ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಅರ್ಥೈಸುವುದೇ ದೊಡ್ಡ ಪ್ರಶ್ನೆ

Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಐದು ನಿಮಿಷದ ಮಹತ್ವ ಗೊತ್ತಾಗುವುದು ಯಾವಾಗ ಗೊತ್ತೇ? ಉತ್ತರಪತ್ರಿಕೆಯಲ್ಲಿ ಎಲ್ಲಾ ಅವಶ್ಯಕ ಮಾಹಿತಿಗಳನ್ನು ತುಂಬಿದ್ದಾಗಿದೆ; ಇನ್ನೇನು ಪ್ರಶ್ನೆಪತ್ರಿಕೆ ಕೈಗೆ ಬರುವ ಸಮಯ. ನಿಜಕ್ಕೂ ಐದು ನಿಮಿಷವನ್ನು ಐದು ಸಂವತ್ಸರವನ್ನಾಗಿಸಿ ಬಿಡುವ ಶಕ್ತಿ ಪ್ರಶ್ನೆ ಪತ್ರಿಕೆಗಾಗಿ ಕಾಯುವ ಕಾತರಕ್ಕಿದೆ. ಇದೇ ಕಾತರ, ತಳಮಳ ಹಲವು ಬಾರಿ ಪ್ರಶ್ನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ, ಗೊತ್ತಿರುವ ಉತ್ತರವನ್ನು ತಪ್ಪಾಗಿಯೂ ಬರೆಸಿಬಿಡುತ್ತದೆ.

ಸಾಮಾನ್ಯವಾಗಿ ಬಹಳಷ್ಟು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಡುವ ಸಣ್ಣ ತಪ್ಪುಗಳೇ ಸುಲಭವಾಗಿ ಸಿಗಬೇಕಾದ ಅಂಕಗಳನ್ನು ಕಸಿದುಬಿಡುತ್ತವೆ. ಕೆಲವೊಮ್ಮೆ ಹೆಚ್ಚಿನ ಆತ್ಮವಿಶ್ವಾಸವೂ ಇಂತಹ ಸಂದರ್ಭವನ್ನು ತಂದೊಡ್ಡಬಹುದು.

ಉದಾಹರಣೆಗೆ ದ್ವಿತೀಯ ಪಿಯುಸಿಯ ಇಂಗ್ಲಿಷ್ ಪೇಪರ್‌ನಲ್ಲಿ ಹೀಗೊಂದು ವ್ಯಾಕರಣ ಪ್ರಶ್ನೆ- ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸುವ ಕುರಿತಾಗಿ ಒಂದು ಪತ್ರದ ಮಾದರಿಯನ್ನು ತಯಾರಿಸಬೇಕು. ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಬಂದಿರುವ ಜಾಹೀರಾತಿನ ಪ್ರಕಾರ, ಕೆಳಗೆ ಕೊಟ್ಟಿರುವ ವಿಳಾಸಕ್ಕೆ ವಿದ್ಯಾರ್ಥಿಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸುವಂತೆ ಪತ್ರ ಬರೆಯಬೇಕು. ಆದರೆ ಬಹಳಷ್ಟು ವಿದ್ಯಾರ್ಥಿಗಳು ತಾವೇ ಅವರಿಗೆ ಕೆಲಸ ಕೊಡುವುದಾಗಿ ಬರೆದಿರುತ್ತಾರೆ ಅಥವಾ ಜಾಹೀರಾತು ನೀಡಿದ ಪತ್ರಿಕೆಯ ವಿಳಾಸಕ್ಕೆ ಕೆಲಸ ಬೇಕೆಂದು ಅರ್ಜಿ ಬರೆದುಬಿಡುತ್ತಾರೆ. ಸುಲಭವಾಗಿ ಸಿಗುವ ಅಂಕ ಕೊಂಚವೇ ನಿರ್ಲಕ್ಷ್ಯದಿಂದ ಕೈ ತಪ್ಪಿ ಹೋಗುತ್ತದೆ.

ಕೇಳಿದ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಯಾವುದೋ ಫಾರ್ಮುಲಾಗಳನ್ನು ಹಾಕಿ ಗಣಿತದ ಲೆಕ್ಕಗಳನ್ನು ಬಿಡಿಸುವುದು. ಪದಗಳು ಒಂದೇ ರೀತಿ ಇವೆ ಎನ್ನುವ ಕಾರಣಕ್ಕೆ ಒಂದರ ವ್ಯಾಖ್ಯಾನವನ್ನು ಮತ್ತೊಂದಕ್ಕೆ ಬರೆಯುವುದೂ ಇದೆ. ಉದಾಹರಣೆಗೆ ಇಂಟರ್‌ಪರ್ಸನಲ್ ಕಮ್ಯುನಿಕೇಷನ್ ಮತ್ತು ಇಂಟ್ರಾಪರ್ಸನಲ್ ಕಮ್ಯುನಿಕೇಷನ್ ಮೇಲ್ನೋಟಕ್ಕೆ ಒಂದೇ ರೀತಿ ಇವೆ. ಆದರೆ ಉತ್ತರ ಬೇರೆ ಬೇರೆಯೆ. ಇದು ಫಾರ್ಮುಲಾಗಳನ್ನು ಹಾಕುವಾಗಲೂ ತಪ್ಪಾಗಬಹುದು. ಉತ್ತರ ಬರೆಯುವಾಗ ಕೂಡ ವಿದ್ಯಾರ್ಥಿಗಳು ಗೊಂದಲದಲ್ಲಿ ಅದಲುಬದಲು ಮಾಡುವುದು ಸಾಮಾನ್ಯ. ಇಂತಹ ಗೊಂದಲಗಳಿಂದ ತಪ್ಪಿಸಿಕೊಳ್ಳುವ ಒಂದಿಷ್ಟು ಸಲಹೆಗಳು ಇಲ್ಲಿವೆ.

ಉತ್ತರಿಸಬಹುದಾದ ಪ್ರಶ್ನೆಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳಿ

ಪ್ರಶ್ನೆಪತ್ರಿಕೆಯನ್ನು ಓದುವಾಗಲೇ ನಿಮಗೆ ಉತ್ತರಿಸಲು ಭರವಸೆಯಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿ ಗುರುತು ಹಾಕಿಟ್ಟುಕೊಳ್ಳಿ. ನಂತರ ಉತ್ತರಿಸಲು ಮುಂದಾಗಿ. ಇನ್ನೂ ಉತ್ತರಿಸಲು ಪ್ರಶ್ನೆಗಳು ಉಳಿದಿದ್ದರೆ ತಕ್ಕಮಟ್ಟಿಗೆ ಗೊತ್ತಿರುವ ಪ್ರಶ್ನೆಗಳನ್ನು ನಂತರ ಬರೆಯಬಹುದು.

ಸಮಯದ ಸರಿಯಾದ ಸದ್ಬಳಕೆ

ಸಮಯದ ಅಭಾವ ಕೂಡ ಕೆಲವೊಮ್ಮೆ ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ತೊಡಕಾಗುತ್ತದೆ. ಹೀಗಾಗಿ ಪ್ರಶ್ನೆಗಳಿಗೆ ಇರುವ ಅಂಕಗಳ ಆಧಾರದ ಮೇಲೆ ಉತ್ತರಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿ ಗೊತ್ತಿದೆ ಎನ್ನುವ ಕಾರಣಕ್ಕೆ ಐದು ಅಂಕಗಳ ಪ್ರಶ್ನೆಗೆ ಎರಡು ಅಥವಾ ಮೂರು ಪುಟ ಉತ್ತರ ಬರೆಯುವುದು ವ್ಯರ್ಥ. ಸಮಯದ ಜೊತೆಗೆ ಇದು ಮೌಲ್ಯಮಾಪಕನ ತಾಳ್ಮೆಯನ್ನೂ ಹಾಳುಮಾಡುತ್ತದೆ. ಉತ್ತರಿಸಬೇಕಾದ ಮುಂದಿನ ಪ್ರಶ್ನೆಗಳಿಗೆ ಸಮಯವಿಲ್ಲದೆ ಹೋಗಬಹುದು.

ಪ್ರಶ್ನೆಯಲ್ಲಿ ಚರ್ಚೆ

ಕೆಲವೊಂದು ಪ್ರಶ್ನೆಗಳು ನೇರವಾಗಿ ಉತ್ತರಿಸಿ ಅಥವಾ ಅಭಿಪ್ರಾಯ ತಿಳಿಸಿ ಎನ್ನುವ ಬದಲು ಚರ್ಚಿಸಿ ಎಂದಿರುತ್ತವೆ. ತಕ್ಷಣಕ್ಕೆ ಓದಿದಾಗ ಅದು ನೇರ ಪ್ರಶ್ನೆ ಎನ್ನಿಸಬಹುದು. ಅದಕ್ಕೆ ಬರಿಯ ಅಭಿಪ್ರಾಯ ವ್ಯಕ್ತಪಡಿಸುವ ಬದಲು, ಎರಡೂ ಆಯಾಮಗಳನ್ನು ಬರೆದು ನಂತರ ವಿಶ್ಲೇಷಣೆ ಬರೆದಾಗ ಮಾತ್ರ ಚರ್ಚೆ ಆಗುತ್ತದೆ.

ಬರೆದ ಉತ್ತರಗಳತ್ತ ಕೊನೆಯ ಚಿತ್ತ

ಕೊನೆಯಲ್ಲಿ ಒಂದಿಷ್ಟು ಸಮಯ ಬರೆದ ಉತ್ತರಗಳ ಪರಿಶೀಲನೆಗಾಗಿ ಮೀಸಲಿಡುವುದು ಉತ್ತಮ. ಪುಟಗಳನ್ನು ಮತ್ತೊಮ್ಮೆ ನೋಡುವುದರಿಂದ ಆಗಿರುವ ಕಾಗುಣಿತ ತಪ್ಪುಗಳು, ಸಣ್ಣ ರೇಖಾಚಿತ್ರ ಅಥವಾ ಮರೆತುಹೋಗಿದ್ದ ಇನ್ನೊಂದಿಷ್ಟು ಮಾಹಿತಿಗಳು ನೆನಪಾಗಿ ಸೇರಿಸಬಹುದು. ಬರೆದ ಉತ್ತರ ತಪ್ಪಾಗಿದ್ದರೆ ಪುನಃ ಬರೆಯುವ ಅವಕಾಶವೂ ಸಿಗಬಹುದು.

ಉತ್ತರದ ಸರಿಯಾದ ರಚನೆ

ಪ್ರಬಂಧದಂತಹ ಪ್ರಶ್ನೆಗಳಿದ್ದರೆ ಅದನ್ನು ಓದಿದ ತಕ್ಷಣವೇ ಉತ್ತರಿಸಲು ಮುಂದಾಗುವುದು ಬೇಡ. ಒಂದೆರಡು ನಿಮಿಷ ಮನಸ್ಸಿನಲ್ಲಿಯೇ ಪ್ರಬಂಧದ ಸ್ವರೂಪವನ್ನು ರಚಿಸಿ. ಇದು ಉತ್ತರವನ್ನು ವಿವಿಧ ಭಾಗಗಳಾಗಿ ವಿಂಗಂಡಿಸಿ ಬರೆಯುವಾಗಿನ ನಿಮ್ಮ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವಿಷಯ ಚೌಕಟ್ಟಿನ ಒಳಗೆ ಇರುತ್ತದೆ. ಪೀಠಿಕೆ, ಒಡಲು ಮತ್ತು ಸಮಾರೋಪ ಸಾಮಾನ್ಯವಾಗಿ ಪ್ರಬಂಧಗಳನ್ನು ಬರೆಯುವಾಗ ಬಳಸುವ ವಿಧಾನ. ತುಂಬಾ ವಿದ್ಯಾರ್ಥಿಗಳು ಸಮಾರೋಪ ಬರೆಯುವಾಗ ಅವರ ಕೊನೆಯ ತೀರ್ಮಾನವನ್ನು ಬರೆಯುತ್ತಾರೆ. ಅಲ್ಲಿ ಇಡೀ ವಿಷಯದ ಬಗೆಗಿನ ಅವರ ಒಟ್ಟು ನಿಲುವಿರುವುದು ಒಳಿತು.

ಎಲ್ಲಾ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಳ್ಳಿ

ಪರೀಕ್ಷೆಯಲ್ಲಿನ ಒತ್ತಡದ ವಾತಾವರಣ ಸಾಮಾನ್ಯವಾಗಿ ಪ್ರಶ್ನೆಗಳನ್ನು ತಪ್ಪಾಗಿ ಓದುವಂತೆ ಮಾಡುತ್ತದೆ. ಉತ್ತರ ಬರೆಯಲು ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಮಾಡುತ್ತಿರುವ ತಪ್ಪಿನ ಅರಿವಾಗುತ್ತದೆ. ಮತ್ತೆ ಮೊದಲಿನಿಂದ ಸರಿ ಉತ್ತರ ಬರೆಯುವಷ್ಟರಲ್ಲಿ ಸಮಯದ ವ್ಯಯವಾಗುವುದು ಖಂಡಿತ. ಪ್ರಶ್ನೆಪತ್ರಿಕೆಯಲ್ಲಿನ ಅಷ್ಟೂ ಪ್ರಶ್ನೆಗಳಿಗೆ ಉತ್ತರ ಬರೆಯದಿದ್ದರೂ ಎಲ್ಲಾ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಳ್ಳುವುದು ಒಳ್ಳೆಯದು. ಇದು ಉತ್ತರ ಗೊತ್ತಿರುವ ಮತ್ತು ಸುಲಭವಾಗಿ ಉತ್ತರಿಸುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ ಮೌಲ್ಯಮಾಪಕರಿಗೆ ವಿಷಯದ ಬಗೆಗಿನ ನಿಮ್ಮ ಜ್ಞಾನವನ್ನು ತಿಳಿಸುತ್ತದೆ.

(ಲೇಖಕಿ ಉಪನ್ಯಾಸಕಿ, ವಿಶ್ವವಿದ್ಯಾಲಯ ಕಲಾ ಕಾಲೇಜು, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT