ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ನಿತ್ಯ ಮೊಳಗುತ್ತೆ ‘ನೀರಿನ ಗಂಟೆ’!

ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ
ಅಕ್ಷರ ಗಾತ್ರ

ನರೇಗಲ್: ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು ಕೇರಳ ಸರ್ಕಾರ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ‘ವಾಟರ್‌ ಬೆಲ್‌’ ಯೋಜನೆ ಜಾರಿಗೊಳಿಸಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ನರೇಗಲ್ ಹೋಬಳಿಯ ನಾರಾಯಣಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ‘ನೀರಿನ ಗಂಟೆ’ ಅಳವಡಿಸಲಾಗಿದೆ. ಈ ಮೂಲಕ ಈ ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಶಾಲೆಯಲ್ಲಿ ಪ್ರತಿದಿನ ಬೆಳಿಗ್ಗೆ 11ಕ್ಕೆ, ಮಧ್ಯಾಹ್ನ 2.30ಕ್ಕೆ ಹಾಗೂ ಸಂಜೆ 4ಕ್ಕೆ ಮೂರು ಬಾರಿ ‘ನೀರಿನ ಗಂಟೆ’ ಮೊಳಗುತ್ತದೆ. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ನೀರು ಕುಡಿಯುತ್ತಾರೆ. ‘ಬೇಸಿಗೆಯಲ್ಲಿ ನಾಲ್ಕು ಬಾರಿ ನೀರಿನ ಗಂಟೆ ಬಾರಿಸಲಾಗುತ್ತದೆ’ ಎಂದು ಮುಖ್ಯ ಶಿಕ್ಷಕಿ ಮಮತಾ ಟಿ. ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ‘ನೀರಿನ ಗಂಟೆ’ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದರು. ಆದರೆ, ನಾರಾಯಣಪುರ ಶಾಲೆಯಲ್ಲಿ ಈ ಯೋಜನೆ ಈಗಾಗಲೇ ಜಾರಿಗೆ ಬಂದಿದೆ.

‘ನೀರಿನ ಗಂಟೆ’ ಯೋಜನೆಗೆ ಬಾರಿ ಮಹತ್ವ ಇದೆ. ನೀರು ಜೀವ ಜಲ. ವೈದ್ಯರು ಕೂಡ ‘ಚೆನ್ನಾಗಿ ನೀರು ಕುಡಿಯಿರಿ’ ಎಂದು ಹೇಳುತ್ತಾರೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಉತ್ತಮ ಆರೋಗ್ಯ ಹವ್ಯಾಸ ಕಲಿಸುವುದು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಧಾರವಾಡದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ನಿರ್ದೇಶಕ ಎಸ್.ಎಸ್.ಹಿರೇಮಠ ಅವರು ಶಾಲೆಗೆ ಈ ನೀರಿನ ‘ನೀರಿನ ಗಂಟೆಯನ್ನು’ ನೀಡಿದ್ದಾರೆ.

‘ನಾರಾಯಣಪುರ ಗ್ರಾಮದಲ್ಲಿ ಸರ್ಕಾರಿ ಶಾಲೆ ಮಾತ್ರ ಇದೆ. ಇಲ್ಲಿಗೆ ಬರುವರೆಲ್ಲ ರೈತರು, ಕೂಲಿ ಕಾರ್ಮಿಕರ ಮಕ್ಕಳು. ಇವರು ಮನೆಗಿಂತ ಹೆಚ್ಚು ಸಮಯವನ್ನು ಶಾಲೆಯಲ್ಲೇ ಕಳೆಯುತ್ತಾರೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ನೀರು ಎಷ್ಟು ಮಹತ್ವ ಎನ್ನುವುದನ್ನು ಈ ಗಂಟೆ ನೆನಪಿಸುತ್ತದೆ’ ಎನ್ನುತ್ತಾರೆ ಅವರು ಶಿಕ್ಷಕರು.

‘ಕೇರಳ ಯೋಜನೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದ ಇಂದ್ರಪ್ರಸ್ಥ ಎಂಬ ಖಾಸಗಿ ಶಾಲೆಯಲ್ಲಿ ಇದನ್ನು ಅಳವಡಿಸಿರುವ ಮಾಹಿತಿ ಲಭಿಸಿತು. ಸರ್ಕಾರಿ ಶಾಲೆಯಲ್ಲಿ ಯಾಕೆ ಇದನ್ನು ಅಳವಡಿಸಿಕೊಳ್ಳಬಾರದು ಎಂದು ಯೋಜನೆ ರೂಪಿಸಿ, ಇದನ್ನು ಜಾರಿಗೆ ತಂದಿದ್ದೇವೆ’ ಎಂದು ಸಿಬ್ಬಂದಿ ಲಲಿತಾ ದಾಸರ, ಗ್ಯಾನಪ್ಪ ಡೊಣ್ಣಿ, ಜರೀನಾ ರಿಸಲ್ದಾರ, ರವಿ ಪಡೆಸೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT