ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಕಲಿಕೆ ಈಗ ಬಲು ಸರಳ!

Last Updated 5 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಗಣಿತ - ಹೆಸರು ಕೇಳಿದಾಕ್ಷಣ ಹಲವಾರು ಭಾವನೆಗಳು ಹೊರಹೊಮ್ಮುತ್ತವೆ. ಕೆಲವರಿಗೆ ಗಣಿತ ಅಚ್ಚುಮೆಚ್ಚಿನ ವಿಷಯವಾದರೆ ಹಲವರಿಗೆ ನಡುಕಹುಟ್ಟಿಸುವ ವಿಷಯ. ‘ನನಗೂ ಗಣಿತಕ್ಕೂ ಬಹಳ ದೂರ’ ಎನ್ನುವ ಮಾತುಗಳಿಗೇನೂ ಕೊರತೆ ಇಲ್ಲಾ! ಆದರೆ ಹೆಚ್ಚು ಜನಕ್ಕೆ ತಮ್ಮ ಮಕ್ಕಳು ಚೆನ್ನಾಗಿ ಗಣಿತ ಕಲಿಯಬೇಕೆಂಬ ಹಂಬಲ.

ಆದರೆ ನಿಜವಾಗಿಯೂ ಗಣಿತ ಕಲಿಕೆ ಕಠಿಣವೇ? ಹೆಚ್ಚಿನ ಮಕ್ಕಳಿಗೆ ಗಣಿತದ ಬಗ್ಗೆ ಭಯವೇಕೆ? ಇದಕ್ಕೆ ಕಾರಣ ಬಹುಶಃ ಗಣಿತ ಕಲಿಕೆಯ ಬಗ್ಗೆ ನಮಗಿರುವ ಗೊಂದಲಗಳೇ ಇರಬಹುದು.

ಕೇವಲ ಕೆಲವು ಸಂಖ್ಯೆಗಳನ್ನು ವೇಗವಾಗಿ ಕೂಡುವುದೋ ಗುಣಿಸುವುದಷ್ಟೇ ಗಣಿತವಲ್ಲಾ. ಮಕ್ಕಳನ್ನು ಸರಿಯಾಗಿ ಆಲೋಚಿಸುವಂತೆ ಮಾಡುವುದು ಗಣಿತಕಲಿಕೆಯ ಮೂಲ ಉದ್ದೇಶಗಳಲ್ಲಿ ಒಂದು.

ನಿಮ್ಮ ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದರೆ, ಅವರಿಗೆ ನೀವು ಎರಡು ಕಲ್ಲಂಗಡಿ ಹಣ್ಣಿನ ಚೂರುಗಳನ್ನು ಕತ್ತರಿಸಿ ಕೊಟ್ಟರೆ, ಇಬ್ಬರು ಮಕ್ಕಳೂ ದೊಡ್ಡ ಚೂರನ್ನು ಪಡೆಯಲು ಹಟ ಮಾಡುತ್ತವೆಯಲ್ಲವೇ? ಹಾಗಾದರೆ ಅವರಿಗೆ ಭಿನ್ನರಾಶಿಗಳ ಬಗ್ಗೆ ಪಾಠ ಮಾಡಿದವರಾರು!

ಗಣಿತದ ಬಗ್ಗೆ ತಿಳಿವಳಿಕೆ ಮಕ್ಕಳಿಗೆ ಸಹಜವಾಗಿಯೇ ಅಂತರ್ಗತವಾಗಿರುತ್ತದೆ. ಹಾಗೆ ಸಹಜವಾಗಿರುವ ಗಣಿತದ ಆಲೋಚನೆಗಳಿಗೆ ನಿರ್ದಿಷ್ಟ ರೂಪವನ್ನು ಕೊಟ್ಟು ಅವರಲ್ಲಿ ಆಸಕ್ತಿಯನ್ನು ಮೂಡಿಸುವುದೇ ಸರಿಯಾದ ಕಲಿಕೆ.

ಕಲಿಕೆಯ ಆನಂದ ಅನುಭವಿಸಿ

ಕೇವಲ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದೊಂದನ್ನೇ ಗುರಿಯಾಗಿಸಿಕೊಳ್ಳುವುದನ್ನು ಬಿಟ್ಟು ಗಣಿತದ ಆನಂದವನ್ನು ಅನುಭವಿಸುವಂತಾದರೆ ಈ ಭಯದಿಂದ ಹೊರಬರಬಹುದು.

ಆದರೆ ಗಣಿತವನ್ನು ಆನಂದಿಸುವುದಾದರೂ ಹೇಗೆ? ಪ್ರಾಥಮಿಕ ತರಗತಿಗಳಲ್ಲಿ ಅವರು ಶಾಲೆಯಲ್ಲಿ ಕಲಿಯುತ್ತಿರುವ ಗಣಿತವನ್ನು ಎಲ್ಲಿ ಉಪಯೋಗಿಸುತ್ತಿದ್ದಾರೆ ಎಂದು ಸರಳ ಉದಾಹರಣೆಗಳ ಮೂಲಕ ತಿಳಿಸಿ ಹೇಳಬೇಕಾಗುತ್ತದೆ.

ಉದಾಹರಣೆಗೆ: ನಿಮ್ಮ ತಾಯಿ ಮನೆಯಲ್ಲಿ ಮೂರು ಬಗೆಯ ಪಲ್ಯಗಳನ್ನು ಮಾಡಿದ್ದಾರೆ ಎಂದು ತಿಳಿಯಿರಿ. ಒಂದು ಪಲ್ಯದಲ್ಲಿ ಕ್ಯಾರೆಟ್ ಉಪಯೋಗಿಸಿದ್ದಾರೆ, ಇನ್ನೊಂದರಲ್ಲಿ ಕ್ಯಾರೆಟ್ ಮತ್ತು ಕೋಸನ್ನು ಬಳಸಿದ್ದಾರೆ, ಮತ್ತೊಂದರಲ್ಲಿ ಕ್ಯಾರೆಟ್, ಕೋಸು ಮತ್ತು ಆಲೂಗೆಡ್ಡೆಯನ್ನು ಉಪಯೋಗಿಸಿದ್ದಾರೆ ಎಂದಿಟ್ಟುಕೊಳ್ಳಿ. ಹಾಗಾದರೆ ಮೂರೂ ಪಲ್ಯಗಳ ಮ.ಸಾ.ಅ ಏನು? ಮೂರರಲ್ಲೂ ಉಪಯೋಗಿಸಿರವ ಕ್ಯಾರೆಟ್ ಮ.ಸಾ.ಅ ಅಲ್ಲವೇ! ಹಾಗಾದರೆ ಇವುಗಳ ಲ.ಸಾ.ಅ. ಏನು?

ಈ ಮೇಲಿನ ಉದಾಹರಣೆಯಿಂದ ಮಕ್ಕಳಿಗೆ ಲ.ಸಾ.ಅ ಮತ್ತು ಮ.ಸಾ.ಅ ಸಮೀಪವಾಗುತ್ತದೆ ಮತ್ತು ಮನೆಗೆ ಹೋದ ತಕ್ಷಣ ಎಲ್ಲಾ ಊಟಗಳಲ್ಲೂ ಮ.ಸಾ.ಅ ವನ್ನು ಹುಡುಕುತ್ತಾರೆ! ಎಷ್ಟು ಚೆಂದದ ಕಲಿಕೆ!!

ಆಟಿಕೆ ಸಹಾಯದಿಂದ ಕಲಿಕೆ

ಎರಡನೆಯದಾಗಿ ಗಣಿತದ ವಿಷಯಗಳನ್ನು ಮಕ್ಕಳು ಆಟಿಕೆಗಳ ಸಹಾಯದಿಂದ ಮತ್ತು ಹಲವಾರು ಆಸಕ್ತಿದಾಯಕ ಚಟುವಟಿಕೆಗಳ ಮುಖಾಂತರ ಕಲಿಯುವಂತೆ ಮಾಡುವುದು.

ಗಣಿತ ಹಲಸಿನ ಹಣ್ಣಿನ ರೀತಿ, ನಾವು ಹೊರಕವಚವನ್ನು ತೆಗೆದು, ತೊಳೆಗಳನ್ನು ಬಿಡಿಸಿ ತಿಂದರೇ ಆಹಾ!! ಎಷ್ಟು ರುಚಿ!! ಆದರೆ ಹೊರಕವಚವನ್ನೇ ಕಚ್ಚಿ ತಿನ್ನಲು ಹೋದರೆ! ಗಣಿತ ಕಲಿಕೆಯಲ್ಲೂ ಹಾಗೆಯೇ.

ಈ ನಿಟ್ಟಿನಲ್ಲಿ ಗಣಿತದ ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡಲು, ಮಕ್ಕಳಿಗೆ ಸರಳ ಸಾಧನಗಳಿಂದ ಗಣಿತದ ಪರಿಕಲ್ಪನೆಗಳನ್ನು ತಿಳಿಸಲು ಕೆಲವು ಸಂಸ್ಥೆಗಳು ಶ್ರಮಿಸುತ್ತಿದೆ. ಸಿದ್ಧಪಡಿಸಿರುವ ಗಣಿತದ ಪ್ರಯೋಗಶಾಲೆಗಳನ್ನು (ಮ್ಯಾಥ್‌ ಲ್ಯಾಬ್‌) ದೇಶದ ವಿವಿಧ ವಿದ್ಯಾಸಂಸ್ಥೆಗಳು ಅಳವಡಿಸಿಕೊಂಡು ಗಣಿತಕಲಿಕೆಯನ್ನು ಆಸಕ್ತಿದಾಯಕವಾಗಿ ಹಾಗೂ ಸರಳವಾಗಿ ಮಾಡಿವೆ. ಈ ಪ್ರಯೋಗಶಾಲೆಯಲ್ಲಿ, ಗಣಿತದ ಪಾಠಗಳಿಗೆ ಸಂಬಂಧಪಟ್ಟ ಅನೇಕ ಸೃಜನಶೀಲ ಪ್ರತಿಕೃತಿ ( ಕ್ರಿಯೇಟಿವ್‌ ಮಾಡೆಲ್‌) ಗಳ ಮೂಲಕ ಕಲಿಸಬಹುದು. ಆಟಿಕೆಗಳ ಸಹಾಯದಿಂದ ಮಕ್ಕಳು ಗಣಿತದ ಅನೇಕ ಕ್ಲಿಷ್ಟ ವಿಷಯಗಳನ್ನೂ ಅತ್ಯಂತ ಸುಲಭವಾಗಿ ಕಲಿಯತ್ತಾರೆ.

ಕಥೆಗಳ ಮೂಲಕ ಕಲಿಸಿ

ಗಣಿತದ ಅನೇಕ ವಿಷಯಗಳನ್ನು ಸುಂದರವಾದ ಕಥೆಗಳ ಮುಖಾಂತರ, ಹಾಡುಗಳು ಮತ್ತು ಆಟಗಳ ಮುಖಾಂತರ ಕಲಿಸಲು ಪ್ರಯತ್ನಿಸಬಹುದು. ಈ ವಿಷಯಗಳ ಬಗ್ಗೆ ತರಬೇತಿ ಪಡೆದ ಶಿಕ್ಷಕರು ಈ ಸರಳ ವಿಧಾನಗಳಿಂದ ಗಣಿತವನ್ನು ಬೋಧಿಸಿ ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತರಾಗುವಂತೆ ಮಾಡಬಹುದು.

ಗಣಿತವನ್ನು ಸುಲಭವಾಗಿ ಕಲಿಯುವಂತೆ ಮಾಡಲು, ಸರಳವಾದ ಚಟುವಟಿಕೆ ಹಾಳೆಗಳನ್ನು ( ವರ್ಕ್‌ಶೀಟ್‌) ಮಕ್ಕಳಿಗೆ ಕೊಡಬಹುದು. ಗಣಿತದ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ತಯಾರಿಸಿ ಅವುಗಳ ಮೂಲಕ ಗಣಿತವನ್ನು ಸರಳೀಕರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT