ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಮೊದಲ ಬಾರಿ ಆಡಳಿತಪರ ಅಲೆ

ವಾರಾಣಸಿ; ನಾಮಪತ್ರ ಸಲ್ಲಿಕೆ ನಂತರ ಮೋದಿ ಭಾಷಣ * ಎನ್‌ಡಿಎ ಬಲ ಪ್ರದರ್ಶನ
Last Updated 26 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ವಾರಾಣಸಿ:‘ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದಲ್ಲಿ ಆಡಳಿತ ಪರ ಅಲೆ ಕಾಣಿಸುತ್ತಿರುವುದು ಇದೇ ಮೊದಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದ ಜನರು ನಮ್ಮ ಸರ್ಕಾರದ ಪರ ಮಾತನಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಚುನಾವಣೆಯ ಸಂಭ್ರಮ ಕಾಣುತ್ತಿದೆ. ಇಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿ’ ಎಂದು ಮೋದಿ ಹೇಳಿದ್ದಾರೆ.

‘ನಿನ್ನೆಯ ರೋಡ್‌ ಷೋ ವೇಳೆ ಸಾವಿರಾರು ಜನರು ಸೇರಿದ್ದರು. ‘ಇಲ್ಲಿ ಚುನಾವಣೆ ಮುಗಿದೇ ಹೋಗಿದೆ. ಮತಪ್ರಮಾಣ ಮತ್ತು ಗೆಲುವಿನ ಅಂತರದ ದಾಖಲೆ ಮುರಿಯುವುದಷ್ಟೇ ಬಾಕಿ ಇದೆ’ ಎಂದು ಮಾಧ್ಯಮಗಳೇ ವರದಿ ಮಾಡುತ್ತಿವೆ.ನಮ್ಮ ಪಕ್ಷದ ಕಾರ್ಯಕರ್ತರು ಎಷ್ಟು ಶ್ರಮ ಹಾಕಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

‘ನಮ್ಮ ಪ್ರತಿ ಕಾರ್ಯಕರ್ತನೂ ಇಂದಿನಿಂದ ಪ್ರತಿದಿನ 10 ಜನರನ್ನಾದರೂ ಸಂಪರ್ಕಿಸಬೇಕು. ಮತದಾನ ಮುಗಿಯುವವರೆಗೆ ಇದು ನಡೆಯಬೇಕು. ಆಗ ಮಾತ್ರ ನಾವು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಲು ಸಾಧ್ಯವಾಗುತ್ತದೆ. ವಿರೋಧ ಪಕ್ಷಗಳು ಏನೇನೋ ಮಾತನಾಡುತ್ತವೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

‘ತಡ ರಾತ್ರಿ ನಾನು ರೋಡ್‌ ಷೋ ನಡೆಸುವುದರಿಂದ ನನಗೆ ಅಪಾಯವಿದೆ. ಅದನ್ನು ನಾನು ಕಡೆಗಣಿಸಿದ್ದೇನೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ ನನಗೆ ನನ್ನ ಭದ್ರತೆಗಿಂತ ದೇಶದ ಜನರ ಭದ್ರತೆ ಮುಖ್ಯ. ಇಲ್ಲಿನ ನನ್ನ ಸೋದರಿಯರು ಮತ್ತು ತಾಯಂದಿರ ಆಶೀರ್ವಾದ ಇರುವುದರಿಂದ ನನಗೆ ಯಾವುದೇ ಅಪಾಯವಿಲ್ಲ. ದೇವಾಲಯಗಳ ನಗರಿ ಆಗಿರುವುದರಿಂದ ಇಲ್ಲಿ ನನಗೆ ಯಾವುದೇ ಅಪಾಯವಿಲ್ಲ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎನ್‌ಡಿಎ ಒಗ್ಗಟ್ಟು ಪ್ರದರ್ಶನ

* ಅಸ್ಸೀಘಾಟ್‌ನಿಂದ ಮೆರವಣಿಗೆ ಆರಂಭ. ಬಿಜೆಪಿ ಮತ್ತು ಎನ್‌ಡಿಎ ನಾಯಕರು ಭಾಗಿ

* ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸುಷ್ಮಾ ಸ್ವರಾಜ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ಮೋದಿಯ ಜತೆಗಿದ್ದರು

* ಕಾಶಿಯ ಕಾಲ ಭೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

* ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ನಾಯಕರ ಜತೆ ಮಾತುಕತೆ

* ಮೋದಿ ಅವರ ನಾಮಪತ್ರಕ್ಕೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಸೂಚಕರಾಗಿ ಸಹಿ ಮಾಡಿದರು. 2014ರಲ್ಲಿ ಸೂಚಕರಾಗಿ ಸಹಿ ಮಾಡುವಂತೆ ಬಿಜೆಪಿ ಅವರನ್ನು ಕೇಳಿಕೊಂಡಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದ್ದರು. ಆದರೆ ಈ ಬಾರಿ ಅವರೇ ಸ್ವಯಂಪ್ರೇರಿತರಾಗಿ ಸೂಚಕರಾಗಿ ಸಹಿ ಹಾಕಿದ್ದಾರೆ

*ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ ಬನಾರಸ್ ವಿಶ್ವವಿದ್ಯಾಲಯದ ಮಹಿಳಾ ಕಾಲೇಜಿನ ಮಾಜಿ ಪ್ರಾಂಶುಪಾಲೆ ಅನ್ನಪೂರ್ಣ ಶುಕ್ಲಾ ಅವರ ಕಾಲನ್ನು ಮುಟ್ಟಿ, ನಮಸ್ಕರಿಸಿ ಮೋದಿ ಆಶೀರ್ವಾದ ಪಡೆದರು

* ನಾಮಪತ್ರ ಸಲ್ಲಿಕೆ ನಂತರ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ

ಬಲೆಗೆ ಬೀಳಬೇಡಿ

‘ನರೇಂದ್ರ ಮೋದಿ ಈಗಾಗಲೇ ಗೆದ್ದಿದ್ದಾರೆ. ನೀವು ಮತದಾನ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಆ ಬಲೆಗೆ ನೀವು ಬೀಳಬೇಡಿ. ಮತದಾನ ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ಎಲ್ಲರೂ ಚಲಾಯಿಸಿ. ವಾರಾಣಸಿಯಲ್ಲಿ ಭಾರಿ ಸಂಖ್ಯೆಯಲ್ಲಿ ಮತದಾನ ನಡೆಯಬೇಕು’ ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

‘ಮೋದಿ ಮನೆಯನ್ನೂ ಶೋಧಿಸಿ’

ಸಿಧಿ (ಮಧ್ಯಪ್ರದೇಶ):‘ನಾನೇನಾದರೂ ತಪ್ಪು ಮಾಡಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು ನನ್ನ ಮನೆಯನ್ನೂ ಶೋಧಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಮಧ್ಯಪ್ರದೇಶದ ಸಿಧಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದರೆ ಕಾಂಗ್ರೆಸ್‌ ನಾಯಕರು, ‘ನಾವು ರಾಜಕಾರಣಿಗಳು. ನಮ್ಮ ಮನೆಗಳ ಮೇಲೇಕೆ ದಾಳಿ ನಡೆಸುತ್ತೀರಿ’ ಎಂದು ಪ್ರಶ್ನಿಸುತ್ತಾರೆ. ದೇಶದ ಕಾನೂನಿನ ಮುಂದೆ ಎಲ್ಲರೂ ಒಂದೇ. ಮೋದಿ ತಪ್ಪು ಮಾಡಿದ್ದರೆ, ಮೋದಿಯ ಮನೆ ಮೇಲೂ ದಾಳಿ ನಡೆಸಿ, ಶೋಧಿಸಿ’ ಎಂದು ಅವರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT