ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | 2019ರ ದಾಖಲೆ ಮುರಿಯಲು ಕಸರತ್ತು

ಕೋಲಾರ ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಶೇ 80ರ ಗಡಿ ದಾಟಿಸಲು ಸ್ವೀಪ್‌ ಸಮಿತಿ ಪ್ರಯತ್ನ
Published 4 ಏಪ್ರಿಲ್ 2024, 6:37 IST
Last Updated 4 ಏಪ್ರಿಲ್ 2024, 6:37 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಇತಿಹಾಸದಲ್ಲಿ 2019ರಲ್ಲಿ ದಾಖಲಾಗಿದ್ದ ಮತದಾನ ಪ್ರಮಾಣದ ದಾಖಲೆ ಮುರಿದು ಶೇ 80ರ ಗಡಿದಾಟಲು ಜಿಲ್ಲಾ ಸ್ವೀಪ್‌ ಸಮಿತಿ ಕಸರತ್ತು ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ವೈವಿಧ್ಯಮಯ ಪೋಸ್ಟರ್‌, ಪೋಷಕರಿಗೆ ಮಕ್ಕಳ ಪತ್ರದ ಮೂಲಕ ಹಾಗೂ ವಿಡಿಯೋ ಮಾಡಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಪಂಚಿನ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 77.15 ಮತದಾನವಾಗಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಈ ಹಿಂದಿನ 17 ಸಾರ್ವತ್ರಿಕ ಚುನಾವಣೆಗಳಲ್ಲಿ ಈವರೆಗಿನ ದಾಖಲೆ ಅದಾಗಿದೆ. ಇದನ್ನು ಚುನಾವಣಾ ಆಯೋಗದ ಅಂಕಿ–ಅಂಶಗಳು ದೃಢಪಡಿಸುತ್ತವೆ.

2019 ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು. 16.29 ಲಕ್ಷ ಮತದಾರರಲ್ಲಿ 12.58 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕೆ.ಎಚ್‌.ಮುನಿಯಪ್ಪ, ಬಿಜೆಪಿಯಿಂದ ಎಸ್‌.ಮುನಿಸ್ವಾಮಿ ಕಣಕ್ಕಿಳಿದಿದ್ದರು.

ಆಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಆ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಿದೆ.

ಈ ಬಾರಿ ಹಿಂದಿನ ಚುನಾವಣೆಯ ದಾಖಲೆ ಮುರಿಯಲು ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಈ ಬಾರಿ 8.45 ಲಕ್ಷ ಪುರುಷ ಹಾಗೂ 8.62 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 17.08 ಲಕ್ಷ ಮತದಾರರು ಇದ್ದಾರೆ. 2019ರ ಲೋಕಸಭೆ ಚುನಾವಣೆಗಿಂತ ಲಕ್ಷ ಮತದಾರರು ಈ ಸಲ ಹೆಚ್ಚಿದ್ದಾರೆ. ಈ ಬಾರಿ ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷದಿಂದ ಕೆ.ವಿ.ಗೌತಮ್‌ ಹಾಗೂ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದಿಂದ ಎಂ.ಮಲ್ಲೇಶ್‌ ಬಾಬು ಕಣಕ್ಕಿಳಿದಿದ್ದಾರೆ. 

ವಿಧಾನಸಭಾ ಚುನಾವಣೆ, ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಿಗೆ ಹೋಲಿಸಿದರೆ; ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಅಷ್ಟಕಷ್ಟೆ. ಅದಕ್ಕೆ ಅಂಕಿಅಂಶಗಳೇ ಸಾಕ್ಷಿ. 1952ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಕಡಿಮೆ ಪ್ರಮಾಣದ (ಶೇ 48.43) ಮತದಾನವಾಗಿತ್ತು. ಮೊದಲೆರಡು ಚುನಾವಣೆಗಳು ದ್ವಿಸದಸ್ಯ ಸ್ಥಾನಗಳಿದ್ದವು.

ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ ಶೇ 69.15 ಮತದಾನ ನಡೆದಿತ್ತು. ಆದರೆ, 2014ರ ಚುನಾವಣೆಯಲ್ಲಿ (ಶೇ 75.51) ಸ್ವೀಪ್‌ ಸಮಿತಿ ಪ್ರಯತ್ನದಿಂದ ಮತದಾನ ಪ್ರಮಾಣ ಏರಿಕೆ ಕಂಡಿತ್ತು.

‘ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದೇ ನಮಗೆ ಸವಾಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾರ್ಗದರ್ಶನದಲ್ಲಿ ಮನೆಮನೆಗೆ ಹೋಗಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಮತದಾರರ ಜಾಗೃತಿ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್‌) ಸಮಿತಿ ಅಧ್ಯಕ್ಷೆ ಪದ್ಮಾ ಬಸವಂತಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಳೆದ ಬಾರಿ ಎಲ್ಲೆಲ್ಲಿ ಕಡಿಮೆ ಮತದಾನ ಆಗಿದೆಯೋ ಅಲ್ಲಿಗೆ ತೆರಳಿ ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ಟಿಕೆಟ್‌, ಹಾಲಿನ ಪೊಟ್ಟಣದ ಮೇಲೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನಕ್ಕೆ ಮನೆಮನೆಗೆ ಕರೆಯೋಲೆ ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪದ್ಮಾ ಬಸವಂತಪ್ಪ
ಪದ್ಮಾ ಬಸವಂತಪ್ಪ
ಮತಪಟ್ಟಿಯಲ್ಲಿರುವ ಎಲ್ಲರೂ ಮತದಾನ ಮಾಡಬೇಕೆಂಬುದು ನಮ್ಮ ಮನವಿ. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಹಾಕುತ್ತಿದ್ದೇವೆ. ಕಳೆದ ಬಾರಿಗಿಂತ ಶೇ 5ರಷ್ಟಾದರೂ ಮತದಾನ ಹೆಚ್ಚಾಗಬೇಕು
ಪದ್ಮಾ ಬಸವಂತಪ್ಪ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT