ಶನಿವಾರ, ಮಾರ್ಚ್ 6, 2021
32 °C

ಎಲ್ಲ ಮಕ್ಕಳಿಗೂ ನೋಟ್‌ಬುಕ್‌!, ಇದು ‘ಅವಿರತ’ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಶಿಯಲ್‌ ಮೀಡಿಯಾ ಬಳಸಿದರಷ್ಟೇ ಸೋಶಿಯಲ್‌ ಆಗಲ್ಲ. ಸಮಾಜಮುಖಿ ಚಿಂತನೆ, ಜವಾಬ್ದಾರಿಯೂ ಇರಬೇಕು. ಸೋಶಿಯಲ್‌ ಮೀಡಿಯಾ ಮೂಲಕ ಹತ್ತಿರವಾದ ಸಮಾನ ಮನಸ್ಕರು ಒಂದೆಡೆ ಸೇರಿ ನೆರವಿನ ಅಗತ್ಯವಿರುವವರಿಗೆ ನೆರವಾಗುವುದು ಕೂಡ ವಿನೂತನ ಸಮಾಜಮುಖಿ ಧೋರಣೆ. ‘ಅವಿರತ’ ಅಂಥದೊಂದು ನಿಲುವಿನ ಸಂಸ್ಥೆ.

***

ಸರ್ಕಾರಿ ಶಾಲೆಗಳಲ್ಲಿ ಬ್ಯಾಗ್‌, ಶೂ, ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ.. ಹೀಗೆ ಎಲ್ಲವನ್ನೂ ಸರ್ಕಾರವೇ ವ್ಯವಸ್ಥೆ ಮಾಡಿದೆ. ಆದರೆ, ನೋಟ್‌ಬುಕ್‌ ವಿತರಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕೊರತೆಯಿಂದ ಎಷ್ಟೋ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳು ಇವೆ. ನಗರದ ‘ಅವಿರತ’ ಸಂಸ್ಥೆ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಂಡು ನೋಟ್‌ಬುಕ್‌ ವಿತರಿಸುವ ಕೆಲಸಕ್ಕೆ ಮುಂದಾಗಿ ಯಶಸ್ವಿಯಾಗಿದೆ.

ನೋಟ್‌ಬುಕ್‌ ವಿತರಣೆ ಒಂದು ಸಾಮಾಜಿಕ ಚಟುವಟಿಕೆಯಂತೆಯೂ ಹಲವೆಡೆ ಚಾಲ್ತಿಯಲ್ಲಿದೆ. ಹಲವಾರು ಸಾಮಾಜಿಕ ಕಾರ್ಯಕರ್ತರು ನೋಟ್‌ಬುಕ್‌ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ನಾವು ಕಾಣುತ್ತೇವೆ. ಆದರೆ, ಬಹುತೇಕ ಸಂಸ್ಥೆಗಳು ಶಾಲೆ ಆರಂಭವಾಗಿ ಅರ್ಧ ವರ್ಷ ಮುಗಿದ ಮೇಲೆ ನೋಟ್‌ಬುಕ್‌ ಕೊಡುವುದರಿಂದ ಮಕ್ಕಳಿಗೆ ಅನುಕೂಲ ಆಗುತ್ತಿಲ್ಲ.

‘ಅವಿರತ’ ಸಂಸ್ಥೆ ಮಾತ್ರ ಶಾಲೆ ಆರಂಭವಾಗುವ ಹೊತ್ತಿಗೆ ಸರಿಯಾಗಿ ಮಕ್ಕಳಿಗೆ ನೋಟ್‌ಬುಕ್‌ ವಿತರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಕಳೆದ 11 ವರ್ಷಗಳಿಂದ ಈ ಕೆಲಸ ತೆರೆಯ ಹಿಂದೆಯೇ ನಡೆಯುತ್ತಿದೆ.

ಪ್ರತಿ ವರ್ಷ ಸುಮಾರು 350 ಸರ್ಕಾರಿ ಶಾಲೆಗಳಲ್ಲಿ ನೋಟ್‌ಬುಕ್‌ ವಿತರಿಸುತ್ತಿದೆ. ಇದಕ್ಕಾಗಿ ಸಂಸ್ಥೆ ₹30 ಲಕ್ಷ ಹಣ ಖರ್ಚು ಮಾಡುತ್ತಿದೆ.

‘ಶಾಲೆ ಆರಂಭವಾಗುವುದೇ ತಡ ನಮ್ಮ ನೋಟ್‌ ಬುಕ್‌ ಮಕ್ಕಳ ಕೈ ಸೇರುತ್ತದೆ. ಇದಕ್ಕಾಗಿ ಮಕ್ಕಳೂ ಕಾಯುತ್ತಿರುತ್ತಾರೆ. ನಾವು ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಅದೇ ಶಾಲೆಗಳಿಗೆ ನೋಟ್‌ಬುಕ್‌ ಕೊಡುತ್ತೇವೆ’ ಎಂದು ಸಂಸ್ಥೆಯ ಸತೀಶ್‌ ಕೆ.ಟಿ. ವಿವರಿಸಿದರು.


ನೋಟ್‌ಬುಕ್‌ ಪಡೆದ ಸಂಭ್ರಮದಲ್ಲಿ ಮಕ್ಕಳು

‘ನಾವು ಹೆಚ್ಚಾಗಿ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುತ್ತೇವೆ. ನಗರದ ಶಾಲೆಗಳಲ್ಲೂ ಬಡ ಮಕ್ಕಳಿರುತ್ತಾರೆ. ಅಂತಹ ಕೆಲವು ಶಾಲೆಗಳನ್ನೂ ಆಯ್ಕೆ ಮಾಡಿಕೊಂಡಿದ್ದೇವೆ. ನೋಟ್‌ಬುಕ್‌ ಮಾತ್ರ ಅಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡುವುದು, ಕಂಪ್ಯೂಟರ್‌ಗಳನ್ನು ವಿತರಿಸುವುದು ಸೇರಿದಂತೆ ಬೇರೆ ಬೇರೆ ಕೆಲಸಗಳನ್ನೂ ಈ ಸಂಸ್ಥೆ ಮಾಡುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಅವಿರತ ಸಂಸ್ಥೆ

ಈ ಸಂಸ್ಥೆಯಲ್ಲಿ ಯಾರೂ ಖಾಯಂ ಸದಸ್ಯರು ಇಲ್ಲ. ಸಂಸ್ಥೆ ಹುಟ್ಟಿಕೊಂಡಿದ್ದೇ ಮಕ್ಕಳ ನೆರವಿಗಾಗಿ. ಫೇಸ್‌ಬುಕ್‌, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಅಭಿರುಚಿ ಹೊಂದಿರುವ ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿಕೊಂಡು ಏನಾದರೂ ಸಾಮಾಜಮುಖಿ ಕೆಲಸ ಮಾಡಬೇಕು ಎಂಬ ಆಲೋಚನೆಯಿಂದ ಹುಟ್ಟಿಕೊಂಡಿದ್ದು ಈ ಸಂಸ್ಥೆ.

‘ಯಾವುದೇ ಸಂಘ, ಸಂಸ್ಥೆಗಳಿಂದ ಹಣ ಕೇಳುವುದಿಲ್ಲ. ಸುಮಾರು 400 ರಿಂದ 500 ಮಂದಿ ಸ್ನೇಹಿತರು ಇದ್ದೇವೆ. ನಮ್ಮ ಸ್ನೇಹಿತರು, ಅವರ  ಸ್ನೇಹಿತರು, ಸಂಬಂಧಿಗಳು ಹೀಗೆ.. ಎಲ್ಲರೂ ಕೈಲಾದಷ್ಟು ಹಣ ಕೂಡಿಸಿ ಪ್ರತಿ ವರ್ಷ ನೋಟ್‌ಬುಕ್‌ ವಿತರಿಸುವ ಕೆಲಸವನ್ನು ಮಾಡುತ್ತೇವೆ’ ಎನ್ನುವುದು ಸತೀಶ್‌ ಅವರ ಮಾತು.

2008ರಲ್ಲಿ 200ಮಕ್ಕಳಿಗೆ ನೋಟ್‌ಬುಕ್‌ ವಿತರಿಸಲು ಸಾಧ್ಯವಾಗಿತ್ತು. 2010ರ ಹೊತ್ತಿಗೆ 1000 ಮಕ್ಕಳನ್ನು ತಲುಪಲಾಯಿತು. 2017ರಲ್ಲಿ 15 ಜಿಲ್ಲೆಗಳ 18,000 ಮಕ್ಕಳಿಗೆ ನೋಟ್‌ಬುಕ್‌ ಸಿಕ್ಕಿದೆ. ಈಗ 350 ಶಾಲೆಯ 27,000 ಮಕ್ಕಳು ಫಲಾನುಭವಿಗಳು. ಒಟ್ಟು 2 ಲಕ್ಷ ನೋಟ್‌ಬುಕ್‌ ವಿತರಿಸಲಾಗಿದೆ.

ಅಗತ್ಯಗಳ ಅರಿವು: ಮಕ್ಕಳ ಅಗತ್ಯಗಳನ್ನು ನೋಡಿಕೊಂಡು ಸಂಸ್ಥೆ ಕೆಲಸ ಮಾಡುತ್ತದೆ. ಸಿಂಗಲ್‌ ಲೈನ್‌, ಡಬಲ್‌ ಲೈನ್‌, ರೂಲ್ಡ್‌, ಅನ್‌ರೂಲ್ಡ್ ಇರುವ ನೋಟ್‌ಬುಕ್‌ಗಳನ್ನು ಲೆಕ್ಕ ಹಾಕಿ ಕೊಡಲಾಗುತ್ತದೆ. ಆ ವರ್ಷಕ್ಕೆ ಎಷ್ಟು ನೋಟ್‌ಬುಕ್‌ ಬೇಕಾಗುತ್ತದೆ ಎಂಬ ಮಾಹಿತಿಯನ್ನು ಅಧ್ಯಾಪಕರಿಂದ ಪಡೆದುಕೊಳ್ಳುತ್ತಾರೆ.

***

ನಾವು ಸುಮಾರು 400 ರಿಂದ 500 ಮಂದಿ ಸ್ನೇಹಿತರು ಇದ್ದೇವೆ. ಎಲ್ಲರೂ ಕೈಲಾದಷ್ಟು ಕೂಡಿಸಿದ ಹಣದಿಂದ ಪ್ರತಿ ವರ್ಷ ನೋಟ್‌ಬುಕ್‌ ವಿತರಿಸುತ್ತೇವೆ. ನಗರದ ಶಾಲೆಗಳಲ್ಲೂ ಬಡ ಮಕ್ಕಳಿರುತ್ತಾರೆ. ಅಂತಹ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡುತ್ತೇವೆ. ಕೆಲವರಿಗೆ ಕಂಪ್ಯೂಟರ್‌ಗಳನ್ನು ವಿತರಿಸುತ್ತೇವೆ.

– ಸತೀಶ್‌, ಅವಿರತ ಸಂಸ್ಥೆ ಸದಸ್ಯ

ಅಂಕಿ ಅಂಶ

* 2017ರಷ್ಟೊತ್ತಿಗೆ 15 ಜಿಲ್ಲೆಗಳ 18,000 ಮಕ್ಕಳಿಗೆ ನೋಟ್‌ಬುಕ್‌!

* ಈಗ 350 ಶಾಲೆಯ 27,000 ಮಕ್ಕಳು ಫಲಾನುಭವಿಗಳು.

* ಒಟ್ಟು 2 ಲಕ್ಷ ನೋಟ್‌ಬುಕ್‌ಗಳ ವಿತರಣೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು