ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಪಠ್ಯಕ್ರಮ ಒಳ್ಳೇದು? ಮಗುವನ್ನು ಶಾಲೆಗೆ ಸೇರಿಸುವ ಮೊದಲು ಇದನ್ನೊಮ್ಮೆ ಓದಿಬಿಡಿ

Last Updated 6 ಏಪ್ರಿಲ್ 2019, 4:30 IST
ಅಕ್ಷರ ಗಾತ್ರ

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಾಲೆಗಳಿಗೆಮಕ್ಕಳನ್ನು ದಾಖಲಿಸುವಯೋಚನೆಯಲ್ಲಿ ಪಾಲಕರಿದ್ದಾರೆ. ‘ಮಗುವನ್ನು ಯಾವ ಶಾಲೆಗೆ ಸೇರಿಸಬೇಕು’ ಎಂಬ ಪ್ರಶ್ನೆ ಎದುರಾದಾಗಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್), ಐಸಿಎಸ್‌ಇ (ಇಂಡಿಯನ್‌ ಸರ್ಟಿಫಿಕೇಟ್‌ ಅಫ್‌ ಸೆಕೆಂಡರಿ ಎಜುಕೇಷನ್‌) ಅಥವಾ ರಾಜ್ಯ ಸರ್ಕಾರಗಳು ರೂಪಿಸುವ ಪಠ್ಯಕ್ರಮ ಬೋಧಿಸುವ(ಸ್ಟೇಟ್ ಬೋರ್ಡ್‌ ಸಿಲಬಸ್) ಶಾಲೆಗೆ ಸೇರಿಸಬೇಕೇ ಎಂಬ ಗೊಂದಲ ಉಂಟಾಗುವುದು ಸಹಜ.

ನಿಮ್ಮ ಮಗುವನ್ನು ಇದೇ ವರ್ಷ ಶಾಲೆಗೆ ಸೇರಿಸುವ ಪಾಲಕರು ನೀವಾಗಿದ್ದರೆಈ ವರದಿ ಓದಿದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಿ.

ಸಿಬಿಎಸ್‌ಇ

ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆ ಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್). ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುವಈ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ರೂಪಿಸಿರುವ ಪಠ್ಯಕ್ರಮಅನುಸರಿಸಲಾಗುತ್ತದೆ. ಪ್ರಸ್ತುತ ಭಾರತದಲ್ಲಿ 19,316 ಮತ್ತು ವಿಶ್ವದ ವಿವಿಧೆಡೆ (28 ದೇಶಗಳಲ್ಲಿ) 211 ಸಿಬಿಎಸ್‌ಇ ಶಾಲೆಗಳಿವೆ.

ಇದೇ ಸಿಬಿಎಸ್‌ಸಿರಾಷ್ಟ್ರಮಟ್ಟದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸುವ ಜೆಇಇ, ನೀಟ್‌ ಪರೀಕ್ಷೆಗಳನ್ನು ನಡೆಸುತ್ತಿದೆ. ಐಐಟಿ, ಐಐಐಟಿ, ಎನ್‌ಐಟಿ ಮತ್ತು ಏಮ್ಸ್‌ಗಳಲ್ಲಿ ಪ್ರವೇಶಾತಿ ದೊರೆಯಲು ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ನೆರವಾಗುತ್ತವೆ. ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಯಲ್ಲಿ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವುದು ಸುಲಭ ಎನ್ನುವ ವಿಚಾರ ಪ್ರಚಲಿತದಲ್ಲಿದೆ.

ಹೀಗಿರುತ್ತೆ ಪಠ್ಯ ಕ್ರಮ: ವಿದ್ಯಾರ್ಥಿಗಳ ಅಪ್ಲಿಕೇಶನ್ ಸ್ಕಿಲ್ಸ್‌ (ಆನ್ವಯಿಕ ಕೌಶಲ)ಮತ್ತು ಪ್ರಾಬ್ಲಂ ಸಾಲ್ವಿಂಗ್ (ಸಮಸ್ಯೆ ಬಿಡಿಸುವ) ಸಾಮರ್ಥ್ಯಗಳನ್ನು ಹೆಚ್ಚಿಸಲು ಅನುವಾಗುವಂತೆ ಸಿಬಿಎಸ್‌ಇ ಪಠ್ಯಕ್ರಮ ರೂಪಿಸಲಾಗಿದೆ. ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಕಲಿಸಿದ ನಂತರ ಅದನ್ನು ಅಳವಡಿಸಿ ತೋರಿಸುವಂತೆ ಹಲವು ವಿಧಾನಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇದು ಜೆಇಇ ಮತ್ತು ನೀಟ್‌ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಸಿಬಿಎಸ್‌ಇ ಪಠ್ಯಕ್ರಮ ತುಸು ಕಠಿಣವಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಹೆಚ್ಚಿನ ಶ್ರಮವಹಿಸುವುದು ಅಗತ್ಯ. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಇಂಗ್ಲಿಷ್, ದ್ವಿತೀಯ ಭಾಷೆ, ತೃತೀಯ ಭಾಷೆ (6ರಿಂದ 8ನೇ ತರಗತಿವರೆಗೆ), ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ (9 ಮತ್ತು 10ನೇ ತರಗತಿಗೆ ಮಾತ್ರ) ವಿಷಯಗಳನ್ನು ಕಲಿಸಲಾಗುತ್ತದೆ. ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದಕ್ಕಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್ ಭಾಷೆ ಕಲಿಕೆಗೂ ಹೆಚ್ಚು ಒತ್ತು ನೀಡಲಾಗುತ್ತದೆ.

ಪಠ್ಯಕ್ರಮ ತುಸು ಕಠಿಣವಾಗಿರುವುದರಿಂದ ಸಿಬಿಎಸ್‌ಇ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉತ್ತರ ಅಮೆರಿಕ, ಬ್ರಿಟನ್, ಸಿಂಗಾಪುರದಂತಹ ದೇಶಗಳಲ್ಲಿನ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಾರದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಟ್ಯೂಷನ್ ಲಭ್ಯತೆ ಕುರಿತು ಗಮನ ಅಗತ್ಯ: ವಿಷಯದ ಕುರಿತ ವಿವರವಾದ ಕಲಿಕೆಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಟ್ಯೂಷನ್ ನೀಡಬೇಕಾದ ಅಗತ್ಯ ಎದುರಾಗಬಹುದು. ಹೀಗಾಗಿ ಸಿಬಿಎಸ್‌ಇ ಶಾಲೆಗೆ ಮಗುವನ್ನು ಸೇರಿಸುವ ಮುನ್ನ ಟ್ಯೂಷನ್ ಲಭ್ಯತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಟ್ಯೂಷನ್ ಕೇಂದ್ರಗಳಿಗೆ ಸಮಸ್ಯೆಯಾಗದು. ಆದರೆ ಬೋರ್ಡ್‌ ಶಿಕ್ಷಣ ಪದ್ಧತಿಯ ಶಾಲೆಗಳೇ ಹೆಚ್ಚಿರುವ ಸಣ್ಣ ನಗರಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಟ್ಯೂಷನ್ ಕೇಂದ್ರಗಳಿರುವುದು ಅನುಮಾನ.

ಪಠ್ಯೇತರ ಚಟುವಟಿಕೆಗೂ ಅವಕಾಶ: ಇದು ಶಾಲೆಯಿಂದ ಶಾಲೆಗೆ ವ್ಯತ್ಯಾಸವಿದೆ. ಸಿಬಿಎಸ್‌ಇ ಅಧೀನದಲ್ಲಿರುವ ಅನೇಕ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಕೆಲವು ಶಾಲೆಗಳಲ್ಲಿ ಪಠ್ಯವನ್ನೇ ಹೆಚ್ಚು ಕೇಂದ್ರೀಕರಿಸುತ್ತಾರೆ. ಕೆಲವು ‘ಎಲೈಟ್‌’ ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡಕ್ಕೂ ಸಮಾನ ಅವಕಾಶ ಕಲ್ಪಿಸುವುದನ್ನೂ ಕಾಣಬಹುದು.

ಗುಣಮಟ್ಟದ ಶಿಕ್ಷಕರು ಸಿಗುತ್ತಾರಾ?: ಯುವ ಜನಾಂಗ ಉದ್ಯೋಗಕ್ಕಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನೇ ಹೆಚ್ಚು ಅವಲಂಬಿಸುತ್ತಿರುವುದರಿಂದ ದೇಶದಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆ ಇದೆ ಎಂಬ ಅಭಿಪ್ರಾಯವಿದೆ. ಆದಾಗ್ಯೂ, ಕೆಲವು ಸಿಬಿಎಸ್‌ಇ ಶಾಲೆಗಳಲ್ಲಿ ದುಬಾರಿ ಶುಲ್ಕ ಇರುವುದರಿಂದ ಹೆಚ್ಚಿನ ವೇತನ ತೆತ್ತು ಉತ್ತಮ ಶಿಕ್ಷಕರನ್ನು ನೇಮಿಸಿರುತ್ತಾರೆ ಎಂಬ ನಂಬಿಕೆ ಸಾರ್ವಜನಿಕ ವಲಯದಲ್ಲಿದೆ.

ಐಸಿಎಸ್‌ಇ

ಐಸಿಎಸ್‌ಇ (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್)ಕೂಡ ಸಿಬಿಎಸ್‌ಇ ಮಾದರಿಯಲ್ಲಿ ದೇಶದ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ರೂಪುಗೊಂಡಿದೆ. ಖಾಸಗಿ ಶಿಕ್ಷಣ ಮಂಡಳಿ ಇದನ್ನು ನಿರ್ವಹಿಸುತ್ತಿದೆ. 1986ರ ಹೊಸ ಶಿಕ್ಷಣ ನೀತಿಯ ಶಿಫಾರಸುಗಳ ಪ್ರಕಾರ ಐಸಿಎಸ್‌ಇ ಕಾರ್ಯನಿರ್ವಹಿಸುತ್ತಿದೆ. ಐಸಿಎಸ್‌ಇ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ.

ಹೀಗಿದೆ ಪಠ್ಯಕ್ರಮ: ಐಸಿಎಸ್‌ಇ ಶಿಕ್ಷಣವು ಸಿಬಿಎಸ್‌ಇಗಿಂತಲೂ ಸಂಕೀರ್ಣವಾಗಿದೆ. ಇದರ ಪಠ್ಯಕ್ರಮವು ಆಲೋಚಿಸಿ ಅನ್ವಯಿಸುವ ಕೌಶಲ ರೂಢಿಸಿಕೊಳ್ಳಲು ಹೆಚ್ಚು ಒತ್ತುಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾ ಕೌಶಲ ಹೆಚ್ಚಿಸುವ ಸಲುವಾಗಿ ಪಠ್ಯಕ್ಕೆ ನೀಡಿದಷ್ಟೇ ಪ್ರಯೋಗಕ್ಕೂ ಒತ್ತು ನೀಡುತ್ತಿದೆ. ಇದಕ್ಕೆ ಅನುಗುಣವಾಗಿಯೇ ಪಠ್ಯಕ್ರಮ, ಪರೀಕ್ಷಾ ಪದ್ಧತಿ ಮತ್ತು ಪ್ರಶ್ನಪತ್ರಿಕೆಗಳನ್ನು ರೂಪಿಸಲಾಗುತ್ತಿದೆ. ಪಠ್ಯಕ್ರಮವು ಎಲ್ಲ ವಿಷಯಗಳಿಗೂ ಸಮಾನ ಆದ್ಯತೆ ನೀಡುವುದಲ್ಲದೆ ಪ್ರತಿಯೊಂದು ವಿಷಯದ ಬಗ್ಗೆಯೂ ವಿದ್ಯಾರ್ಥಿ ಸೂಕ್ಷ್ಮವಾಗಿ ಅಧ್ಯಯನ ನಡೆಸುವಂತೆ ಮಾಡುತ್ತದೆ. ತರಗತಿಯಲ್ಲಿ ಕೇಳಿದ ಪಾಠದ ಆಧಾರದಲ್ಲಿ ವಿದ್ಯಾರ್ಥಿಯು ಮಾಹಿತಿ ಕಲೆ ಹಾಕಿ ಅವುಗಳಿಂದ ಕಲಿಯಬೇಕಾಗುತ್ತದೆ. ಜತೆಗೆ, ಅದನ್ನು ಮನನ ಮಾಡಿ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ.

ಐಸಿಎಸ್‌ಇ ಪಠ್ಯಗಳವ್ಯಾಪ್ತಿ (ಸಿಲೆಬಸ್) ವಿಸ್ತಾರವಾಗಿದ್ದು, ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ ವಿಷಯಕ್ಕೆ ಸಂಬಂಧಿಸಿದ ಇತರ ಪುಸ್ತಕಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ.

ಒಂದರಿಂದ ಐದನೇ ತರಗತಿವರೆಗೆ ಇಂಗ್ಲಿಷ್, ದ್ವಿತೀಯ ಭಾಷೆ, ಇತಿಹಾಸ, ಭೂಗೋಳ ಶಾಸ್ತ್ರ, ಗಣಿತ, ವಿಜ್ಞಾನ, ಕಂಪ್ಯೂಟರ್ ಸೈನ್ಸ್, ತೃತೀಯ ಭಾಷೆ, ದೈಹಿಕ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಲಿಯಬೇಕು. 6 ಮತ್ತು 7ನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ, ದ್ವಿತೀಯ ಭಾಷೆ, ಪರಿಸರ ಶಿಕ್ಷಣ, ಇತಿಹಾಸ, ಭೂಗೋಳ ಶಾಸ್ತ್ರ, ಗಣಿತ, ವಿಜ್ಞಾನ, ಕಂಪ್ಯೂಟರ್ ಸೈನ್ಸ್, ತೃತೀಯ ಭಾಷೆ, ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಕಲಿಯಬೇಕಾಗುತ್ತದೆ. 8ನೇ ತರಗತಿಯ ಸಿಲೆಬಸ್ 6 ಮತ್ತು 7ನೇ ತರಗತಿಯದ್ದನ್ನೇ ಹೋಲುತ್ತದೆ. ಆದರೆ ವಿಜ್ಞಾನ ಎಂಬುದಕ್ಕೆ ಬದಲಾಗಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಎಂದಿದೆ. 9, 10, 11 ಮತ್ತು 12ನೇ ತರಗತಿಗಳಲ್ಲಿ ನಿಗದಿಪಡಿಸಿದ ವಿಷಯಗಳು ಮಾತ್ರವಲ್ಲದೆ ವಿದ್ಯಾರ್ಥಿಯ ಆಯ್ಕೆಯ ಅನೇಕ ವಿಷಯಗಳನ್ನು ಕಲಿಯಲು ಅವಕಾಶವಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತಿತರ ಭಾಷೆಗಳ ಹಾಗೂ ಫ್ಯಾಷನ್ ಡಿಸೈನ್, ಕೃಷಿ, ಹೋಮ್ ಸೈನ್ಸ್‌ನಂತಹ ವಿಷಯಗಳ ಕಲಿಕೆಗೂ ಐಸಿಎಸ್‌ಇನಲ್ಲಿ ಅವಕಾಶವಿದೆ. ಐಸಿಎಸ್‌ಸಿ ಶಾಲೆಗಳಲ್ಲಿ ಪ‍್ರತಿವಾರವೂ ಕನಿಷ್ಠ ಎರಡೆರಡು ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಕೊನೆಯ ಪರೀಕ್ಷೆ ವೇಳೆಗೆ ವಿದ್ಯಾರ್ಥಿಗಳು ಸಂಪೂರ್ಣ ಸನ್ನದ್ಧರಾಗಿರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ.

ಐಸಿಎಸ್‌ಇ ಮೌಲ್ಯಮಾಪನ ಮಾತ್ರ ಸಿಬಿಎಸ್‌ಇಗಿಂತ ಹೆಚ್ಚು ಕಟ್ಟುನಿಟ್ಟಾಗಿಯೂ ನಿಷ್ಠುರವಾಗಿಯೂ ಇರುತ್ತದೆ. ಕೆಲವು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತರಿಸಲು ಪ್ರಯತ್ನಿಸಿದ ಕಾರಣಕ್ಕಾಗಿಯಾದರೂ ಕಡಿಮೆ ಅಂಕಗಳನ್ನಾದರೂ ನೀಡುತ್ತಾರೆ. ಆದರೆ, ಐಸಿಎಸ್‌ಸಿಯಲ್ಲಿ ಸರಿಯಾದ ಉತ್ತರ ಬರೆಯದೇ ಎಷ್ಟೇ ವಿವರಣೆ ನೀಡಿದ್ದರೂ ಪರಿಗಣಿಸಲಾಗುವುದಿಲ್ಲ. ಪೂರ್ತಿ ಉತ್ತರ ಸರಿ ಇಲ್ಲದಿದ್ದರೆ ಅದನ್ನು ತಪ್ಪೆಂದೇ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಸಿಬಿಎಸ್‌ಇ ಮತ್ತು ಬೋರ್ಡ್‌ ಶಿಕ್ಷಣದಲ್ಲಿ ಪಡೆದಷ್ಟು ಅಂಕ ಗಳಿಸುವುದು ಐಸಿಎಸ್‌ಇನಲ್ಲಿ ಕಷ್ಟ.

ಆದರೆ, ಟೊಫೆಲ್‌ನಂಥ(TOEFL) ಪರೀಕ್ಷೆಯಲ್ಲಿ ಐಸಿಎಸ್‌ಇ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿರುವುದು ಸಾಬೀತಾಗಿದೆ. ದುಬೈ, ಶಾರ್ಜಾ, ಇಂಡೊನೇಷ್ಯಾ ಮತ್ತು ಸಿಂಗಾಪುರದಲ್ಲಿ ಐಸಿಎಸ್‌ಇ ಶಾಲೆಗಳಿವೆ. ಅಮೆರಿಕ, ಬ್ರಿಟನ್ ಮತ್ತು ಸಿಂಗಾಪುರದ ಸಿಲೆಬಸ್‌ಗಿಂತಲೂ ಐಸಿಎಸ್‌ಇಯದ್ದು ಕಠಿಣವಾದದ್ದು ಎಂದು ನಂಬಲಾಗಿದೆ. ಹೀಗಾಗಿ ಐಸಿಎಸ್‌ಇ ಶಿಕ್ಷಣ ಪಡೆದವರಿಗೆ ವಿದೇಶಗಳಲ್ಲಿ ಮನ್ನಣೆ ಇದೆ.

ಐಸಿಎಸ್‌ಇ ಸಿಲೆಬಸ್‌ನಲ್ಲಿ ಟ್ಯೂಷನ್ ನೀಡುವ ಕೇಂದ್ರಗಳ ಸಂಖ್ಯೆ ದೇಶದಲ್ಲಿ ಕಡಿಮೆ ಇದೆ. ಹೀಗಾಗಿ ಐಸಿಎಸ್‌ಇ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮುನ್ನ ಟ್ಯೂಷನ್ ಕೇಂದ್ರಗಳ ಲಭ್ಯತೆ ಕುರಿತು ಗಮನಹರಿಸುವುದು ಒಳಿತು.

ಸರ್ವತೋಮುಖ ಬೆಳವಣಿಗೆಗೆ ಪೂರಕ: ಐಸಿಎಸ್‌ಇ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿರುವ ಶಿಕ್ಷಣ ವ್ಯವಸ್ಥೆ ಇದಾಗಿದೆ. ಪ್ರಾಜೆಕ್ಟ್‌ ವರ್ಕ್, ಚರ್ಚಾ ಸ್ಪರ್ಧೆಗಳು, ಕ್ರೀಡೆ, ನಾಟಕ, ಸಂಗೀತ... ಹೀಗೆ ಎಲ್ಲಾ ವಿಭಾಗಗಳಲ್ಲೂ ವಿದ್ಯಾರ್ಥಿಯನ್ನು ತರಬೇತುಗೊಳಿಸಲಾಗುತ್ತದೆ. ಸಮತೋಲಿತ ಶಿಕ್ಷಣ ಮತ್ತು ಗರಿಷ್ಠ ಕೌಶಲ ಅಭಿವೃದ್ಧಿ ಬಯಸುವವರಿಗೆ ಹೇಳಿ ಮಾಡಿಸಿದ ಶಿಕ್ಷಣ ವ್ಯವಸ್ಥೆ ಇದು ಎಂಬುದು ತಜ್ಞರ ಅಭಿಪ್ರಾಯ. ಮತ್ತೊಂದೆಡೆ, ಐಸಿಎಸ್‌ಇ ಶಾಲೆಗಳಲ್ಲೂ ಇತ್ತೀಚೆಗೆ ಉತ್ತಮ ಶಿಕ್ಷಕರ ಕೊರತೆ ಕಾಡುತ್ತಿದೆ ಎನ್ನಲಾಗಿದೆ.

ಉನ್ನತ ಶಿಕ್ಷಣದ ಗುರಿಯ ಬಗ್ಗೆ ಗಮನಹರಿಸಿ: ಮಕ್ಕಳನ್ನು ಐಸಿಎಸ್‌ಇ ಶಾಲೆಗಳಿಗೆ ದಾಖಲು ಮಾಡುವ ಮೊದಲು ಅವರ ಉನ್ನತ ಶಿಕ್ಷಣದ ಗುರಿಯ ಬಗ್ಗೆಯೂ ಅರಿತಿದ್ದರೆ ಒಳ್ಳೆಯದು. ಬಹುತೇಕ ಸಂದರ್ಭಗಳಲ್ಲಿ 10ನೇ ತರಗತಿಯ ನಂತರ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಸಿದ್ಧರಾಗುವ ಸಲುವಾಗಿ ಸಿಬಿಎಸ್‌ಇ ಶಾಲೆಗಳಿಗೆ ಸೇರುತ್ತಾರೆ. ಐಸಿಎಸ್‌ಇ ಶಾಲೆಗಳಲ್ಲಿ ಕಲಿತು ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯೇನಲ್ಲ.ಐಸಿಎಸ್‌ಇ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಬುದ್ಧಿಮತ್ತೆ ಮತ್ತು ಕೌಶಲ ಹೊಂದಿರುವುದು ಸಾಬೀತಾಗಿದೆ.

ನಿಮಗಿದು ತಿಳಿದಿರಿಲಿ:ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಅಕ್ಷರಮಾಲೆಯ ಆಧಾರದಲ್ಲಿ (ಆಲ್ಫಾಬೆಟಿಕಲ್) ರ್‍ಯಾಂಕಿಂಗ್ ನೀಡಲಾಗುತ್ತದೆ. ಐಸಿಎಸ್‌ಇನಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಸಿಬಿಎಸ್‌ಇ ಶಿಕ್ಷಣ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿದ್ದರೆ ಐಸಿಎಸ್‌ಇ ಶಿಕ್ಷಣ ಇಂಗ್ಲಿಷ್‌ ಮಾಧ್ಯಮದಲ್ಲಿ ಮಾತ್ರ ಲಭ್ಯ.

ಸ್ಟೇಟ್ ಸಿಲಬಸ್

ದೇಶದ ಬಹುತೇಕ ರಾಜ್ಯಗಳು ತಮ್ಮದೇ ಆದ ಶಿಕ್ಷಣ ಕ್ರಮ ರೂಪಿಸಿಕೊಂಡಿವೆ. ಇವನ್ನೇ ಸ್ಟೇಟ್ ಬೋರ್ಡ್ (ರಾಜ್ಯ ಮಂಡಳಿ) ಎನ್ನುತ್ತರೆ.ಇವುಗಳ ಅಧೀನದಲ್ಲಿ ಕಾರ್ಯಾಚರಿಸುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳೇ ಬೋರ್ಡ್‌ ಶಾಲೆಗಳು. ರಾಜ್ಯದಿಂದ ರಾಜ್ಯಕ್ಕೆ ಇವುಗಳ ಶಿಕ್ಷಣ ಪದ್ಧತಿಯಲ್ಲಿ ಅನೇಕ ಸಾಮ್ಯತೆಗಳಿವೆ. ಹಾಗೆಯೇ ವ್ಯತ್ಯಾಸಗಳೂ ಇವೆ. ಈ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ. ಶಿಕ್ಷಣದ ಗುಣಮಟ್ಟಕ್ಕೆ ಹೋಲಿಸಿದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಷ್ಟು ಪ್ರಭಾವಿ ಎಂದು ಗುರುತಿಸಿಕೊಂಡಿಲ್ಲ. ಪ್ರಾದೇಶಿಕತೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ಶಾಲೆಗಳಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಕಲಿಕೆಗೆ ಅವಕಾಶಗಳಿವೆ. ಜತೆಗೆ ಆಯಾ ರಾಜ್ಯದ ವಿಶ್ವವಿದ್ಯಾಲಯಗಳ, ಉನ್ನತ ಶಿಕ್ಷಣ ಸಂಸ್ಥೆಗಳ ಸಿಲೆಬಸ್‌ಗೆ ಅನುಗುಣವಾಗಿ ಇತರೆ ವಿಷಯಗಳು ನಿಗದಿಯಾಗಿರುತ್ತವೆ.

ಐಜಿಸಿಎಸ್‌ಇ ಶಾಲೆಗಳು

ಯುನಿವರ್ಸಿಟಿ ಆಫ್ ಕೇಂಬ್ರಿಜ್ ಇಂಟರ್‌ನ್ಯಾಷನಲ್‌ ಎಕ್ಸಾಮಿನೇಷನ್ಸ್ ರೂಪಿಸಿದ ಶಿಕ್ಷಣ ವ್ಯವಸ್ಥೆ ‘ಇಂಟರ್‌ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಜಿಸಿಎಸ್‌ಇ)’. ಇದು ಬ್ರಿಟನ್‌ನ ಜಿಸಿಎಸ್‌ಇ ಶಿಕ್ಷಣ ವ್ಯವಸ್ಥೆಗೆ ಸಮಾನವಾದದ್ದು. ಭಾರತವೂ ಸೇರಿದಂತೆ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 10 ಸಾವಿರದಷ್ಟು ಐಜಿಸಿಎಸ್‌ಇ ಶಾಲೆಗಳಿವೆ. ಐಜಿಸಿಎಸ್‌ಇ ಪಠ್ಯಕ್ರಮದಲ್ಲಿ ಮೊದಲ ಭಾಷೆ, ದ್ವಿತೀಯ ಭಾಷೆ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಹೆಚ್ಚು ಆದ್ಯತೆ ಇದೆ. ಐಜಿಸಿಎಸ್‌ಇ ಪ್ರಮಾಣಪತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT