ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಅಭ್ಯರ್ಥಿ ಸಂದರ್ಶನ: ಮನೆಯ ಮಗಳಾಗಿ ಕೆಲಸ ಮಾಡುವೆ– ಸಂಯುಕ್ತಾ ಪಾಟೀಲ

Published 29 ಏಪ್ರಿಲ್ 2024, 23:00 IST
Last Updated 29 ಏಪ್ರಿಲ್ 2024, 23:00 IST
ಅಕ್ಷರ ಗಾತ್ರ

ಗ್ರಾಮೀಣ ಮಹಿಳಾ ಸಬಲೀಕರಣ ಉದ್ದೇಶದಿಂದ ಆರಂಭಿಸಲಾದ ಸ್ಪರ್ಶ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಯುಕ್ತಾ ಪಾಟೀಲ ಛಾಪು ಮೂಡಿಸಿದ್ದಾರೆ. ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಆಯ್ದ ಭಾಗ ಇಲ್ಲಿದೆ.

ಚುನಾವಣಾ ಪ್ರಚಾರ, ಹೊರ ಜಿಲ್ಲೆಯವರು ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಮನೆ ಮಗಳು, ಸಹೋದರಿ ಎಂದು  ಕ್ಷೇತ್ರದಲ್ಲಿ ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಸಮಸ್ಯೆ, ಸಂಕಷ್ಟಗಳಿಗೆ ಸಂಸತ್ತಿನಲ್ಲಿ ಧ್ವನಿಯಾಗುವೆ ಎಂಬ ಆತ್ಮವಿಶ್ವಾಸ ಅವರಲ್ಲಿ ಕಾಣುತ್ತಿದೆ. ಬಿರು ಬಿಸಿಲಿನಲ್ಲೂ ಗಂಟೆಗಟ್ಟಲೇ ಕಾದು ಅವರು ಸ್ವಾಗತಿಸುತ್ತಿರುವ ಪರಿ ನೋಡಿ ಪುಳಕಿತಳಾಗಿದ್ದೇನೆ.

ಕ್ಷೇತ್ರದ ಬಗ್ಗೆ ನಿಮ್ಮ ಕನಸುಗಳೇನು?

ಬಾಗಲಕೋಟೆ–ಕುಡಚಿ ರೈಲ್ವೆ ಮಾರ್ಗ ಪೂರ್ಣಗೊಳಿಸುವುದು, ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸುವುದು, ಯುಕೆಪಿ ಯೋಜನೆಯ ಸಂತ್ರಸ್ತರ ಸಮಸ್ಯೆಗಳನ್ನು ನಿವಾರಿಸುವುದು, ಕಳಸಾ–ಬಂಡೂರಿ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವೆ. ವಿಶೇಷ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನಕ್ಕೆ ಪ್ರಯತ್ನಿಸುವೆ.

ಪ್ರತಿಸ್ಪರ್ಧಿ ಬಗ್ಗೆ ಏನು ಹೇಳುವಿರಿ?

ಈಗ ಸಂಸದರಾದವರಿಗೆ ಅಪಾರ ಅನುಭವ ಇದೆ. ಆದರೆ, ಅನುಭವದ ಲಾಭ ಕ್ಷೇತ್ರದ ಜನರಿಗೆ ತಲುಪಿಲ್ಲ. ರಾಜ್ಯದಲ್ಲಿ ಬರಗಾಲವಿದ್ದು ಜನ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಸಂಸತ್ತಿನಲ್ಲಿ ಅವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ವಿಶೇಷ ಯೋಜನೆ ತರುವ ಕೆಲಸ ಮಾಡಿಲ್ಲ. ಕೈಗಾರಿಕೆಗಳನ್ನು ತಂದು ಉದ್ಯೋಗ ಒದಗಿಸುವ ಕೆಲಸ ಮಾಡಿಲ್ಲ.

ಪಕ್ಷದೊಳಗಿನ ಅಸಮಾಧಾನ ಶಮನವಾಗಿದೆಯೇ?

ಆರಂಭದಲ್ಲಿ ಇದ್ದ ಕೆಲ ಗೊಂದಲಗಳು ಬಗೆಹರಿದಿವೆ. ಬಹಳಷ್ಟು ಜನರು ಟಿಕೆಟ್‌ ಆಕಾಂಕ್ಷಿಗಳಾಗಿರುತ್ತಾರೆ. ಒಬ್ಬರಿಗೆ ದೊರೆತಾಗ, ಇನ್ನೊಬ್ಬರಿಗೆ ಸ್ವಲ್ಪ ಅಸಮಾಧಾನ ಆಗುವುದು ಸಹಜ. ಆದರೆ, ಕಾಂಗ್ರೆಸ್‌ನವರಿಗೆ ಪಕ್ಷವೇ ಮುಖ್ಯ. ಈಗ ನೀವೇ ನೋಡುತ್ತಿದ್ದೀರಿ. ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರೂ ಕಾಂಗ್ರೆಸ್‌ ಗೆಲುವಿಗೆ ಕೈಜೋಡಿಸಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ನಿಮ್ಮ ಅನಿಸಿಕೆ?

ಎಂಟು ವರ್ಷಗಳಿಂದ ಪಕ್ಷದ ಯುವ, ಮಹಿಳಾ, ಎನ್‌ಎಸ್‌ಯುಐ ಸಂಘಟನೆಯಲ್ಲಿ ಕೆಲಸ ಮಾಡಿರುವೆ. ರಾಜಕೀಯ ವಾತಾವರಣದಲ್ಲಿ ಬೆಳೆದ ನನಗೆ ರಾಜಕೀಯ ಆಸಕ್ತಿ ಮೊದಲಿನಿಂದ ಇತ್ತು. ವಕೀಲರ ಮಕ್ಕಳು ವಕೀಲರು, ವೈದ್ಯರ ಮಕ್ಕಳು ವೈದ್ಯರ ಆಗುವ ಹಾಗೆ. ನಾಮ ನಿರ್ದೇಶನಗೊಂಡು ಹೋಗುತ್ತಿಲ್ಲ. ಜನರು ತೀರ್ಪು ನೀಡಬೇಕು.

ನಿಮಗೆ ಯಾಕೆ ಮತ ಹಾಕಬೇಕು?

20 ವರ್ಷಗಳಿಂದ ಒಬ್ಬರಿಗೆ ಅವಕಾಶ ಕೊಟ್ಟಿದ್ದೀರಿ. ರೈಲು ಮಾರ್ಗ ಪೂರ್ಣಗೊಂಡಿಲ್ಲ. ಯುಕೆಪಿ ಯೋಜನೆಗೆ ನೆರವು ಕೊಡಿಸಲು ಸಾಧ್ಯವಾಗಿಲ್ಲ. ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗವಕಾಶ ಒದಗಿಸಿಲ್ಲ. ಜನರೂ ಬದಲಾವಣೆ ಬಯಸಿರುವುದು ಪ್ರಚಾರ ಸಂದರ್ಭದಲ್ಲಿ ಕಂಡು ಬಂದಿದೆ.  ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅಪಾರ ಕನಸುಗಳನ್ನಿಟ್ಟುಕೊಂಡು ಬಂದಿರುವ ನನಗೂ ಒಂದು ಅವಕಾಶ ಕೊಡಿ. ಮನೆ ಮಗಳಾಗಿ ಕೆಲಸ ಮಾಡುವೆ.

ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಲಿವೆಯೇ?

ಖಂಡಿತ. ಬಡವರ ಪರವಾದ ಯೋಜನೆಗಳನ್ನು ತಂದಾಗ ಸಹಜವಾಗಿ ಜನರೂ ಉತ್ತಮವಾಗಿ ಬೆಂಬಲಿಸುತ್ತಾರೆ. ಬೆಲೆ ಏರಿಕೆ ಅಲ್ಲದೇ ನಿರುದ್ಯೋಗ ಸಮಸ್ಯೆ ಕಾಡುತ್ತಿರುವ ಇಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾಗಿವೆ. ಶೇ 98ರಷ್ಟು ಜನರಿಗೆ ಸೌಲಭ್ಯ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳ ಪ್ರಭಾವ ಹೇಗಿದೆ ಎಂದರೆ ಈ ಯೋಜನೆಗಳ ಬಗ್ಗೆ ಲೇವಡಿ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಗ್ಯಾರಂಟಿ ಜಪಿಸುವಂತಾಗಿದೆ. ಪಕ್ಷವು ರಾಷ್ಟ್ರಮಟ್ಟದಲ್ಲಿಯೂ ಹಲವು ಗ್ಯಾರಂಟಿ ಘೋಷಿಸಿದೆ. ಜಾರಿಯೂ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT