ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ ಹಗರಣ: ಎಸ್‌ಐಟಿ ತನಿಖೆಗೆ ಪ್ರಶಾಂತ್ ಭೂಷಣ್ ಆಗ್ರಹ

Published 20 ಏಪ್ರಿಲ್ 2024, 15:08 IST
Last Updated 20 ಏಪ್ರಿಲ್ 2024, 15:08 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾದ ಚುನಾವಣಾ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ತನಿಖೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಬಾಂಡ್‌ಗಳಿಂದ ಯಾರು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತಿದೆ ಎಂದು ಆಡಳಿತ ಪಕ್ಷ ಹೇಳುತ್ತಿದೆ. ಆದರೆ, ಯಾರು ಯಾವ ಪಕ್ಷಕ್ಕೆ ಎಷ್ಟು ಕೋಟಿ ದೇಣಿಗೆ ನೀಡುತ್ತಾರೆ ಎಂಬ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದಲೇ ಈ ಯೋಜನೆ ಜಾರಿಗೊಳಿಸಲಾಗಿದೆ. ಆದ್ದರಿಂದ, ಸುಪ್ರೀಂ ಕೋರ್ಟ್‌ ಈ ಯೋಜನೆಯನ್ನು ಅಸಾಂವಿಧಾನಿಕವೆಂದು ಹೇಳಿದೆ’ ಎಂದರು.

‘ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಹಲವು ಕಂಪನಿಗಳು ಸಾಕಷ್ಟು ಅನುಕೂಲಗಳನ್ನು ಪಡೆದುಕೊಂಡಿವೆ. ಹಲವು ಗುತ್ತಿಗೆ ಕಂಪನಿಗಳು ಬಿಜೆಪಿ ಪಕ್ಷಕ್ಕೆ ನೂರಾರು ಕೋಟಿ ದೇಣಿಗೆ ನೀಡಿ, ಕೋಟಿ ಕೋಟಿ ಮೊತ್ತದ ಯೋಜನೆಗಳನ್ನು ಗುತ್ತಿಗೆ ಪಡೆದುಕೊಂಡಿವೆ. ಕೆಲ ಔಷಧ ತಯಾರಕ ಕಂಪನಿಗಳು ತಮಗೆ ಬೇಕಾದ ರೀತಿಯ ನೀತಿಗಳನ್ನು ರೂಪಿಸಲು ಚುನಾವಣಾ ಬಾಂಡ್‌ಗಳ ಮೂಲಕ ನೂರಾರು ಕೋಟಿ ದೇಣಿಗೆ ನೀಡಿವೆ’ ಎಂದು ದೂರಿದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ಬಂಧನಕ್ಕೆ ಕಾರಣಕರ್ತರಾದ ಉದ್ಯಮಿ ಪಿ. ಶರತ್‌ ಚಂದ್ರ ರೆಡ್ಡಿ ಅವರು ಚುನಾವಣಾ ಬಾಂಡ್‌ ಮುಖಾಂತರ ಬಿಜೆಪಿಗೆ ₹56.5 ಕೋಟಿ ದೇಣಿಗೆ ನೀಡಿದ್ದಾರೆ. ಶರತ್‌ ಅವರು ಹೈದರಾಬಾದ್‌ ಮೂಲದ ಅರಬಿಂದೊ ಫಾರ್ಮಾ ಕಂಪನಿಯ ನಿರ್ದೇಶಕ ಮತ್ತು ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಕೂಡ. ಅಬಕಾರಿ ನೀತಿ ಹಗರಣ ಸಂಬಂಧ ಶರತ್‌ ಅವರನ್ನು 2022ರ ನವೆಂಬರ್‌ 11ರಂದು ಬಂಧಿಸಲಾಗಿತ್ತು’ ಎಂದು ಅವರು ಹೇಳಿದರು.

ವಕೀಲ ಹರೀಶ್ ನರಸಪ್ಪ, ಅಂಜಲಿ ಭಾರದ್ವಾಜ್ ಭಾಗವಹಿಸಿದ್ದರು.

ಚುನಾವಣಾ ಬಾಂಡ್‌ಗೆ ಅವಕಾಶ ನೀಡಿದರೆ ಕಪ್ಪು ಹಣದ ಹರಿವಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಆರ್‌ಬಿಐ ಸಲಹೆಗೆ ವಿರುದ್ಧವಾಗಿ ಕೇಂದ್ರ ಬಿಜೆಪಿ ಸರ್ಕಾರ ಬಾಂಡ್‌ ನೀತಿ ರೂಪಿಸಿತ್ತು.

–ಅಂಜಲಿ ಭಾರದ್ವಾಜ್ ಸಾಮಾಜಿಕ ಕಾರ್ಯಕರ್ತೆ.

‘ಅಭ್ಯರ್ಥಿಗಳ ಖರ್ಚು ಸರ್ಕಾರವೇ ಭರಿಸಬೇಕು‘

ಬೆಂಗಳೂರು: ಚುನಾವಣೆಗೆ ಸ್ಪರ್ಧಿಸಿ ನಿರ್ದಿಷ್ಟ ಮತಗಳನ್ನು ಪಡೆಯುವ ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚನ್ನು ಸರ್ಕಾರವೇ ಭರಿಸಬೇಕು. ಅದಕ್ಕಾಗಿ ₹3 ಸಾವಿರ ಕೋಟಿ ತೆಗೆದಿಡಬೇಕು ಎಂದು ಪ್ರಶಾಂತ್‌ ಭೂಷಣ್‌ ಒತ್ತಾಯಿಸಿದರು. ಜಾಗೃತ ಕರ್ನಾಟಕ ಜನಾಧಿಕಾರ ಸಂಘರ್ಷ ಪರಿಷತ್ ಬಹುತ್ವ ಕರ್ನಾಟಕ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಬಾಂಡ್‌ಗಳ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಪ್ರತಿ ಅಭ್ಯರ್ಥಿ ಚುನಾವಣೆಗೆ ಖರ್ಚು ಮಾಡಲು ನಿಗದಿಪಡಿಸಿದ ಮೊತ್ತ ₹75 ಲಕ್ಷ. ಹಲವರು ಜನಾನುರಾಗಿಗಳಾಗಿದ್ದರೂ ಖರ್ಚು ಭರಿಸಲು ಸಾಧ್ಯವಾಗದೆ ಚುನಾವಣೆಯಿಂದ ದೂರ ಉಳಿಯುತ್ತಿದ್ದಾರೆ. ಜನರು ಅನಿವಾರ್ಯವಾಗಿ ಕಣದಲ್ಲಿರುವ ಕಡಿಮೆ ದುಷ್ಟರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಒಳ್ಳೆಯವರು ರಾಜಕೀಯಕ್ಕೆ ಬರಬೇಕಿದೆ. ಖರ್ಚನ್ನು ಸರ್ಕಾರವೇ ಭರಿಸಿದರೆ ಚುನಾವಣಾ ಬಾಂಡ್‌ನಂತರ ರಾಜಕೀಯ ಪಕ್ಷಗಳ ಸುಲಿಗೆಗೂ ಕಡಿವಾಣ ಹಾಕಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಖರ್ಚುಗಳನ್ನು ಬ್ಯಾಂಕ್‌ ಖಾತೆಗಳ ಮೂಲಕವೇ ಭರಿಸುವುದನ್ನು ಕಡ್ಡಾಯ ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಎಸ್‌.ಸಿ ಎಸ್‌.ಟಿ ಗುತ್ತಿಗೆದಾರರ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲೂ ಪ್ರಶಂತ್ ಭೂಷಣ್ ಚುನಾವಣಾ ಬಾಂಡ್‌ ಹಗರಣ ಕುರಿತು ಮಾತನಾಡಿದರು.  ತ್ರಿಲೋಚನ್‌ ಶಾಸ್ತ್ರಿ ಹರೀಶ್ ನರಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT