ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ ಬೋಧನೆಗೆ ನೂತನ ಪದ್ಧತಿ

Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮ್ಯಾನೇಜ್‌ಮೆಂಟ್ ಶಿಕ್ಷಣ, ಪಿಜಿಡಿಎಂ ಕೋರ್ಸ್‌ಗಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬೋಧಿಸಿದರೆ ಅದು ಯಶಸ್ವಿ ಕಲಿಕೆ ಆಗಲು ಸಾಧ್ಯವಿಲ್ಲ. ಇದರಿಂದ ಒಬ್ಬ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಪದವಿ ಪಡೆಯಬಹುದೇ ಹೊರತು ಕೌಶಲಗಳನ್ನಲ್ಲ. ಹಾಗಾದರೆ ಬೋಧನೆ ಹೇಗಿರಬೇಕು?

ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಎಂಬಿಎ ತರಗತಿಗೆ ಬೋಧಿಸುವುದು ನಿಜಕ್ಕೂ ಸವಾಲಿನ ಸಂಗತಿ. ಒಬ್ಬ ಮ್ಯಾನೇಜ್‌ಮೆಂಟ್ ಪದವೀಧರ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಆ ಕಂಪನಿಯಲ್ಲಿ ದಿನನಿತ್ಯ ಎದುರಾಗಬಹುದಾದ ಸಮಸ್ಯೆಗಳಿಗೆ ತಾನು ಓದಿರುವ ಜ್ಞಾನ ಹಾಗೂ ಕೌಶಲಗಳ ಸಹಾಯದಿಂದ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಹೀಗಾಗಿ ಪ್ರಾಧ್ಯಾಪಕರಾದವರು ಕೆಲವು ಪರಿಣಾಮಕಾರಿ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ.

ಕೇಸ್‌ಸ್ಟಡಿ ವಿಧಾನ

ಮ್ಯಾನೇಜ್‌ಮೆಂಟ್ ಮೂಲಕಲ್ಪನೆಗಳನ್ನು ನೀವೇ ತಯಾರಿಸಿಕೊಳ್ಳಿ ಅಥವಾ ಯಾವುದೇ ಕಂಪನಿಗಳ ಉದಾಹರಣೆಯನ್ನಿಟ್ಟುಕೊಂಡು ಬೋಧಿಸಿ. ದಿನನಿತ್ಯ ಪತ್ರಿಕೆಗಳಲ್ಲಿ ಬರುವ ಮಾಹಿತಿ ಬಳಸಿ ಆಯಾ ವಿಷಯಗಳ ಪಠ್ಯಕ್ರಮ ಹಾಗೂ ಕಲ್ಪನೆಗೆ ಸಂಬಂಧಪಟ್ಟಂತೆ ವಿವರಿಸಿದರೆ ಕಲಿಕೆ ಅರ್ಥಪೂರ್ಣವೆನಿಸುತ್ತದೆ. ವಿದ್ಯಾರ್ಥಿಗಳಿಗೆ ಕೇಸ್‌ಸ್ಟಡಿಯಲ್ಲಿ ಚರ್ಚಿಸಿರುವ ಸಮಸ್ಯೆಗೆ ಸಲಹೆಯನ್ನು ಕೊಡುವಂತೆ ಕೇಳಿ. ವಿಭಿನ್ನವಾಗಿ ಯೋಜನೆ ಮಾಡುವುದನ್ನು ಅವರು ಕಲಿಯಲಿ.

ಗುಂಪು ಪ್ರಸ್ತುತಿ ಕೌಶಲ

ಪಠ್ಯಕ್ರಮದಲ್ಲಿರುವ ವಿವಿಧ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮೊದಲೇ ನೀಡಿ, ಈ ವಿಷಯದ ಮೇಲೆ ಪ್ರಸ್ತುತಿ (ಪ್ರೆಸೆಂಟೇಶನ್‌)ಯನ್ನು ತಯಾರಿಸುವಂತೆ ಹೇಳಿ. ಇದಕ್ಕೆ ಬೇಕಾಗುವ ಪಠ್ಯಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆ, ವೆಬ್‌ಸೈಟ್, ಜರ್ನಲ್‌ನಲ್ಲಿ ಪ್ರಕಟವಾಗಿರುವ ಲೇಖನಗಳ ಪಟ್ಟಿಯನ್ನು ನೀಡಿ. ಗುಂಪಿನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಪವರ್ ಪಾಯಿಂಟ್ ಮೂಲಕ ಪ್ರಸ್ತುತಿ ನೀಡಲಿ.

ಪರಿಕಲ್ಪನೆ, ಅನ್ವಯ

ಪರಿಕಲ್ಪನೆಗಳನ್ನು ವಿವರಿಸುವಾಗ ಇದು ಮಾರುಕಟ್ಟೆಯಲ್ಲಿ ಹೇಗೆ ಸಹಾಯಕ್ಕೆ ಬರುತ್ತದೆ ಎಂಬುದನ್ನು ಹೇಳಿ. ಇದೇ ವಿದ್ಯಾರ್ಥಿಗಳು ಮುಂದೆ ಮ್ಯಾನೇಜರ್‌ಗಳಾಗಿ ಕೆಲಸ ನಿರ್ವಹಿಸುವಾಗ ಈ ಪರಿಕಲ್ಪನೆಯನ್ನು ಉಪಯೋಗಿಸಿಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು.

ಪರಿಸ್ಥಿತಿ ನಿರ್ವಹಣೆ

ಇದೊಂದು ತುಂಬಾ ಉಪಯುಕ್ತ ಬೋಧನಾ ವಿಧಾನ. ವಿದ್ಯಾರ್ಥಿಗಳಿಗೆ ಒಂದು ವಿಷಯವನ್ನು ವಿವರಿಸಿ, ನಿರ್ದಿಷ್ಟ ಸನ್ನಿವೇಶ ಹಾಗೂ ಪಾತ್ರಗಳನ್ನು ಸೃಷ್ಟಿಸಿಕೊಂಡು ಅಂದರೆ ವಿದ್ಯಾರ್ಥಿಗಳಲ್ಲಿ ಕೆಲವೊಬ್ಬರು ಪ್ರಾಡಕ್ಟ್ ಮ್ಯಾನೇಜರ್, ಗುಣಮಟ್ಟ ನಿರ್ವಹಣಾಧಿಕಾರಿ, ಮಾರ್ಕೆಟಿಂಗ್ ಮ್ಯಾನೇಜರ್, ಹಣಕಾಸು ನಿರ್ವಹಣಾಧಿಕಾರಿ ಹಾಗೂ ಮಾನವ ಸಂಪನ್ಮೂಲಾಧಿಕಾರಿಯಾಗಿ ಕಂಪನಿಗಳಲ್ಲಿ ಎದುರಾಗುವ ಸನ್ನಿವೇಶಗಳನ್ನು ಚರ್ಚಿಸಿ, 15–20 ನಿಮಿಷ ತಮ್ಮ ಪಾತ್ರಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸಲಿ.

ಕ್ಷೇತ್ರ ಯೋಜನೆ

ಬೇರೆ ಬೇರೆ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಷಯಗಳ ಮೇಲೆ ಅಸೈನ್‌ಮೆಂಟ್ ತಯಾರಿಸಲು ಹೇಳಿ. ಇದು ಮಾರ್ಕೆಟಿಂಗ್‌, ಫೈನ್ಸಾನ್ಸ್ ಅಥವಾ ಮಾನವ ಸಂಪನ್ಮೂಲ ಯಾವುದಾದರೂ ಇರಲಿ.

ಗ್ರಾಹಕರ ಖರೀದಿ ವೈಖರಿ, ಕಂಪನಿಯ ಆರ್ಥಿಕ ಕ್ಷಮತೆಯನ್ನು ವಿಶ್ಲೇಷಿಸುವುದು, ಉತ್ತಮ ಮಾನವ ಸಂಪನ್ಮೂಲ ಕಾರ್ಯ ಹಾಗೂ ಅಭ್ಯಾಸಗಳನ್ನು ಕಂಡು ಹಿಡಿಯುವುದು, ಸಂಸ್ಥೆಯಲ್ಲಿನ ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದು.. ಮುಂತಾದ ಅಸೈನ್‌ಮೆಂಟ್ ಕೊಡಿ ಹಾಗೂ ಅವುಗಳ ಮೇಲೆ ವರದಿ ಸಿದ್ಧಪಡಿಸುವಂತೆ ಹೇಳಿ.

ಸಿಮ್ಯುಲೇಶನ್ ಆಟಗಳು

ತಂಡದ ಅಭಿವೃದ್ಧಿ, ನಾಯಕತ್ವ, ಸಂವಹನ ಕಲೆ ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಬೋಧಿಸಿ ನಂತರ ಪರಿಕಲ್ಪನೆಯನ್ನು ತಿಳಿಸಿ. ಹಾಗೆಯೇ ಸಂಖ್ಯಾಶಾಸ್ತ್ರ ಹಾಗೂ ಡೇಟಾ ಅನಾಲಿಟಿಕ್ಸ್ ವಿಷಯಗಳನ್ನು ಸಿಮ್ಯುಲೇಶನ್ಹಾಗೂ ಕಂಪನಿಯ ಉದಾಹರಣೆಗಳ ಮೂಲಕ, ಒಬ್ಬ ನುರಿತ ತರಬೇತುದಾರರನ್ನು ಆಮಂತ್ರಿಸಿ ತರಬೇತಿ ನೀಡಿ.

ಚಲನಚಿತ್ರ /ವಿಡಿಯೊ ಕ್ಲಿಪಿಂಗ್‌

ವಿಶೇಷವಾಗಿ ಮಾರುಕಟ್ಟೆ ನಿರ್ವಹಣೆ, ಜಾಹೀರಾತು, ಸಂವಹನಾ ಮಾಧ್ಯಮ ಇಂತಹ ವಿಷಯಗಳನ್ನು ಕಲಿಸುವಾಗ, ಇತ್ತೀಚಿನ ಜಾಹೀರಾತುಗಳನ್ನು ವಿಡಿಯೊ ಕ್ಲಿಪಿಂಗ್‌, ಯುಟ್ಯೂಬ್‌ಗಳಿಂದ ಡೌನ್‌ಲೋಡ್ ಮಾಡಿ ಅಗತ್ಯಕ್ಕೆ ತಕ್ಕಂತೆ ಬಳಸಿ.

ರಸಪ್ರಶ್ನೆ ಕಾರ್ಯಕ್ರಮ

ಪ್ರತಿಯೊಂದು ಸೆಮಿಸ್ಟರ್‌ನಲ್ಲಿ ಕನಿಷ್ಠ ಎರಡು ಬಾರಿ ವ್ಯವಹಾರಕ್ಕೆ ಸಂಬಂಧಪಟ್ಟ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ. ಕಂಪನಿಯ ನಾಯಕತ್ವ ತರಬೇತಿ, ಆರ್ಥಿಕ ಪರಿಸ್ಥಿತಿ, ಉತ್ತಮ ನಿರ್ಧಾರಗಳು, ಮಾನವ ಸಂಪನ್ಮೂಲ ನೀತಿ ಹಾಗೂ ಪ್ರಾಕ್ಟೀಸ್ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲಿ.

(ಲೇಖಕರು ಸಹಾಯಕ ಪ್ರಾಧ್ಯಾಪಕರು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ,ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT