ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುವ ಸ್ಥಳ ಹೇಗಿರಬೇಕು?

Last Updated 5 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳಿಗೆ ‘ಒತ್ತಡಕ್ಕೆ ಒಳಗಾಗಬೇಡಿ.. ಚೆನ್ನಾಗಿ ತಿನ್ನಿ.. ಚೆನ್ನಾಗಿ ನಿದ್ರೆ ಮಾಡಿ..’ ಹೀಗೆ ಸಲಹೆಗಳು, ಉಪದೇಶಗಳು ಸಾಕಷ್ಟು ಸಿಗುವ ಸಮಯವಿದು. ಆದರೆ ಹೇಗೆ ಸಿದ್ಧತೆ ನಡೆಸಬೇಕು, ಯಾವ ರೀತಿ ಓದಬೇಕು ಎಂಬುದು ಬಹಳ ಮುಖ್ಯ. ಬಹಳಷ್ಟು ವಿದ್ಯಾರ್ಥಿಗಳು ಕೊನೆಯ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗುವುದು ಸಾಮಾನ್ಯ. ಎಲ್ಲಿ ಕೂತು ಓದಿದರೆ ಉತ್ತಮ, ಯಾವ ಸ್ಥಳದಲ್ಲಿ ಅಧ್ಯಯನ ನಡೆಸಿದರೆ ಹೆಚ್ಚು ನೆನಪಿನಲ್ಲಿ ಉಳಿಯಬಹುದು ಎಂಬುದು ಕೂಡ ಕೆಲವರಿಗೆ ಗೊಂದಲದ ಪ್ರಶ್ನೆಗಳನ್ನು ಮೂಡಿಸಬಹುದು.

ಏಕಾಗ್ರತೆಗೆ ಭಂಗ ತರುವಂತಹ, ಗದ್ದಲದಿಂದ ಕೂಡಿರುವಂತಹ ಕೊಠಡಿಯಲ್ಲಿ ಕೂತು ಓದುವುದು ಹಲವರಿಗೆ ಕಷ್ಟವೇ. ಹಾಗಂತ ಕೆಲವರಿಗೆ ಓದಲು ಉತ್ತಮ ಎನಿಸಿದ ಸ್ಥಳ ಇನ್ನು ಕೆಲವರಿಗೆ ತೊಂದರೆ ಎನಿಸಬಹುದು. ಯಾವುದೇ ಗದ್ದಲವಿಲ್ಲದೆ, ಏಕಾಂತದಲ್ಲಿ ಕೂತು ಓದುವುದು ಕೂಡ ಕೆಲವರಿಗೆ ರುಚಿಸದಿರಬಹುದು. ಹಿನ್ನೆಲೆಯಲ್ಲಿ ಆಗಾಗ ಮಾತುಕತೆ ಕೇಳಿಬರುವಂತಹ, ಇತರ ವಿದ್ಯಾರ್ಥಿಗಳು ಬಂದು ಹೋಗುವಂತಹ ಗ್ರಂಥಾಲಯದಂತಹ ಜಾಗ ಕೆಲವರಿಗೆ ಇಷ್ಟವಾಗಬಹುದು. ಇನ್ನು ಕೆಲವರಿಗೆ ಸಣ್ಣ ಕ್ಯುಬಿಕಲ್‌ನಲ್ಲಿ ಕುಳಿತು, ಯಾರನ್ನೂ, ಯಾವುದನ್ನೂ ನೋಡದೆ ತಲೆಬಗ್ಗಿಸಿ ಓದುವುದು ರೂಢಿ. ಆದರೆ ನಿಮ್ಮ ಅಧ್ಯಯನದ ರೀತಿಗೆ ಪೂರಕವಾದಂತಹ ವಾತಾವರಣ ಮುಖ್ಯ.

ಉತ್ತಮವಾದ ಅಧ್ಯಯನದ ಸ್ಥಳವನ್ನು ಅವರವರ ಓದಿನ ರೀತಿಗೆ ಅನುಗುಣವಾಗಿ ಹುಡುಕಿಕೊಳ್ಳಲು ಕೆಲವೊಂದು ಟಿಪ್ಸ್‌ ಇಲ್ಲಿದೆ.

ಪ್ರತಿ ದಿನ ಒಂದೇ ಕಡೆ, ಒಂದೇ ಸಮಯದಲ್ಲಿ ಓದುವುದನ್ನು ರೂಢಿಸಿಕೊಳ್ಳಿ. ಅದು ಗ್ರಂಥಾಲಯ ಅಥವಾ ಕಾಲೇಜಿನ ಕೊಠಡಿ ಅಥವಾ ಉದ್ಯಾನದ ಬೆಂಚ್‌.. ಯಾವುದೂ ಆಗಿರಬಹುದು. ನಿಮ್ಮ ಓದಿಗೆ ತೊಂದರೆಯಾಗದಂತೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಒಂದೇ ಕಡೆ ಕೂರುವುದು ಕೆಲವರಿಗೆ ಏಕತಾನತೆ ಎನಿಸಬಹುದು. ಆದರೆ ಅದು ನಿಮ್ಮ ಓದಿಗೆ ಉತ್ತೇಜನ ನೀಡುವುದು ಖಚಿತ.

ಆರಾಮದಾಯಕವಾಗಿರಲಿ:ನೀವು ಓದುವ ಸ್ಥಳ ನಿಮ್ಮ ದೈಹಿಕ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ತಂದೊಡ್ಡಬಾರದು ಅಷ್ಟೆ. ಬೆನ್ನುನೋವು, ಕೈನೋವು.. ಎಂದು ಬಾಧೆ ಪಡುವಂತಿರಬಾರದು. ಜೊತೆಗೆ ನಿಮಗೆ ಅಗತ್ಯವಿರುವ ಪುಸ್ತಕಗಳು, ನೋಟ್ಸ್‌, ಪೆನ್‌ ಮೊದಲಾದವುಗಳನ್ನು ಬಳಿಯಲ್ಲಿಯೇ ಇಟ್ಟುಕೊಳ್ಳುವಂತಿರಬೇಕು. ಸಾಕಷ್ಟು ಬೆಳಕಿರುವ ಸ್ಥಳವಾಗಿರಬೇಕು. ಅದೂ ನೈಸರ್ಗಿಕ ಬೆಳಕಿದ್ದರೆ ಉತ್ತಮ.

ನಿಮ್ಮ ಓದಿನ ರೀತಿಯನ್ನು ಮೊದಲು ತಿಳಿದುಕೊಳ್ಳಿ. ಕೆಲವರಿಗೆ ಟಿ.ವಿ. ಹಚ್ಚಿಕೊಂಡು ಸಣ್ಣದಾಗಿ ದನಿ ಕೇಳಿಸಿಕೊಳ್ಳುತ್ತ ಓದುವುದು ಇಷ್ಟ. ಎಲ್ಲಿ ಕೂತು ಓದಿದರೆ ನಿಮಗೆ ಹೆಚ್ಚು ಲಾಭಕರ ಎಂಬುದನ್ನು ತಿಳಿದುಕೊಂಡು ಸ್ಥಳದ ಆಯ್ಕೆ ಮಾಡಿಕೊಳ್ಳಿ.

ಓದಲು ಯಾವುದು ಅತ್ಯುತ್ತಮ ಸ್ಥಳ ಎಂದ ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚು ಪರಿಣಾಮಕಾರಿಯಾದ ಸ್ಥಳ ಎಂದು ಕೆಲವನ್ನು ಹೇಳಬಹುದು ಅಷ್ಟೆ.

ಗ್ರಂಥಾಲಯ:ಈ ಸ್ಥಳದಲ್ಲಿ ಓದಲು ಸೂಕ್ತವಾದ ವಾತಾವರಣ, ಹೆಚ್ಚು ಆಯ್ಕೆಗಳು ನಿಮಗೆ ಲಭ್ಯ. ಕೆಲವು ಕಡೆ ಪ್ರತ್ಯೇಕ ಕ್ಯುಬಿಕಲ್‌ ವ್ಯವಸ್ಥೆ, ಗುಂಪು ಅಧ್ಯಯನ ನಡೆಸಲು ಕೊಠಡಿಗಳು, ಸೂಕ್ತವಾದ ಮೇಜು– ಕುರ್ಚಿಗಳ ವ್ಯವಸ್ಥೆ ಸಿಗುತ್ತವೆ. ಜೊತೆಗೆ ತಕ್ಷಣಕ್ಕೆ ಅಗತ್ಯವಿರುವ ಪುಸ್ತಕ, ಮಾಹಿತಿ ಕೂಡ ಸಿಗುತ್ತವೆ.

ಮಲಗುವ ಕೊಠಡಿ:ಯಾವುದೇ ತೊಂದರೆಯಿಲ್ಲದೇ ಆರಾಮದಾಯಕವಾಗಿ ಓದಲು ಉತ್ತಮವಾದ ಸ್ಥಳ. ನಿಮಗೆ ಅವಶ್ಯಕವಿರುವ ಕಲಿಕಾ ಉಪಕರಣಗಳು, ಅಧ್ಯಯನ ಸಾಮಗ್ರಿಗಳನ್ನು ನಿಮ್ಮ ಕೈ ಅಳತೆಯಲ್ಲಿಯೇ ಇಟ್ಟುಕೊಳ್ಳಬಹುದು. ಆದರೆ ಟಿ.ವಿ., ಮೊಬೈಲ್‌ ಬಳಸಬೇಕೆನ್ನುವ ವಾಂಛೆಯನ್ನು ನಿಗ್ರಹಿಸಲು ಕಷ್ಟವಾಗಬಹುದು. ಹಾಸ್ಟೆಲ್‌ ಆದರೆ ರೂಮ್‌ಮೇಟ್‌ಗಳಿಂದ ತೊಂದರೆಯಾಗಬಹುದು.

ಶಾಲಾ– ಕಾಲೇಜುಗಳಲ್ಲಿ ಓದಿಗೆಂದೇ ಪ್ರತ್ಯೇಕ ಜಾಗವನ್ನು ಮೀಸಲಿಡುವ ಪರಿಪಾಠ ಕೆಲವೆಡೆ ಇದೆ. ಇದು ಗ್ರಂಥಾಲಯದಿಂದ ಹೊರತಾದ ಜಾಗ. ಗುಂಪು ಅಧ್ಯಯನಕ್ಕೂ ಸೂಕ್ತ. ಆದರೆ ಇತರ ವಿದ್ಯಾರ್ಥಿಗಳ ಜೊತೆ ಹರಟೆ ಹೊಡೆಯುವ ಅಭ್ಯಾಸವಿದ್ದರೆ ಸೂಕ್ತವಲ್ಲ.

ಸಾಮಾನ್ಯವಾಗಿ ಶಾಲಾ– ಕಾಲೇಜುಗಳಲ್ಲಿ ಪರೀಕ್ಷೆಗೆ ಓದಲೆಂದೇ ಬಿಡುವು ನೀಡುವ ಅಭ್ಯಾಸವಿರುತ್ತದೆ. ಆಗ ತರಗತಿಗಳು ನಡೆಯದ ಕೊಠಡಿಯಲ್ಲಿ ಕೂತು ಓದಬಹುದು. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದಲೆಂದೇ ತರಗತಿ ನಡೆಯದ ಕೊಠಡಿಗಳಲ್ಲಿ ಅನುವು ಮಾಡಿಕೊಟ್ಟಿರುತ್ತಾರೆ. ಹಗಲು ಹೊತ್ತು ನೀವು ಅಲ್ಲಿಯ ವ್ಯವಸ್ಥೆಯನ್ನು ಬಳಸಿಕೊಂಡು ಓದಿಕೊಳ್ಳಬಹುದು.

ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲವರು ಕಾಫಿಶಾಪ್‌ನಂತಹ ಸ್ಥಳದಲ್ಲಿ ಒಂದೆರಡು ತಾಸು ಕೂತು ಓದುವುದನ್ನು ನೋಡಿರಬಹುದು. ಲ್ಯಾಪ್‌ಟಾಪ್‌ ಇಟ್ಟುಕೊಂಡು, ಹಿನ್ನೆಲೆಯಲ್ಲಿ ಲಘು ಸಂಗೀತ ಕೇಳಿಸಿಕೊಳ್ಳುತ್ತ, ಮಧ್ಯೆ ಕಾಫಿ, ತಿನಿಸು ಸೇವಿಸುತ್ತ ಓದಬಹುದು. ಆದರೆ ಅದು ಅವರವರ ಅಧ್ಯಯನದ ರೀತಿಯನ್ನು ಅವಲಂಬಿಸಿರುತ್ತದೆ.

ಇನ್ನು ಕೆಲವರು ಮನೆಯಲ್ಲಿ ಅಡುಗೆಕೋಣೆಯಲ್ಲಿರುವ ಊಟದ ಮೇಜಿನ ಮುಂದೆ ಕೂತು ಓದುವುದಿದೆ. ಆದರೆ ಎಲ್ಲಿ ಕೂರಬೇಕು ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಆರಾಮದಾಯಕವಾದ, ಏಕಾಗ್ರತೆಗೆ ಭಂಗ ತರದ, ಓದಿದ್ದೆಲ್ಲ ತಲೆಯೊಳಗೆ ಹೋಗುವಂತಹ ಸ್ಥಳ ಆರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT