ಗುರುವಾರ , ಫೆಬ್ರವರಿ 27, 2020
19 °C

ವರ್ಗಾವಣೆ ಬಯಸಿದ ಶಿಕ್ಷಕಿ ಬಂಧನ; ನಾಲ್ಕೇ ವರ್ಷಕ್ಕೆ ವರ್ಗವಾದರು ಸಿಎಂ ಪತ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ: ತಮ್ಮ ಮಕ್ಕಳೊಂದಿಗೆ ನೆಲೆಸಬೇಕು ಎಂದು ಬಯಸಿ 25 ವರ್ಷಗಳ ಬಳಿಕ ವರ್ಗಾವಣೆ ಕೋರಿದ ಶಿಕ್ಷಕಿರೊಬ್ಬರು ಮಾಡಿದ್ದ ಮನವಿಯನ್ನು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ರಾವತ್‌ ತಿರಸ್ಕರಿಸಿದ್ದು, ಸಾರ್ವಜನಿಕ ಸಭೆಯಲ್ಲಿ ಕೂಗಾಡುವ ಮೂಲಕ ಸಭೆಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಆದರೆ, ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. ತ್ರಿವೇಂದ್ರ ರಾವತ್‌ ಅವರ ಪತ್ನಿಯೂ ಶಿಕ್ಷಕಿಯಾಗಿದ್ದು, ನಾಲ್ಕು ವರ್ಷದಲ್ಲೇ ದುರ್ಗಮ ಪ್ರದೇಶವೊಂದರಿಂದ ವರ್ಗಾವಣೆ ಪಡೆದಿದ್ದಾರೆ. ಬಳಿಕ, 22 ವರ್ಷಗಳಿಂದ ಬದಲಾವಣೆ ಇಲ್ಲದೆ ಡೆಹರಾಡೂನ್‌ನಲ್ಲಿ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಅಂಶ ಗೊತ್ತಾಗಿದೆ.

ತ್ರಿವೇಂದ್ರ ರಾವತ್‌ ಅವರ ಪತ್ನಿ ಸುನೀತಾ ರಾವತ್‌ ಅವರು 1992ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಪೌಡಿ ಗದ್ವಾಲ್‌ನಲ್ಲಿ ಕೆಲಸ ಆರಂಭಿಸಿದರು. 1996ರಲ್ಲಿ ಡೆಹರಾಡೂನ್‌ಗೆ ವರ್ಗಾವಣೆಯಾದರು. 2008ರಲ್ಲಿ ಬಡ್ತಿ ಪಡೆದ ನಂತರವೂ ವರ್ಗಾವಣೆಯಾಗದೆ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅಡಿ ಪಡೆದ ದಾಖಲೆ ಬಹಿರಂಗಗೊಳಿಸಿದೆ.

ಉತ್ತರಾ ಬಹುಗುಣ ಅವರು 25 ವರ್ಷಗಳ ಕಾಲ ಉತ್ತರಕಾಶಿಯಲ್ಲಿ ಕೆಲಸ ನಿರ್ವಹಿಸಿದ್ದರು. ತಮ್ಮ ಪತಿಯ ಸಾವಿನ ಬಳಿಕ ಮಕ್ಕಳೊಂದಿಗೆ ನೆಲೆಸಲು ಡೆಹರಾಡೂನ್‌ಗೆ ವರ್ವಾಗಣೆ ಬಯಸಿದ್ದರು. 57 ವರ್ಷ ವಯಸ್ಸಿನ ಅವರು ಸಿಎಂ ನಡೆಸಿದ ಸಾರ್ವಜನಿಕ ಸಂವಾದದಲ್ಲಿ ವರ್ಗಾವಣೆಗೆ ಸಮ್ಮತಿ ಸಿಗದೆ ಹತಾಶರಾಗಿ ತಾವು ಮಂಡಿಸಿದ ವಾದಕ್ಕೆ ಭಾರಿ ಬೆಲೆಯನ್ನೇ ತೆರುವಂತಾಗಿದೆ. 

ಆದರೆ, ಶಿಕ್ಷಕಿ ಮರಳಿ ವರ್ಗಾವಣೆ ಪಡೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದುರ್ಗಮ ಪ್ರದೇಶದಲ್ಲಿ 58ಕ್ಕಿಂತ ಜನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಬಹು ದೀರ್ಘಕಾಲದಿಂದ ಅಲ್ಲಿದ್ದಾರೆ. ಇವರು ಕ್ರಮಾನುಗತಿಯಲ್ಲಿ 59ನೇಯವರಾಗಿದ್ದಾರೆ. ಕ್ರಮಾನುಗತಿ ಅನುಸಾರ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಕಾರ್ಯದರ್ಶಿ ಭೂಪಿಂದರ್‌ ಕೌರ್‌ ಔಲಾಖ್‌ ಹೇಳಿದ್ದಾರೆ.

ಉತ್ತರಾ ಬಹುಗುಣ ಅವರು ಈ ಮೊದಲು ವರ್ಗಾವಣೆ ಬಯಸಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಶುಕ್ರವಾರ ಸಿಎಂ ಜತೆ ನಡೆದ ಸಂವಾದದಲ್ಲಿ ‘ನಾನು ದುರ್ಗಮ ಪ್ರದೇಶದ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದು, ತನ್ನ ಮಕ್ಕಳೊಂದಿಗೆ ವಾಸಿಸಲು ಬಯಸಿದ್ದೇನೆ. ಡೆಹರಾಡೂನ್‌ನಲ್ಲಿ ನನ್ನ ಮಕ್ಕಳು ಅನಾಥರಂತಿರುವುದನ್ನು ನಾನು ಬಯಸುವುದಿಲ್ಲ. ನನ್ನ ಈಗಿನ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ವೃತ್ತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಉತ್ತರಾ ಬಹುಗುಣ ಅವರು ತನಗೆ ನ್ಯಾಯ ಒದಗಿಸಬೇಕು ಎಂದು ಮುಖ್ಯಮಂತ್ರಿಯ ಬಳಿ ಬೇಡಿಕೆ ಇಟ್ಟು ಒತ್ತಾಯಿಸುತ್ತಿದ್ದಂತೆ ಮಾತಿಗೆ ಮಾತು ಬೆಳೆದಿದೆ.

‘ನಾನು ನನ್ನ ಜೀವನದಲ್ಲಿ ದೇಶಭ್ರಷ್ಟ ಕಾರ್ಯವನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಉತರಾ ಬಹುಗುಣ ಹೇಳಿದರು. ಬಳಿಕ, ಮುಖ್ಯಮಂತ್ರಿ ‘ನಿಮ್ಮ ಮಾತು, ಭಾಷೆ ಮೇಲೆ ಹಿಡಿತವಿರಲಿ’ ಎಂದು ಪ್ರತಿಕ್ರಿಯಿಸಿ, ‘ಇವರನ್ನು ತಕ್ಷಣ ಅಮಾನತುಗೊಳಿಸಿ, ಬಂಧಿಸಿ’ ಎಂದು ಸೂಚಿಸಿದರು.

ಮುಖ್ಯಮಂತ್ರಿಯೊಂದಿಗೆ ಮಾತನಾಡುವ ವೇಳೆ ಶಿಕ್ಷಕಿ ಕಿರುಚಾಡಿದ ಮತ್ತು ‘ಕಳ್ಳ, ವಂಚಕ’ ಎಂದು ಕೂಗಿ, ಸಂವಾದದಿಂದ ಹೊರನಡೆದಿರುವುದು ವಿಡಿಯೊದಲ್ಲಿದೆ.

‘ಬಹುಮುಖ್ಯವಾದ ಸಭೆಗೆ ಅಡ್ಡಿಪಡಿಸಿದ’ ಆರೋಪದ ಮೇಲೆ ಉತ್ತರಾ ಬಹುಗುಣ ಅವರನ್ನು ಬಂಧಿಸಲಾಯಿತು. ಸಂಜೆ ಅವರನ್ನು ಬಿಡುಗಡೆ ಮಾಡಲಾಯಿತು.

ಚಿತ್ರ: ಎನ್‌ಡಿ ಟಿ.ವಿ ವಿಡಿಯೊ ಗ್ರಾಬ್‌

ದೇವರ ಮುಂದೆ ಸತ್ಯ ಹೇಳುವೆ
‘2015ರಲ್ಲಿ ನನ್ನ ಪತಿಯನ್ನು ಕಳೆದುಕೊಂಡೆ ಮತ್ತು ನನ್ನ ಮಕ್ಕಳು ಇಲ್ಲಿ(ಡೆಹರಾಡೂನ್‌) ವಾಸಿಸುತ್ತಿದ್ದಾರೆ. ನನ್ನ ಮಕ್ಕಳನ್ನು ಇಲ್ಲಿ ಬಡುವುದಿಲ್ಲ’ ಎಂದು ಉತ್ತರಾ ಬಹುಗುಣ ಹೇಳಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

‘ನೀವು ವಿಡಿಯೊದಲ್ಲಿ ನೋಡಬಹುದು. ನಾನು ನ್ಯಾಯ ಕೇಳಿದಾಗ ಅವರು ಕೋಪಗೊಂಡರು. ನಾನು ಅಸಹಾಯಕಳಾಗಿದ್ದೇನೆ. ನಾನು ಹಲವು ವರ್ವಗಳಿಂದ ಪ್ರಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದ್ದಕ್ಕೆ ಏನು ಪಡೆದೆ? ಆದ್ದರಿಂದ ನಾನು ಅವರನ್ನು ‘ಕಳ್ಳ’ ಎಂದು ಕರೆದಿದ್ದೇನೆ. ದೇವರು ನನ್ನ ಮುಂದೆ ಬಂದಾಗ ನಾನು ಸತ್ಯವನ್ನೇ ಹೇಳುತ್ತೇನೆ’ ಎಂದಿದ್ದಾರೆ. 

ಸಿಎಂ ಜತೆಗಿನ ಸಂವಾದ ಮತ್ತು ಸುದ್ದಿಗಾರರ ಜತೆ ಶಿಕ್ಷಕಿ ಮಾತನಾಡಿರುವ ದೃಶ್ಯ. ವಿಡಿಯೊ: ಎಎನ್‌ಐ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು