ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದ ‘ತೆರಿಗೆ ದಂಗೆ’: ಬಿಜೆಪಿಗೆ ಬಿಸಿ ತುಪ್ಪ

ಕೇಂದ್ರದ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನ ಮಾಡಿ ಸಡ್ಡು ಹೊಡೆದ ದಕ್ಷಿಣದ ರಾಜ್ಯಗಳು
Published 28 ಮಾರ್ಚ್ 2024, 23:43 IST
Last Updated 28 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿ ಬಿಜೆಪಿಯೇತರ ಸರ್ಕಾರಗಳು ಕೇಂದ್ರ ಸರ್ಕಾರದ ವಿರುದ್ಧದ ಸಂಘರ್ಷಕ್ಕೆ ಇಳಿದಿವೆ. ‘ಗೆರಿಲ್ಲಾ’ ಮಾದರಿಯ ತೆರಿಗೆ ಹೋರಾಟದಿಂದ ‘ಅಜೇಯ’ ಬಿಜೆಪಿಯ ವೇಗಕ್ಕೆ ಕಡಿವಾಣ ಹಾಕಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಫಸಲು ಪಡೆಯಬಹುದು ಎಂಬ ಆಸೆಯಲ್ಲಿವೆ. ಶತಮಾನದ ಬರದಿಂದ ತತ್ತರಿಸಿರುವ ಕರುನಾಡಿಗೆ ಕೇಂದ್ರ ಸರ್ಕಾರವು ನ್ಯಾಯೋಚಿತ ಪಾಲು ನೀಡದೆ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಭಾವಳಿ ಎದುರು ತೆರಿಗೆ ಮಾತಿಗೆ ಕಿಮ್ಮತ್ತು ಸಿಗುವುದಿಲ್ಲ ಎಂಬುದು ಕಮಲ ಪಾಳಯದ ಅಮಿತ ವಿಶ್ವಾಸ. 

ಕೇಂದ್ರದ ವಿರುದ್ಧ ರಾಜ್ಯಮಟ್ಟದಲ್ಲಿ ಹೋರಾಟ, ರಾಷ್ಟ್ರ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನ ಮಾಡಿ ಸಡ್ಡು ಹೊಡೆದಿರುವ ದಕ್ಷಿಣದ ರಾಜ್ಯಗಳು ತೆರಿಗೆ ಪಾಲಿಗಾಗಿ ದೇಶದ ಉನ್ನತ ನ್ಯಾಯಾಲಯದ ಮೆಟ್ಟಿಲೇರಿವೆ. ಈ ಮೂಲಕ ಹೋರಾಟವನ್ನು ಇನ್ನೊಂದು ಮಜಲಿಗೆ ಕೊಂಡೊಯ್ದಿವೆ. ದಕ್ಷಿಣದ ರಾಜ್ಯಗಳ ಅಭಿಯಾನವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಆರಂಭದಲ್ಲಿ ನಿರ್ಲಕ್ಷಿಸಿದ್ದರು. ಈ ಹೋರಾಟ ರಾಜಕೀಯ ಸ್ವರೂಪ ತಾಳುತ್ತಿದ್ದಂತೆ ಎಚ್ಚೆತ್ತು ಆರೋಪಕ್ಕೆ ತಿರುಗೇಟು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ‘ನನ್ನ ತೆರಿಗೆ– ನನ್ನ ಹಕ್ಕು’ ಆಂದೋಲನವನ್ನು ‘ದೇಶ ವಿಭಜಕ ಭಾಷೆ’ ಎಂಬ ಹೆಸರು ಕೊಟ್ಟು ಹೋರಾಟದ ಕಾವನ್ನು ತಗ್ಗಿಸುವ‍ ಪ್ರಯತ್ನ ಮಾಡಿದರು. ‘ಗ್ಯಾರಂಟಿ’ ಅನುಷ್ಠಾನಕ್ಕೆ ದುಡ್ಡಿಲ್ಲದೆ ಕಾಂಗ್ರೆಸ್‌ ಈ ಹೋರಾಟ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಅಣಕವಾಡಿದರು. ಕರ್ನಾಟಕದ ಕಾಂಗ್ರೆಸ್‌ ನಾಯಕರು ಅಂಕಿ ಅಂಶಗಳ ಸಮೇತ ಪ್ರತ್ಯುತ್ತರ ನೀಡಿದರು. ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ತಮ್ಮ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಮೊಳಗಿಸಿದವು. ಈ ಅಭಿಯಾನ ಜನರ ಮನಸ್ಸಿಗೆ ನಾಟುವಂತೆ ಮಾಡುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾದವು.

‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಕರ್ನಾಟಕದ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಆಗಿದೆ. ಇಷ್ಟೆಲ್ಲ ಮಾಡಿದರೂ ಜಿಎಸ್‌ಟಿ ಸಂಗ್ರಹಣೆಯಲ್ಲಿ ರಾಜ್ಯಕ್ಕೆ ಶೇ 52 ರಷ್ಟು ಮಾತ್ರ ಸಿಗುತ್ತಿದೆ. ಈ ವರ್ಷ ₹4 ಲಕ್ಷ ಕೋಟಿಗೂ ಹೆಚ್ಚು ವರಮಾನ ತೆರಿಗೆ, ಸೆಸ್‌, ಸುಂಕ ರೂಪದಲ್ಲಿ ಸಂಗ್ರಹಿಸಲಾಗಿದೆ. ಆದರೆ, ರಾಜ್ಯಕ್ಕೆ ಕೇಂದ್ರ ನೀಡುತ್ತಿರುವುದು ₹50,000 ಕೋಟಿಯಷ್ಟು ಮಾತ್ರ. ಕರ್ನಾಟಕದಿಂದ ಸಂಗ್ರಹವಾಗುವ ₹100 ತೆರಿಗೆಯಲ್ಲಿ ₹15 ಮಾತ್ರ ವಾಪಸು ಬರುತ್ತಿದೆ. ಆದರೆ, ಹಿಂದಿ ಸೀಮೆಯ ರಾಜ್ಯಗಳಿಗೆ ಉದಾರವಾಗಿ ಅನುದಾನ ನೀಡಲಾಗುತ್ತಿದೆ’ ಎಂಬುದು ಕರ್ನಾಟಕದ ಆರೋಪ. 

‘ಅಭಿವೃದ್ದಿಯಲ್ಲಿ ಹಿಂದುಳಿದ ಬಡ ರಾಜ್ಯಗಳಿಗೆ ಅಧಿಕ ಅನುದಾನ ನೀಡುವುದಕ್ಕೆ ನಮ್ಮ ತಕರಾರು ಇಲ್ಲ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ಯುವ ಕೆಲಸ ಮಾಡುತ್ತಿದ್ದಾರೆ. ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ಯಲು ಹೊರಟಿದ್ದಾರೆ. ದೇಶದ ಜನರ ಹೃದಯದಲ್ಲಿ ‘ಗುಜರಾತ್‌ ಮಾದರಿ’ ಎಂಬ ಕನಸನ್ನು ಬಿತ್ತಿ ನರೇಂದ್ರ ಮೋದಿ ಅವರು ಕೇಂದ್ರದ ಗದ್ದುಗೆ ಏರಿದವರು. ಆದರೆ, ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂಪನ್ಮೂಲ ಹರಿದು ಹೋಗಿದ್ದು ಪ್ರಧಾನಿ ಅವರ ತವರು ರಾಜ್ಯಕ್ಕೆ’ ಎಂಬುದನ್ನು ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಮೇತ ವಿವರಿಸಿ ಜನರ ಮನಸ್ಸಿಗೆ ಮುಟ್ಟುವಂತೆ ಮಾಡಿದ್ದಾರೆ. ಈ ವಿಷಯದಲ್ಲಿ ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಹಿಂದೆ ಬಿದ್ದಿಲ್ಲ. 

‘ಕಾಂಗ್ರೆಸ್‌ ಸರ್ಕಾರವು ಪಂಚ ಗ್ಯಾರಂಟಿ‌ಗಳ ಅನುಷ್ಠಾನಕ್ಕಾಗಿ ರಾಜ್ಯದ ಸಂಪನ್ಮೂಲ ಬರಿದು ಮಾಡುತ್ತಿದೆ. ಉದ್ಯೋಗ ಸೃಷ್ಟಿಯಂತಹ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ. ತಮ್ಮ ಲೋಪಗಳನ್ನೆಲ್ಲ ಮರೆಮಾಚಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪದೇ ಪದೇ ತಿರುಗೇಟು ಕೊಡುತ್ತಲೇ ಇದ್ದಾರೆ. ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದರು ಎಂಬುದನ್ನು ಕಾಂಗ್ರೆಸ್‌ ನಾಯಕರು ಆಗಾಗ ಹೇಳುತ್ತಾ ತಮ್ಮ ಚಳವಳಿ ರಾಜಕೀಯ ಪ್ರೇರಿತ ಅಲ್ಲ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. 

ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೆರವು ನೀಡುವ ಗ್ಯಾರಂಟಿ ಯೋಜನೆಗೆ ಕೇಂದ್ರ ಅವಮಾನ ಮಾಡುತ್ತಿದೆ ಎಂದು ಮತ್ತೊಂದು ಬಗೆಯ ನಿರೂಪಣೆಯನ್ನು ಕಾಂಗ್ರೆಸ್‌ ಆರಂಭಿಸಿದೆ. ಅದರ ಬೆನ್ನಲ್ಲೇ, ಕೇಂದ್ರದ ಬಿಜೆಪಿ ಸರ್ಕಾರವು ‘ಮೋದಿ ಗ್ಯಾರಂಟಿ’ಯನ್ನು ಮುನ್ನೆಲೆಗೆ ತಂದಿದೆ. ಅನುದಾನ ಹಂಚಿಕೆ ತಾರತಮ್ಯವನ್ನೇ ಮತವನ್ನಾಗಿ ಪರಿವರ್ತಿಸುವ ಕಸರತ್ತಿನಲ್ಲಿ ಬಿಜೆಪಿಯೇತರ ಪಕ್ಷಗಳು ತೊಡಗಿವೆ. ‘ಹಿಂದಿ ಸೀಮೆಯ ಪಕ್ಷ’ ಎಂಬ ತನ್ನ ಹಣೆಪಟ್ಟಿ ಅಳಿಸಿ ಹಾಕಿ ದಕ್ಷಿಣದ ರಾಜ್ಯಗಳಲ್ಲಿ ಗರಿಷ್ಠ ಸ್ಥಾನ ಗಳಿಸುವ ಬಿಜೆಪಿಯ ಕನಸಿಗೆ ತಡೆ ಒಡ್ಡಲು ತೆರಿಗೆ ಚಳವಳಿ ಅನುಕೂಲವಾಗಲಿದೆ ಎಂದು ವಿಪಕ್ಷಗಳು ಭಾವಿಸಿವೆ. ‘ತೆರಿಗೆ ಜಗಳ’ವು ಚುನಾವಣಾ ಕಣದ ಕಾವನ್ನು ಇನ್ನಷ್ಟು ಹೆಚ್ಚಿಸುವುದಂತೂ ನಿಜ. 

ಮಂದಿರದ ಅಲೆ ತಗ್ಗಿಸಲು ತೆರಿಗೆ ತಂತ್ರ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮುಗಿದು ಕೆಲವೇ ದಿನಗಳು ಆಗಿತ್ತಷ್ಟೆ. ರಾಮಮಂದಿರದ ಕನಸು ಸಾಕಾರಗೊಂಡಿದ್ದರಿಂದ ಈ ಸಲ 400 ಸ್ಥಾನಗಳು ‘ಗ್ಯಾರಂಟಿ’ ಎಂದು ಬಿಜೆಪಿ ನಾಯಕರು ಸಂಭ್ರಮದಲ್ಲಿ ತೇಲುತ್ತಿದ್ದ ಕಾಲವದು.

ದಕ್ಷಿಣದಲ್ಲೂ ಕೇಸರಿ ಸುನಾಮಿಗೆ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗಲಿವೆ ಎಂದು ಕಮಲ ಪಾಳಯದ ನಾಯಕರು ಬೀಗುತ್ತಿದ್ದರು. ಆ ಸಮಯದಲ್ಲೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನನ್ನ ತೆರಿಗೆ ನನ್ನ ಹಕ್ಕು’ ಹೆಸರಿನಲ್ಲಿ ‘ದೆಹಲಿಗೆ ನಡೆ’ ಹೋರಾಟ ಮಾಡುವುದಾಗಿ ಪ್ರಕಟಿಸಿದರು. ಅದನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ತಮ್ಮ ಇಡೀ ಸಂಪುಟವನ್ನು ದೆಹಲಿಗೆ ಕರೆದುಕೊಂಡು ಬಂದು ಹೋರಾಟ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಬಿಸಿ ತಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT