ಭಾನುವಾರ, ಜನವರಿ 19, 2020
27 °C

ಸಲಹೆ | ನಾನು ಅಂತಿಮ ವರ್ಷದ ಬಿಇ ಓದುತ್ತಿದ್ದೆ; ಆದರೆ, ಮದುವೆ ಮಾಡ್ಬಿಟ್ರು

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು ಬಿ.ಎಸ್‌ಸಿ. ಅಂತಿಮ ವರ್ಷ ಬಯೋಕೆಮಿಸ್ಟ್ರಿ, ಪ್ರಾಣಿಶಾಸ್ತ್ರ, ತಳಿಶಾಸ್ತ್ರ ಓದುತ್ತಿದ್ದೇನೆ. ಎಂ.ಎಸ್‌ಸಿ. ಬಯೋಕೆಮಿಸ್ಟ್ರಿ ಮಾಡಬೇಕು ಎಂಬ ಆಸೆ ಇದೆ, ಆಸಕ್ತಿಯೂ ಇದೆ. ಈ ಕ್ಷೇತ್ರದಲ್ಲಿ ಇರುವ ಉದ್ಯೋಗದ ಅವಕಾಶಗಳನ್ನು ತಿಳಿಸಿ. ಹಾಗೆಯೇ ಸರ್ಕಾರಿ ಉದ್ಯೋಗದ ಬಗ್ಗೆಯೂ ತಿಳಿಸಿ.
–ಪೂಜಿತಾ, ಬೆಂಗಳೂರು

ಪೂಜಿತಾ, ಬಯೋಕೆಮಿಸ್ಟ್ರಿ ಅಥವಾ ಜೀವ ರಸಾಯನಶಾಸ್ತ್ರವು ಜೀವಿಗಳ ರಾಸಾಯನಿಕ ಪ್ರಕ್ರಿಯೆ ಮತ್ತು ಜೈವಿಕ ಪ್ರಕ್ರಿಯೆಗಳ ಬಗ್ಗೆ ಅಧ್ಯಯನ ನಡೆಸುವ ಕ್ಷೇತ್ರವಾಗಿದ್ದು ಅವುಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಾಣಬಹುದು. ನಿಮ್ಮ ಪದವಿ ನಂತರ ಉತ್ತಮ ಹೆಸರಿರುವ, ಸೂಕ್ತ ಶಿಕ್ಷಣ ಮತ್ತು ಅನುಭವ ಕೊಡುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ಪ್ರಯತ್ನಿಸಿ.

ಈ ಕ್ಷೇತ್ರದ ಪರಿಣತರನ್ನು ಬಯೋಕೆಮಿಸ್ಟ್ ಅಂತ ಕರೆಯಲಾಗುತ್ತದೆ ಮತ್ತು ಬಯೋಕೆಮಿಸ್ಟ್‌ಗಳಿಗೆ ಸಂಶೋಧನ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ. ಬಯೋಕೆಮಿಸ್ಟ್‌ಗಳು ವೈದ್ಯಕೀಯ, ಕೃಷಿ, ಫಾರೆನ್ಸಿಕ್ ವಿಜ್ಞಾನ, ಪಬ್ಲಿಕ್ ಹೆಲ್ತ್ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ವೈದ್ಯಕೀಯ ಉಪಕರಣಗಳ ಮತ್ತು ಔಷಧಿ ತಯಾರಿಕ ಕಂಪನಿಗಳು, ಆಹಾರ ಮತ್ತು ಪಾನೀಯ ತಯಾರಿಕ ಕಂಪನಿಗಳು, ಸೌಂದರ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳ ತಯಾರಿಕ ಕಂಪನಿಗಳು, ವಿವಿಧ ರಾಸಾಯನಿಕ ತಯಾರಿಕ ಕಂಪನಿಗಳು, ಕ್ಯಾನ್ಸರ್ ಹಾಗೂ ಇತರ ಆರೋಗ್ಯ ಸಂಬಂಧಿತ ಸಂಶೋಧನ ಕೇಂದ್ರಗಳು, ಕೈಗಾರಿಕ ಲ್ಯಾಬೊರೇಟರಿ ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿ ಅವಕಾಶಗಳು ಇರುತ್ತವೆ.

ಬಯೋಕೆಮಿಸ್ಟ್ರಿ ಅಥವಾ ಬಯೋಟೆಕ್ನಾಲಜಿ ಕ್ಷೇತ್ರದ ಖಾಸಗಿ ಸಂಸ್ಥೆಗಳು ಉತ್ತಮ ವೇತನ ಮತ್ತು ಸೌಲಭ್ಯವನ್ನು ನೀಡುತ್ತವೆ. ಬಯೋಕಾನ್, ಸೀರಮ್ ಇನ್‌ಸ್ಟಿಟ್ಟೂಟ್ ಆಫ್ ಇಂಡಿಯಾ, ಪನಶಿಯಾ ಬಯೋಟೆಕ್ನಾಲಜಿ, ಡಾ. ರೆಡ್ಡಿಸ್ ಲ್ಯಾಬ್, ಭಾರತ್ ಸೀರಮ್ ಎಂಡ್ ವಾಕ್ಸಿನ್ಸ್ ಇತ್ಯಾದಿಗಳು ಭಾರತದ ಪ್ರತಿಷ್ಠಿತ ಖಾಸಗಿ ಕಂಪನಿಗಳು ಮತ್ತು ಜಾನ್ಸನ್ ಎಂಡ್ ಜಾನ್ಸನ್, ರೋಚೆ, ನೊವಾರ್ಟಿಸ್, ನೊವೊ ನಾರ್ಡಿಸ್ಕ್, ಮೆರ್ಕ್, ಗಿಲ್ಯಾಡ್ ಸೈನ್ಸಸ್ ಇತ್ಯಾದಿ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಂಪನಿಗಳಾಗಿವೆ.

ಇನ್ನು ಸರ್ಕಾರಿ ಕ್ಷೇತ್ರದಲ್ಲಿ, ಮೇಲೆ ತಿಳಿಸಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹ ಸರ್ಕಾರಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಲ್ಯಾಬೊರೇಟರಿ ಅಸಿಸ್ಟೆಂಟ್, ರಿಸರ್ಚರ್, ಜ್ಯೂನಿಯರ್/ ಸೀನಿಯರ್ ರಿಸರ್ಚ್ ಫೆಲೋ, ಸೈಂಟಿಫಿಕ್ ಆಫೀಸರ್ ಇತ್ಯಾದಿ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಇನ್‌ಸ್ಟಿಟ್ಟೂಟ್ ಆಫ್ ಕೆಮಿಕಲ್ ಬಯಾಲಜಿ, ಹಾರ್ಟಿಕಲ್ಚರ್, ಅಗ್ರಿಕಲ್ಚರ್ ಯೂನಿವರ್ಸಿಟಿ, ಸೆಂಟ್ರಲ್ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್, ಏಮ್ಸ್, ಜೆ.ಐ.ಪಿ.ಎಮ್.ಇ.ಆರ್., ಎಮ್.ಆರ್.ಪಿ.ಎಲ್. ಇತ್ಯಾದಿ ಸಂಸ್ಥೆಗಳು ಮಾತ್ರವಲ್ಲದೆ ಆಯಾ ರಾಜ್ಯದ ಬಯೋಕೆಮಿಸ್ಟ್ರಿಗೆ ಸಂಬಂಧಿಸಿದ ಸಂಸ್ಥೆಗಳು ಕೂಡ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತವೆ. ಆಯಾ ನೇಮಕಾತಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮುಖೇನ ಕೆಲಸ ಪಡೆಯಬಹುದು.

ನೀವು ಬಯೋಕೆಮಿಸ್ಟ್ರಿ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯಂತಹ ವಿಭಾಗದಲ್ಲಿ ಮುಂದುವರೆಯಲು ಇಚ್ಛಿಸುವಿರಾದರೆ ನಿಮ್ಮ ಎಂ.ಎಸ್‌ಸಿ. ಬಯೋಕೆಮಿಸ್ಟ್ರಿ ನಂತರ ಪಿ.ಎಚ್‌ಡಿ. ಶಿಕ್ಷಣವನ್ನು ಪಡೆಯಬಹುದು. ಇದಾದ ನಂತರ ಸಂಶೋಧನ ಸಂಸ್ಥೆಗಳಲ್ಲದೆ, ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಬಹುದು. ಶುಭಾಶಯ.

**

ನಾನು ಅಂತಿಮ ವರ್ಷದ ಬಿ.ಇ. ಮಾಡುತ್ತಿದ್ದೆ. ಆದರೆ ಮದುವೆ ಮಾಡ್ಬಿಟ್ರು. ಈಗ ಚಿಕ್ಕ ಮಗುವಿದೆ. ಬಿ.ಇ. ಮಧ್ಯೆ ಬಿಟ್ಟು ಎರಡು ವರ್ಷಗಳಾದವು. ಮುಂದಿನ ವರ್ಷ ಮತ್ತೆ ಓದಬೇಕು ಅಂತ ಆಸೆಯಿದೆ. ಉದ್ಯೋಗದ ಬಗ್ಗೆ ಗೊಂದಲವಿದೆ. ಬಿ.ಇ. ಮೇಲೆ ನೌಕರಿ ಮಾಡಲೇ ಅಥವಾ ಸರ್ಕಾರಿ ನೌಕರಿಗೆ ಸಿದ್ಧತೆ ಮಾಡಲೇ? ಚಿಕ್ಕ ಮಗು ಇರುವುದರಿಂದ ಗೊಂದಲದಲ್ಲಿದ್ದೇನೆ.
ಹೆಸರು, ಊರು ಇಲ್ಲ

ನೀವು ಮತ್ತೆ ಓದಬೇಕು ಅಂದುಕೊಂಡಿರುವುದು ಮತ್ತು ಕೆಲಸ ಮಾಡಬೇಕು ಅಂತ ಬಯಸುತ್ತಿರುವುದು ಒಳ್ಳೆಯ ವಿಚಾರ. ಸದ್ಯ ಸರ್ಕಾರಿ ಕೆಲಸಕ್ಕಾಗಿ ನೀವು ತಯಾರಿ ಮಾಡಬೇಕಾದರೆ ಪಿ.ಯು.ಸಿ ಮತ್ತು ಹತ್ತನೆ ತರಗತಿಯ ಆಧಾರದ ಮೇಲೆ ನೀವು ಪ್ರಯತ್ನಿಸಬೇಕಾಗುತ್ತದೆ. ಆದರೆ ಈ ಶಿಕ್ಷಣದ ಆಧಾರದ ಮೇಲೆ ಬಹಳ ಕಡಿಮೆ ಕೆಲಸಗಳು ಲಭ್ಯವಿದ್ದು ನಿಮಗೆ ಹೆಚ್ಚಿನ ಅವಕಾಶಗಳಿರುವುದಿಲ್ಲ. ನೀವು ಪದವಿ ಶಿಕ್ಷಣ ಮುಗಿಸಿಕೊಂಡರೆ ಅನೇಕ ಅವಕಾಶಗಳು ಲಭ್ಯ ಮತ್ತು ಅವುಗಳಿಗೆ ಪ್ರಯತ್ನಿಸಬಹುದು. ಪದವಿ ಮಾಡಲು ನಿಮ್ಮ ಬಿ.ಇ. ಪದವಿಯನ್ನು ಮುಂದುವರಿಸಿ ಮುಗಿಸಿಕೊಳ್ಳಬಹುದು ಅಥವಾ ದೂರ ಶಿಕ್ಷಣದಲ್ಲಿ ಯಾವುದಾದರೂ ಮೂರು ವರ್ಷದ ಪದವಿಯನ್ನು ಮುಗಿಸಿಕೊಳ್ಳಬಹುದು. ನಿಮ್ಮ ಸದ್ಯದ ಅನುಕೂಲ ಮತ್ತು ವ್ಯವಸ್ಥೆ ನೋಡಿಕೊಂಡು ಸೂಕ್ತವಾದ ನಿರ್ಧಾರ ಕೈಗೊಳ್ಳಿ. ಆದರೆ ಓದು ಮತ್ತು ಕೆಲಸ ಪಡೆಯುವ ಪ್ರಯತ್ನವನ್ನು ಮುಂದುವರೆಸಿ, ಶುಭವಾಗಲಿ.

**

ನಾನು ಎಂಜಿನಿಯರಿಂಗ್‌ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಆದರೆ ವೈದ್ಯಕೀಯ ಓದಬೇಕು ಎಂಬ ಆಸೆಯಿದೆ. ಕೆಇಎ ಮೂಲಕ ಸರ್ಕಾರಿ ಸೀಟ್‌ ಸಿಕ್ಕಿದೆ. ಈಗ ಎಂಜಿನಿಯರಿಂಗ್‌ ಬಿಟ್ಟು ವೈದ್ಯಕೀಯ ಶಿಕ್ಷಣಕ್ಕೆ ಹೋಗಲೇ? ಈ ಕುರಿತು ಸೀಟ್‌ ಸಿಗುತ್ತದೆಯೇ?
–ಹೆಸರು, ಊರು ಇಲ್ಲ

ನಿಮಗೆ ವೈದ್ಯಕೀಯ ಶಿಕ್ಷಣ ಓದಬೇಕೆಂಬ ಆಸೆ ಇದ್ದಲ್ಲಿ ಆ ಬಗ್ಗೆ ಯೋಚಿಸಿ ಸರಿಯಾಗಿ ನಿರ್ಧರಿಸಿ. ಯಾಕಾಗಿ ವೈದ್ಯಕೀಯ ಶಾಸ್ತ್ರ ಓದಲು ಇಚ್ಚಿಸುತ್ತಿದ್ದೀರಿ, ಅದಕ್ಕೂ ಎಂಜಿನಿಯರಿಂಗ್ ಶಿಕ್ಷಣಕ್ಕೂ ವ್ಯತ್ಯಾಸವೇನು, ವೈದ್ಯಕೀಯ ವಿಜ್ಞಾನದಲ್ಲಿ ಯಾವ ಯಾವ ವಿಷಯಗಳು ಓದಲು ಇರುತ್ತವೆ, ಅದರ ಮುಂದಿನ ಅಳವಡಿಕೆ ಮತ್ತು ವ್ಯಾಪ್ತಿ ಏನು? ಇತ್ಯಾದಿ ಪ್ರಶ್ನೆಗಳ ಹಿನ್ನೆಲೆಯಲ್ಲಿ ಯೋಚಿಸಿ. ಅದಾದ ಮೇಲೆಯೂ ದೃಢವಾಗಿ ವೈದ್ಯಕೀಯ ಶಿಕ್ಷಣ ಓದಬೇಕು ಎಂದು ನಿರ್ಧರಿಸಿದಲ್ಲಿ ಈ ವರ್ಷ ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಶಿಕ್ಷಣದ ಸೀಟನ್ನು ಪಡೆಯಬಹುದು. ನಂತರ ನಿಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ನಿಲ್ಲಿಸಿ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಿ. ಯಾವುದಕ್ಕೂ ದುಡುಕದೆ ಯೋಚಿಸಿ ನಿರ್ಧರಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು