ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಮೋದಿಗಾಗಿ ಅಡುಗೆ ಮಾಡಲು ಸಿದ್ಧ: ಮಮತಾ

ಅವರಿಗೆ ತಮ್ಮ ಮೇಲೆ ನಂಬಿಕೆ ಇದೆಯೇ ಎಂದು ಪ್ರಶ್ನೆ * ಆಹಾರ ಪದ್ಧತಿ ಪ್ರಶ್ನಿಸುವ ಧೋರಣೆಗೆ ವ್ಯಂಗ್ಯ
Published 14 ಮೇ 2024, 15:50 IST
Last Updated 14 ಮೇ 2024, 15:50 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಪ್ರಧಾನಿ ನರೇಂದ್ರ ಮೋದಿ ಬಯಸಿದರೆ ಅವರಿಗಾಗಿ ಅಡುಗೆ ಸಿದ್ಧಪಡಿಸಲು ಸಿದ್ಧ. ಆದರೆ, ನಾನು ಸಿದ್ಧಪಡಿಸಿದ್ದನ್ನು ಅವರು ತಿನ್ನುತ್ತಾರೋ ಇಲ್ಲವೊ ಗೊತ್ತಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹಿಂದೂಗಳು ಮಾಂಸಾಹಾರ ಸೇವಿಸದ ಅವಧಿಯಲ್ಲಿ ಮೀನು ಖಾದ್ಯ ತಿಂದಿದ್ದಾರೆ’ ಎಂದು ಪ್ರಧಾನಿ ಕೆಲ ದಿನಗಳ ಹಿಂದೆ ಟೀಕಿಸಿದ್ದರು. ಅದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ ಮಮತಾ ಈ ಮಾತು ಹೇಳಿದ್ದಾರೆ.

ಮಮತಾ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಇದೊಂದು, ರಾಜಕೀಯ ಅಜೆಂಡಾ’ ಎಂದು ಬಿಜೆಪಿ ಟೀಕಿಸಿದ್ದರೆ, ‘ಟಿಎಂಸಿ ಮತ್ತು ಬಿಜೆಪಿ ನಡುವಣ ಹೊಂದಾಣಿಕೆಗೆ ಇದು ನಿದರ್ಶನ’ ಎಂದು ಸಿಪಿಎಂ ವ್ಯಾಖ್ಯಾನಿಸಿದೆ. 

ಕೋಲ್ಕತ್ತದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಪ್ರಧಾನಿ ಮೋದಿ ಅವರು ಜನರ ಆಹಾರ ಪದ್ಧತಿ ಕುರಿತು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡು, ‘ಪ್ರಧಾನಿಗಾಗಿ ನಾನು ಆಹಾರ ಸಿದ್ಧಪಡಿಸಲು ಮಾಡಲು ಸಿದ್ಧ’ ಎಂದರು.

ಬಾಲಕಿ ಆಗಿದ್ದಾಗಿನಿಂದಲೂ ನಾನು ಅಡುಗೆ ಸಿದ್ಧಪಡಿಸುತ್ತಿದ್ದೇನೆ. ನನ್ನ ಅಡುಗೆಗೆ ಶ್ಲಾಘನೆಯೂ ದೊರೆತಿದೆ. ಪ್ರಧಾನಿ ಇಷ್ಟಪಡುವುದನ್ನೇ ನಾನು ತಯಾರಿಸುತ್ತೇನೆ. ಆದರೆ, ಮೋದಿಜೀ ನಾನು ತಯಾರಿಸಿದ ಆಹಾರ ಸ್ವೀಕರಿಸುವರೇ, ನನ್ನ ಮೇಲೆ ಅವರಿಗೆ ನಂಬಿಕೆ ಇದೆಯಾ?‘ ಎಂದರು.

‘ಸಸ್ಯಾಹಾರವಾದ ಧೋಕ್ಲಾ, ಮಾಂಸಾಹಾರವಾದ ಫಿಶ್‌ ಕರ್ರಿ ಎರಡನ್ನೂ ನಾನು ಇಷ್ಟಪಡುತ್ತೇನೆ. ಹಿಂದೂಗಳ ಭಿನ್ನ ಸಮುದಾಯಗಳು ತಮ್ಮದೇ ಆದ ಸಂಪ್ರದಾಯ, ಆಹಾರ ಪದ್ಧತಿ ಹೊಂದಿವೆ. ಅವರ ಮೇಲೆ ನಿರ್ಬಂಧ ಹೇರಲು ಬಿಜೆಪಿಯವರು ಯಾರು? ಈ ಧೋರಣೆಯು ಬಿಜೆಪಿಯವರಿಗೆ ಭಾರತದ ವೈವಿಧ್ಯ ಕುರಿತು ಇರುವ ಕನಿಷ್ಠ ಜ್ಞಾನ, ಕಾಳಜಿಯನ್ನು ತೋರಿಸುತ್ತದೆ’ ಎಂದು ಮಮತಾ ಟೀಕಿಸಿದರು. 

ಮಮತಾ ಬ್ಯಾನರ್ಜಿ ಅವರು ಪ್ರಧಾನಿಗೆ ಮೀನು, ಅನ್ನ ಬಡಿಸಲು ಬಯಸಿದ್ದಾರೆ. ಒಳ್ಳೆಯ ಚಿಂತನೆ. ಅದಕ್ಕೂ ಮೊದಲು ಅವರು ತಮ್ಮ ಸಂಪುಟದ ಸಚಿವ ಫಿರ್ಹಾದ್‌ ಹಾಕೀಂ ಅವರಿಗೆ ಹಂದಿ ಮಾಂಸದ ಖಾದ್ಯ ತಿನ್ನಿಸಲಿ. ಇದರಿಂದ ಮೂರು ಉದ್ದೇಶ ಈಡೇರಲಿವೆ. ಜಾತ್ಯಾತೀತತೆ ದೃಢಪಡುತ್ತದೆ. ಸೇವೆ ಮನೆಯಿಂದಲೇ ಆರಂಭವಾಗುತ್ತದೆ ಹಾಗೂ ಮೆಚ್ಚುಗೆಯೂ ದೊರೆಯುತ್ತದೆ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ತಥಾಗತ್ ರಾಯ್ ಎಕ್ಸ್ ವೇದಿಕೆಯಲ್ಲಿ ಸಲಹೆ ಮಾಡಿದ್ದಾರೆ.

ಸಿಪಿಎಂ ನಾಯಕ ಬಿಲ್ಕಾಶ್ ಭಟ್ಟಾಚಾರ್ಯ ಅವರು, ಅಣ್ಣ–ತಂಗಿಯಾಗಿ ಮಮತಾ ಅವರು ಖಂಡಿತವಾಗಿ ಪ್ರಧಾನಿಗೆ ಆಹಾರ ಬಡಿಸಬಹುದು ಎಂದು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ ಘಟಕವು ‘ದೀದಿಭಾಯ್–ಮೋದಿಭಾಯ್’ ಎಂದು ವ್ಯಂಗ್ಯವಾಡಿದೆ. ‘ದೇಶವನ್ನು ಇಂದಿನ ಸ್ಥಿತಿಗೆ ತರಲು ಮೋದಿ–ಮಮತಾ ಸಮಾನ ಹೊಣೆಗಾರರು. ಇಬ್ಬರೂ ರಾಜಕೀಯವನ್ನು ಧರ್ಮದೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದೆ.

ನರೇಂದ್ರ ಮೋದಿ
ನರೇಂದ್ರ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT