ಭಾನುವಾರ, ನವೆಂಬರ್ 17, 2019
28 °C

ಸ್ಮಾರ್ಟ್‌ ಕುಟುಂಬದಲ್ಲೊಬ್ಬ ಹ್ಯಾಂಡ್ಸಮ್‌ ಹುಡುಗ

Published:
Updated:
Prajavani

ತಂದೆ ಪ್ರಖ್ಯಾತ ವಾಸ್ತುಶಿಲ್ಪಿ, ಮಕ್ಕಳ ಶಿಕ್ಷಣ, ಭವಿಷ್ಯವನ್ನು ಸುಂದರವಾಗಿ ರೂಪಿಸುತ್ತಿರುವ ತಾಯಿ, ಪತಿಯನ್ನೂ ಮೀರಿಸುವಂತ ಶಿಲ್ಪಿ. ಇವರ ಪುತ್ರ ಅಥರ್ವ ಈಗ ಮಿಸ್ಟರ್‌ ಟೀನ್‌ ಆಂಬೀಷಿಯಸ್‌ ಟೈಟಲ್ ಪಡೆದು ಭರವಸೆ ಮೂಡಿಸಿದ ರೂಪದರ್ಶಿ.

ಧಾರವಾಡದ ಗಾಂಧಿನಗರದ ಚಂದ್ರಶೇಖರ ಹೊನಕೇರಿ ಹಾಗೂ ಲೀನಾ ಹೊನಕೇರಿ ಅವರ ಪುತ್ರ 14ರ ಪೋರ ಅಥರ್ವ 2019ರ ಮಿಸ್ಟರ್ ಟೀನ್‌ ಆಂಬೀಷಿಯಸ್‌ ಟ್ರೋಫಿಯನ್ನು ಪಡೆದಿದ್ದಾನೆ. ರಾಯಾಪುರದ ಕೆಎಲ್‌ಇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಅಥರ್ವ, ದೆಹಲಿಯಲ್ಲಿ ಆಗಸ್ಟ್‌ನಲ್ಲಿ ನಡೆದ 13ರಿಂದ 19 ವರ್ಷದೊಳಗಿನ ರಾಷ್ಟ್ರಮಟ್ಟದ ಮಿಸ್ ಮತ್ತು ಮಿಸ್ಟರ್‌ ಟೀನ್‌ ಇಂಡಿಯಾ ಸ್ಪರ್ಧೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದಾನೆ.

ಎತ್ತರದ ನಿಲುವು, ಆಕರ್ಷಕ ಕಣ್ಣುಗಳು, ಹಾಲುಗಲ್ಲ, ಚಿಗುರುಮೀಸೆ, ಅರಳುಹುರಿದಂತೆ ಇಂಗ್ಲಿಷ್‌ನಲ್ಲಿ ಪಟಪಟನೆ ಮಾತನಾಡುವ ಹಾಗೂ ಕೇಳಿದ ಪ್ರಶ್ನೆಗೆ ತಡಮಾಡದೆ ಉತ್ತರ ನೀಡುವ ಚಾಕಚಕ್ಯತೆ, ದೊಡ್ಡ ಗುರಿ ಹೊಂದಿರುವ ಇವನ ಭವಿಷ್ಯದ ಬಗೆಗಿನ ಯೋಜನೆಗಳು ಈ ಕಿರೀಟ ಮುಡಿಗೇರುವಂತೆ ಮಾಡಿವೆ.

ಅಷ್ಟಕ್ಕೂ ಈತನ ಸಾಧನೆಗೆ ಇಂಬು ನೀಡಿದ ತಾಯಿ ಲೀನಾ, ಸ್ವತಃ ರೂಪದರ್ಶಿಯಾಗಿ ಎರಡು ಟೈಟಲ್‌ ಮುಡಿಗೇರಿಸಿಕೊಂಡವರು. ಅನಿರೀಕ್ಷಿತವಾಗಿ, ಸ್ನೇಹಿತರ ಒತ್ತಾಯಕ್ಕೆ ರ‍್ಯಾಂಪ್ ತುಳಿದವರು ಇವರು. 2018ರಲ್ಲಿ ರಾಯಲ್‌ ಇಂಡಿಯಾ ಮಿಸ್ಸೆಸ್‌ ಏಷ್ಯಾ ಕ್ಲಾಸಿಕ್‌ ಹಾಗೂ 2019ರಲ್ಲಿ ಪಾಪ್ಯುಲರ್‌ ಕ್ವೀನ್‌ ಯೂನಿವರ್ಸ್‌ ಸ್ಪರ್ಧೆ ವಿಜೇತೆ ಕೂಡಾ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಗೃಹಿಣಿಯಾದರೂ, ಮಕ್ಕಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 

ಹೊನಕೇರಿ ಕುಟುಂಬದ ಮತ್ತೊಬ್ಬ ರೂಪದರ್ಶಿ ಲೀನಾ ಚಂದ್ರಶೇಖರ ಅವರ ಪುತ್ರಿ ನಿಹಾರಿಕಾ. ಇವರು ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ. ಇವರೂ ರ‍್ಯಾಂಪ್ ತುಳಿದು ಭರವಸೆ ಮೂಡಿಸಿದ್ದಾರೆ. ಬೆಸ್ಟ್‌ ಫ್ಯೂಚರ್‌ ರೈಸಿಂಗ್ ಸ್ಟಾರ್ ಎಲೈಟ್‌ ಎಂಬ ಟೈಟಲ್‌ ಕೂಡ ಲಭಿಸಿದೆ. ಅಮ್ಮ ಹಾಗೂ ಅಕ್ಕನ ಸಾಲಿಗೆ ಅಥರ್ವ ಹೊಸ ಸೇರ್ಪಡೆ.

ಅಥರ್ವನ ಸಾಧನೆಯ ಹಾದಿಯನ್ನು ನೆನಪಿಸಿಕೊಂಡ ಲೀನಾ, ‘ಕಳೆದ ಮೇನಲ್ಲಿ ರಜೆಗಾಗಿ ಬೆಂಗಳೂರಿಗೆ ಹೋಗಿದ್ದೆವು. ಅಲ್ಲಿ ಇಂಥದ್ದೊಂದು ಸ್ಪರ್ಧೆಯ ಆಡಿಷನ್ ನಡೆಯುತ್ತಿರುವ ಸುದ್ದಿ ತಿಳಿಯಿತು. ಅಮರೀಶ ಪುರಿ ಅವರು ಸ್ಥಾಪಿಸಿದ ಲಿಮ್ಕಾ ಬುಕ್ ಆಫ್‌ ರೆಕಾರ್ಡ್‌ ಹೊಂದಿರುವ ಅಲೀ ಕ್ಲಬ್‌ 22ನೇ ಆವೃತ್ತಿಯ ಸ್ಪರ್ಧೆಯ ದಕ್ಷಿಣ ವಲಯದ ಆಡಿಷನ್ ಬೆಂಗಳೂರಿನಲ್ಲಿ ಆಯೋಜಿಸಿತ್ತು. ಅಲ್ಲಿಗೆ ಅಥರ್ವನನ್ನೂ ಕರೆದುಕೊಂಡು ಹೋದೆವು. ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು, ನಿರೂಪಣೆ ಮಾಡುವುದು, ರೂಬಿ ಕ್ಯೂಬ್‌ ಜೋಡಿಸುವುದು, ಕೀಬೋರ್ಡ್‌ ನುಡಿಸುವುದರಲ್ಲಿ ನಿಪುಣನಿದ್ದ ಅಥರ್ವನ ಆರಂಭದ ಆಯ್ಕೆ ನಿರೀಕ್ಷೆಯನ್ನೂ ಮೀರಿ ಸುಲಭವಾಗಿತ್ತು’ ಎಂದರು.

‘ಅಲ್ಲಿ ಇದ್ದವರಲ್ಲಿ ಅತಿ ಸಣ್ಣವನಾಗಿದ್ದ ಅಥರ್ವನ ಪ್ರತಿಭೆಗೆ ಮನಸೋತ ತೀರ್ಪುಗಾರರು ಆತನನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿದರು. ಒಟ್ಟು 17 ನಗರಗಳಲ್ಲಿ ಇದರ ಆಡಿಷನ್ ನಡೆದಿತ್ತು. ಪ್ರತಿ ನಗರದಲ್ಲೂ ಉತ್ತಮ ಪ್ರದರ್ಶನ ನೀಡಿದ ಮೊದಲ 5 ಸ್ಪರ್ಧಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಅಲ್ಲಿ ಸೆಮಿಫೈನಲ್ ನಡೆಯಿತು. ಆದರೆ ಅಥರ್ವ ಅವರೆಲ್ಲರಿಗಿಂತಲೂ ಅತಿ ಸಣ್ಣವನು ಮತ್ತು ಹೆಚ್ಚು ಪ್ರತಿಭಾವಂತ ಎಂಬ ಕಾರಣದಿಂದ ನೇರವಾಗಿ ಗ್ರ್ಯಾಂಡ್‌ ಫಿನಾಲೆಗೆ ಪ್ರವೇಶ ನೀಡಲಾಯಿತು’ ಎಂದರು.

ಅಲ್ಲಿನ ಸ್ಪರ್ಧೆ ಕುರಿತು ವಿವರಿಸಿದ ಅಥರ್ವ, ‘43 ಹುಡುಗರು ಹಾಗೂ 54 ಹುಡುಗಿಯರು ಇದ್ದರು. ದೆಹಲಿಯಲ್ಲಿ 10 ದಿನಗಳ ತರಬೇತಿ ನೀಡಲಾಯಿತು. ಎಚ್‌ಐವಿ/ ಏಡ್ಸ್‌ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಂಘಟನೆ ಆರಂಭವಾಗಿದೆ. ಈ ಕುರಿತೂ ತರಬೇತಿ ಕೊಡಿಸಲಾಯಿತು. ವೈದ್ಯರು, ರೂಪದರ್ಶಿಯರು, ನಟ, ನಟಿಯರು, ಮನೋವೈದ್ಯರು, ವ್ಯಕ್ತಿತ್ವವಿಕಸನ ತರಬೇತುದಾರರು ನಮಗೆ ಮಾರ್ಗದರ್ಶನ ಮಾಡಿದರು. ಅಂತಿಮ ದಿನ ಸಭಿಕರನ್ನು ಉದ್ದೇಶಿಸಿ ನಾನು ನನ್ನ ಕುರಿತು ಆಡಿದ ಮಾತು, ಸಂಕೋಚರಹಿತ ಮಾತು ನಟರಾದ ಆಯೂಬ್ ಖಾನ್, ಅಶ್ಮಿತ್ ಪಟೇಲ್, ಅಮೃತಾ ರಾವ್, ಅರ್ಚಿತಾ ಸಾಹು, ಶಹಬಾಸ್ ಖಾನ್‌, ಮುಕೇಶ್ ಚಬ್ಬರ್‌ ಹಾಗೂ ಅಮನ್‌ಪ್ರೀತ್‌ ವಾಹಿ ಅವರಿದ್ದ ತೀರ್ಪುಗಾರರ ಗಮನ ಸೆಳೆಯುವಲ್ಲಿ ಸಫಲವಾಯಿತು’ ಎಂದು ವಿವರಿಸಿದ.

‘ಅಂತಿಮವಾಗಿ ಮಿಸ್ಟರ್ ಟೀನ್‌ ಆಂಬೀಷಿಯಸ್‌ ಟೈಟಲ್‌ ದೊರೆತದ್ದು ಸಂತಸ ತಂದಿತು. ರಾಷ್ಟ್ರವ್ಯಾಪಿ ನಡೆದ ಸ್ಪರ್ಧೆಯಲ್ಲಿ ನನ್ನ ಈ ಸಾಧನೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇದಕ್ಕೆ ಪಾಲಕರ ನೆರವು, ಪ್ರಾಂಶುಪಾಲರಾದ ಶುಭಾಂಗಿ ಮೋರೆ ಪ್ರೋತ್ಸಾಹ ನೆರವಿಗೆ ಬಂದಿತು. ಭವಿಷ್ಯದಲ್ಲಿ ರೂಪದರ್ಶಿಯಾಗುವ ಮೂಲಕ ತೆರೆಮೇಲೆ ಬರುವ ಆಸೆ ಇದೆ. ಇದರ ಜತೆಯಲ್ಲೇ ರೊಬೊಟಿಕ್ಸ್‌ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಆಸೆಯೂ ಇದೆ. ಎರಡನ್ನೂ ಪೂರಕವಾಗಿ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಗುರಿ ಇದೆ’ ಎಂದು ಭವಿಷ್ಯ ಕುರಿತು ತನ್ನ ಯೋಜನೆಗಳನ್ನು ಅಥರ್ವ ಬಿಚ್ಚಿಟ್ಟನು.

ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಚಂದ್ರಶೇಖರ ಹೊನಕೇರಿ, ‘ಕೇವಲ ಓದು ಅಷ್ಟೇ ವ್ಯಕ್ತಿತ್ವ ರೂಪಿಸುವುದಿಲ್ಲ. ಇಂಥ ಪಠ್ಯೇತರ ಚಟುವಟಿಕೆಗಳೂ ಮಕ್ಕಳಿಗೆ ಮುಖ್ಯ. ಹೀಗಾಗಿ ಅಥರ್ವನಿಗೆ ಯಾವುದನ್ನೂ ಹೊರೆಯನ್ನಾಗಿಸಿಲ್ಲ. ಆತನ ಆಸಕ್ತಿ ಕ್ಷೇತ್ರದಲ್ಲಿ ಮುನ್ನುಗ್ಗಲು ಹೇಳಿದ್ದೇವೆ. ಏನೇ ಮಾಡಲಿ; ಅದನ್ನು ಅತ್ಯುತ್ತವಾಗಿಸಬೇಕು ಎಂಬುದಷ್ಟೇ ನಮ್ಮಿಬ್ಬರು ಮಕ್ಕಳಿಗೆ ಹೇಳಿರುವ ಕಿವಿಮಾತು. ಅವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ’ ಎಂದು ತೃಪ್ತಿ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ಅದರ ನಿರೂಪಣೆಯ ಹೊಣೆಯನ್ನು ಅಥರ್ವನೇ ನಿಭಾಯಿಸಬೇಕು ಎನ್ನುವಷ್ಟು ಜನಪ್ರಿಯ ಈತ. ಶಾಲೆಯಲ್ಲಿ ಆರೋಗ್ಯ ಮತ್ತು ಶುಚಿತ್ವದ ಕ್ಯಾಪ್ಟನ್‌ ಕೂಡಾ ಆಗಿರುವ ಈತನ ಗುಣಗಾನವೇ ಎಲ್ಲೆಡೆ.

ಪ್ರತಿಕ್ರಿಯಿಸಿ (+)