಿಶ್ವವಿದ್ಯಾಲಯ ಹೈದರಾಬಾದ್‌ನಲ್ಲಿ ಮಾಸ್ಟರ್ಸ್ ಆಫ್ ಇಂಡಸ್ಟ್ರಿಯಲ್ ರಿಲೇಷನ್ಸ್ ಅಂಡ್ ಪರ್ಸನಲ್ ಮ್ಯನೇಜ್‌ಮೆಂಟ್ ಓದಬಹುದು. ದೂರ ಶಿಕ್ಷಣದ ವಿಶ್ವವಿದ್ಯಾಲಯಗಳ ಬಗ್ಗೆ ಅಂತರ್ಜಾಲದಲ್ಲಿ ಪರಿಶೀಲಿಸಿ.

ಅಂತರ್ಜಾಲದ ಸಹಾಯದಿಂದ ಮೇಲೆ ತಿಳಿಸಿರುವ ಸ್ನಾತಕೋತ್ತರ ಪದವಿಗಳಲ್ಲಿ ಎರಡು ವರ್ಷ ಕಲಿಸಲಾಗುವ ವಿಷಯಗಳನ್ನು ನೋಡಿ ನಿಮ್ಮ ಆಸಕ್ತಿಗೆ ಹೊಂದುವ ವಿಷಯವನ್ನು ಆಯ್ದುಕೊಳ್ಳಿ. ಶುಲ್ಕ ಮತ್ತು ಇತರ ಪ್ರವೇಶಾತಿಯ ವಿಷಯಗಳು ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಭಿನ್ನವಾಗಿದ್ದು ಆ ಬಗ್ಗೆ ಆಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಅನ್ನು ಗಮನಿಸಿ.

ಮುಂದೆ ಇದೇ ಕ್ಷೇತ್ರದಲ್ಲಿ ಉತ್ತಮ ಹುದ್ದೆಗಳಿಗೆ ಹೋಗಬೇಕು ಎಂಬ ಹಂಬಲ ಇದ್ದು ಎರಡು ವರ್ಷ ವ್ಯಯಿಸಲು ನಿಮಗೆ ಅನುಕೂಲವಿದ್ದರೆ ಭಾರತದ ಪ್ರತಿಷ್ಠಿತ ಕಾಲೇಜ್‌ಗಳಲ್ಲಿ ರೆಗ್ಯುಲರ್ ಆಗಿ ಮಾಡುವುದು ಉತ್ತಮ. ಅದಕ್ಕಾಗಿ ಐಐಎಂ, ಕ್ಸೇವಿಯರ್, ಟಾಟಾ ಇನ್‌ಸ್ಟಿಟ್ಯೂಟ್, ಐ.ಎಸ್.ಬಿ. ಇತ್ಯಾದಿ ಸಂಸ್ಥೆಗಳ ವೆಬ್‌ಸೈಟ್‌ ಅನ್ನು ಪರಿಶೀಲಿಸಿ. ರೆಗ್ಯುಲರ್ ಆಗಿ ಓದಲು ಆಗದಿದ್ದಲ್ಲಿ ದೂರ ಶಿಕ್ಷಣದಲ್ಲಿಯೂ ಓದಿ ಸ್ವಂತ ಪರಿಶ್ರಮದಿಂದ ವೃತ್ತಿ ರೂಪಿಸಿಕೊಳ್ಳಹುದು. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT