ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹುದ್ದೆ ಕಳೆದುಕೊಳ್ಳಲಿರುವ ಖರ್ಗೆ: ಅಮಿತ್ ಶಾ

ಉತ್ತರ ಪ್ರದೇಶದಲ್ಲಿ ಅಮಿತ್ ಶಾ ಚುನಾವಣಾ ರ್‍ಯಾಲಿ; ಅಖಿಲೇಶ್ ಯಾದವ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
Published 27 ಮೇ 2024, 14:50 IST
Last Updated 27 ಮೇ 2024, 14:50 IST
ಅಕ್ಷರ ಗಾತ್ರ

ಕುಶಿನಗರ/ಬಲ್ಲಿಯಾ/ಚಂಡೌಳಿ: ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ. ಪಕ್ಷದ ಸೋಲಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.

ರಾಹುಲ್ ಗಾಂಧಿ ಅವರ ಜನ ಪತ್ರಿಕಾಗೋಷ್ಠಿ ನಡೆಸಿ, ಇವಿಎಂಗಳಿಂದ ತಾವು ಸೋತಿದ್ದಾಗಿ ಹೇಳುತ್ತಾರೆ ಎಂದು ಪ್ರತಿಪಾದಿಸಿದರು.

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು, ‘ಐದು ಹಂತಗಳ ಮತದಾನದ ಮಾಹಿತಿ ನನ್ನ ಬಳಿ ಇದೆ. ಐದು ಹಂತಗಳಲ್ಲಿ ಮೋದಿ ಅವರು 310 ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದಾರೆ. ರಾಹುಲ್ ಅವರು 40 ಸ್ಥಾನಗಳನ್ನೂ ಪಡೆಯುವುದಿಲ್ಲ ಮತ್ತು ಅಖಿಲೇಶ್ ಯಾದವ್ ಅವರು ಕನಿಷ್ಠ 4 ಸ್ಥಾನಗಳನ್ನೂ ಪಡೆಯುವುದಿಲ್ಲ’ ಎಂದು ಅಭಿಪ್ರಾಯಪಟ್ಟರು. 

‘ಹಿಂದೆ ಎಸ್‌ಪಿ ಆಡಳಿತದಲ್ಲಿ ‘ಒಂದು ಜಿಲ್ಲೆ ಒಂದು ಮಾಫಿಯಾ’ ಇತ್ತು, ಈಗ ಜನರಿಗಾಗಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ಇದೆ’ ಎಂದು ಪ್ರತಿಪಾದಿಸಿದರು.

‘ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ಉಗ್ರರು ಪಾಕಿಸ್ತಾನದಿಂದ ಬಂದು ದೇಶದಲ್ಲಿ ಬಾಂಬ್ ಸ್ಫೋಟಿಸಿ ಹೋಗುತ್ತಿದ್ದರು. ಮೋದಿ ಬಂದ ನಂತರ ಉರಿ ಮತ್ತು ಪುಲ್ವಾಮಾ ಸ್ಫೋಟಗಳು ನಡೆದವು, ಅವರದ್ದೇ ನೆಲದಲ್ಲಿ ವಾಯು ದಾಳಿ ಮಾಡಿದೆವು’ ಎಂದು ಹೇಳಿದರು.

‘ಚುನಾವಣೆ ಮೇಲೆ ಕಪ್ಪುಹಣದ ಪ್ರಭಾವ ಹೆಚ್ಚಳ’

ನವದೆಹಲಿ: ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸಿರುವುದರಿಂದ ಲೋಕಸಭಾ ಚುನಾವಣೆಯ ಮೇಲೆ ಕಪ್ಪು ಹಣದ ಪ್ರಭಾವ ಹೆಚ್ಚಾಗಲಿದ್ದು ಅದನ್ನು ತಡೆಯಲು ಸಂಸತ್ತು ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.

ಪಿಟಿಐ ಜತೆ ಸಂದರ್ಶನದಲ್ಲಿ ಮಾತನಾಡಿದ ಅವರು ‘ಚುನಾವಣೆಗೆ ಇನ್ನು ತಿಂಗಳಿದೆ ಎನ್ನುವಾಗ ಮುಖ್ಯವಾದ ಸಂದರ್ಭದಲ್ಲಿ ಚುನಾವಣಾ ಬಾಂಡ್ ರದ್ದಾಯಿತು’ ಎಂದು ಅಭಿಪ್ರಾಯಪಟ್ಟರು.

‘ನನ್ನ ನಂಬಿಕೆ ಮತ್ತು ಊಹೆ ಏನೆಂದರೆ ಕಪ್ಪು ಹಣವು ಚುನಾವಣೆ ಮೇಲೆ ಮತ್ತು ರಾಜಕಾರಣದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ರಾಜಕೀಯ ಪಕ್ಷಗಳು ಹಣಕಾಸು ವರ್ಷದಲ್ಲಿ ತಮ್ಮ ಖಾತೆಯ ಮಾಹಿತಿ ನೀಡಿದಾಗ ಅವು ಎಷ್ಟು ಹಣವನ್ನು ನಗದು ಮೂಲಕ ಮತ್ತು ಎಷ್ಟು ಮೊತ್ತವನ್ನು ಬೆಕ್‌ಗಳ ಮೂಲಕ ‍ಪಡೆದಿವೆ ಎನ್ನುವುದು ತಿಳಿಯುತ್ತದೆ. ಚುನಾವಣಾ ಬಾಂಡ್‌ಗಳು ಇದ್ದಾಗ ಚೆಕ್ ಮೂಲಕ ದೇಣಿಗೆ ನೀಡುವುದು ಶೇ 96ಕ್ಕೆ ಏರಿತ್ತು’ ಎಂದು ತಿಳಿಸಿದರು.

‘ಸಂಸತ್ತಿನಲ್ಲಿ ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರನ್ನು ಸಂಪರ್ಕಿಸಿ ಹೊಸ ಪರ್ಯಾಯ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT