ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಕೆಲವೆಡೆ ಸಿಪಿಎಂ– ‘ಇಂಡಿಯಾ’ ಪೈಪೋಟಿ

Published 28 ಮಾರ್ಚ್ 2024, 23:58 IST
Last Updated 28 ಮಾರ್ಚ್ 2024, 23:58 IST
ಅಕ್ಷರ ಗಾತ್ರ

ನವದೆಹಲಿ: ಸಿಪಿಎಂ ಲೋಕಸಭಾ ಚುನಾವಣೆಯಲ್ಲಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಹಣಾಹಣಿ ನಡೆಸಲಿದೆ. ಆದರೆ, ತಾನು ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಡೆಗಳಲ್ಲಿ ಮೈತ್ರಿಕೂಟವನ್ನು ಬೆಂಬಲಿಸಲಿದೆ.

ಪಶ್ಚಿಮ ಬಂಗಾಳದ 17 ಸ್ಥಾನಗಳು ಸೇರಿದಂತೆ ಒಟ್ಟು 44 ಕ್ಷೇತ್ರಗಳಿಗೆ ಸಿಪಿಎಂ, ಅಭ್ಯರ್ಥಿಗಳನ್ನು ಘೋಷಿಸಿದೆ. ಬಂಗಾಳದಲ್ಲಿ ಎಡಪಕ್ಷವು ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಹೊಂದಾಣಿಕೆ ಮಾಡಿದೆ. ಕೇರಳದಲ್ಲಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅಲ್ಲಿ ಕಾಂಗ್ರೆಸ್‌ ವಿರುದ್ಧ ಪೈಪೋಟಿ ನಡೆಸಲಿದೆ.    

ಕೇರಳದಲ್ಲಿ ಬಿಜೆಪಿಯು ಪ್ರಬಲ ಎದುರಾಳಿಯಲ್ಲ ಎಂಬ ಕಾರಣದಿಂದ ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸಿಪಿಎಂ ಮುಖಂಡರು ಹೇಳಿಕೊಂಡಿದ್ದಾರೆ. ಆದರೆ ಬಿಹಾರ, ತ್ರಿಪುರಾ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್‌ ಹಾಗೂ ‘ಇಂಡಿಯಾ’ ಕೂಟದಲ್ಲಿರುವ ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ.

ಸಿಪಿಎಂ, ಬಿಹಾರದ ಖಗಡಿಯಾ ಕ್ಷೇತ್ರದಿಂದ ಸಂಜಯ್‌ ಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಂಜಯ್‌ ಅವರನ್ನು ಬೆಂಬಲಿಸಲಿವೆ. ರಾಜಸ್ಥಾನದ ಸೀಕರ್‌ ಕ್ಷೇತ್ರಕ್ಕೆ ಹಿರಿಯ ಮುಖಂಡ ಅಮ್ರಾ ರಾಮ್ ಹೆಸರು ಘೋಷಿಸಿದೆ. ಪಕ್ಷವು ಇಲ್ಲಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದೆ.

ತ್ರಿಪುರಾ ಪೂರ್ವದಲ್ಲಿ ಕಣಕ್ಕಿಳಿಸಿರುವ ರಾಜೇಂದ್ರ ರೆಯಾಂಗ್‌ ಅವರಿಗೆ ಕಾಂಗ್ರೆಸ್‌ ಬೆಂಬಲ ಘೋಷಿಸಿದೆ. ಡಿಎಂಕೆಯು ತಮಿಳುನಾಡಿನಲ್ಲಿ ಎರಡು ಸೀಟುಗಳನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ಸಿಪಿಎಂ ತನ್ನ ಮೂವರು ಹಾಲಿ ಸಂಸದರಲ್ಲಿ ಇಬ್ಬರಿಗೆ ಮತ್ತೆ ಅವಕಾಶ ನೀಡಿದೆ. ಕೇರಳದ ಆಲಪ್ಪುಳದಿಂದ ಎ.ಎಂ.ಆರಿಫ್‌ ಖಾನ್‌ ಮತ್ತು ತಮಿಳುನಾಡಿನ ಮದುರೈನಿಂದ ಸು.ವೆಂಕಟೇಶನ್‌ ಅವರನ್ನೇ ಕಣಕ್ಕಿಳಿಸಿದೆ. ಆದರೆ ಕೊಯಮತ್ತೂರು ಸಂಸದ ಪಿ.ಆರ್‌.ನಟರಾಜನ್‌ ಅವರಿಗೆ ಟಿಕೆಟ್‌ ತಪ್ಪಿದೆ. ಏಕೆಂದರೆ, ಕೊಯಮತ್ತೂರು ಕ್ಷೇತ್ರದಲ್ಲಿ ಡಿಎಂಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ದಿಂಡಿಗಲ್ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಟ್ಟಿದೆ. ದಿಂಡಿಗಲ್‌ ಕ್ಷೇತ್ರಕ್ಕೆ ಆರ್‌.ಸಚ್ಚಿದಾನಂದನ್‌ ಅವರ ಹೆಸರು ಪ್ರಕಟಿಸಿದೆ.

ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ (ಎಂ.ಪಿ.ಮುನಿವೆಂಕಟಪ್ಪ ಅಭ್ಯರ್ಥಿ) ಹೊರತುಪಡಿಸಿ, ಇತರ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದಾಗಿ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯ ಎಂ.ಎ.ಬೇಬಿ ಈಚೆಗೆ ಹೇಳಿದ್ದರು.

ಆಂಧ್ರ ಪ್ರದೇಶದ ಅರಕು ಮತ್ತು ತೆಲಂಗಾಣದ ಭುವನಗಿರಿ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಈ ಎರಡು ಕಡೆ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವಿಶ್ವಾಸವನ್ನು ಸಿಪಿಎಂ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT