ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2024: ಮತ ಬುಟ್ಟಿ ಅಲ್ಲಾಡಿಸಲಿದೆಯೆ ಬೆಲೆ ಏರಿಕೆ?

ಬಡವರು, ಮಧ್ಯಮ ವರ್ಗದವರನ್ನು ಕಾಡುತ್ತಿರುವ ಗಗನ ಮುಖಿ ದರಗಳು
Published 25 ಮಾರ್ಚ್ 2024, 21:32 IST
Last Updated 25 ಮಾರ್ಚ್ 2024, 21:32 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಲ್ಲಿ ಹತ್ತು ವರ್ಷ ನಿರಂತರವಾಗಿ ಆಡಳಿತ ನಡೆಸಿದ್ದ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಮೈತ್ರಿಕೂಟವನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬೆಲೆ ಏರಿಕೆ ಮತ್ತು ಹಣದುಬ್ಬರ ತೀವ್ರವಾಗಿ ಕಾಡಿತ್ತು. ನಂತರದ ಹತ್ತು ವರ್ಷಗಳ ಅವಧಿಯಲ್ಲೂ ಅಗತ್ಯ ವಸ್ತುಗಳ ದರ ಏರುಗತಿಯಲ್ಲೇ ಇದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ದರ ಏರಿಕೆ ಬಡವರು, ಮಧ್ಯಮ ವರ್ಗದವರನ್ನು ಬಹುವಾಗಿ ಕಾಡುತ್ತಿದೆ. ಬೆಲೆ ಏರಿಕೆ ವಿಷಯವು 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಮತ ಬುಟ್ಟಿಯನ್ನು ಅಲ್ಲಾಡಿಸಲಿದೆಯೇ ಎಂಬ ಕುತೂಹಲ ಗರಿಗೆದರಿದೆ.

ಸಗಟು ಹಣದುಬ್ಬರದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದ್ದರೂ ಆಹಾರ ಧಾನ್ಯಗಳು, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳು, ಖಾದ್ಯ ತೈಲಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಇದು ನೇರವಾಗಿ ಅಡುಗೆ ಮನೆಯ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಅಗತ್ಯ ವಸ್ತುಗಳ ದರ ಏರಿಕೆ ಬಿಸಿ ಎಲ್ಲ ಕುಟುಂಬಗಳಿಗೂ ತಟ್ಟಿದ್ದು, ಕುಟುಂಬ ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯದ ವಾಕ್ಸಮರದಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ಬೆಲೆ ಏರಿಕೆಯ ವಿಷಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಇನ್ನೂ ಅಷ್ಟರಮಟ್ಟಿಗೆ ಸದ್ದು ಮಾಡಿಲ್ಲ.

2023ರ ಕೊನೆಯ ಭಾಗದಲ್ಲಿ ದೇಶದಲ್ಲಿ ಈರುಳ್ಳಿ ದರ ಗಣನೀಯವಾಗಿ ಏರಿಕೆ ಕಾಣಲಾರಂಭಿಸಿತ್ತು. ಆಗಲೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸನಿಹದಲ್ಲಿತ್ತು. ಉತ್ತರ ಭಾರತದ ಚುನಾವಣಾ ರಾಜಕಾರಣದ ಫಲಿತಾಂಶವನ್ನು ಈರುಳ್ಳಿ ದರ ಹೆಚ್ಚಳ ಹಲವು ಬಾರಿ ಪ್ರಭಾವಿಸಿದ್ದ ಉದಾಹರಣೆಗಳಿವೆ. ಈ ಕಾರಣದಿಂದಾಗಿಯೇ 2023ರ ಅಕ್ಟೋಬರ್‌ನಲ್ಲಿ ಮಾರುಕಟ್ಟೆ ನಿಯಂತ್ರಣಕ್ಕೆ ಮಧ್ಯ ಪ್ರವೇಶಿಸಿದ್ದ ಕೇಂದ್ರ ಸರ್ಕಾರ, ಈರುಳ್ಳಿ ರಫ್ತು ನಿಷೇಧಿಸಿತ್ತು. ಭಾರಿ ಪ್ರಮಾಣದ ದಾಸ್ತಾನನ್ನೂ ನಿರ್ಬಂಧಿಸಿತ್ತು. ಆ ಮೂಲಕ ಐದು ರಾಜ್ಯಗಳ ಚುನಾವಣೆಯಲ್ಲಿ ಈರುಳ್ಳಿ ದರ ಚರ್ಚೆಗೆ ಬಾರದಂತೆ ತಡೆಯುವ ಪ್ರಯತ್ನ ಮಾಡಿತ್ತು.

ಕೈಗೆಟುಕದ ಪೆಟ್ರೋಲಿಯಂ ಉತ್ಪನ್ನ: 2009ರಲ್ಲಿ ಯುಪಿಎ ಮೈತ್ರಿಕೂಟ ಮೊದಲ ಬಾರಿ ಅಧಿಕಾರದ ಗದ್ದುಗೆ ಏರಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ದರ 43.99 ಡಾಲರ್‌ ಇತ್ತು. ಆಗ ಭಾರತದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹45.62 ಇದ್ದರೆ, ಡೀಸೆಲ್‌ ದರ ಲೀಟರ್‌ಗೆ ₹32.86 ಇತ್ತು.

2014ರ ಜೂನ್‌ನಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ದರ ದಾಖಲೆಯ 109 ಡಾಲರ್‌ ದಾಟಿತ್ತು. ಆಗ ದೇಶದಲ್ಲಿ ಪೆಟ್ರೋಲ್‌ ದರ ಲೀ.ಗೆ ₹72.26 ಇದ್ದರೆ, ಡೀಸೆಲ್‌ ದರ ಲೀ.ಗೆ ₹57.28 ಇತ್ತು. ನಂತರ ಕಚ್ಚಾ ತೈಲದ ದರ ಇಳಿಯಲಾರಂಭಿಸಿತ್ತು.

2016ರಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 43 ಡಾಲರ್‌ಗೆ ಇಳಿಕೆಯಾಗಿದ್ದರೆ, 2020ರಲ್ಲಿ 42 ಡಾಲರ್‌ ಸಮೀಪಕ್ಕೆ ತಲುಪಿತ್ತು. ಈಗ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ದರ 82 ಡಾಲರ್‌ನಷ್ಟಿದೆ. ಆದರೆ, ಪೆಟ್ರೋಲ್‌ ದರ ಲೀಟರ್‌ಗೆ ₹100 ಮತ್ತು ಡೀಸೆಲ್‌ ದರ ಲೀ.ಗೆ ₹86ರಷ್ಟಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಇಳಿಕೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಇಳಿಕೆ ಮಾಡುವ ಮೂಲಕ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂಬ ಬೇಡಿಕೆ ದೀರ್ಘ ಕಾಲದಿಂದಲೂ ಇದೆ. ಕಾಂಗ್ರೆಸ್‌ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಬೇಡಿಕೆಯನ್ನು ಆಗಾಗ ಪ್ರಸ್ತಾಪಿಸಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಯುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಆಗುತ್ತಿರುವುದರಿಂದ ದೇಶದ ಪೆಟ್ರೋಲಿಯಂ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಲಾಭವಾಗಿದೆ. ಆ ಕುರಿತೂ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದ್ದವು.

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯನ್ನು ಆಧರಿಸಿಯೇ ಅಗತ್ಯ ವಸ್ತುಗಳ ಬೆಲೆಯೂ ಏರುತ್ತಿದೆ. ಹೋಟೆಲ್‌ನಲ್ಲಿ ಆಹಾರ ಪದಾರ್ಥಗಳ ದರ ಸೇರಿದಂತೆ ಜೀವನಾವಶ್ಯಕ ವಸ್ತುಗಳ ದರ ಹೆಚ್ಚಳವನ್ನೂ ಇದು ಪ್ರಭಾವಿಸುತ್ತಿದೆ.

‘ಭಾರತದಲ್ಲಿ ಹಣದುಬ್ಬರವನ್ನು ನಿರ್ಧರಿಸುವ ವಿಧಾನದಲ್ಲೇ ದೋಷಗಳಿವೆ. 1957ರಿಂದ 30 ವರ್ಷ ಒಂದೇ ವಿಧಾನ ಚಾಲ್ತಿಯಲ್ಲಿತ್ತು. 1987ರಲ್ಲಿ ಅಳವಡಿಸಿಕೊಂಡ ಹೊಸ ವಿಧಾನದಲ್ಲೂ ದೋಷಗಳಿವೆ. ಅದು ಈಗಲೂ ಬಳಕೆಯಲ್ಲಿದೆ. ಹೀಗಾಗಿ ಹಣದುಬ್ಬರ ಜನಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಎಂಬುದನ್ನು ನಿಖರವಾಗಿ ಅರಿಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಮಾಜಿ ನಿರ್ದೇಶಕ ಪ್ರೊ.ಆರ್‌.ಎಸ್‌. ದೇಶಪಾಂಡೆ.

‘ನಿತ್ಯ ಬಳಕೆಯ ಕೆಲವು ವಸ್ತುಗಳ ದರ ಏರಿಕೆ ಇದೆ. ಅದನ್ನು ಸಗಟು ಹಣದುಬ್ಬರದಂತೆ ಬಿಂಬಿಸಲಾಗದು. ವಿರೋಧ ಪಕ್ಷಗಳು ಬೆಲೆ ಏರಿಕೆಯನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಬಹುದು. ಆದರೆ, ಅದು ಪರಿಣಾಮ ಬೀರುತ್ತದೆಯೇ ಎಂದು ನಿಖರವಾಗಿ ಅಂದಾಜಿಸಲಾಗದು’ ಎಂದು ಹೇಳುತ್ತಾರೆ.

ಎಲ್‌ಪಿಜಿ ದರ ಕಾಡುವುದೇ?

2014ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರದಿಂದ ನಿರ್ಗಮಿಸುವ ಮುನ್ನ 14 ಕೆ.ಜಿ. ತೂಕದ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ₹410ರಷ್ಟಿತ್ತು. ಈಗ ಅಷ್ಟೇ ತೂಕದ ಗೃಹಬಳಕೆ ಸಿಲಿಂಡರ್‌ ದರ ₹805ರಷ್ಟಿದೆ.

ಹತ್ತು ವರ್ಷಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ ದುಪ್ಪಟ್ಟಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯನ್ನು ಬಿಜೆಪಿ ನೇತೃತ್ವದ ಎನ್‌ಡಿ ದೊಡ್ಡ ಅಸ್ತ್ರ ಮಾಡಿಕೊಂಡಿತ್ತು. ಈಗ ಎಲ್‌ಪಿಜಿ ದರ ಏರಿಕೆಯನ್ನು ವಿರೋಧ ಪಕ್ಷಗಳು ಆಗಾಗ ಪ್ರಸ್ತಾಪಿಸಿವೆ. ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯು ಚುನಾವಣಾ ಅಖಾಡದಲ್ಲಿ ಮಾಡಬಹುದಾದ ಲಾಭ– ನಷ್ಟಗಳ ಲೆಕ್ಕಾಚಾರವೂ ನಡೆಯುತ್ತಿದೆ.

‘ಪ್ರಭಾವಿಸುವ ಸಾಧ್ಯತೆ ಕಡಿಮೆ’

‘ಈರುಳ್ಳಿ ದರ ಏರಿಕೆ ಉತ್ತರ ಭಾರತದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ ಉದಾಹರಣೆಗಳಿವೆ. ಆಹಾರ ಹಣದುಬ್ಬರದ ಏರಿಕೆಯು ಕೊಂಚಮಟ್ಟಿಗೆ ಚುನಾವಣೆಯನ್ನು ಪ್ರಭಾವಿಸುವ ಸಾಧ್ಯತೆ ಇರುತ್ತದೆ. ಆದರೆ, ದೇಶದಲ್ಲಿ ಈಗ ಹಣದುಬ್ಬರ ಇಳಿಮುಖವಾಗಿದೆ. ಹೆಚ್ಚು ಚರ್ಚೆಯೂ ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮತ್ತು ಹಣದುಬ್ಬರದ ವಿಚಾರಗಳು ಈ ಲೋಕಸಭಾ ಚುನಾವಣೆಯನ್ನು ಪ್ರಭಾವಿಸುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಅರ್ಥಶಾಸ್ತ್ರ ಪ್ರಾಧ್ಯಾಪಕ
ಎಸ್‌.ಆರ್‌. ಕೇಶವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT