ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ ‌| ನಾನು ರಾಜಕಾರಣಿ ಅಲ್ಲ, ಸಮಾಜಕಾರಣಿ: ಮೃಣಾಲ್‌ ಹೆಬ್ಬಾಳಕರ

Published 3 ಮೇ 2024, 0:38 IST
Last Updated 3 ಮೇ 2024, 0:38 IST
ಅಕ್ಷರ ಗಾತ್ರ

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರಗೆ ಇದು ಮೊದಲ ಚುನಾವಣೆ. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ. ಕ್ಷೇತ್ರದಲ್ಲಿ ವಿವಿಧ ಸ್ವರೂಪದ ಪ್ರಚಾರ ಕಾರ್ಯಗಳಲ್ಲಿ ತೊಡಗಿರುವ ಅವರು ಸಭೆ, ಸಮಾವೇಶಗಳನ್ನು ನಡೆಸುವುದರ ಜೊತೆಗೆ ಗ್ರಾಮಗಳಿಗೆ ತೆರಳಿ ಜನರನ್ನು ಭೇಟಿಯಾಗಿ, ಮತ ಯಾಚಿಸುತ್ತಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

* ರಾಜಕಾರಣಿ ಆಗಬೇಕು ಎಂದೇಕೆ ಅನಿಸಿತು?

–ರಾಜಕಾರಣಿಗಿಂತ ಸಮಾಜಕಾರಣಿ ಆಗಬೇಕು ಎಂಬ ತುಡಿತ ನನ್ನದು. ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ತಾಯಿ ಲಕ್ಷ್ಮಿ ಹೆಬ್ಬಾಳಕರ ಅವರ ಜನಸೇವೆಯೇ ನಾನು ರಾಜಕಾರಣಕ್ಕೆ ಬರಲು ಪ್ರೇರಣೆ.

* ಯುವ ಎಂಜಿನಿಯರ್ ಆದ ನಿಮಗೆ ಐ.ಟಿ, ಬಿ.ಟಿಯಲ್ಲಿ ಅವಕಾಶಗಳಿದ್ದವಲ್ಲ?

–ಸಮಾಜದ ಕೆಲಸ ಮಾಡಲು ವಯಸ್ಸಿನ ಹಂಗಿಲ್ಲ. ಹೆಚ್ಚು ಶಿಕ್ಷಣ ಪಡೆದಂತೆ ಸಮಾಜ ಸುಧಾರಣೆಯತ್ತ ನಾವು ಹೆಚ್ಚು ವಾಲಬೇಕು. ಅದೇ ಅಲ್ಲವೇ ಶಿಕ್ಷಣದ ಉದ್ದೇಶ. ರಾಜಕೀಯವೇ ಇದಕ್ಕೆ ದೊಡ್ಡ ಅವಕಾಶ ನೀಡುತ್ತದೆ.

* ಕುಟುಂಬ ರಾಜಕಾರಣದ ಅಪವಾದವಿದೆಯಲ್ಲ?

–ಖಂಡಿತ ಇಲ್ಲ. ಈ ಬಾರಿ ಕಾಂಗ್ರೆಸ್‌ ಪಕ್ಷ ಯುವಜನರಿಗೆ ಅವಕಾಶ ನೀಡಿದೆ. ಹಿರಿಯ ರಾಜಕಾರಣಿಗಳು ಮತ್ತೆ ಮತ್ತೆ ಚರ್ಚಿಸಿ ಯುವಜನರಿಗೆ ಅದರಲ್ಲೂ ಗೆಲ್ಲಬಲ್ಲ, ಸಮಾಜ ಸೇವೆ ಮಾಡಬಲ್ಲವರಿಗೆ ಟಿಕೆಟ್‌ ಕೊಡಿಸಿದ್ದಾರೆ. ಆ ಕೋಟಾದಲ್ಲಿ ನಾನು ಸಮರ್ಥ.

* ನಿಮ್ಮ ಕುಟುಂಬ ಮತ್ತು ನಿಮ್ಮ ವ್ಯಕ್ತಿತ್ವ ಮತದಾರರ ಮೇಲೆ ಎಷ್ಟು ಪರಿಣಾಮ ಬೀರಬಹುದು?

–ತಾಯಿ ಲಕ್ಷ್ಮಿ ಅವರು ಶಾಸಕಿ, ಸಚಿವೆಯಾಗಿ ಸೇವೆ– ಸಾಮರ್ಥ್ಯ ಎರಡನ್ನೂ ಸಾಬೀತು ಮಾಡಿದ್ದಾರೆ. ಮಾವ ಚನ್ನರಾಜ ಹಟ್ಟಿಹೊಳಿ ಅವರು ವಿಧಾನ ಪರಿಷತ್‌ ಸದಸ್ಯರಾಗಿ ದುಡಿಯುತ್ತಿದ್ದಾರೆ. ನಾನು ದಶಕದಿಂದ ಯುವ ಕಾಂಗ್ರೆಸ್‌ ಸಂಘಟಿಸಿದ್ದೇನೆ. ಪ್ರಚಾರಕ್ಕೆ ಹೋದಲ್ಲೆಲ್ಲ ಹಿರಿಯರ ಆಶೀರ್ವಾದ, ಯುವಜನರ ಬೆಂಬಲ ಸಿಗುತ್ತಿದೆ.

* ಬೆಳಗಾವಿ ಕ್ಷೇತ್ರದ ಮೂರು ದೊಡ್ಡ ಸಮಸ್ಯೆ ಯಾವುವು?

–ಶಿಕ್ಷಣ ಪಡೆದರೂ ಉದ್ಯೋಗ ಸಿಗುತ್ತಿಲ್ಲ. ಕೈಗಾರಿಕೆ ಅಭಿವೃದ್ಧಿಪಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಉದ್ಯೋಗ ಅರಸಿ ಮಹಾರಾಷ್ಟ್ರ ವಲಸೆ ಸಾಮಾನ್ಯವಾಗಿದೆ. ಜಿಲ್ಲೆಯ ಪ್ರತಿಭೆಗಳು ಬೆಂಗಳೂರಿಗೆ ಪಲಾಯನ ಮಾಡುತ್ತಿದ್ದಾರೆ. ದಿವಂಗತ ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ರೈಲ್ವೆ ಸರಕು ಸಾಗಣೆ ಬೆಳವಣಿಗೆ ಕಾಣಲಿಲ್ಲ. ಬೆಳಗಾವಿ ತಾಲ್ಲೂಕಿಗೆ ಮೂರು ರೈಲ್ವೆ ಗೇಟ್‌ಗಳು ದೊಡ್ಡ ಸಮಸ್ಯೆ ಆಗಿವೆ. 20 ವರ್ಷ ಸಂಸದರಾದವರು ಒಂದೇ ಮೇಲ್ಸೇತುವೆ ಮಾಡಿದರು. ಹೆಚ್ಚು ಕಾರ್ಮಿಕರಿದ್ದರೂ ಇಎಸ್‌ಐ ಆಸ್ಪತ್ರೆ ಇಲ್ಲ.

* ನಿಮ್ಮ ಪ್ರತಿಸ್ಪರ್ಧಿ ಹಿರಿಯ ರಾಜಕಾರಣಿ ಇದ್ದಾರೆ. ಅವರ ಬಗ್ಗೆ ಏನು ಹೇಳುವಿರಿ?

–ಅವರು ಅನುಭವಿ, ಮುಖ್ಯಮಂತ್ರಿ ಆಗಿದ್ದವರು. ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದವರು. ಅಷ್ಟು ದೊಡ್ಡ ಹುದ್ದೆ ನಿಭಾಯಿಸಿದ ಮೇಲೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪ್ರಚಾರಕ್ಕೆ ಹೋದಲ್ಲೆಲ್ಲ ಬರೀ ಮೋದಿ ಹೆಸರನ್ನೇ ಅವಲಂಬಿಸಿದ್ದಾರೆ. ಏಕೆ? ನೀವು ಹೇಳಿಕೊಳ್ಳುವಂಥದ್ದು ಏನೂ ಮಾಡಲಿಲ್ಲವೆ? ಬೆಳಗಾವಿ ಜನ ಇದನ್ನೆಲ್ಲ ಅಳೆದು– ತೂಗಿ ನೋಡುತ್ತಾರೆ.

* ‘ಮನೆಮಗ’ ಎಂಬ ಪ್ರಚಾರ ಎಷ್ಟು ಪ್ರಭಾವ ಬೀರಬಲ್ಲದು?

–ಪ್ರಭಾವ ಬೀರುವ ಮಾತಲ್ಲ ಇದು. ನಿಜ ಕೂಡ. ನಾವು ಅವಕಾಶವಾದಿ ಆಗಬಾರದು. ಜನರ ಮನೆಯ ಮಕ್ಕಳಂತೆ ಯೋಚನೆ ಮಾಡಿದರೆ ಮಾತ್ರ ಅವರ ಭಾವನೆಗಳು ಅರ್ಥವಾಗುತ್ತವೆ. ಜಿಲ್ಲೆಯ ಜನ ನಮ್ಮ ಮನೆ ಹಿರಿಯರು. ನಾನು ಮನೆ ಮಗ ಎಂದು ಒಪ್ಪಿಕೊಂಡಿದ್ದಾರೆ.

* ನೀವು ಎದುರಿಸುತ್ತಿರುವ ಸವಾಲು, ಸಮಸ್ಯೆಗಳೇನು?

–ಪಂಚ ಗ್ಯಾರಂಟಿಗಳನ್ನು ಎಲ್ಲರಿಗೂ ಪ್ರಾಮಾಣಿಕವಾಗಿ ಮುಟ್ಟಿಸುವುದು ಸವಾಲಾಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಜಿಲ್ಲೆಯ ಶೇ 99ರಷ್ಟು ಫಲಾನುಭವಿಗಳಿಗೆ ಯೋಜನೆಗಳು ಮುಟ್ಟಿವೆ.

* ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇಟ್ಟುಕೊಂಡ ನಿರೀಕ್ಷೆಗಳೇನು?

–ಜನೌಷಧಿ ಕೇಂದ್ರಗಳನ್ನು ತಾಲ್ಲೂಕು, ಗ್ರಾಮ ಮಟ್ಟದಲ್ಲಿ ತೆರೆಯಬೇಕು. ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದುಕೊಂಡಿದ್ದೇನೆ.

* ಅತಿಯಾದ ಆತ್ಮವಿಶ್ವಾಸದಲ್ಲಿದ್ದೀರಿ ಅನ್ನಿಸುತ್ತಿಲ್ಲವೇ?

–ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವಿದೆ. ಅತಿಯಾದ ಆತ್ಮವಿಶ್ವಾಸ ಅಲ್ಲ. ಎದುರಿಗಿರುವ ಅಭ್ಯರ್ಥಿ ಎಷ್ಟು ಸಮರ್ಥರು ಎಂದು ಯೋಚಿಸಿಲ್ಲ. ಆದರೆ, ಅವರಿಗಿಂತ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ ನನಗಿದೆ.

* ಜನ ನಿಮಗೆ ಏಕೆ ಮತ ಕೊಡಬೇಕು?

–ಕೆಲಸ ಮಾಡುವ ಛಲವಿದೆ, ತುಡಿತವಿದೆ. ಹತ್ತು ವರ್ಷಗಳಿಂದ ಜಿಲ್ಲೆಯ ಜನರ ಸಮಸ್ಯೆ ಅರಿತಿದ್ದೇನೆ. ರೈತರ, ಮಹಿಳೆಯರ ಸಂಕಷ್ಟ ನೋಡಿದ್ದೇನೆ. ಯುವಜನರಂತೂ ಕೆಲಸಕ್ಕಾಗಿ ಪರದಾಡುವ ಸ್ಥಿತಿ ಇದೆ. ಇವರೆಲ್ಲ ಸಮಸ್ಯೆಗೆ ಸ್ಪಂದಿಸುವ, ಸೇವೆ ಮಾಡಲು ಅವಕಾಶ ಕೊಡಿ ಎಂದು ಕೋರುತ್ತಿರುವೆ.

* ಒಳಪೆಟ್ಟಿನ ರಾಜಕಾರಣದಿಂದ ಹಿಂದೆ ನಿಮ್ಮ ತಾಯಿ ಇದೇ ಕ್ಷೇತ್ರದಲ್ಲಿ ಸೋಲುಂಡಿದ್ದರು. ಈಗ ಹೇಗೆ ನಿಭಾಯಿಸುತ್ತೀರಿ?

–ಅಂಥ ವಾತಾವರಣ ಈಗ ಇಲ್ಲ. ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಎಲ್ಲ ನಾಯಕರು ಕಾರ್ಯಕರ್ತರು ಒಂದಾಗಿದ್ದಾರೆ. ನನ್ನ ಬೆನ್ನಿಗೆ ನಿಂತಿದ್ದಾರೆ. 20 ವರ್ಷಗಳಿಂದ ನಮ್ಮ ಸಂಸದರನ್ನು ನಾವು ನೋಡಿಲ್ಲ. ಈಗ ಗೆಲ್ಲಬೇಕು ಎಂಬ ಹಂಬಲದಲ್ಲಿದ್ದಾರೆ. ‘ಆಮೆ ವೇಗ’ದ ಆಡಳಿತದಿಂದ ಜನರೂ ಬೇಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT