ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ಕ್ಷೇತ್ರದಲ್ಲಿ ಹೊಸ ಹುಡುಕಾಟ

Last Updated 2 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬಹುತೇಕ ಸಾಮಾಜಿಕ ಸಂಶೋಧನೆಗಳು ಶೈಕ್ಷಣಿಕ ಪರಧಿಯೊಳಗೆ ಮುಗಿದು ವಿಶ್ವವಿದ್ಯಾಲಯಗಳ ಕಪಾಟು ಸೇರುತ್ತವೆ ಎಂಬ ಸಾಮಾನ್ಯ ಆರೋಪವಿದೆ. ಸಂಶೋಧನೆಗಳು ಕೇವಲ ಪದವಿಗಳನ್ನು ಪಡೆಯಲು ಇವೆಯೇ ಹೊರತು ಅದರಿಂದ ಸಮುದಾಯಗಳಿಗೆ ಕಿಂಚಿತ್ತು ಲಾಭ ಇಲ್ಲ ಎನ್ನುವ ವಾದವೂ ಇದೆ. ಸಂಶೋಧಕರು ಸಮುದಾಯಗಳನ್ನು ಬಳಸಿಕೊಂಡು ಉನ್ನತ ಪದವಿಗಳನ್ನು ಪಡೆದಿದ್ದಾರೆ. ಅಧ್ಯಯನ ಕೈಗೊಂಡ ಸಂಸ್ಥೆಗಳು ತಮ್ಮ ಪ್ರಸಿದ್ಧಿಯನ್ನೂ ಹೆಚ್ಚಿಸಿಕೊಂಡಿವೆ. ಆದರೆ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯದ ‘ತಳ ಸಮುದಾಯಗಳ ಅಧ್ಯಯನ ಕೇಂದ್ರ’ ವಿಭಿನ್ನ ದೃಷ್ಟಿಯಲ್ಲಿ ಕ್ರಿಯಾಶೀಲವಾಗಿದೆ. ಸಮುದಾಯವೊಂದರ ಸಂಶೋಧನೆ ಎಂದರೆ ಕೇವಲ ಪರಾಮರ್ಶನ ಗ್ರಂಥವಾಗದೆ ಆ ಸಮುದಾಯದಲ್ಲಿನ ಬದಲಾವಣೆ ಆಗಬೇಕು ಎನ್ನುವ ಪರಿಕಲ್ಪನೆಗೆ ಜೀವ ತಂದಿದೆ.

ಸಂಶೋಧಕರು ತಮ್ಮ ಸಂಶೋಧನ ಮಾಹಿತಿಯಲ್ಲಿ ಯಾವ ಅಂಶಗಳಿವೆ ಎಂದು ಗಟ್ಟಿತನದಿಂದ ಹೇಳಲಾಗದ ಸಂದರ್ಭಗಳೇ ಹೆಚ್ಚು. ಹೀಗಾಗಿ ಅಭಿವೃದ್ಧಿ ವಂಚಿತ ಸಮುದಾಯದ ವಿದ್ಯಾವಂತ ಯುವಜನರನ್ನೇ ಸಂಶೋಧಕರನ್ನಾಗಿ ತರಬೇತಿಗೊಳಿಸಿದರೆ ಆಗ ಅಧ್ಯಯನಕ್ಕೆ ಸಂಗ್ರಹಿಸುವ ಮಾಹಿತಿಯಲ್ಲಿ ಹೆಚ್ಚಿನ ಪ್ರಾಮಾಣ್ಯ ಒದಗುತ್ತದೆ. ಹೀಗೆ ನಿರ್ದಿಷ್ಟ ಸಮುದಾಯಗಳ ವಿದ್ಯಾವಂತರಿಂದಲೇ ಮಾಹಿತಿಯನ್ನು ಸಂಗ್ರಹ ಮಾಡುವ ಹೊಸ ಪ್ರಯೋಗ ಇದಾಗಿದೆ. ಸಮುದಾಯದ ಸ್ಥಿತಿ–ಗತಿಗಳ ಬಗ್ಗೆ ಅಳವಾದ ತಿಳಿವಳಿಕೆ ಹೊಂದಿರುವ ಪ್ರಜ್ಞಾವಂತರೇ ಈ ಸಂಶೋಧನೆಯ ಮಾಹಿತಿ ಸಂಗ್ರಹಕಾರರಾಗಿರುತ್ತಾರೆ.‌‌

ಸಂಶೋಧನೆಗಾಗಿ ಕ್ಷೇತ್ರಕಾರ್ಯಕ್ಕೆ ಹೋಗುವ ಯುವಜನರಿಗೆ ಅಧ್ಯಯನ ಕೇಂದ್ರದ ವತಿಯಿಂದ ತರಬೇತಿ ನೀಡಲಾಗುತ್ತದೆ. ನಂತರ ಆಯಾ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಪಟ್ಟಿ ಮಾಡಲಾಗುತ್ತದೆ. ಸಂಶೋಧನೆ ಕೈಗೊಳ್ಳಲು ಒಂದು ಕ್ರಿಯಾ ಯೋಜನೆ ಸಿದ್ಧಪಡಿಸಿ ತಜ್ಞರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯಲಾಗುತ್ತದೆ.

ಈಗಾಗಲೇ ಮಲೆಕುಡಿಯ, ಜೇನುಕುರುಬ, ಯರವ, ಸಿಂಧೊಳ್ಳು, ಕೊರಮ, ಕೊರಚ, ಗೋಸಂಗಿ, ದಕ್ಕಲಿಗ ಸಮುದಾಯಗಳಲ್ಲದೆ, ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ದೇವದಾಸಿಯರು ವಾಸ ಮಾಡುವ ಕಾಲೊನಿ, ಹಾಡಿ, ಹಟ್ಟಿಗಳಿಗೆ ಭೇಟಿ ನೀಡಿ ಅಲ್ಲಿಯವರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಆರ್ಥಿಕ ಅಂಶಗಳನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ಆಯಾ ಸಮುದಾಯದವರಿಂದಲೇ ಸಂಗ್ರಹಿಸಿ ವರದಿಗಳನ್ನು ಸಿದ್ಧಪಡಿಸಲಾಗಿದೆ.

ರಾಜ್ಯದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಕೇವಲ 4800 ಜನಸಂಖ್ಯೆ ಹೊಂದಿರುವ ‘ಗೋಸಂಗಿ’ ಸಮುದಾಯದ ಸ್ಥಿತಿಗತಿಗಳನ್ನು ಅರಿಯಲು ಈ ಸಂಶೋಧನೆ ನೆರವಾಗಿದೆ. ಅಲ್ಲದೆ, ಸಮಾಜದಲ್ಲಿ ವಿಳಾಸ ಇಲ್ಲದಂತೆ ಬದುಕುತ್ತಿರುವ ‘ದಕ್ಕಲಿಗ’ ಸಮಾಜದ ಅಸ್ಮಿತೆ ಹಾಗೂ ಅಪರೂಪದ ಮಾಹಿತಿ ಸಂಗ್ರಹಿಸಲು ಸಂಶೋಧನೆ ಪೂರಕ ಮಾಹಿತಿ ಒದಗಿಸಿದೆ. ಸಮುದಾಯದ ಸಮಸ್ಯೆಗಳ ಬಗ್ಗೆ ಕ್ಷ–ಕಿರಣ ಬೀರಿರುವ ಸಂಶೋಧಕರ ವರದಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಕಣ್ಣು ತೆರೆಸುವಂತೆ ಮಾಡಿದೆ.

ಸಮುದಾಯಗಳ ಕುರಿತು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಉಪನ್ಯಾಸಕರ ಬಡ್ತಿ, ಅಂತಸ್ತು ಹೆಚ್ಚಿಸಲು ನೆರವಾಗುತ್ತದೆಯೇ ಹೊರತು, ಯಾವುದೇ ಬದಲಾವಣೆ ಸಾಧ್ಯವಾಗುವುದಿಲ್ಲ. ಇದು ಕೆಲವು ಸಾಮಾಜಿಕ ಸಂಶೋಧನೆಗಳ ಮಿತಿ ಎಂದೂ ಹೇಳಬಹುದು. ಆದರೆ, ಸಮಸ್ಯೆಗೆ ಒಳಗಾದ ಸಂತ್ರಸ್ತರೇ ಸಂಶೋಧಕರಾಗಿರುವುದರಿಂದ ಅವುಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಪ್ರಯತ್ನಕ್ಕೆ ಹಲವರು ಸಮಾಜಶಾಸ್ತ್ರಜ್ಞರೂ ಸಾಮಾಜಿಕ ಕಾರ್ಯಕರ್ತರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಜನರು ನಡುವೆ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಮಾಹಿತಿ ಸಂಗ್ರಹಿಸುವ ವಿಧಾನವೇ ಹೊಸ ಪ್ರಯತ್ನ. ಇಂತಹ ಒಂದು ಕಾರ್ಯ ಯಾವ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೂ ನಡೆದಿಲ್ಲ. ‘ಕಳೆದ 40 ವರ್ಷಗಳ ಅನುಭವದಲ್ಲಿ ಹೊಸ ಕಾನೂನು ರೂಪಿಸುವ ಹಲವು ಸಂದರ್ಭದಲ್ಲಿ ಭಾಗಿಯಾಗಿದ್ದೇನೆ. ಆದರೆ, ಸಂಶೋಧನೆಯೊಂದು ಕಾಯ್ದೆಯಾಗಿ ರೂಪಗೊಳ್ಳುವ ಈ ಪ್ರಕ್ರಿಯೇ ವಿಭಿನ್ನ’ ಎಂದು ವಿಶ್ಲೇಷಿಸುವ ಪ್ರೊ. ಬಾಬು ಮ್ಯಾಥ್ಯೂ, ಸಂಶೋಧನೆಗಳು ಶಾಸ್ತ್ರೀಯ ನೆಲೆಗಟ್ಟಿನಲ್ಲಿ ನಡೆದಾಗಲೇ ಪ್ರಯೋಜನವಾಗುವುದು ಎನ್ನುತ್ತಾರೆ.

ಈ ಸಂಶೋಧನೆಗಳಲ್ಲಿ ದಾಖಲಾದ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮಟ್ಟದಲ್ಲಿ ನೀತಿ ರೂಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಂಶೋಧಕರು ಮತ್ತು ಸಮುದಾಯದ ಮುಖಂಡರ ಸಮಾಲೋಚನೆ ಸಭೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ನಡೆದಿದೆ. ಮುಖ್ಯವಾಹಿನಿಗೆ ತೆರೆದುಕೊಳ್ಳದ ಇನ್ನೂ ಹಲವು ಸಮುದಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಂಶೋಧನೆ ನಡೆಯಲಿದ್ದು, ಈ ಪ್ರಕ್ರಿಯೆ ನಿರಂತರವಾಗಿ ಸಾಗಲು ಅಧ್ಯಯನ ಕೇಂದ್ರದಿಂದ ಯೋಜನೆ ರೂಪಿಸಲಾಗಿದೆ ಎನ್ನುವುದು ಈ ಪರಿಕಲ್ಪನೆ ಹಿಂದೆ ಶ್ರಮಿಸುತ್ತಿರುವ ‘ತಳ ಸಮುದಾಯಗಳ ಅಧ್ಯಯನ ಕೇಂದ್ರ’ದ ಪ್ರೊ. ಪ್ರದೀಪ್‌ ರಮಾವತ್ ಮತ್ತು ಡಾ. ಆರ್‌.ವಿ. ಚಂದ್ರಶೇಖರ್ ಅವರ ಆಶಯ.

‘ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯ’ (ತಳ ಸಮುದಾಯಗಳ ಅಧ್ಯಯನ ಕೇಂದ್ರ) ಸಂಪರ್ಕಕ್ಕೆ: 9482222184

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT