ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕಿಚ್ಚು: ಸುಡುವುದೇ ಪ್ರಭುತ್ವದ ಕೆಚ್ಚು?

Published 31 ಮಾರ್ಚ್ 2024, 23:37 IST
Last Updated 31 ಮಾರ್ಚ್ 2024, 23:37 IST
ಅಕ್ಷರ ಗಾತ್ರ

ನವದೆಹಲಿ: ‘ನನ್ನನ್ನು ಖುಷಿಪಡಿಸುವುದರಿಂದ ನಿಮಗೇನು ಸಿಗುತ್ತದೆ? ರೈತರ ಚಳವಳಿ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಬಿಜೆಪಿಯಿಂದ ಅನುಕೂಲವಾಗಿಲ್ಲ. ಕೋಮು ಉದ್ವಿಗ್ನತೆ ಸೃಷ್ಟಿಸಿ ಮತ ಪಡೆಯಲು ಬಿಜೆಪಿ ‍ಪ್ರಯತ್ನಿಸುತ್ತಿದೆ. ಅವರೊಂದಿಗೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ’. 

2022ರಲ್ಲಿ ಉತ್ತರ ‍ಪ್ರದೇಶ ವಿಧಾನಸಭಾ ಚುನಾವಣೆ ಕದ ಬಡಿದಿರುವ ಹೊತ್ತಿನಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ನಾಯಕ ಜಯಂತ್‌ ಸಿಂಗ್‌ ಚೌಧರಿ  ಆಡಿದ್ದ ಮಾತುಗಳಿವು. ಬಿಜೆಪಿ ಜತೆಗೆ ಕೈಜೋಡಿಸುವಂತೆ ಚೌಧರಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಹ್ವಾನ ನೀಡಿದ್ದರು. ಅದಕ್ಕೆ ಚೌಧರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. 

ಮೊನ್ನೆ ಮೊನ್ನೆ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಸೇವಾ ಪುರಸ್ಕಾರ ‘ಭಾರತ ರತ್ನ’ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತು. ಅದರಿಂದ ಭಾರಿ ಸಂತುಷ್ಟರಾದ ಮೊಮ್ಮಗ ಜಯಂತ್ ಸಿಂಗ್‌, ‘ದಿಲ್‌ ಜೀತ್‌ ಲಿಯಾ’ (ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ)’ ಎಂದು ಬಿಜೆಪಿ ಅಧಿನಾಯಕರನ್ನು ಹೊಗಳಿದರು. ಬಿಜೆಪಿಯ ಕಟು ಟೀಕಾಕಾರರಾಗಿದ್ದ ಅವರು ದಿನ ಬೆಳಗಾಗುವುದರಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜಿಗಿದು ಬಿಟ್ಟರು. ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿಗೆ ಪಟ್ಟು ಹಿಡಿದು ರೈತರು ಪ್ರತಿಭಟನೆಗೆ ಇಳಿಯುವ ಮುನ್ನ ನಡೆದ ರಾಜಕೀಯ ವಿದ್ಯಮಾನವಿದು. 

ಕೃಷಿಗೆ ಸಂಬಂಧಿಸಿ ಕೇಂದ್ರವು ಜಾರಿಗೆ ತಂದಿದ್ದ ಮೂರು ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಭಾರಿ ಪ್ರತಿಭಟನೆಯ ಮುಂಚೂಣಿಯಲ್ಲಿ ಜಾಟ್‌ ಸಮುದಾಯವೇ ಇತ್ತು. ಉತ್ತರ ‍‍ಪ್ರದೇಶ, ರಾಜಸ್ಥಾನ, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಜಾಟ್‌ ಸಮುದಾಯದವರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಚರಣ್ ಸಿಂಗ್‌ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಬಿಜೆಪಿಯು ಜಾಟ್‌ ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡಿದೆ.

ಕೇಂದ್ರದ ಮೂರು ‘ಕರಾಳ’ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಯಕ ಜೀವಿಗಳು 2021ರಲ್ಲಿ ಸುಮಾರು 13 ತಿಂಗಳು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕೊರೆವ ಚಳಿ, ಸುಡುವ ಬಿಸಿಲು, ಸುರಿದ ಮಳೆಗೆ ಅಳುಕದೆ ಪ್ರಭುತ್ವದ ವಿರುದ್ಧ ಸಿಡಿದೆದ್ದಿದ್ದರು. ರೈತರ ವಿರುದ್ಧ ಹಿಂಸಾಚಾರಕ್ಕೆ ಇಳಿಯುವಂತೆ ಹರಿಯಾಣದ ಆಗಿನ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರೇ ಬಿಜೆಪಿ ಕಾರ್ಯಕರ್ತರನ್ನು ಎತ್ತಿಕಟ್ಟಿದ್ದರು. ಉತ್ತರ ಪ್ರದೇಶದ ಲಖೀಂಪುರ ಖೀರಿಯಲ್ಲಿ ಕೇಂದ್ರ ಸಚಿವರ ಪುತ್ರನ ನೇತೃತ್ವದಲ್ಲಿ ಕಾರುಗಳನ್ನು ರೈತರ ಮೇಲೆ ಹರಿಸಿ ಎಂಟು ಮಂದಿಯನ್ನು ಬಲಿ ಪಡೆಯಲಾಗಿತ್ತು. 2022ರಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ರೈತರ ಬೃಹತ್ ಆಂದೋಲನಕ್ಕೆ ಕೇಂದ್ರ ಸರ್ಕಾರ ಶಿರ ಬಾಗಿತ್ತು. 

ದೇಶದಲ್ಲಿ ಕೃಷಿ ಬಿಕ್ಕಟ್ಟು ಅಗಾಧವಾಗಿದೆ. ರೈತರ ಮಕ್ಕಳ ಬದುಕು ಕತ್ತಲಲ್ಲಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಬೀದಿಗಿಳಿದರೂ ಸರ್ಕಾರ ಮಣಿದಿಲ್ಲ. ರಾಮಮಂದಿರದಂತಹ ಭಾವನಾತ್ಮಕ ವಿಷಯಗಳೇ ರೈತರ ಮಕ್ಕಳಿಗೆ ಹಿತಕಾರಿಯಾಗುತ್ತಿವೆ. ಇದರ ನಡುವೆಯೂ, ರೈತರ ಸಮಸ್ಯೆ ಹಾಗೂ ರೈತರ ಹೋರಾಟ ಕೂಡ ಲೋಕಸಭಾ ಚುನಾವಣೆಯ ವಿಷಯ. ಪಕ್ಷಗಳು ಇದನ್ನು ಹೇಗೆ ಮತವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ ಎಂಬುದು ಕುತೂಹಲಕಾರಿ. 

Highlights - ಬ್ಲರ್ಬ್‌ 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಜಾಟರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರದ ವಿರುದ್ಧ ಸಿಡಿದೆದ್ದವರು ಇವರೇ. ಐದು ರಾಜ್ಯಗಳ ಸೋಲಿನ ಅಳುಕಿನಿಂದಾಗಿ ಕೇಂದ್ರ ಸರ್ಕಾರವು 2022ರಲ್ಲಿ ಕೃಷಿ ಕಾಯ್ದೆಯನ್ನು ರದ್ದುಗೊಳಿಸಿತ್ತು. ಜಾಟರ ಕೋಪ ತಾಪದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆಗಳು ನಡೆದಿದ್ದವು. ಆದರೆ, ಜಾಟರು ನಿರ್ಣಾಯಕ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದ 126 ಕ್ಷೇತ್ರಗಳ ಪೈಕಿ 85 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯ ಮೇಲೆ ರೈತರ ಹೋರಾಟವು ಪರಿಣಾಮ ಬೀರಬಹುದೇ ಎಂಬುದು ಕುತೂಹಲಕಾರಿ. ಅಸಂಘಟಿತರಾಗಿರುವ ರೈತರು ಸಂಘಟಿತರಾಗಿ ನಿಲುವು ತೆಗೆದುಕೊಂಡರೆ ಪ್ರಭುತ್ವಕ್ಕೆ ತೊಂದರೆ ಆಗಬಹುದು. ಆದರೆ, ಸಂಘಟಿತರಾಗುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆ

ಹರಿಯಾಣ: ಖಟ್ಟರ್‌ಗೆ ಕೊಕ್‌

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಕ್ಕೆ ಕೆಲವೇ ದಿನಗಳು ಇರುವಾಗ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಮಲ ಪಾಳಯ ಕೆಳಗಿಳಿಸಿದೆ. ರೈತರ ಪ್ರತಿಭಟನೆ ಕಾರಣದಿಂದ ಜಾಟರು ರಾಜ್ಯದಲ್ಲಿ ಬಿಜೆಪಿಗೆ ಕೈಕೊಡಬಹುದು ಎಂಬ ಆತಂಕ ಕಮಲ ಪಾಳಯದ ನಾಯಕರಿಗೆ ಇದ್ದೇ ಇದೆ. ಅದಕ್ಕಾಗಿ ಖಟ್ಟರ್‌ ಅವರನ್ನು ಕೆಳಗಿಳಿಸಿ ಒಬಿಸಿ ನಾಯಕ ನಾಯಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಿದೆ. ರಾಜ್ಯದಲ್ಲಿ ನವ ಜಾತಿ ಸಮೀಕರಣ ನಡೆಸಿ ಒಬಿಸಿ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವ ತಂತ್ರ ಇದರ ಹಿಂದಿದೆ. 

ಪಂಜಾಬ್‌ನಲ್ಲಿ ಜಾಟರು ಯಾವ ದಿಕ್ಕಿಗೆ?

ಚಪಂಜಾಬ್‌ನಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ನೆಲೆ ಇಲ್ಲ. ರೈತರ ಹೋರಾಟ ತೀವ್ರವಾಗಿದ್ದ ಸಮಯದಲ್ಲಿ ಶಿರೋಮಣಿ ಅಕಾಲಿ ದಳವು ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿತ್ತು. 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಶೇ 37ರಷ್ಟು ಮತ ಪಡೆದು 4 ಸ್ಥಾನಗಳನ್ನು ಗೆದ್ದಿತ್ತು. ಈ ಸಲ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ ಎಎಪಿ ಹಾಗೂ ಅಕಾಲಿ ದಳ ನಡುವೆ ಜಾಟರ ಮತ ವಿಭಜನೆಯಾದರೆ ಅದರ ಲಾಭ ಪಡೆಯುವ ಉದ್ದೇಶ ಕಮಲ ಪಾಳಯದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT