ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ಯಿಂದ ಬಲ ಹೆಚ್ಚಳ: ಗಿಮಿಕ್ ರಾಜಕಾರಣ ಮಾಡಿಲ್ಲ– ಡಾ.ಕೆ. ಸುಧಾಕರ್ ಸಂದರ್ಶನ

ಡಾ.ಕೆ. ಸುಧಾಕರ್ ಸಂದರ್ಶನ
Published 17 ಏಪ್ರಿಲ್ 2024, 21:42 IST
Last Updated 17 ಏಪ್ರಿಲ್ 2024, 21:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿಯು ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದ ಪ್ರಗತಿ ಕುರಿತ ತಮ್ಮ ಆಲೋಚನೆಗಳನ್ನು  ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ. 

***

* ಕೋವಿಡ್‌ ಸಮಯದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಅಸ್ತ್ರವನ್ನು ನಿಮ್ಮ ವಿರೋಧಿಗಳು ಬಳಸುತ್ತಿದ್ದಾರಲ್ಲ?

‘ಕೋವಿಡ್‌ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆ ಎನ್ನುವುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಜಾರಿಗೊಳಿಸಿದ ಯೋಜನೆಗಳನ್ನೇ ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ. ಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದೆ. ಕೋವಿಡ್‌ ಸಮಯದಲ್ಲಿ ತಪ್ಪಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಯಾರಿಗಾದರೂ ಅನುಮಾನವಿದ್ದರೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಿ. ತಪ್ಪಿದ್ದರೆ ಶಿಕ್ಷೆ ಎದುರಿಸುತ್ತೇನೆ. 

* ಜೆಡಿಎಸ್ ಮೈತ್ರಿಯಿಂದ ನಿಮಗೆ ಅನುಕೂಲ ಆಗಲಿದೆಯೇ?

ಖಂಡಿತ. ಮೈತ್ರಿಯಿಂದ ನಮ್ಮ ಬಲ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿ ಮಾಜಿ ಶಾಸಕ ಬಚ್ಚೇಗೌಡ ಮಾತ್ರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಉಳಿದಂತೆ ಲೋಕಸಭಾ ಕ್ಷೇತ್ರದ ಎಲ್ಲೆಡೆಯೂ ಮೈತ್ರಿಯ ಬೆಸುಗೆ ಗಾಢವಾಗಿದೆ. ಈ ಬಾರಿ ಮೈತ್ರಿಯೂ ನಮಗೆ ಪ್ಲಸ್ ಪಾಯಿಂಟ್.

* ನಿಮಗೆ ಟಿಕೆಟ್ ನೀಡಿದ್ದಕ್ಕೆ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಗೆ ಒಳ ಏಟಿನ ಭೀತಿ ಇದೆಯೇ?

ವಿಶ್ವನಾಥ್ ಪಕ್ಷದ ಹಿರಿಯ ನಾಯಕರು. ಹಿಂದಿನ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದವು. ಆದರೆ ಅದೆಲ್ಲವೂ ಪರಿಹಾರವಾಗಿದೆ. 

* ಹಿಂದುಳಿದ ವರ್ಗಗಳ ಅಭ್ಯರ್ಥಿಗಳೇ ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. ನಿಮಗೆ ಯಾವ ರೀತಿ ವಿಶ್ವಾಸವಿದೆ ?

ಚಿಕ್ಕಬಳ್ಳಾಪುರ ಶಾಸಕ ಮತ್ತು ಸಚಿವನಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅದಕ್ಕೆ ನಿದರ್ಶನ ಕಣ್ಣ ಮುಂದೆಯೇ ಇವೆ. ಒಕ್ಕಲಿಗ ಸಮಾಜದಲ್ಲಿ ಹುಟ್ಟಿರಬಹುದು, ಆದರೆ ನನ್ನ ರಾಜಕಾರಣದ ಅವಧಿಯಲ್ಲಿ ಎಂದಿಗೂ ಜಾತಿ ನೋಡಿ ಮಣೆ ಹಾಕಿಲ್ಲ. ಗಿಮಿಕ್ ರಾಜಕಾರಣ ಮಾಡಿಲ್ಲ. ಸಾಮಾಜಿಕ ನ್ಯಾಯ ಪಾಲಿಸಿದ್ದೇನೆ. ಆ ಕಾರಣದಿಂದಲೇ ನನಗೆ ಎಲ್ಲ ವರ್ಗದ ಮತದಾರರು ಮನ್ನಣೆ ನೀಡುತ್ತಿದ್ದಾರೆ. 

* ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ಮತ ಬುಟ್ಟಿಗೆ ಕೈ ಹಾಕಲಿವೆಯಾ? ಗ್ಯಾರಂಟಿ ಆತಂಕ ಇದೆಯಾ?

ಖಂಡಿತವಾಗಿಯೂ ಇಲ್ಲ. ಕೇಂದ್ರ ಸರ್ಕಾರ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ₹ 6 ಸಾವಿರ ನೀಡುತ್ತಿದೆ. ಇದಕ್ಕೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ₹ 4 ಸಾವಿರ ನೀಡುತ್ತಿತ್ತು. ಅದನ್ನು ಕಾಂಗ್ರೆಸ್ ನಿಲ್ಲಿಸಿದೆ. ರೈತರು ಪಂಪ್‌ಸೆಟ್‌ಗೆ ವಿದ್ಯುತ್‌ ಸಂಪರ್ಕ ಪಡೆಯಬೇಕಾದರೆ ಲಕ್ಷಾಂತರ ಹಣ ತೆರಬೇಕಾಗಿದೆ. ಟ್ರಾನ್ಸ್‌ಫಾರ್ಮರ್‌ ಸುಲಭವಾಗಿ ದೊರೆಯುತ್ತಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನಕ್ಕೆ ತಡೆ ಬಿದ್ದಿದೆ. ಒಂದು ಕಡೆ ಕಿತ್ತುಕೊಂಡು ಮತ್ತೊಂದು ಕಡೆ ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗಿದೆ.

Cut-off box - * ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನಿದೆ? ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದರಿಂದ ಎರಡೂ ಜಿಲ್ಲೆಗಳ ಸಮಸ್ಯೆಗಳ ಅರಿವು ಚೆನ್ನಾಗಿಯೇ ಇದೆ. ಅಧಿಕಾರದ ಅವಧಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಸಹ ಮಾಡಿದ್ದೇನೆ. ವೀರಪ್ಪ ಮೊಯಿಲಿ ಅವರು ಎತ್ತಿನಹೊಳೆ ಹೆಸರು ಹೇಳುತ್ತಲೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜಕಾರಣ ಮಾಡಿದರು. ಆದರೆ ನೀರು ಬರಲೇ ಇಲ್ಲ. ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದು ನಮ್ಮ ಆದ್ಯತೆ. ಬಸವರಾಜ ಬೊಮ್ಮಾಯಿ  ಮುಖ್ಯಮಂತ್ರಿ ಆಗಿದ್ದ ವೇಳೆ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದರು. ಆದರೆ ನಂತರ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕ್ರಮವಹಿಸಲಿಲ್ಲ. ನೀರಾವರಿಯೇ ನನ್ನ ಮೊದಲ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT