7

ದಾರಿ ಯಾವುದಯ್ಯ ಶಾಲೆಗೆ...?

Published:
Updated:

ಒಂದೆಡೆ ಹೆಗಲ ಮೇಲೆ ಬ್ಯಾಗ್‌ ಹೊತ್ತು ಪೋಷಕರ ಕೈ ಹಿಡಿದು ಆತಂಕದಲ್ಲೇ ರಸ್ತೆ ದಾಟುವ ಮಕ್ಕಳು, ಇನ್ನೊಂದೆಡೆ ತಮ್ಮ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದುಗುಡದಲ್ಲಿಯೇ ಸಾಗುವ ಪೋಷಕರು, ಯಾವ ಕಡೆಯಿಂದ ವಾಹನಗಳು ಗುದ್ದುತ್ತವೆಯೋ ಎಂಬ ಜೀವ ಭಯದಲ್ಲೇ ರಸ್ತೆ ದಾಟುವ ಸಾರ್ವಜನಿಕರು...

ಹೀಗೆ ಮಕ್ಕಳು, ಪೋಷಕರು, ಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದ ಪರಿಸ್ಥಿತಿ ಇರುವುದು ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿಯ ಲಿಟ್ಲ ಫ್ಲವರ್‌ ಪಬ್ಲಿಕ್‌ ಸ್ಕೂಲ್‌ನ ಮುಂಭಾಗ ಇರುವ ರಿಂಗ್‌ ರಸ್ತೆಯಲ್ಲಿ. ಸಂಚಾರ ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ನಿತ್ಯ ಬೆಳಿಗ್ಗೆ 8.30ರಿಂದ 9 ಗಂಟೆ ಹಾಗೂ ಸಂಜೆ 4 ಗಂಟೆಗೆ ಇಂಥ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತವೆ.

ಹೊಸಕೆರೆಹಳ್ಳಿ ಸಿಗ್ನಲ್‌ ಬಳಿ ಕೆಳ ಸೇತುವೆ ಕಾಮಗಾರಿ ಮೂರು ವರ್ಷದಿಂದ ಕುಂಟುತ್ತಾ ಸಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಶಾಲೆ ಪಕ್ಕದಲ್ಲಿಯೇ ‘ಯು’ ತಿರುವು ಇರುವುದರಿಂದ ವಾಹನಗಳು ಒಮ್ಮೆಲೆ ತಿರುವು ಪಡೆಯುತ್ತವೆ. ಇನ್ನೊಂದೆಡೆ ಹೊಸಕೆರೆಹಳ್ಳಿ ಸಿಗ್ನಲ್‌ ಕಡೆಯಿಂದ ಇಳಿಜಾರು ರಸ್ತೆಯಲ್ಲಿ ರಭಸವಾಗಿ ಬರುವ ವಾಹನಗಳು ಇಲ್ಲಿ ಒಮ್ಮೆಯೇ ಬ್ರೇಕ್‌ ಹಾಕಬೇಕಾಗುತ್ತವೆ. ಇದರಿಂದ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಕೆಲ ಸಾವು ನೋವುಗಳೂ ಉಂಟಾಗಿವೆ.

ಈ ರಸ್ತೆಯ ಸಂಚಾರ ದಟ್ಟಣೆಯು ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡುತ್ತಿರುವುದು ಇಂದು, ನಿನ್ನೆಯಿಂದಲ್ಲ. ರಿಂಗ್‌ ರಸ್ತೆಯ ಬದಿಯಲ್ಲಿ ಈ ಶಾಲೆ 1989ರಲ್ಲಿಯೇ ಆರಂಭವಾಯಿತು. ದಿನಗಳೆದಂತೆ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿ 2004ರಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಅಸುನೀಗಿದ್ದರು. ಇಬ್ಬರು ವಿದ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿದ್ದವು. ಆ ನಂತರವೂ ಸಾಕಷ್ಟು ಅಪಘಾತಗಳು ಇಲ್ಲಿ ಸಂಭವಿಸಿವೆ. ಆದರೆ ಸರ್ಕಾರವಾಗಲಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಇಲ್ಲಿನ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಸ್ಥಳೀಯರ ದೂರು.

‘ಸ್ಕೈ ವಾಕ್‌’ಗೆ ಬೇಡಿಕೆ:
ಇಲ್ಲಿ ‘ಸ್ಕೈ ವಾಕ್‌’ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಲಿಟ್ಲ್‌ ಫ್ಲವರ್‌ ಪಬ್ಲಿಕ್‌ ಸ್ಕೂಲ್‌ನ ಆಡಳಿತ ಮಂಡಳಿ 14 ವರ್ಷದಿಂದ ಅವಿರತ ಪ್ರಯತ್ನ ನಡೆಸುತ್ತಿದೆ. ಆದರೆ ಇಲ್ಲಿಯವರೆಗೂ ಫಲಪ್ರದವಾಗಿಲ್ಲ. ಬಿಡಿಎ, ಬಿಬಿಎಂಪಿ ಆಯುಕ್ತರು, ಶಾಸಕರು, ಕಾರ್ಪ್ರೊರೇಟರ್‌, ಸಂಬಂಧಿಸಿದ ಸಚಿವರು, ಪೊಲೀಸ್‌ ಆಯುಕ್ತರೂ ಸೇರಿದಂತೆ ಹಲವರಿಗೆ ಮನವಿ ಪತ್ರಗಳನ್ನು ಶಾಲೆ ನೀಡಿದೆ. ಶಾಲೆಯ ವಿದ್ಯಾರ್ಥಿಗಳ ಪೋಷಕರೆಲ್ಲರೂ ‘ಸ್ಕೈ ವಾಕ್‌’ ಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹ ಚಳವಳಿಯನ್ನೂ ನಡೆಸಿ, ಅದರ ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ.

ಶಾಲಾ ಆಡಳಿತ ಮಂಡಳಿಯ ಹಲವು ಮನವಿಗಳ ನಂತರ 2008ರಲ್ಲಿ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್‌ ನಿರ್ಮಿಸುವ ಯೋಜನೆ ಪ್ರಕಟಿಸಿತ್ತು. ಆದರೆ ಅದಿನ್ನೂ ಕಾರ್ಯಗತವಾಗದೆ ನನೆಗುದಿಗೆ ಬಿದ್ದಿದೆ.

ಮುಖ್ಯಮಂತ್ರಿಯೇ ಮುತುವರ್ಜಿ ವಹಿಸಲಿ
ನಮ್ಮ ಶಾಲೆಯಲ್ಲಿ 2700 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಳಿಗ್ಗೆ 8.45ಕ್ಕೆ ಶಾಲೆ ಆರಂಭವಾಗುತ್ತದೆ. ನರ್ಸರಿ ಮಕ್ಕಳನ್ನು 10 ಗಂಟೆಗೆ, 1ರಿಂದ 4ನೇ ತರಗತಿ ವಿದ್ಯಾರ್ಥಿಗಳನ್ನು ಮಧ್ಯಾಹ್ನ 3 ಗಂಟೆಗೆ, 5ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಸಂಜೆ 4 ಗಂಟೆಗೆ ಮನೆಗೆ ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲೆಲ್ಲಾ ಮಕ್ಕಳು, ಪೋಷಕರು ರಸ್ತೆ ದಾಟುವುದಕ್ಕೆ ಹರಸಾಹಸ ಪಡಬೇಕಾದ ದುಸ್ತಿತಿ ಇದೆ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರಾದ ಡಾ. ಬಿ. ಗಾಯತ್ರಿದೇವಿ.

2004ರಿಂದ ಇಲ್ಲಿ ಸ್ಕೈವಾಕ್‌ ಮಾಡಿಸಲು ಪ್ರಯತ್ನ ನಡೆಸುತ್ತಿದ್ದೇವೆ ಆದರೆ ಅದು ಸಾಕಾರವಾಗುತ್ತಿಲ್ಲ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಸಹಕಾರ ನೀಡಲು ಶಾಲೆ ಸಿದ್ಧವಿದೆ. ಆದರೆ ಬಿಬಿಎಂಪಿ ಮನಸ್ಸು ಮಾಡುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುತುವರ್ಜಿ ತೆಗೆದುಕೊಂಡು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !