ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ನಂತರ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ

Published 20 ಏಪ್ರಿಲ್ 2024, 16:18 IST
Last Updated 20 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದು ದಶಕದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹಕ್ಕೆ ಕಾರಣವಾಗಿತ್ತು. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಪ್ರಚಾರ ನಡೆಸಿದರು. 

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಚೊಕ್ಕಹಳ್ಳಿ ಬಳಿ ಮಧ್ಯಾಹ್ನ 3ಕ್ಕೆ ಪ್ರಧಾನಿ ಅವರ ಕಾರ್ಯಕ್ರಮ ನಡೆಯಲಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬಾಗೇಪಲ್ಲಿ, ಗೌರಿಬಿದನೂರು, ಹೊಸಕೋಟೆ, ನೆಲಮಂಗಲ, ಯಲಹಂಕ, ಶಿಡ್ಲಘಟ್ಟ, ಚಿಂತಾಮಣಿ ಮತ್ತಿತರ ವಿಧಾನಸಭಾ ಕ್ಷೇತ್ರಗಳ ಅಪಾರ ಸಂಖ್ಯೆಯ ಕಾರ್ಯಕರ್ತರು ಸಮಾವೇಶಕ್ಕೆ ಜಮಾಯಿಸಿದರು. 

2014ರ ಲೋಕಸಭಾ ಚುನಾವಣೆಯ ವೇಳೆ ಅಂದಿನ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರ ಪರವಾಗಿ ಚಿಕ್ಕಬಳ್ಳಾಪುರದಲ್ಲಿ ಮೋದಿ ಮತಯಾಚಿಸಿದ್ದರು. ಆ ನಂತರ ಜಿಲ್ಲೆಗೆ ಭೇಟಿ ನೀಡಿರಲಿಲ್ಲ.

ಬಿಜೆಪಿ ಬಲ ಹೆಚ್ಚಳ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೆಜ್ಜೆ ಗುರುತುಗಳನ್ನು ನೋಡಿದರೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಇದೆ.  

2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಅಶ್ವತ್ಥ ನಾರಾಯಣ 3,39,119 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಲಿ ವಿರುದ್ಧ 51,381 ಮತಗಳಿಂದ ಸೋಲು ಅನುಭವಿಸಿದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ 4,15,280 ಮತಗಳನ್ನು ಪಡೆದರು. ವೀರಪ್ಪ ಮೊಯಿಲಿ ವಿರುದ್ಧ 9,520 ಮತಗಳ ಅಂತರದಿಂದ ಸೋಲು ಅನುಭವಿಸಿದರು. 

2019ರ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರು 7,45,912 ಮತಗಳನ್ನು ಪಡೆದರು. ಎದುರಾಳಿ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ 5,63,802 ಮತಗಳನ್ನು ಪಡೆದರು. ಗೌಡರು 1,82,110 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆ ಮೂಲಕ ಬಿಜೆಪಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿತು. ಈಗ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ. 

2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದೇ ಒಂದು (ಯಲಹಂಕ) ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ ಐದು (ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ)  ಹಾಗೂ ಜೆಡಿಎಸ್‌ ಎರಡು (ದೇವನಹಳ್ಳಿ, ನೆಲಮಂಗಲ) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 

ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿದ್ದ ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ದೊಡ್ಡಬಳ್ಳಾಪುರ ಮತ್ತು ಯಲಹಂಕದಲ್ಲಿ ಬಿಜೆಪಿ ಶಾಸಕರು ಇದ್ದಾರೆ.

ಕೋಲಾರಕ್ಕೂ ಬಲ: 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಆ ಮೂಲಕ ಮೊದಲ ಬಾರಿಗೆ ಕೋಲಾರದ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರದಲ್ಲಿ ಕಮಲ ಅರಳಿತು. ಈ ಬಾರಿ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಕೋಲಾರ ಲೋಕಸಭೆಗೆ ಸೇರುತ್ತವೆ. 

ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹ ಭಾಗಿಯಾಗುತ್ತಿದ್ದು ಜೆಡಿಎಸ್‌ ಪಾಳಯದಲ್ಲಿ ಹುರುಪಿಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT