ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಜೈಲಿನಲ್ಲಿರುವ ಅಭ್ಯರ್ಥಿಗಳ ಗೆಲುವು: ನಿಯಮ ಹೇಳುವುದೇನು?

Published 5 ಜೂನ್ 2024, 15:51 IST
Last Updated 5 ಜೂನ್ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ಆರೋಪದ ಮೇಲೆ ಜೈಲಿನಲ್ಲಿರುವ ಇಬ್ಬರು ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಕಾನೂನಿನ ಪ್ರಕಾರ, ಅವರು 18ನೇ ಲೋಕಸಭಾ ಕಲಾಪಗಳಿಗೆ ಹಾಜರಾಗಲು ಅವರಿಗೆ ಅವಕಾಶವಿಲ್ಲ. ಆದರೆ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಂವಿಧಾನಿಕ ಹಕ್ಕನ್ನು ಅವರು ಹೊಂದಿದ್ದಾರೆ ಎನ್ನುತ್ತಾರೆ ಸಂವಿಧಾನ ತಜ್ಞರು. 

ಬಂಧಿತ ಸಿಖ್‌ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ ಪಂಜಾಬ್‌ನ ಖದೂರ್‌ ಸಾಹಿಬ್‌ ಕ್ಷೇತ್ರದಲ್ಲಿ ಜಯ ಗಳಿಸಿದ್ದರೆ, ಎಂಜಿನಿಯರ್ ರಶೀದ್ ಎಂದು ಹೆಸರಾಗಿರುವ ಶೇಖ್‌ ಅಬ್ದುಲ್‌ ರಶೀದ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಎಂಜಿನಿಯರ್‌ ರಶೀದ್‌ 2019ರ ಆಗಸ್ಟ್‌ 9ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ. ಅಮೃತ್‌ಪಾಲ್‌ ಅವರನ್ನು 2023ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.

‘ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವುದು ಅವರ ಸಾಂವಿಧಾನಿಕ ಹಕ್ಕು. ಜೈಲಿನಲ್ಲಿರುವ ಕಾರಣ ಅವರು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಸತ್ತಿಗೆ ಹೋಗಿ ಬರಲು ಭದ್ರತೆ ಒದಗಿಸುವಂತೆ ಅಧಿಕಾರಿಗಳನ್ನು ಕೋರಿ, ಅನುಮತಿ ಪಡೆಯಬೇಕು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಮತ್ತೆ ಜೈಲಿಗೆ ಹಿಂದಿರುಗಬೇಕಾಗುತ್ತದೆ’ ಎಂದು ಸಂವಿಧಾನ ತಜ್ಞ ಮತ್ತು ಲೋಕಸಭಾ ಸಚಿವಾಲಯದ ನಿವೃತ್ತ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ವಿವರಿಸಿದರು. 

ಸಂವಿಧಾನದ 101(4)ನೇ ವಿಧಿಯು, ಪೀಠದ ಪೂರ್ವಾನುಮತಿ ಪಡೆಯದೆ ಸಂಸತ್ತಿನ ಉಭಯ ಸದನಗಳ ಸದಸ್ಯರು ಗೈರುಹಾಜರಾಗುವಂತಿಲ್ಲ ಎಂದು ತಿಳಿಸುತ್ತದೆ.  ಹೀಗಾಗಿ ಅವರು ಪ್ರಮಾಣ ವಚನ ಸ್ವೀಕರಿಸದ ನಂತರ, ಸದನಕ್ಕೆ ಹಾಜರಾಗಲು ಸಾಧ್ಯವಾಗದಿರುವ ಕುರಿತು ಸ್ಪೀಕರ್‌ಗೆ ಪತ್ರ ಬರೆಯಬೇಕು. ನಂತರ ಸ್ಪೀಕರ್‌ ಅವರು ಅವರ ಮನವಿಗಳನ್ನು ಸದಸ್ಯರ ಗೈರುಹಾಜರಿಯ ಸದನ ಸಮಿತಿಗೆ ಕಳುಹಿಸುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಸದಸ್ಯರಿಗೆ ಸದನದ ಕಲಾಪಕ್ಕೆ ಗೈರಾಗಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸಮಿತಿ ಶಿಫಾರಸು ಮಾಡುತ್ತದೆ. ಆ ಶಿಫಾರಸನ್ನು ಸ್ಪೀಕರ್‌ ಮೂಲಕ ಸದನದಲ್ಲಿ ಮತಕ್ಕೆ ಹಾಕಲಾಗುತ್ತದೆ ಎಂದು ಅವರು ಕಾನೂನಿನಲ್ಲಿ ಇರುವ ಅವಕಾಶಗಳ ಕುರಿತು ಹೇಳಿದರು.

ಎಂಜಿನಿಯರ್‌ ರಶೀದ್‌ ಅಥವಾ ಅಮೃತ್‌ಪಾಲ್‌ ಸಿಂಗ್‌ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಕನಿಷ್ಠ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾದರೆ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳ್ಳುತ್ತದೆ. 2013ರ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT