ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಕರ್ನಾಟಕದಲ್ಲಿರೋದು ಕಾಂಗ್ರೆಸ್‌ನ ವಿಶ್ವಾಸದ ಅಲೆ– ಮಧು ಬಂಗಾರಪ್ಪ

Published 2 ಮೇ 2024, 0:23 IST
Last Updated 2 ಮೇ 2024, 0:23 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಅವರ ಸಹೋದರ ಮಧು ಬಂಗಾರಪ್ಪ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಎಐಸಿಸಿ ನಾಯಕ ರಾಹುಲ್‌ಗಾಂಧಿ ಅವರ ಪ್ರಚಾರ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದ ಅವರು, ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

* ಕರ್ನಾಟಕದಲ್ಲಿ ಕಾಂಗ್ರೆಸ್ ಏಕೆ ಗೆಲ್ಲಬೇಕು? ಜನರು ಏಕೆ ಮತ ಹಾಕಬೇಕು?

ರಾಜಕೀಯ ಅಂದರೆ ಬರೀ ಮಾತಿನಲ್ಲಿ ಮರುಳು ಮಾಡಿ ತಲೆಯಲ್ಲಿ ವಿಷ ತುಂಬಿ ಪ್ರಜೆಗಳನ್ನು ಭಿಕಾರಿ ಮಾಡುವುದಲ್ಲ. ಕಾಂಗ್ರೆಸ್‌ನದ್ದು ಮನುಷ್ಯತ್ವದ ರಾಜಕಾರಣ. ಜನಕಲ್ಯಾಣವೇ ಪಕ್ಷದ ಪರಂಪರೆ. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮ ಕೊಟ್ಟರು. ರಾಜ್ಯದಲ್ಲಿ ದೇವರಾಜ ಅರಸು ಅವರು ಭೂಮಿಯ ಹಕ್ಕು ಕೊಟ್ಟರು. ಬಗರ್‌ ಹುಕುಂ ಮೂಲಕ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅದನ್ನು ವಿಸ್ತರಿಸಿದರು. ಸಿದ್ದರಾಮಯ್ಯ– ಡಿ.ಕೆ.ಶಿವಕುಮಾರ್ ಗ್ಯಾರಂಟಿಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಇದೆಲ್ಲದರ ಜೊತೆಗೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಜನರು ಕಾಂಗ್ರೆಸ್‌ಗೆ ಮತ ಹಾಕಬೇಕು.

* ಇದು ಲೋಕಸಭೆಗೆ ನಡೆಯುವ ಚುನಾವಣೆ. ಕರ್ನಾಟಕದಲ್ಲಿ ಗ್ಯಾರಂಟಿ ಅಲೆ ನಡೆಯಲ್ಲ. ಏನಿದ್ದರೂ ಮೋದಿ ಅಲೆ ಮಾತ್ರ ಅನ್ನುತ್ತಿದೆಯಲ್ಲ ಬಿಜೆಪಿ?

ಶೇ 100ರಷ್ಟು ಹೇಳುತ್ತೇನೆ. ಕರ್ನಾಟಕದಲ್ಲಿ ಮೋದಿ ಅಲೆಯೇ ಇಲ್ಲ. ಅದು ಇದ್ದರೆ ಮತದಾರರು ನಮ್ಮನ್ನು (ಕಾಂಗ್ರೆಸ್‌) ಮನೆಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಮೋದಿ ಹೇಳುತ್ತಿರುವ ಸುಳ್ಳು ಜನರಿಗೆ ಅರ್ಥವಾಗುತ್ತಿದೆ. ಈಗ ಇರುವುದು ಕಾಂಗ್ರೆಸ್‌ನ ‘ವಿಶ್ವಾಸದ ಅಲೆ’. ಮಾತು ತಪ್ಪದೇ ನಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಮೋದಿ ಅಲೆ ಇದ್ದಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಮಿಷನ್ 150’ ತಂತ್ರಗಾರಿಕೆ ಏಕೆ ವಿಫಲವಾಗುತ್ತಿತ್ತು. ಬಿಜೆಪಿ 65 ಸ್ಥಾನಗಳಿಗೇ ಏಕೆ ಸೀಮಿತಗೊಳ್ಳುತ್ತಿತ್ತು. ಮೋದಿ ಅವರನ್ನು ಬಿಜೆಪಿಯವರು ವಿಶ್ವಗುರು ಮಾಡಲು ಹೊರಟಿದ್ದಾರೆ. ಆದರೆ, ಅವರನ್ನು ರಾಷ್ಟ್ರಕವಿ ಕುವೆಂಪು ಅವರ ಆಶಯದ ವಿಶ್ವಮಾನವ ಆಗಿಸಬೇಕಿದೆ. 

* ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಗೊಳಿಸದೇ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ದೂರಿದ್ದಾರಲ್ಲ?

ಶಿಕ್ಷಣವನ್ನು ಕೇಸರೀಕರಣಗೊಳಿಸುವ ಅಜೆಂಡಾ ಎನ್‌ಇಪಿ ಹಿಂದಿದೆ. ಕರ್ನಾಟಕದಲ್ಲಿ ಎನ್‌ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿ ಮಾಡುತ್ತೇವೆ ಎಂದು ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದ ಪ್ರಣಾಳಿಕೆಯಲ್ಲಿಯೇ ಹೇಳಿದ್ದೆವು. ಅದನ್ನು ಒಪ್ಪಿ ಜನರು ನಮಗೆ ಮತ ಹಾಕಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ ಎಸ್‌ಇಪಿ ಅಳವಡಿಸಿದ್ದೇವೆ. ಇದರಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ.

* ವಿಧಾನಸಭೆ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ‘ಗ್ಯಾರಂಟಿ’ ಯೋಜನೆಗಳನ್ನು ರೂಪಿಸಿದವರಲ್ಲಿ ನೀವೂ ಒಬ್ಬರು. ಲೋಕಸಭಾ ಚುನಾವಣೆಯಲ್ಲಿ ಅದರ ಫಲ ದೊರೆಯುವ ವಿಶ್ವಾಸವಿದೆಯೇ?

ಖಂಡಿತವಾಗಲೂ ‘ಗ್ಯಾರಂಟಿ’ ಅನುಷ್ಠಾನ ನಮಗೆ ನೆರವಾಗಲಿದೆ. ನಾವು (ಕಾಂಗ್ರೆಸ್‌) ಆಗ ಬರೀ ಮತ ಪಡೆಯಲು ಗ್ಯಾರಂಟಿ ಕೊಟ್ಟಿರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಷ್ಟದಲ್ಲಿದ್ದ ಜನರಿಗೆ ನೆರವಾಗಬೇಕು ಎಂದು ಕೊಟ್ಟಿದ್ದೆವು. ಬಿಜೆಪಿ ಕಾರ್ಯಕರ್ತರು, ಮುಖಂಡರ ಮನೆಯಲ್ಲಿ ಕೆಲಸ ಮಾಡುವವರೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ. ‘ಸಹಾಯ ಮಾಡಿದ್ದೇವೆ. ಸಹಕಾರ ಕೊಡಿ’ ಎಂದು ಅವರನ್ನೂ ಕೇಳುತ್ತಿದ್ದೇವೆ. ಬಿಜೆಪಿ ಅಂದರೆ ‘ಖಾಲಿ ಚೊಂಬು’ ಎಂಬುದು ಎಲ್ಲರಿಗೂ ಗೊತ್ತಾಗಿದೆ.

* ಬಿಜೆಪಿಯವರು ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಅನ್ನುತ್ತಿದ್ದಾರೆ?

ಕಾಂಗ್ರೆಸ್‌ನಲ್ಲಿ ಒಡಕಿದೆ ಎಂದು ಹೇಳುವ ಬದಲು ಬಿಜೆಪಿಯವರು ತಮ್ಮ ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲಿ. ಇದು ಪ್ರಜೆಗಳ ಸರ್ಕಾರ. ಅವರೇ ಆಯ್ಕೆ ಮಾಡಿರುವುದು. ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ.

* ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ನ ಚುನಾವಣೆ ತಂತ್ರಗಾರಿಕೆ ಬದಲಾಗಿದೆಯೇ?

ಹೌದು. ಬಿಜೆಪಿ ಸುಳ್ಳು ಹಾಗೂ ದುಡ್ಡು ಎರಡರಲ್ಲೇ ಉಸಿರಾಡುತ್ತಿದೆ. ಹೀಗಾಗಿ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಸೇರಿದಂತೆ ರಾಜ್ಯದ ಕೆಲವು ಆಯ್ದ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಭಿನ್ನ ಕಾರ್ಯತಂತ್ರ  ಅನುಸರಿಸಿತ್ತು. ಅದು ಆಗ ಫಲ ನೀಡಿತ್ತು. ಈ ಚುನಾವಣೆಯಲ್ಲೂ ಅದು ಚೆನ್ನಾಗಿ ವರ್ಕ್‌ ಔಟ್ ಆಗುತ್ತಿದೆ. ಮತದಾರರು ಈಗ ಬಹಳ ಸೂಕ್ಷ್ಮವಾಗಿದ್ದಾರೆ. ಚುನಾವಣೆಯಲ್ಲಿ ದುಡ್ಡು ಕೊಟ್ಟು ಮತ ಖರೀದಿಸಲು ಸಾಧ್ಯವಿಲ್ಲ.

* ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಕಣದಲ್ಲಿದ್ದರೂ ಮಧು ಬಂಗಾರಪ್ಪ ಸ್ಪರ್ಧೆಯಲ್ಲಿರುವಂತೆ ತೋರುತ್ತಿದೆ?

ಖಂಡಿತ ಇದು ಗೀತಕ್ಕನ ಚುನಾವಣೆ. ಅವರೇ ನಿಂತಿರುವುದು. ಗೆದ್ದು ಬರುತ್ತಾರೆ. ಅವರೇ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ.

* ಈಶ್ವರಪ್ಪ ಸ್ವತಂತ್ರ ಸ್ಪರ್ಧೆಯನ್ನು ಕಾಂಗ್ರೆಸ್‌ ಹೇಗೆ ಪರಿಗಣಿಸುತ್ತದೆ. ಪಕ್ಷಕ್ಕೆ ಲಾಭವಾಗಲಿದೆಯೇ?

ಬಿಜೆಪಿಯೊಳಗಿನ ಆಂತರಿಕ ಸಂಘರ್ಷದ ಲಾಭ ಪಡೆಯುವುದು ನಮಗೆ ಇಷ್ಟವಿಲ್ಲ. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ /ಆಗದು/ ಅಂದರೆ ತಪ್ಪಾಗುತ್ತದೆ. ಆದರೆ ನಮಗೆ ತೊಂದರೆಯಂತೂ ಆಗದು. 

* ಅಕ್ಕ ಗೀತಾ ಅವರಿಗೆ ಶಿವಮೊಗ್ಗದ ಜನರು ಏಕೆ ಮತ ನೀಡಬೇಕು?

ಜಿಲ್ಲೆಯ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ನಾಯಕತ್ವದ ಕೊರತೆ ಇದೆ. ಮಲೆನಾಡಿನ ಜ್ವಲಂತ ವಿಚಾರಗಳಾದ ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಮಸ್ಯೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕಿದೆ. ಹೀಗಾಗಿ ಕೇಂದ್ರದಲ್ಲಿ ನಮ್ಮ ಧ್ವನಿಯಾಗಿ ಗೀತಕ್ಕ ಇರಬೇಕು. ಈವರೆಗೆ ಅಪ್ಪ (ಯಡಿಯೂರಪ್ಪ) ಮುಖ್ಯಮಂತ್ರಿಯಾಗಿದ್ದರೂ ಮಗ (ಬಿ.ವೈ.ರಾಘವೇಂದ್ರ) ಆ ಕೆಲಸಗಳನ್ನು ಮಾಡಲಿಲ್ಲ. ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಉಳಿಸಬೇಕಿದೆ. ಗೀತಕ್ಕ ಗೆದ್ದು ರಾಷ್ಟ್ರಮಟ್ಟದಲ್ಲಿ ನಮ್ಮ ಸರ್ಕಾರ ಬಂದರೆ ಆ ಕೆಲಸ ಮಾಡಲಿದ್ದಾರೆ. ಎಂಪಿಎಂ ಕಾರ್ಖಾನೆ ಪುನರಾರಂಭಿಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. 

* ಗೀತಾ ಅನನುಭವಿ. ಸ್ಥಳೀಯವಾಗಿ ವಾಸವಿಲ್ಲ ಎಂಬುದು ಬಿಜೆಪಿ ಮುಖಂಡರ ಆರೋಪ?

ಬಿಜೆಪಿಯವರು ಹತಾಶರಾಗಿ ವ್ಯಕ್ತಿಗತವಾಗಿ ಗೀತಕ್ಕನ ತೇಜೋವಧೆ ಮಾಡುತ್ತಿದ್ದಾರೆ. ರಾಘವೇಂದ್ರ ಚುನಾವಣೆಗೆ ಬರುವಾಗ ಹಳಬರಾಗಿ ಬಂದಿದ್ದರಾ? ಮೋದಿ ವಾರಾಣಸಿಯಿಂದ ಗೆದ್ದಿದ್ದಾರೆ. ಅಲ್ಲಿಯೇ ವಾಸವಿದ್ದಾರಾ? ಗೀತಕ್ಕ ಇಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಮಾಡುವವರು 15 ವರ್ಷ ಇಲ್ಲಿದ್ದುಕೊಂಡು ಏನು ಸಾಧನೆ ಮಾಡಿದ್ದಾರೆ. ಜನರು ಮೂರ್ಖರಲ್ಲ. ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT