ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ರಾಮದ ಶಾಲೆಗೆ ‘ಪರಿಸರ ಮಿತ್ರ’ ಪ್ರಶಸ್ತಿ

ಕ್ಲಸ್ಟರ್‌ ಮಟ್ಟದ ಉತ್ತಮ ಶಾಲೆ ಎಂಬ ಹಿರಿಮೆ l ಶಾಲಾ ಅಂಗಳದಲ್ಲಿವೆ 200ಕ್ಕೂ ಹೆಚ್ಚು ವೃಕ್ಷ ಪ್ರಭೇಧ
ಅಕ್ಷರ ಗಾತ್ರ

ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನೀರಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕುಗ್ರಾಮ ಮರಗಂಟನಾಳ ಹಿರಿಯ ಪ್ರಾಥಮಿಕ ಶಾಲೆ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ. 2018–19ರಲ್ಲಿ ಜಿಲ್ಲಾ ಮಟ್ಟದ 'ಪರಿಸರ ಮಿತ್ರ ಹಳದಿ ಶಾಲೆ'ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ವಿಶೇಷ.

1965ರಲ್ಲಿ 15 ಮಕ್ಕಳಿಂದ ಆರಂಭಗೊಂಡ ಪ್ರಾಥಮಿಕ ಶಾಲೆ ಹತ್ತು ಹಲವು ಸೌಲಭ್ಯಗಳ ಕೊರತೆ ಮಧ್ಯೆ 2009ರಲ್ಲಿ ಹೊಸ ಕಟ್ಟಡದ ಶಾಲೆಗೆ ಸ್ಥಳಾಂತರಗೊಂಡಿದೆ. ಜಹಗೀರದಾರ ಕುಟುಂಬ ನೀಡಿದ 2 ಗುಂಟೆ ಜಮೀನಿನಲ್ಲಿ 8 ಕೊಠಡಿ ಮಂಜೂರಾಗಿದ್ದು 4 ಕೊಠಡಿಗಳು ಮಾತ್ರ ಪೂರ್ಣಗೊಂಡಿವೆ.

ಗ್ರಾಮದಲ್ಲಿ ಜನಸಂಖ್ಯೆ 1200 ರಷ್ಟಿದ್ದು, 150 ಕುಟುಂಬಗಳು ವಾಸಿಸುತ್ತಿವೆ. ಗ್ರಾಮ ಪಂಚಾಯಿತಿಗೆ 3 ಜನ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ್ದು ಆ ಪೈಕಿ ಯಲ್ಲಮ್ಮ ಗದ್ದೆಪ್ಪ ಗೌಂಡಿ ಎಂಬುವವರು ನೀರಲಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಗ್ರಾಮಸ್ಥರೆ ಶಾಲಾ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಪ್ರಯೋಗಾಲಯದ ಕೊರತೆ ಹೊರತುಪಡಿಸಿ ಅಗತ್ಯ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಕೈತೋಟ, ‌ ವಿದ್ಯುತ್‌, ಗಣಿತದ ಕಿಟ್‌, ಬ್ಯಾಂಡ್‌ ಶೆಟ್‌, ಸಾಂಸ್ಕೃತಿಕ, ಶಾಲಾ ಸಂಸತ್‌ ಹೊಂದಿದೆ. ಎಲ್‌ಇಡಿ ಸ್ಕ್ರೀನ್‌ ಮೂಲಕ ಪಠ್ಯ ವಿಷಯ ಬೋಧನೆ, 200ಕ್ಕೂ ಹೆಚ್ಚು ವೈವಿಧ್ಯಮಯ ಗಿಡಮರಗಳ ಪೋಷಣೆ ಇಲ್ಲಿನ ವಿಶೇಷ.

ಸರ್ಕಾರದ ವಿವಿಧ ಯೋಜನೆಗಳು, ಸಾರ್ವಜನಿಕರ ಸಹಕಾರದಿಂದ ಎಷ್ಟೆಲ್ಲ ಸೌಲಭ್ಯ ಪಡೆದಿದ್ದರು ಕೂಡ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಕ್ಕೆ ರಂಗ ಮಂದಿರದ ಕೊರತೆ ಎದ್ದುಕಾಣುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಕ್ರೀಡಾಂಗಣದ ಕೊರತೆ ಮಧ್ಯೆ ಮಕ್ಕಳು ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದವರೆಗೆ ಉತ್ತಮ ಪ್ರದರ್ಶನ ನೀಡಿದ್ದು ಐತಿಹ್ಯ.

ಗ್ರಾಮದ ಹಿರಿಯರು, ಶಿಕ್ಷಕರು, ಪ್ರತಿನಿಧಿಗಳು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಸಮವಸ್ತ್ರ, ಬಿಸಿಯೂಟಕ್ಕೆ ತಟ್ಟೆ, ಲೋಟ, ಕುಡಿಯುವ ನೀರಿನ ಗುಮ್ಮಿ, ನಲ್ಲಿ ಜೋಡಣೆ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಿಕೊಟ್ಟಿದ್ದು ಸರ್ಕಾರ ಹೆಚ್ಚುವರಿ ಜಮೀನು ಕೊಡಿಸಲು ಮುಂದಾಗಬೇಕು ಎಂದು ಮುಖ್ಯಗುರು ವೆಂಕಟೇಶ ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT