ಶುಕ್ರವಾರ, ಅಕ್ಟೋಬರ್ 23, 2020
25 °C
ಹೆಣ್ಣು ಮಕ್ಕಳಿಗಾಗಿ ‘ಕಲಿಕೆ ಎಂದಿಗೂ ನಿಲ್ಲದು’: ಯುನೆಸ್ಕೋ ಜಾಗತಿಕ ಅಭಿಯಾನ

PV Web Exclusive| ಕೋವಿಡ್‌: ಬಾಲೆಯರ ಕಲಿಕೆಗೆ ತೊಡಕಾಗದಿರಲಿ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Student

ಕೊರೋನೋತ್ತರ ಕಾಲಘಟ್ಟದಲ್ಲಿ ವಿಶ್ವದ 1.10 ಕೋಟಿ ಬಾಲೆಯರು ಮತ್ತೆ ಶಾಲೆಗೆ ಹೋಗಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ವಿಪರ್ಯಾಸವೆಂದರೆ, ಕೊರೊನಾ ಬರುವುದಕ್ಕೂ ಮುಂಚೆಯಿಂದಲೇ 1.30 ಕೋಟಿ ಬಾಲೆಯರು ಶಾಲೆಯಿಂದ ಹೊರಗುಳಿದಿದ್ದಾರೆ. ಇಂಥ ಆಘಾತಕಾರಿ ಅಂಕಿ ಅಂಶವನ್ನು ಮುಂದಿಟ್ಟುಕೊಂಡೇ, ಹೆಣ್ಣು ಮಕ್ಕಳಿಗಾಗಿ ಯುನೆಸ್ಕೋ ಈಗ ‘ಕಲಿಕೆ ಎಂದಿಗೂ ನಿಲ್ಲದು’ (UNESCO#LearningNeverStops campaign) ಎಂಬ ಜಾಗತಿಕ ಅಭಿಯಾನವನ್ನು ಆರಂಭಿಸಿದೆ.

ಕೊರೊನಾ ಸೋಂಕು ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ, ಶಾಲೆಗಳ ಮೇಲೆ ಬೃಹತ್‌ ಪರಿಣಾಮ ಬೀರಿದೆ. ಶಾಲೆಗಳು ಎಂದರೆ ಕೇವಲ ಕಟ್ಟಡಗಳಲ್ಲ. ಕಲಿಯುವ ನಿರಂತರ ಪ್ರಕ್ರಿಯೆಯ ಸಂಕೇತ. ವಿದ್ಯಾರ್ಥಿಗಳು–ಶಿಕ್ಷಕರು–ಪೋಷಕರ ತ್ರಿವಳಿ ಜಗತ್ತು. ಸಮಾಜವೆಂಬ ಬೃಹತ್‌ ಘಟಕ ಮತ್ತು ಅದರ ಮೂಲ ಘಟಕವಾದ ಕುಟುಂಬದ ಸೇತುಬಂಧವೇ ಶಾಲೆ ಎಂಬ ಜಗತ್ತು. ಇಂಥ ಜಗತ್ತು ಗೊಂದಲದ ಪ್ರಪಾತದಲ್ಲಿ ಬಿದ್ದಿದೆ. ಶಾಲೆಬಾಗಿಲು ತೆರೆಯುವುದೇ ಸರ್ಕಾರಕ್ಕೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಬೃಹತ್‌ ಸವಾಲಾಗಿ ಪರಿವರ್ತನೆಯಾಗಿದೆ.

ಇಂಥ ಸವಾಲಿನ ನಡುವೆಯೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮಿಡಿಯುವ ಅಗತ್ಯವನ್ನು ಯುನೆಸ್ಕೋ ಪ್ರತಿಪಾದಿಸಿರುವುದನ್ನು ಲಿಂಗತಾರತಮ್ಯ ನಿವಾರಣೆಯ ಶೈಕ್ಷಣಿಕ ಪ್ರಯತ್ನವಾಗಿಯಷ್ಟೇ ನೋಡಲಾಗದು. ಅದು ಸಾಮಾಜಿಕ ಬದಲಾವಣೆಯ ದರ್ಶನದೃಷ್ಟಿಯಿಂದ ಮೂಡಿದ ಚಿಂತನೆಯೂ ಹೌದು. ಇದನ್ನೊಂದು ಜಾಗತಿಕ ಅಭಿಯಾನವಾಗಿ ರೂಪಿಸಲು ಹೊರಟಿರುವುದು, ಹೆಣ್ಣು ಮಕ್ಕಳ ಪರವಾದ ಯುನೆಸ್ಕೋ ಹೃದಯವಂತಿಕೆಯನ್ನೂ ಸೂಚಿಸುತ್ತದೆ.

ಯುನೆಸ್ಕೋ ಪ್ರಕಾರ ವಿಶ್ವದ 100.5 ಕೋಟಿ ಮಕ್ಕಳು ಕೋವಿಡ್‌ 19ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಪೈಕಿ 7.67 ಕೋಟಿ ಹೆಣ್ಣುಮಕ್ಕಳಿದ್ದಾರೆ. ಶಾಲೆಗಳು ಮುಚ್ಚಿರುವ ಸನ್ನಿವೇಶದಲ್ಲಿ ಇವರೆಲ್ಲರಿಗೂ ಕಲಿಕೆಯ ದಾರಿಗಳು ಮುಚ್ಚಿಹೋಗದಂತೆ ಕಾಳಜಿ ತೋರಬೇಕಾಗಿದೆ ಎಂಬುದೇ ಅಭಿಯಾನದ ಮೂಲ ಆಶಯ.

ಈ ಹೆಣ್ಣುಮಕ್ಕಳ ಪೈಕಿ ಪೂರ್ವಪ್ರಾಥಮಿಕ ಶಾಲೆಯಿಂದ ಪ್ರೌಢ, ಉನ್ನತ ಶಿಕ್ಷಣದವರೆಗಿನ 1.10 ಕೋಟಿ ಹೆಣ್ಣು ಮಕ್ಕಳು ಮತ್ತೆ ತಮ್ಮ ತರಗತಿಗಳಿಗೆ ವಾಪಾಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಲಿಂಗತಾರತಮ್ಯ, ಮಹಿಳಾ ಶಿಕ್ಷಣದ ಕುರಿತು ದಶಕಗಳಿಂದ ಮೂಡಿಸಿದ ಜಾಗೃತಿ ಪ್ರಯತ್ನಗಳೂ ಸೋಲುವ ಸಾಧ್ಯತೆ ಇದೆ. ಅದಷ್ಟೇ ಅಲ್ಲದೆ, ಪ್ರಾಯಕ್ಕೆ ಮುನ್ನವೇ ಗರ್ಭಧಾರಣೆ, ಬಾಲ್ಯವಿವಾಹ ಮತ್ತು ಹಿಂಸೆಗಳಿಗೂ ದಾರಿ ಮಾಡುತ್ತದೆ ಎಂಬುದು ಯುನೆಸ್ಕೋ ಆತಂಕ.

ಹೀಗಾಗಿಯೇ ಶಾಲೆಗಳು ಮುಚ್ಚಿರುವಾಗಲೂ ಹೆಣ್ಣು ಮಕ್ಕಳು ಕಲಿಕೆಗೆ ಯಾವುದೇ ಅಡ್ಡಿ–ಆತಂಕಗಳಿರಬಾರದು. ಶಾಲೆಗಳು ತೆರೆದ ಬಳಿಕವೂ ಸುರಕ್ಷಿತವಾಗಿ ಹೋಗಿಬರುವಂಥ ವಾತಾವರಣ ನಿರ್ಮಾಣವಾಗಬೇಕು. ಕೊರೊನಾಗೂ ಮುಂಚೆಯಿಂದಲೇ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳು ಶಾಲೆಗೆ ಬರುವಂತಾಗಲು ಅಂತರರಾಷ್ಟ್ರೀಯ ಸಮುದಾಯಗಳು ದುಡಿಯಬೇಕು ಎಂದು ಯುನೆಸ್ಕೋ ಕರೆ ನೀಡಿದೆ.

ಕೊರೊನಾ ಕಾಲದ ಸಂಕಷ್ಟವನ್ನು ಹೆಣ್ಣು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಒಂದು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ ಎಂಬ ಪ್ರತಿಪಾದನೆಯನ್ನೂ ಮಾಡಿದೆ.

ಯುವ ಕಾರ್ಯಕರ್ತರು ಮತ್ತು ಸಮುದಾಯ ರೇಡಿಯೋಗಳು, ಸ್ಥಳೀಯ ಮಟ್ಟದಲ್ಲಿ ಕಾರ್ಯನಿರತರಾದ ಸ್ವಯಂಸೇವಾ ಸಂಸ್ಥೆಗಳು, ಶಿಕ್ಷಣ ತಜ್ಞರು, ಜನರನ್ನು ಪ್ರಭಾವಿಸಬಲ್ಲ ವ್ಯಕ್ತಿತ್ವದವರು, ಬಾಲೆಯರು ಮತ್ತು ಮಹಿಳೆಯರ ಹಕ್ಕುಗಳ ಪರ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಅವರ ಕಾರ್ಯಜಾಲದ ಮೂಲಕ ಅಭಿಯಾನದ ಸಂದೇಶವನ್ನು ಜಗತ್ತಿನಾದ್ಯಂತ ಸಾರುವಲ್ಲಿ ಪ್ರಮುಖರು ಎಂದು ಗುರುತಿಸಿ ಆಗಿದೆ.

140 ದೇಶಗಳು: ಜಾಗತಿಕ ಅಭಿಯಾನದ ಸಲುವಾಗಿಯೇ ಯುನೆಸ್ಕೋ ಜೊತೆಗೆ ವಿಶ್ವಸಂಸ್ಥೆಯ 140 ಸದಸ್ಯ ರಾಷ್ಟ್ರಗಳೊಂದಿಗೆ ಹಲವು ಸಂಘ–ಸಂಸ್ಥೆಗಳು, ಶಿಕ್ಷಣ ತಜ್ಞರು, ನಾಗರಿಕರು ಈಗಾಗಲೇ ಕೈಜೋಡಿಸಿದ್ದಾರೆ. ಈ ಜಂಟಿ ಪ್ರಯತ್ನದ ಪ್ರಮುಖ ಆಶಯವೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಲಿಂಗಸಮಾನತೆಯನ್ನು ತರುವುದು. ಶಿಕ್ಷಣ ಕ್ಷೇತ್ರದಲ್ಲಿ ಲಿಂಗತಾರತಮ್ಯ ನಿವಾರಣೆಯ ಇತ್ತೀಚಿನ ದಶಕಗಳಲ್ಲಿ ನಡೆದಿರುವ ಪ್ರಯತ್ನಗಳು ಹಾಗೂ ಕ್ಷೇತ್ರದ ಮೇಲೆ ಕೋವಿಡ್‌ 19– ಪರಿಣಾಮಗಳನ್ನು ವಿಶ್ಲೇಷಿಸುವುದು ಕೂಡ ಇದರ ಭಾಗವೇ ಆಗಿದೆ.

ಯುನೆಸ್ಕೋ ಸಂದೇಶ: ವಿವಿಧ ಕ್ಷೇತ್ರಗಳ ಮಂದಿಗೆ ಯುನೆಸ್ಕೋ ಸ್ಪಷ್ಟ ಸಂದೇಶವನ್ನೂ ನೀಡಿದೆ.

ನೀವು ಯಾರೇ ಆಗಿರಬಹುದು. ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದರೆ ನಿಮ್ಮ ಗ್ರೂಪ್‌ಗಳಲ್ಲಿ ಈ ಅಭಿಯಾನದ ಕುರಿತು ಹಂಚಿಕೊಳ್ಳಿ. ಪತ್ರಕರ್ತರಾಗಿದ್ದರೆ ಅಭಿಯಾನದ ಕುರಿತು ನಿಮ್ಮ ಭಾಷೆಯಲ್ಲಿ ನಿಮ್ಮ ಸಮುದಾಯಗಳಿಗಾಗಿ ವಿಶೇಷ ಲೇಖನಗಳನ್ನು ಬರೆಯಿರಿ. ಪೋಷಕರಾಗಿದ್ದರೆ, ನಿಮ್ಮ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ತೋರಿ.

ನೀವು ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಸಹಪಾಠಿಗಳ ಪೈಕಿ ಯಾರಾದರೂ ಶಾಲೆಗೆ ಬರದೇ ಇದ್ದರೆ ನಿಮಗೆ ತಿಳಿಯುತ್ತದೆ. ಅವರನ್ನು ಮತ್ತೆ ಶಾಲೆಗೆ ಬರುವಂತೆ ಮಾಡಬಹುದು. ಅದಕ್ಕಾಗಿಯೇ ‘ಯುಥ್ ಅಡ್ವೊಕೇಸಿ ಟೂಲ್‌ಕಿಟ್‌’ (youth advocacy tool kit) ’ ಅನ್ನು ಸಿದ್ಧಪಡಿಸಲಾಗಿದೆ. ಅದರ ಮೂಲಕ ಪ್ರಯತ್ನಿಸಬಹುದು.

ಶಿಕ್ಷಕರಾಗಿದ್ದರೆ ನಿಮಗಾಗಿಯೇ ‘Girls back to school guide' ಇದೆ. ಅದರ ಮೂಲಕವೇ ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನಗಳನ್ನು ನಡೆಸಬಹುದು ಸರ್ಕಾರದ ನಿರ್ಧಾರಗಳ ಸಂದರ್ಭದಲ್ಲಿ ಶಾಸಕರು, ಸಂಸದರು ಈ ಅಂಶದ ಕುರಿತು ಗಮನ ಸೆಳೆಯಲುಬಹುದು ಎಂದೂ ಯುನೆಸ್ಕೋ ಹೇಳಿದೆ. ಸಮುದಾಯ ರೇಡಿಯೋಗಳಿಗೂ ಟೂಲ್‌ಕಿಟ್‌ (community radio tool kit) ಸಿದ್ಧಪಡಿಸಿದೆ.

ಶಾಲೆಗಳು ಆರಂಭವಾದರೆ ಹೆಣ್ಣು ಮಕ್ಕಳು ಮತ್ತೆ ಶಾಲೆಗೆ ಖುಷಿಯಿಂದ ಬರಬೇಕು. ಶಾಲೆ ಬಿಟ್ಟವರಿಗೂ ಇದು ಸಾಧ್ಯವಾಗಬೇಕು. ಅದಕ್ಕಾಗಿ, ಯುನೆಸ್ಕೋ ಜಾಗತಿಕ ಅಭಿಯಾನದ ಜೊತೆಗೆ ಎಲ್ಲರೂ ಕೈ ಜೋಡಿಸಬೇಕು.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು